ಭಾನುವಾರ, ಮೇ 16, 2021
25 °C
ಉಪಚುನಾವಣೆ ಫಲಿತಾಂಶದಿಂದ ಉತ್ತೇಜಿತರಾದ ಮೋದಿ l ವಿರೋಧ ಪಕ್ಷಗಳ ಮುಖಂಡರ ವಿರುದ್ಧ ವಾಗ್ದಾಳಿ

ಜಾರ್ಖಂಡ್‌ನಲ್ಲಿ ಕರ್ನಾಟಕದ ಬಗ್ಗೆ ಉಲ್ಲೇಖಿಸಿದ ಪ್ರಧಾನಿ ಮೋದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಂಚಿ: ಕರ್ನಾಟಕದ 15 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತೇಜನಗೊಂಡಿದ್ದಾರೆ. ಈ ಫಲಿತಾಂಶವನ್ನು ಮುಂದಿಟ್ಟುಕೊಂಡು ವಿರೋಧಪಕ್ಷಗಳ ವಿರುದ್ಧ ಜಾರ್ಖಂಡ್‌ನಲ್ಲಿ ಸೋಮವಾರ ವಾಗ್ದಾಳಿ ನಡೆಸಿದ್ದಾರೆ.

‘ಕರ್ನಾಟಕದ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ನಮಗೆ ಹೆಚ್ಚು ಸ್ಥಾನಗಳು ಲಭಿಸಿದ್ದವು. ಆದರೆ ಕಾಂಗ್ರೆಸ್‌– ಜೆಡಿಎಸ್‌ ಒಟ್ಟಾಗಿ, ಸರ್ಕಾರ ರಚಿಸುವುದರಿಂದ ನಮ್ಮನ್ನು ತಡೆದವು. ಪ್ರಜಾಪ್ರಭುತ್ವದಲ್ಲಿ ಮತದಾರರ ತೀರ್ಮಾನವೇ ಅಂತಿಮ ಎಂಬುದನ್ನು ಉಪಚುನಾವಣೆಗಳ ಫಲಿತಾಂಶ ಸ್ಪಷ್ಟಪಡಿಸಿದೆ’ ಎಂದು ಚುನಾವಣಾ ರ್‍ಯಾಲಿಯಲ್ಲಿ ಅವರು ಮಾತನಾಡಿದರು.

‘ಜಾರ್ಖಂಡ್‌ನಲ್ಲೂ ಕಾಂಗ್ರೆಸ್‌ ಮತ್ತು ಅದರ ಮಿತ್ರಪಕ್ಷಗಳಾದ ಜೆಎಂಎಂ ಹಾಗೂ ಆರ್‌ಜೆಡಿಗಳಿಗೆ ಜನರು ಇಂಥದ್ದೇ ಪಾಠ ಕಲಿಸಬೇಕು’ ಎಂದು ಮೋದಿ ಮನವಿ ಮಾಡಿದರು.

‘ದಕ್ಷಿಣ ಭಾರತದಲ್ಲಿ ಬಿಜೆಪಿ ದುರ್ಬಲವಾಗಿದೆ ಎಂದು ಕೆಲವರು ಹೇಳುತ್ತಾರೆ. ಆದರೆ ಹಿಂಬಾಗಿಲಿನ ಮೂಲಕ ಅಧಿಕಾರ ಪಡೆಯಲು ಬರುವವರಿಗೆ ಜನರು ಪಾಠ ಕಲಿಸುತ್ತಾರೆ ಎಂಬುದು ಕರ್ನಾಟಕದ ಉಪಚುನಾವಣೆಗಳಿಂದ ಸ್ಪಷ್ಟವಾಗಿದೆ. ಕೇಂದ್ರ, ರಾಜ್ಯ ಸರ್ಕಾರ ಸುಭದ್ರವಾಗಿರಬೇಕು ಎಂದು ನೀವು ಬಯಸುವುದಾದರೆ ಕಾಂಗ್ರೆಸ್‌ ಸೋಲು ಖಚಿತಪಡಿಸಬೇಕು’ ಎಂದರು.

ಬೊಕಾರೊದಲ್ಲಿ ನಡೆದ ಇನ್ನೊಂದು ರ್‍ಯಾಲಿಯಲ್ಲೂ ಕರ್ನಾಟಕದ ಚುನಾವಣಾ ಫಲಿತಾಂಶವನ್ನು ಪ್ರಸ್ತಾಪಿಸಿದರು. ‘ಸುಭದ್ರ ಸರ್ಕಾರ ರಚನೆಯ ಅಗತ್ಯ, ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸ್ಥಾಪನೆ ಅಗತ್ಯ ಎಂಬ ಸಂದೇಶಗಳನ್ನು ಕರ್ನಾಟಕದ ಮತದಾರರು ನೀಡಿದ್ದಾರೆ’ ಎಂದು ಅವರು ಪ್ರತಿಪಾದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು