ಶನಿವಾರ, ಜೂಲೈ 4, 2020
28 °C

ಕೋವಿಡ್‌: ಖಾಸಗಿ ಆಸ್ಪತ್ರೆ ಸಜ್ಜು, ಬೆಂಗಳೂರಿನಲ್ಲಿ 2,500 ಹಾಸಿಗೆ ಮೀಸಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್ ಪೀಡಿತರ ಚಿಕಿತ್ಸೆಗಾಗಿ ಸರ್ಕಾರ ನಿಗದಿಪಡಿಸಿದ ದರಪಟ್ಟಿಯ ಬಗ್ಗೆ ಅಸಮಾಧಾನಗೊಂಡಿದ್ದ ಖಾಸಗಿ ಆಸ್ಪತ್ರೆಗಳ ಸಂಘದ ಜತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೋಮವಾರ ನಡೆಸಿದ ಮಾತುಕತೆ ಫಲ ನೀಡಿದ್ದು, ಬೆಂಗಳೂರಿನಲ್ಲಿ 2,500 ಹಾಸಿಗೆಗಳನ್ನು ಮೀಸಲಿಡಲು ಖಾಸಗಿ ಆಸ್ಪತ್ರೆಗಳು ಒಪ್ಪಿಕೊಂಡಿವೆ.

ಸರ್ಕಾರ ನಿಗದಿ ಮಾಡಿದ ದರಪಟ್ಟಿಯ ಅನುಸಾರ ಚಿಕಿತ್ಸೆ ನೀಡಲು ಈ ಆಸ್ಪತ್ರೆಗಳು ಒಪ್ಪಿಗೆ ಸೂಚಿಸಿವೆ. ಅಲ್ಲದೆ, ಮುಂದಿನ ದಿನಗಳಲ್ಲಿ ರಾಜ್ಯದ ಬೇರೆ ಜಿಲ್ಲೆಗಳಲ್ಲೂ ಈ ಸೌಲಭ್ಯವನ್ನು ಒದಗಿಸಲು ಖಾಸಗಿ ಆಸ್ಪತ್ರೆಗಳು ಮುಂದೆ ಬರಲಿವೆ ಎಂದು ಸರ್ಕಾರದ ಮೂಲಗಳು ಹೇಳಿವೆ.

ಖಾಸಗಿ ಆಸ್ಪತ್ರೆಗಳ ಸಂಘದ ಪದಾಧಿಕಾರಿಗಳ ಜತೆ ವಿಧಾನಸೌಧದಲ್ಲಿ ಯಡಿಯೂರಪ್ಪ ಸುದೀರ್ಘ ಸಭೆ ನಡೆಸಿ, ‘ಇದೊಂದು ಸಂಕಷ್ಟದ ಸಮಯ, ಈ ಸಂದರ್ಭದಲ್ಲಿ ರಾಜ್ಯದ ಜನರ ಹಿತಕ್ಕಾಗಿ  ಸರ್ಕಾರದ ಜತೆ ಕೈಜೋಡಿಸಿ ಕೊರೊನಾ ವಿರುದ್ಧ ಹೋರಾಡಬೇಕು’ ಎಂದು ಮನವಿ ಮಾಡಿದರು.

‘ನೀವು (ವೈದ್ಯರು) ಒಟ್ಟಿಗೆ ಚರ್ಚಿಸಿ ತೀರ್ಮಾನ ತಿಳಿಸಿ’ ಎಂದು ಪ್ರತ್ಯೇಕ ಮಾತುಕತೆಗೆ ಅವಕಾಶ ನೀಡಿದರು. ‘ಸಂಕಷ್ಟದ ಕಾಲದಲ್ಲಿ ಸರ್ಕಾರದ ಜತೆ ನಿಲ್ಲಬೇಕು’ ಎಂಬ ಅಭಿಪ್ರಾಯ ಪ್ರತ್ಯೇಕ ಸಭೆಯಲ್ಲಿ ವ್ಯಕ್ತವಾಯಿತು.

ಖಾಸಗಿಯವರು ತಮ್ಮ ತೀರ್ಮಾನ ಪ್ರಕಟಿಸುವುದಕ್ಕೆ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಯಡಿಯೂರಪ್ಪ, ‘ಖಾಸಗಿ ಆಸ್ಪತ್ರೆಗಳು ಕೋವಿಡ್‌ಗಾಗಿ 2,500 ಹಾಸಿಗೆಗಳನ್ನು ಮೀಸಲಿಡಲೇಬೇಕು. ಬೇರೆ ದಾರಿಯೇ ಇಲ್ಲ. ಸರ್ಕಾರ ಹೇಳಿದ್ದನ್ನು ಮಾಡಲೇ ಬೇಕಾಗುತ್ತದೆ’ ಎಂದು ಖಡಕ್‌ ಮಾತುಗಳಲ್ಲೇ ಹೇಳಿದರು.

ಎರಡು ಹಂತಗಳಲ್ಲಿ ಮೀಸಲು: 2,500 ಹಾಸಿಗೆಗಳನ್ನು ಮೀಸಲಿಡಲು ಒಪ್ಪಿರುವ ಖಾಸಗಿ ಆಸ್ಪತ್ರೆಗಳು ತಕ್ಷಣವೇ 1,500 ಹಾಸಿಗೆಗಳನ್ನು ಚಿಕಿತ್ಸೆಗೆ ಸಿದ್ಧಪಡಿಸಲಿವೆ. ಮುಂದಿನ ಹಂತದಲ್ಲಿ 1,000 ಹಾಸಿಗೆ ಸಿದ್ಧಪಡಿಸಲಿವೆ. ಬಿಪಿಎಲ್‌ ಮತ್ತು ಎಪಿಎಲ್‌ ಕಾರ್ಡ್‌ ಹೊಂದಿರುವ ರೋಗಿಗಳಿಗೆ ಆಯುಷ್ಮಾನ್‌ ಭಾರತ್‌ ಮತ್ತು ಆರೋಗ್ಯ ಕರ್ನಾಟಕ ಯೋಜನೆ ಅಡಿಯೇ ಚಿಕಿತ್ಸೆ ನೀಡಲಿವೆ.

ಕಂದಾಯ ಸಚಿವ ಆರ್‌.ಅಶೋಕ ಮಾತನಾಡಿ, ‘ಖಾಸಗಿ ಆಸ್ಪತ್ರೆಗಳಲ್ಲಿ ಶೇ 50 ರಷ್ಟು ಆಕ್ಸಿಜನ್‌ ಸಹಿತ ಹಾಸಿಗೆಗಳನ್ನು ನೀಡುವಂತೆ ಕೇಳಿದ್ದೇವೆ. ಅದಕ್ಕೆ ಅವರು ಒಪ್ಪಿಗೆ ನೀಡಿದ್ದಾರೆ. ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಒಟ್ಟು 10 ಸಾವಿರ ಹಾಸಿಗೆಗಳು ಲಭ್ಯ ಇವೆ. ಈ ಪೈಕಿ 5,000 ಹಾಸಿಗೆಗಳು ಕೋವಿಡ್‌ ರೋಗಿಗಳ ಚಿಕಿತ್ಸೆ ಸಿಗುವ ಸಾಧ್ಯತೆ ಇದೆ’ ಎಂದೂ ಅವರು ಹೇಳಿದರು.

ಸಮನ್ವಯಕ್ಕೆ ಸಮಿತಿ: ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ನಿರ್ವಹಣೆಯ ಸಮನ್ವಯಕ್ಕಾಗಿ ಐವರು ಸದಸ್ಯರ ಸಮಿತಿ ರಚಿಸಲಾಗಿದೆ. ಈ ಸಮಿತಿಯಲ್ಲಿ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳಾಗಿ ಡಾ. ರವೀಂದ್ರ ಮತ್ತು ಡಾ.ನಾಗೇಂದ್ರ, ಶಾಸಕ ಎಸ್‌.ಆರ್‌.ವಿಶ್ವನಾಥ್‌ ಹಾಗೂ ಇಬ್ಬರು ಐಎಎಸ್‌ ಅಧಿಕಾರಿಗಳು ಇರುತ್ತಾರೆ. ಸಮಿತಿಯು ಕಾಲಕಾಲಕ್ಕೆ ಸಭೆ ಸೇರಿ, ಯಾವುದೇ ಸಮಸ್ಯೆ ಉದ್ಭವಿಸಿದರೆ ಬಗೆಹರಿಸುತ್ತದೆ ಎಂದು ಅಶೋಕ ವಿವರಿಸಿದರು.

ಬೆಂಗಳೂರಿನಲ್ಲಿ ನಿಯಂತ್ರಣ: ‘ದೇಶದ ಉಳಿದ ಮೆಟ್ರೊ ನಗರಗಳಿಗೆ ಹೋಲಿಸಿದರೆ, ಬೆಂಗಳೂರಿನಲ್ಲಿ ಕೋವಿಡ್‌ ನಿಯಂತ್ರಣದಲ್ಲಿದೆ’ ಎಂದು ಯಡಿಯೂರಪ್ಪ ಪ್ರತಿಪಾದಿಸಿದರು.

‘ಮುಂಬೈನಲ್ಲಿ 74,252 ಜನರು ಸೋಂಕಿಗೆ ಒಳಗಾಗಿ 47,329 ಜನರು ಗುಣಮುಖರಾಗಿದ್ದು, 4284 ಜನ ಮೃತಪಟ್ಟಿದ್ದಾರೆ. ದೆಹಲಿಯಲ್ಲಿ 49,301 ಜನರ ಸೋಂಕಿಗೆ ಒಳಗಾಗಿದ್ದು 49,301 ಜನ ಚೇತರಿಸಿಕೊಂಡು, 2,580 ಜನ ಮೃತಪಟ್ಟಿದ್ದಾರೆ. ಚೆನ್ನೈನಲ್ಲಿ 51,699 ಜನ ಸೋಂಕಿಗೆ ಒಳಗಾಗಿದ್ದು 31,045 ಜನ ಚೇತರಿಸಿಕೊಂಡಿದ್ದು, 733 ಜನ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ 3,321 ಮಂದಿ ಸೋಂಕಿಗೆ ಒಳಗಾಗಿ 433 ಜನ ಗುಣಮುಖರಾಗಿದ್ದು, ಕೇವಲ 81 ಜನ ಸಾವನ್ನಪ್ಪಿದ್ದಾರೆ. ಆದ್ದರಿಂದ ಯಾರೂ ಗಾಬರಿಗೆ ಒಳಗಾಗಬೇಕಾಗಿಲ್ಲ. ಸಮರ್ಥವಾಗಿ ನಿಭಾಯಿಸುತ್ತೇವೆ’ ಅವರು ತಿಳಿಸಿದರು.

ಇದನ್ನೂ ಓದಿ... Covid-19 Karnataka Update | 14 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ

‘ಈಗಾಗಲೇ ಚಿಕಿತ್ಸೆ ಆರಂಭಿಸಿದ್ದೇವೆ’
‘ಇದೇ 16 ರಿಂದ ಕೋವಿಡ್‌ಗೆ ಚಿಕಿತ್ಸೆ ನೀಡುವ ಕಾರ್ಯ ಆರಂಭವಾಗಿದೆ. ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುತ್ತಿದ್ದು, ಇನ್ನು ಕೆಲವು ಕಡೆಗಳಲ್ಲಿ ಚಿಕಿತ್ಸೆ ಕೊಡಲಾಗದೇ ಸಮಸ್ಯೆ ಆಗಿರುವುದು ನಿಜ’ ಎಂದು ಖಾಸಗಿ ಆಸ್ಪತ್ರೆಗಳ ಸಂಘದ ಅಧ್ಯಕ್ಷ ಡಾ.ರವೀಂದ್ರ ತಿಳಿಸಿದರು.

‘ಇದಕ್ಕೆ ಮುಖ್ಯಕಾರಣ ತಕ್ಷಣಕ್ಕೆ ಹಾಸಿಗೆಗಳು ಸಿದ್ಧವಿರಲಿಲ್ಲ.  ಸೋಂಕು ದಿಢೀರ್‌ ಏರಿಕೆ ಆಗಿದ್ದು ಮತ್ತು ಸೌಲಭ್ಯಗಳ ಕೊರತೆಯೂ ಇತ್ತು. ಕೋವಿಡ್‌ ಚಿಕಿತ್ಸೆಯಲ್ಲಿ ತೊಡಗುವ ವೈದ್ಯ ಸಿಬ್ಬಂದಿಗೆ ವಿಮೆ ನೀಡಲು ಸರ್ಕಾರ ಒಪ್ಪಿಕೊಂಡಿದೆ. ನಾನ್ ‌ಕೋವಿಡ್‌ ರೋಗಿಗಳನ್ನು ಪ್ರತ್ಯೇಕವಾಗಿ ನೋಡಿಕೊಳ್ಳುತ್ತೇವೆ’ ಎಂದರು.

’6 ತಿಂಗಳ ಪರಿಸ್ಥಿತಿ ಗಂಭೀರ’
‘ತಜ್ಞರ ವರದಿಯ ಪ್ರಕಾರ ಇನ್ನೂ ಆರು ತಿಂಗಳು ಕೊರೊನಾ ಹರಡುವಿಕೆಯ ಸ್ಥಿತಿ ಇದೇ ರೀತಿ ಮುಂದುವರಿಯಲಿದೆ. ಜುಲೈ ಮತ್ತು ಆಗಸ್ಟ್‌ನಲ್ಲಿ ಕೊರೊನಾ ಸೋಂಕು ಹೆಚ್ಚಾಗಲಿದ್ದು, ಗಂಭೀರ ಪರಿಸ್ಥಿತಿ ಎದುರಿಸಲು ವೈದ್ಯಕೀಯ ಸಿಬ್ಬಂದಿ ಮಾನಸಿಕವಾಗಿ ತಯಾರಾಗಬೇಕು’ ಎಂದು ಕಂದಾಯ ಸಚಿವ ಆರ್‌.ಅಶೋಕ ಹೇಳಿದರು. 

ಪರಿಸ್ಥಿತಿ ನಿಯಂತ್ರಣದಲ್ಲಿಡಲು ಜುಲೈ 6 ರ ನಂತರ ಬೆಂಗಳೂರು ‌ಮತ್ತು ರಾಜ್ಯದಲ್ಲಿ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿ ಮಾಡುವ ಬಗ್ಗೆ ಸುಳಿವು ನೀಡಿದ ಅಶೋಕ, ಮತ್ತೆ ಲಾಕ್‌ಡೌನ್‌ ವಿಧಿಸುವುದಿಲ್ಲ ಎಂದೂ ಸ್ಪಷ್ಟಪಡಿಸಿದರು.

*
ಲಾಕ್‌ಡೌನ್‌ ಬಗ್ಗೆ ಚರ್ಚೆ ಆಗಿಲ್ಲ. ಲಾಕ್‌ಡೌನ್‌ ಜಾರಿ ಮಾಡುವ ಯಾವುದೇ ಪ್ರಸ್ತಾವನೆಯೂ ಸರ್ಕಾರದ ಮುಂದಿಲ್ಲ.
–ಬಸವರಾಜ ಬೊಮ್ಮಾಯಿ, ಗೃಹ ಸಚಿವ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು