ಬುಧವಾರ, ಡಿಸೆಂಬರ್ 2, 2020
25 °C

ಪಿಯು ತರಗತಿ ಆರಂಭವಾಗಿ ತಿಂಗಳಾದರೂ ಪಠ್ಯಪುಸ್ತಕ ಇಲ್ಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪದವಿಪೂರ್ವ ಕಾಲೇಜು ತರಗತಿಗಳು ಆರಂಭವಾಗಿ ತಿಂಗಳಾಗುತ್ತ ಬಂದರೂ ವಿದ್ಯಾರ್ಥಿಗಳಿಗೆ ಇನ್ನೂ ಪಠ್ಯಪುಸ್ತಕ ಸಿಕ್ಕಿಲ್ಲ.

ಪಿಯುಸಿ ಪ್ರಥಮ ಮತ್ತು ದ್ವಿತೀಯ ವರ್ಷದ ಪಠ್ಯಗಳಿಲ್ಲದೆ ಕಳೆದ ವರ್ಷದ ಪಠ್ಯಗಳ ಆಧಾರದಲ್ಲೇ ಪಾಠ ಮಾಡುವ ದಾರಿಯನ್ನು ಕೆಲವು ಕಾಲೇಜುಗಳು ಕಂಡುಕೊಂಡಿದ್ದರೆ, ಪಠ್ಯದಲ್ಲಿ ಕೆಲವು ಬದಲಾವಣೆಗಳು ಇರಲಿದೆ ಎಂದು ಹೇಳುತ್ತಿರುವುದರಿಂದ ಕೆಲವು ಕಾಲೇಜುಗಳು ಹಳೆಯ ಪಠ್ಯ ಕ್ರಮದಲ್ಲಿ ಪಾಠ ಮಾಡಲು ಮುಂದಾಗಿಲ್ಲ.

‘ಮಾರ್ಚ್‌ ವೇಳೆಗೆ ಮಾರುಕಟ್ಟೆಗೆ ಪಠ್ಯಪುಸ್ತಕಗಳು ಬರಬೇಕಿತ್ತು. ಆದರೆ ಈ ಬಾರಿ ಜೂನ್‌ ತಿಂಗಳು ಅಂತ್ಯವಾಗುತ್ತ ಬಂದರೂ ಪುಸ್ತಕಗಳು ಬಂದಿಲ್ಲ. ಇದರಿಂದ ನಿಗದಿತ ಅವಧಿಯೊಳಗೆ ಬೋಧನೆ ಪೂರ್ಣಗೊಳಿಸುವುದು ಈ ಬಾರಿ ಕಷ್ಟವಾಗಬಹುದು’ ಎಂಬ ಆತಂಕವನ್ನು ಕರ್ನಾಟಕ ಪದವಿಪೂರ್ವ ಕಾಲೇಜು ಶಿಕ್ಷಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ವ್ಯಕ್ತಪಡಿಸಿದ್ದಾರೆ.

‘ದಿನಾ ನೂರಾರು ಪೋಷಕರು, ವಿದ್ಯಾರ್ಥಿಗಳು ನಮ್ಮಲ್ಲಿಗೆ ಪಠ್ಯ ಪುಸ್ತಕ ಕೇಳಿಕೊಂಡು ಬರುತ್ತಿದ್ದಾರೆ. ಅವರಿಗೆ ಉತ್ತರ ಕೊಟ್ಟು ಸಾಕಾಗಿಹೋಗಿದೆ’ ಎಂದು ನಗರದ ಅವೆನ್ಯೂ ರಸ್ತೆಯಲ್ಲಿ ಪುಸ್ತಕದ ಅಂಗಡಿ ಇಟ್ಟುಕೊಂಡಿರುವ ಸತ್ಯನಾರಾಯಣ ಮೂರ್ತಿ ಹೇಳಿದರು.

‘ಪಠ್ಯ ಪುಸ್ತಕ ಪೂರೈಕೆಗಾಗಿ ಹೊರಡಿಸಲಾದ ಇ ಟೆಂಡರ್‌ ದಾಖಲೆಗಳನ್ನು ಪರಿಶೀಲಿಸಿದಾಗ ಏಪ್ರಿಲ್‌ 27ರಂದು ಟೆಂಡರ್‌ ಹೊರಡಿಸಿದ್ದು ಕಂಡುಬಂದಿದೆ. ಮೇ 8ರಂದು ಬಿಡ್ಡಿಂಗ್‌ ತೆರೆದಿದ್ದು, ಮೇ 14ರಂದು ಹಣಕಾಸು ಬಿಡ್ಡಿಂಗ್‌ ಕೊನೆಗೊಂಡಿದೆ. ಬಳಿಕ ಮೂರು ದಿನಗಳ ಒಳಗೆಯೇ ಇಲಾಖೆ ಕಾರ್ಯಾದೇಶ ನೀಡಿದೆ. ಮೇ ತಿಂಗಳಾಂತ್ಯಕ್ಕೆ ಪಠ್ಯ ಮಾರುಕಟ್ಟೆಗೆ ಬರಬೇಕಿತ್ತು. ಆದರೆ ಜೂನ್‌ ತಿಂಗಳು ಕೊನೆಗೊಳ್ಳುತ್ತ ಬಂದರೂ ಪುಸ್ತಕ ಬಂದಿಲ್ಲ’ ಎಂದು ಅವರು ಹೇಳಿದರು.

‘ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿ ಇದುದ್ದರಿಂದಲೇ ವಿಳಂಬ ಆಗಿದೆ’ ಎಂಬುದು ಇಲಾಖೆಯ ಅಧಿಕಾರಿಗಳ ವಿವರಣೆ. 

‘ಪಠ್ಯಪುಸ್ತಕ ಮುದ್ರಿಸುವುದು ಎನ್‌ಸಿಇಆರ್‌ಟಿ ಕೆಲಸವೋ, ಇಲಾಖೆಯ ಕೆಲಸವೋ ಎಂಬ ಗೊಂದಲ ಇತ್ತು. ಇಲಾಖೆ ಎನ್‌ಸಿಇಆರ್‌ಟಿ ಬಳಿ ಒಂದಿಷ್ಟು ಹಣವನ್ನು ಠೇವಣಿ ಇಟ್ಟಿದ್ದೇ ಇದಕ್ಕೆ ಕಾರಣವಾಗಿತ್ತು. ಹಲವು ಸಂವಹನಗಳ ಬಳಿಕ ಪದವಿಪೂರ್ವ ಶಿಕ್ಷಣ ಇಲಾಖೆ ವತಿಯಿಂದಲೇ ಮುದ್ರಿಸುವ ನಿರ್ಧಾರಕ್ಕೆ ಸರ್ಕಾರ ಬಂದಿದೆ’ ಎಂದು ಅಧಿಕಾರಿಗಳು ವಿವರಿಸುತ್ತಾರೆ.

‘ಇನ್ನು ಹತ್ತು ದಿನದೊಳಗೆ ಪಠ್ಯ ಪುಸ್ತಕ ಮಾರುಕಟ್ಟೆಗೆ ಬರಲಿದೆ. ಇವುಗಳ ವಿತರಣೆಗಾಗಿ ಕರ್ನಾಟಕ ಪಠ್ಯಪುಸ್ತಕ ಸೊಸೈಟಿ ಈಗಾಗಲೇ ಕ್ರಮ ಕೈಗೊಂಡಿದೆ’ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ಪಿ.ಸಿ.ಜಾಫರ್‌ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು