ಶನಿವಾರ, ಫೆಬ್ರವರಿ 29, 2020
19 °C
2015ನೇ ಸಾಲಿನ ಪದೋನ್ನತಿ ಪಟ್ಟಿ ‌ಪರಿಶೀಲಿಸದೆ ಹೊಸ ಬಡ್ತಿ ಇಲ್ಲ– ಯುಪಿಎಸ್‌ಸಿ

ಕೆಎಎಸ್‌ನಿಂದ 25 ಐಎಎಸ್ ಬಡ್ತಿಗೆ ಅಡ್ಡಿ

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ಕೇಡರ್‌ನ ನಾಗರಿಕ ಸೇವೆಯಿಂದ (ಕೆಎಎಸ್) ಭಾರತೀಯ ನಾಗರಿಕ ಸೇವೆಗೆ (ಐಎಎಸ್) 2015ನೇ ಸಾಲಿನಲ್ಲಿ ನೀಡಿರುವ ಪದೋನ್ನತಿ ಪಟ್ಟಿಯನ್ನು ಮರುಪರಿಶೀಲಿಸದೆ, ಹೊಸದಾಗಿ ಬಡ್ತಿ ನೀಡಲು ಯುಪಿಎಸ್‌ಸಿ (ಕೇಂದ್ರ ಲೋಕಸೇವಾ ಆಯೋಗ) ನಿರಾಕರಿಸಿದೆ.

ಯುಪಿಎಸ್‌ಸಿಯ ಈ ನಿಲುವು 2006, 2008 ಮತ್ತು 2010ನೇ ಸಾಲಿನ ಕೆಎಎಸ್‌ ಅಧಿಕಾರಿಗಳ ಐಎಎಸ್‌ ಬಡ್ತಿ ಕನಸಿಗೆ ಅಡ್ಡಿಯಾಗಿದೆ. ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಓಪಿಟಿ) ಪ್ರಕಾರ ಸೇವಾ ಜ್ಯೇಷ್ಠತೆ ಆಧಾರದಲ್ಲಿ 2016ರ ಸಾಲಿನಲ್ಲಿ 11, 2017ರಲ್ಲಿ ಇಬ್ಬರು, 2018ರಲ್ಲಿ ಮೂವರು, 2019ರಲ್ಲಿ 9 ಹೀಗೆ ಒಟ್ಟು 25 ಕೆಎಎಸ್‌ ಅಧಿಕಾರಿಗಳಿಗೆ ಐಎಎಸ್‌ ಪಡೆಯಲು ಅವಕಾಶವಿದೆ.

ಕೇಂದ್ರೀಯ ಆಡಳಿತ ನ್ಯಾಯ ಮಂಡಳಿ (ಸಿಎಟಿ) ನಿರ್ದೇಶನದ ಹೊರತಾಗಿಯೂ ಐಎಎಸ್‌ಗೆ ಬಡ್ತಿ ಸಂಬಂಧ ಆಯ್ಕೆ ಸಮಿತಿ ಸಭೆ ನಡೆಸಲು ಯುಪಿಎಸ್‌ಸಿ ಮುಂದಾಗುತ್ತಿಲ್ಲ ಎಂದು ಕೆಎಎಸ್‌ ಅಧಿಕಾರಿಗಳು ಸಲ್ಲಿಸಿದ್ದ ‘ನ್ಯಾಯಾಂಗ ನಿಂದನೆ’ ಅರ್ಜಿ ವಿಚಾರಣೆ ವೇಳೆ ಸಿಎಟಿ ಎದುರು ಹಾಜರಾದ ಯುಪಿಎಸ್‌ಸಿ (ಎಐಎಸ್‌) ಜಂಟಿ ಕಾರ್ಯದರ್ಶಿ ಕುಮಾರ್‌ ವೈಭವ್‌ ಗೌರ್‌, ಯುಪಿಎಸ್‌ಸಿ ನಿಲುವು ಸ್ಪಷ್ಟಪಡಿಸಿದ್ದಾರೆ.

1998, 1999, 2004ನೇ ಸಾಲಿನ ಕೆಎಎಸ್‌ ಅಧಿಕಾರಿಗಳ ಪೈಕಿ, 33 ಮಂದಿಗೆ ಯುಪಿಎಸ್‌ಸಿ 2015ರಲ್ಲಿ ಐಎಎಸ್‌ಗೆ ಬಡ್ತಿ ನೀಡಿತ್ತು. 1998ನೇ ಸಾಲಿನ ಕೆಎಎಸ್‌ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಹೈಕೋರ್ಟ್‌ ತೀರ್ಪಿನಂತೆ ಆಯ್ಕೆ ಪಟ್ಟಿಯನ್ನು ಕೆಪಿಎಸ್‌ಸಿ ಪರಿಷ್ಕರಿಸಿತ್ತು. ಹೀಗೆ ಪರಿಷ್ಕರಿಸಿದ ಜ್ಯೇಷ್ಠತಾ ಪಟ್ಟಿಯನ್ನು ರಾಜ್ಯ ಸರ್ಕಾರ ಡಿಓಪಿಟಿಗೆ ಸಲ್ಲಿಸಬೇಕಿತ್ತು. ಈ ಬಗ್ಗೆ ಎರಡು ವರ್ಷ ಹಿಂದೆಯೇ ಡಿಓಪಿಟಿ ಪತ್ರ ಬರೆದಿದ್ದರೂ ಸರ್ಕಾರ ಕ್ರಮ ತೆಗೆದುಕೊಂಡಿಲ್ಲ.

ಪರಿಷ್ಕೃತ ಪಟ್ಟಿ ಜಾರಿಯಿಂದ ಉಪವಿಭಾಗಾಧಿಕಾರಿ (ಎ.ಸಿ) ಹುದ್ದೆ ಕಳೆದುಕೊಳ್ಳುವ 11 ಅಧಿಕಾರಿಗಳು, ಐಎಎಸ್‌ನಿಂದಲೂ ಹಿಂಬಡ್ತಿಗೊಳ್ಳುತ್ತಾರೆ. ಆದರೆ, ಈ ಅಧಿಕಾರಿಗಳು ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಮೆಟ್ಟಿಲೇರಿದ್ದು, ಯಥಾಸ್ಥಿತಿಗೆ ಕೆಎಟಿ ಆದೇಶ ನೀಡಿದ್ದರಿಂದ ಹುದ್ದೆಯಲ್ಲೇ ಮುಂದುವರಿದಿದ್ದಾರೆ.

2015ರಲ್ಲಿ ಐಎಎಸ್‌ಗೆ ಬಡ್ತಿ ನೀಡಿರುವ ಕೆಎಎಸ್ ಅಧಿಕಾರಿಗಳ ಪಟ್ಟಿಯನ್ನು ಪರಿಷ್ಕರಿಸುವ ಸಂಬಂಧ ‘ರಿವೈಸ್ಡ್ ಸೆಲೆಕ್ಷನ್ ಕಮಿಟಿ ಮೀಟಿಂಗ್‌ (ಆರ್‌ಎಸ್‌ಸಿಎಂ) ನಡೆಸುವಂತೆ ಡಿಓಪಿಟಿಗೆ ರಾಜ್ಯ ಸರ್ಕಾರ ಪ್ರಸ್ತಾವ ಸಲ್ಲಿಸಬೇಕು. ಜೊತೆಗೆ, ನಂತರದ ವರ್ಷಗಳಲ್ಲಿನ ಆಯ್ಕೆ ಪಟ್ಟಿಯಂತೆ ಐಎಎಸ್‌ಗೆ ಬಡ್ತಿ ನೀಡುವ ಸಂಬಂಧ ‘ಆಯ್ಕೆ ಸಮಿತಿ ಮೀಟಿಂಗ್‌’ (ಎಸ್‌ಸಿಎಂ) ನಡೆಸಲು ಪ್ರಸ್ತಾವ ಸಲ್ಲಿಸಬೇಕು. ಆದರೆ, ಪ್ರಸ್ತಾವ ಸಲ್ಲಿಸಿದರೂ 1998ರ ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ಸಲ್ಲಿಸದೆ ಯುಪಿಎಸ್‌ಸಿ ಹೊಸ ಬಡ್ತಿ ಪ್ರಕ್ರಿಯೆ ನಡೆಸಲು ತಯಾರಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು