ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಮೇಶ ಜಾರಕಿಹೊಳಿ ಬಿಗ್‌ ಝೀರೋ : ಸತೀಶ ಜಾರಕಿಹೊಳಿ ವಾಗ್ದಾಳಿ

Last Updated 8 ಸೆಪ್ಟೆಂಬರ್ 2019, 13:45 IST
ಅಕ್ಷರ ಗಾತ್ರ

ಬೆಳಗಾವಿ: ‘ಅನರ್ಹ ಶಾಸಕ ರಮೇಶ ಜಾರಕಿಹೊಳಿ ರಾಜ್ಯಕ್ಕೆ ದೊಡ್ಡವನಿರಬಹುದು. ಸಮ್ಮಿಶ್ರ ಸರ್ಕಾರ ಬೀಳಿಸಿ ಹೊರಗಡೆ ದೊಡ್ಡ ಹೆಸರು ಮಾಡಿರಬಹುದು. ಆದರೆ, ನನ್ನ ದೃಷ್ಟಿಯಲ್ಲಿ ಆತ ಬಿಗ್ ಝೀರೋ. ಊಟದಲ್ಲಿ ಉಪ್ಪಿನಕಾಯಿ ಇದ್ದಂತೆ’ ಎಂದು ಸೋದರ, ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಟೀಕಿಸಿದರು.

ಶನಿವಾರ ಗೋಕಾಕದಲ್ಲಿ ಸಂಕಲ್ಪ ಸಮಾವೇಶ ನಡೆಸಿ ರಮೇಶ ಮಾಡಿದ್ದ ಆರೋಪಗಳಿಗೆ ಭಾನುವಾರ ತಿರುಗೇಟು ನೀಡಿದ ಸತೀಶ, ‘ಮುಂಬರಲಿರುವ ಉಪ ಚುನಾವಣೆಯಲ್ಲಿ ಅವರಿಗೆ ಬಿಸಿ ತಟ್ಟಲಿದೆ’ ಎಂದು ಗುಡುಗಿದರು.

‘ಚುನಾವಣೆ ಬಂದಾಗ ಜನರ ಬಳಿ ಬರುತ್ತಾರೆ. ಅದು, ಇದು ಕೊಡಿಸುತ್ತೇವೆ ಎಂದು ಸುಳ್ಳು ಹೇಳುತ್ತಾರೆ. ಜನ ಈ ಬಾರಿ ಗೋಕಾಕದಲ್ಲಿ ಬದಲಾವಣೆ ತರಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ನೆರೆಯಿಂದಾಗಿ ಜನರು ಸಂಕಷ್ಟದಲ್ಲಿದ್ದಾರೆ. ಅವರಿಗಾಗಿ ಸಭೆ ಮಾಡಿದ್ದರೆ ಎಲ್ಲರೂ ಒಪ್ಪುತ್ತಿದ್ದರು. ಆದರೆ, ರಾಜಕೀಯ ವರ್ಚಸ್ಸು, ಜನ ಬೆಂಬಲ ಕಡಿಮೆ ಆಗುತ್ತಿರುವುದು ಮತ್ತು ಕಾಂಗ್ರೆಸ್‌ಗೆ ಜನ ಬೆಂಬಲ ಸಿಗುತ್ತಿರುವುದನ್ನು ತಿಳಿದು ಹೊರಗಿನಿಂದ ಜನರನ್ನು ಕರೆ ತಂದು ಸಮಾವೇಶ ಮಾಡಿದ್ದಾರೆ. ಶಕ್ತಿ ಇದೆ ಎಂದು ತೋರಿಸಲು ಯತ್ನಿಸಿದ್ದಾರೆ. ಹಿಂದೆಯಿಂದಲೂ ಇದೇ ರೀತಿಯೇ ಮಾಡಿಕೊಂಡು ಬಂದಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ರಮೇಶನ ಅಳಿಯ ಅಂಬಿರಾವ್ ಪಾಟೀಲನಿಂದಾಗಿ ಸೋದರ ಲಖನ್ ಜಾರಕಿಹೊಳಿ ಅವರಿಂದ ದೂರವಾಗಿದ್ದಾರೆ. ಈ ಬಾರಿ ಕೇದಾರನಾಥ, ಕೊಲ್ಹಾಪುರ ಮಹಾಲಕ್ಷಿ ರಮೇಶನ ಕೈಹಿಡಿಯುವುದಿಲ್ಲ. ಜನರ ಸೇವೆ ಮಾಡಿದರೆ ದೇವರು ಒಲಿದಂತೆ. ಗುಡಿ ಸುತ್ತಿದರೆ, ಜನರಿಂದ ದೂರವಿದ್ದರೆ ಯಾವ ದೇವರೂ ರಕ್ಷಣಗೆ ಬರುವುದಿಲ್ಲ’ ಎಂದು ಕುಟುಕಿದರು.

‘ಗೋಕಾಕದಲ್ಲಿರುವ ಅಂಬಿರಾವ್ ಸಾಮ್ರಾಜ್ಯ ಈ ಬಾರಿ ಕೊಚ್ಚಿ ಹೋಗಲಿದೆ. ಗೋಕಾಕದಲ್ಲಿ ಜಾರಕಿಹೊಳಿ ಸಾಮ್ರಾಜ್ಯ ಕಟ್ಟಿದ್ದು ನಾನು. ಅಲ್ಲಿ ಈಗ ಜಾರಕಿಹೊಳಿ ಎನ್ನುವುದು ಹೆಸರಿಗಷ್ಟೇ ಆಗಿದೆ. ಅಂಬಿರಾವ್ ದರ್ಬಾರ್‌ ನಡೆಸುತ್ತಿದ್ದಾನೆ. ಆತನನ್ನು ನಿಯಂತ್ರಿಸುವುದು ಗೊತ್ತಿದೆ’ ಎಂದರು.

ಆಪರೇಷನ್ ಕಮಲಕ್ಕೆ ನಾವ್ಯಾರೂ ಕಾರಣವಲ್ಲ. ಒಮ್ಮೊಮ್ಮೆ ಒಂದೊಂದು ಹೇಳಿ ಗೊಂದಲ ಉಂಟು ಮಾಡುವುದು ಆತನ ಪ್ರವೃತ್ತಿ’ ಎಂದು ಚುಚ್ಚಿದರು.

‘ಬಿಜೆಪಿಯವರು, ತಮಗೆ ಸಹಕಾರ ನೀಡಿದ ಅನರ್ಹ ಶಾಸಕರನ್ನು ತಮ್ಮವರೆಂದು ಒಪ್ಪಿಲ್ಲ. ಹೀಗಾಗಿ, ಹೊಸಬರಿಗೆ ಸಚಿವ ಸ್ಥಾನ ಕೊಡುವುದು ಕಷ್ಟ. ಆದ್ದರಿಂದ ಕಾಂಗ್ರೆಸ್‌ ಶಾಸಕರು ಬಿಜೆಪಿಗೆ ಹೋಗುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT