ಭಾನುವಾರ, ಜೂಲೈ 5, 2020
22 °C

ಅತಿಥಿ ಶಿಕ್ಷಕರಿಗೆ ಪ್ಯಾಕೇಜ್‌ ಘೋಷಿಸುವಂತೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳ ಅತಿಥಿ ಶಿಕ್ಷಕರು ಹಾಗೂ ಸರ್ಕಾರಿ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ವಿಶೇಷ ಪ್ಯಾಕೇಜ್ ಪ್ರಕಟಿಸಬೇಕು ಎಂದು ರಾಜ್ಯ ಅತಿಥಿ ಉಪನ್ಯಾಸಕರು/ ಅತಿಥಿ ಶಿಕ್ಷಕರ ಹೋರಾಟ ಸಮಿತಿ (ಎಐಡಿವೈಒ) ಸರ್ಕಾರವನ್ನು ಒತ್ತಾಯಿಸಿದೆ.

ಹೋರಾಟ ಸಮಿತಿಯ ಪ್ರಮುಖರು ಉಪಮುಖ್ಯಮಂತ್ರಿ ಸಿ.ಎನ್‌.ಅಶ್ವತ್ಥನಾರಾಯಣ ಅವರನ್ನು ಮಂಗಳವಾರ ಭೇಟಿಯಾಗಿ ಈ ಕುರಿತು ಮನವಿ ಸಲ್ಲಿಸಿದರು. 

‘ರಾಜ್ಯದ 413 ಸರ್ಕಾರಿ ಕಾಲೇಜುಗಳಲ್ಲಿ 14,564 ಅತಿಥಿ ಉಪನ್ಯಾಸಕರಿದ್ದಾರೆ. ಅವರನ್ನು ಆನ್‌ಲೈನ್‌ ಪಾಠಕ್ಕೂ ಬಳಸಿಕೊಳ್ಳಲಾಗುತ್ತಿದೆ. ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿ.ಯು ವಿದ್ಯಾರ್ಥಿಗಳಿಗೆ ಪಾಠ ಮಾಡಲು 22,150 ಅತಿಥಿ ಶಿಕ್ಷಕರನ್ನು ಕಳೆದ ಸಾಲಿನಲ್ಲಿ ಬಳಸಿಕೊಳ್ಳಲಾಗಿತ್ತು’ ಎಂದು ಸಮಿತಿ ಹೇಳಿದೆ.

‘ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಪ್ರತಿ ಬೋಧನಾ ಅವಧಿಗೆ ₹ 1,500 ಅಥವಾ ಮಾಸಿಕ ₹ 50 ಸಾವಿರ ಗೌರವಧನ ನಿಗದಿ ಮಾಡಬೇಕು ಎಂದು ಯುಜಿಸಿ ನಿರ್ದೇಶಿಸಿದೆ. ಆದರೆ, ಇಂದಿಗೂ ಎನ್‌ಇಟಿ ಅಥವಾ ಎಸ್‌ಎಲ್‌ಇಟಿ ಉತ್ತೀರ್ಣರಾಗಿರುವ ಹಾಗೂ ಪಿಎಚ್‌.ಡಿ ಹೊಂದಿರುವ ಅತಿಥಿ ಉಪನ್ಯಾಸಕರಿಗೂ ತಿಂಗಳಿಗೆ ಕೇವಲ ₹13 ಸಾವಿರ ಹಾಗೂ ಅತಿಥಿ ಶಿಕ್ಷಕರಿಗೆ ಮಾಸಿಕ ₹ 7,500 ಗೌರವಧನ ನೀಡಲಾಗುತ್ತಿದೆ. ಏಳೆಂಟು ತಿಂಗಳುಗಳಿಂದ ಗೌರವಧನವೂ ಪಾವತಿಯಾಗಿಲ್ಲ. ಲಾಕ್‌ಡೌನ್‌ನಿಂದಾಗಿ ಅವರ ಸಮಸ್ಯೆಗಳು ಉಲ್ಬಣಿಸಿವೆ’ ಎಂದು ಸಮಿತಿ ದೂರಿದೆ.

‘ಲಾಕ್‌ಡೌನ್‌ ಸಂದರ್ಭದಲ್ಲಿ ಉದ್ಯೋಗಿಗಳ ಸಂಬಳ ಕಡಿತ ಮಾಡಬಾರದು ಎನ್ನುವ ಸರ್ಕಾರ, ಅತಿಥಿ ಉಪನ್ಯಾಸಕರನ್ನು ಹಾಗೂ ಅತಿಥಿ ಶಿಕ್ಷಕರನ್ನು ಈ ಹೀನಾಯ ಸ್ಥಿತಿಗೆ ದೂಡುವುದು ಸರಿಯೇ’ ಎಂದು ಸಮಿತಿ ಪ್ರಶ್ನಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು