ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರ್‍ಯಾಂಕ್ ವಿದ್ಯಾರ್ಥಿಗಳಿಂದ ನರೇಗಾ ಕೆಲಸ!

ಹಿರೇಮಲ್ಲನಕೆರೆ ಕೆರೆಯಲ್ಲಿ ಕೂಲಿ ಕೆಲಸ ಮಾಡುತ್ತಿರುವ ಸ್ನಾತಕೋತ್ತರ ಪದವೀಧರರು
Last Updated 14 ಮೇ 2019, 19:47 IST
ಅಕ್ಷರ ಗಾತ್ರ

ಹೂವಿನಹಡಗಲಿ: ಸ್ನಾತಕೋತ್ತರ ಪದವೀಧರರು, ಅದರಲ್ಲೂ ರ್‍ಯಾಂಕ್ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಹತೆಗೆ ತಕ್ಕ ಉದ್ಯೋಗ ಸಿಗದೇ ಸುಡು ಬಿಸಿಲಲ್ಲಿ ಹಾರೆ, ಗುದ್ದಲಿ ಹಿಡಿದು ನರೇಗಾ ಯೋಜನೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ.

ತಾಲ್ಲೂಕಿನ ಹಿರೇಮಲ್ಲನಕೆರೆ ಗ್ರಾಮದ ಐತಿಹಾಸಿಕ ಕೆರೆ ಅಂಗಳವು ನಿರುದ್ಯೋಗ ಸಮಸ್ಯೆಯ ಕ್ರೂರತೆಗೆ ಸಾಕ್ಷಿಯಾಗಿದೆ.ಹಿರೇಮಲ್ಲನಕೆರೆಯ ಐದು ಜನ ಸ್ನಾತಕೋತ್ತರ ಪದವೀಧರರು, ಏಳೆಂಟು ಜನ ಪದವೀಧರರಿಗೆ ಸದ್ಯ ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಆಸರೆಯಾಗಿದೆ. ಕೆಲವರು ಪೂರ್ಣಪ್ರಮಾಣದಲ್ಲಿ ನರೇಗಾ ಕೂಲಿಕಾರರಾಗಿ ತೊಡಗಿಕೊಂಡಿದ್ದರೆ, ಹಲವರು ಅರೆಕಾಲಿಕ ಕೆಲಸದ ಜತೆಗೆ ಕೂಲಿ ಕೆಲಸವನ್ನೂ ಮಾಡುವ ಮೂಲಕ ಉದ್ಯೋಗ ಇಲ್ಲ ಎಂದು ಕುಂಟು ನೆಪ ಹೇಳುವ ಸೋಮಾರಿಗಳಿಗೆ ಮಾದರಿಯಾಗಿದ್ದಾರೆ.

ಹಿರೇಮಲ್ಲನಕೆರೆ ಗ್ರಾಮದ ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ಪ್ರತಿದಿನ 400–500 ಜನರು ಕೆಲಸ ಮಾಡುತ್ತಿದ್ದಾರೆ. ಬೆಳಿಗ್ಗೆ 8ಗಂಟೆಗೆ ಹಾರೆ, ಗುದ್ದಲಿ, ಸಲಿಕೆಯೊಂದಿಗೆ ಕೆಲಸಕ್ಕೆ ತೆರಳುವ ಈ ಪದವೀಧರರು ಮಧ್ಯಾಹ್ನ 12ರವರೆಗೆ ಇತರೆ ಕೂಲಿಕಾರರಂತೆ ದಣಿವರಿಯದೇ ದುಡಿಯುತ್ತಿದ್ದಾರೆ.

ನಿಯಮದಂತೆ ಒಬ್ಬ ಕೂಲಿಕಾರ 5 ಅಡಿ ಅಗಲ, 5 ಅಡಿ ಉದ್ದ, 2 ಅಡಿ ಆಳ ತೆಗೆದರೆ ₹249 ಕೂಲಿ ಸಿಗುತ್ತದೆ. ಬಿಸಿಲ ಧಗೆ ಹೆಚ್ಚಿರುವುದರಿಂದ ನಿರ್ದಿಷ್ಟ ಅಳತೆಯ ಕೆಲಸ ಮಾಡಲು ಸಾಧ್ಯವಾಗದೇ ಕಾರ್ಮಿಕರಿಗೆ ಸರಾಸರಿ ಸಿಗುತ್ತಿರುವ ಕೂಲಿ ಹಣ ದಿನಕ್ಕೆ ₹200 ಮಾತ್ರ.

ಗ್ರಾಮದ ಯುವಕ ಉಲವತ್ತಿ ಗರುಡಪ್ಪ 2013ರಲ್ಲಿ ಎಂ.ಎ. ರಾಜ್ಯಶಾಸ್ತ್ರದಲ್ಲಿ ಬಳ್ಳಾರಿ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದಲ್ಲಿ ಮೊದಲ ರ್‍ಯಾಂಕ್‌ ಗಳಿಸಿದವರು. ಓದಿಗೆ ತಕ್ಕ ಉದ್ಯೋಗ ಸಿಗದೇ 2015ರಿಂದ ನರೇಗಾ ಕೂಲಿ ಕೆಲಸ ಮಾಡುತ್ತಿದ್ದಾರೆ. ಕಳೆದ ವರ್ಷದಿಂದ ಮುಂಡರಗಿಯ ಜೆ.ಟಿ. ಪದವಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆಗೆ ಸೇರಿದ್ದು, ರಜೆ ದಿನಗಳಲ್ಲಿ ನರೇಗಾ ಕೂಲಿ ಕೆಲಸ ಮಾಡುತ್ತಾರೆ.

ಸುರೇಶ ಅಲಬೂರ 2014ರಲ್ಲಿ ಎಂ.ಎ. ರಾಜ್ಯಶಾಸ್ತ್ರದಲ್ಲಿ ನಾಲ್ಕನೇ ರ್‍ಯಾಂಕ್‌ ಗಳಿಸಿದ್ದಾರೆ. ಕಳೆದ ಜುಲೈನಲ್ಲಿ ಹಗರಿಬೊಮ್ಮನಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆಗೆ ಸೇರಿದ್ದರು. ಕಾರ್ಯಾಭಾರದ ಒತ್ತಡ ಇಲ್ಲವೆಂಬ ನೆಪ ಹೇಳಿ ಡಿಸೆಂಬರ್‌ನಲ್ಲೇ ಅವರನ್ನು ಬಿಡುಗಡೆಗೊಳಿಸಲಾಯಿತು. ಆ ದಿನದಿಂದಲೇ ಅವರು ಕೂಲಿಕಾರರಾಗಿ ರೂಪಾಂತರಗೊಂಡರು. 2014ರಲ್ಲಿ ಎಂ.ಎ. ಅರ್ಥಶಾಸ್ತ್ರದಲ್ಲಿ ನಾಲ್ಕನೇ ರ್‍ಯಾಂಕ್‌ ಪಡೆದಿದ್ದ ಮಲ್ಲೇಶಪ್ಪ ಕಲಿಕೇರಿ ಕೂಡ ಈಗ ನರೇಗಾ ಕಾರ್ಮಿಕ.

ಗ್ರಾಮದ ಮೊದಲ ಸ್ನಾತಕೋತ್ತರ ಪದವೀಧರರೆಂಬ ಹೆಗ್ಗಳಿಕೆಯ ಯಲ್ಲಪ್ಪ ತಳವಾರ ಮತ್ತು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಎಸ್.ಮಂಜುನಾಥ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಿರಾಸೆ ಅನುಭವಿಸಿ, ಸರ್ಕಾರಿ ನೌಕರಿಯ ಬಗ್ಗೆ ಬೇಸರಗೊಂಡವರು. ಈಗ ಇವರಿಬ್ಬರು ಆಯ್ದುಕೊಂಡಿರುವುದು ನರೇಗಾ ಕೂಲಿ ಕೆಲಸ.

ಬಿ.ಎಡ್‌. ಪದವೀಧರರಾದ ಕೆ.ರವಿಚಂದ್ರ, ಟಿ.ಮಂಜುನಾಥ, ಪದವೀಧರರಾದ ದೊಡ್ಡಬಸವರೆಡ್ಡಿ, ಹಲಗಿ ಪ್ರವೀಣಕುಮಾರ್, ಬನ್ನಿಕಲ್ಲು ಆಂಜನೇಯ, ಧಾರವಾಡ ಮಂಜುನಾಥ ಅವರು ಕಾರ್ಮಿಕರಾಗಿದ್ದಾರೆ. ಉನ್ನತ ಶಿಕ್ಷಣ ಪಡೆದಿದ್ದರೂ ಮುಜಗರ ಇಲ್ಲದೇ ಕೂಲಿ ಕೆಲಸ ಮಾಡುವ ವಿದ್ಯಾವಂತ ಯುವ ಪಡೆಯ ಬಗ್ಗೆ ಜನರು ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ.

‘ಎಂ.ಎ. ಓದೀನಿ ಅಂತಾ ಮುಜಗರದಿಂದ ಮನೆಯಲ್ಲಿ ಕುಳಿತರೆ ಹೊಟ್ಟೆಪಾಡು ಕೇಳಬೇಕಲ್ಲಾ ಸಾರ್’ ಎಂದು ಮಾತು ಆರಂಭಿಸಿದ ಯಲ್ಲಪ್ಪ ತಳವಾರ, ‘ಖಾಸಗಿ ಕಾಲೇಜುಗಳಿಗೆ ಪಾಠ ಮಾಡಲು ಹೋದ್ರೆ ₹8 ಸಾವಿರಕ್ಕಿಂತ ಹೆಚ್ಚು ಸಂಬಳ ಸಿಗಲ್ಲ. ಈ ಹಣದಲ್ಲಿ ಸಿಟಿ ಲೈಫ್ ನಿರ್ವಹಿಸುವುದು ಕಷ್ಟ. ಮಾಸ್ಟರ್‌ ಡಿಗ್ರಿ ಓದಿ ಕೂಲಿಕಾರರಿಗಿಂತ ಕಡಿಮೆ ಸಂಬಳ ಪಡೆದರೆ ಮತ್ತೊಂದು ರೀತಿಯ ಮುಜಗರ. ಇದರ ಬದಲು ಕೂಲಿ ಕೆಲಸವೇ ಲೇಸು’ ಎಂದರು.

‘ಕಡಿಮೆ ಸಂಬಳಕ್ಕೆ ನಗರ ಪ್ರದೇಶಗಳಿಗೆ ಹೋಗಿ ದುಡಿಯುವ ಬದಲು ನಮ್ಮೂರಲ್ಲೇ ಕೂಲಿ ಮಾಡುವುದು ಎಷ್ಟೋ ಮೇಲು. ಮಳೆ ಬೆಳೆ ಇಲ್ಲದೇ ತತ್ತರಿಸಿರುವ ರೈತರು, ಕೂಲಿಕಾರ್ಮಿಕರು, ನನ್ನಂತಹ ನಿರುದ್ಯೋಗಿಗಳಿಗೆ ಉದ್ಯೋಗ ಖಾತ್ರಿ ವರದಾನವಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT