ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ ಆರೋಪಿಯ ತಂದೆಯ ಬಂಧನಕ್ಕೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ

Last Updated 13 ಡಿಸೆಂಬರ್ 2019, 12:21 IST
ಅಕ್ಷರ ಗಾತ್ರ

ಬೆಳಗಾವಿ: ತಾಲ್ಲೂಕಿನ ಗ್ರಾಮವೊಂದರಲ್ಲಿ 7 ವರ್ಷದ ಬಾಲಕಿಯ ಮೇಲೆ ಅತ್ಯಾಚಾರನಡೆಸಿದ ಆರೋಪದಲ್ಲಿ ಬಂಧಿಸಲಾಗಿರುವ ಸುನೀಲ ಬಾಳನಾಯ್ಕಗೆ ಕಠಿಣ ಶಿಕ್ಷೆ ವಿಧಿಸಬೇಕು. ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ ಆರೋಪಿ ತಂದೆಯನ್ನು ಬಂಧಿಸಬೇಕು. ಪೊಲೀಸರು ರಾಜಕೀಯ ಪ್ರಭಾವಕ್ಕೆ ಮಣಿಯಬಾರದು ಎಂದು ಆಗ್ರಹಿಸಿ ಗ್ರಾಮಸ್ಥರು ಶುಕ್ರವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್‌ ಪ್ರತಿಭಟನೆ ನಡೆಸಿದರು.

ಶ್ರೀರಾಮ ಸೇನಾ ಹಿಂದೂಸ್ತಾನ ಸಂಘಟನೆ, ರಾಜ್ಯ ಛಲವಾದಿ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾ ಘಟಕ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ‘ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಸ್ಪಷ್ಟ ಸಂದೇಶ ರವಾನಿಸಬೇಕು’ ಎಂದು ಒತ್ತಾಯಿಸಿದರು.

ಗ್ರಾಮದಲ್ಲಿ ಸ್ವಯಂಪ್ರೇರಿತ ಬಂದ್ ಮಾಡಿ ಅಲ್ಲಿಂದಲೇ ಪ್ರತಿಭಟನಾ ಮೆರವಣಿಗೆಯಲ್ಲಿ ಬಂದ ಅವರು, ಮೊದಲು ಎಂಪಿಎಂಸಿ ಪೊಲೀಸ್‌ ಠಾಣೆ ಎದುರು ಕೆಲ ಕಾಲ ಪ್ರತಿಭಟನೆ ನಡೆಸಿದರು. ‘ಪ್ರಕರಣ ಮುಚ್ಚಿ ಹಾಕಲು ಹಾಗೂ ಮಗನನ್ನು ರಕ್ಷಿಸಲು ಯತ್ನಿಸಿದ ಆರೋಪಿಯ ತಂದೆಯನ್ನು ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡು ಬಂಧಿಸಬೇಕು. ಯಾವುದೇ ರಾಜಕೀಯ ಒತ್ತಡಕ್ಕೆ ಒಳಗಾಗದೇ ಪ್ರಕರಣದ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.

ಆಸ್ಪತ್ರೆ ಬಳಿ:ಬಳಿಕ ಜಿಲ್ಲಾಸ್ಪತ್ರೆಗೆ ಬಂದು ಕೆಲ ಕಾಲ ಪ್ರತಿಭಟನೆ ನಡೆಸಿದರು. ‘ಆಸ್ಪತ್ರೆಯಲ್ಲಿ ದಾಖಲಿಸಿದ್ದ ಬಾಲಕಿಯನ್ನು ಆರೋಪಿಯ ತಂದೆ ಬುಧವಾರ ಸಂಜೆ ಆಸ್ಪತ್ರೆಯಿಂದಲೇ ಎತ್ತಿಕೊಂಡುಹೋಗಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ತನಿಖೆ ನಡೆಸಬೇಕು. ಆಸ್ಪತ್ರೆಯವರು ಪೊಲೀಸರಿಗೆ ಸಹಕರಿಸಬೇಕು’ ಎಂದು ಕೋರಿದರು. ಅಲ್ಲಿಂದ ರಾಣಿ ಚನ್ನಮ್ಮ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಬಂದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಉದಯ ಸಿದ್ದನವರ ಮಾತನಾಡಿ, ‘ಗ್ರಾಮದಲ್ಲಿಬುಧವಾರ ಸಂಜೆ ಬಾಲಕಿಯ ಮೇಲೆ ಸುನೀಲ ಬಾಳನಾಯ್ಕ ಅತ್ಯಾಚಾರ ಎಸಗಿದ್ದಾನೆ. ಕಾಕತಿ ಠಾಣೆ ಪೊಲೀಸರು ಗುರುವಾರ ಆತನನ್ನು ಬಂಧಿಸಿದ್ದಾರೆ. ಆದರೆ, ಪ್ರಕರಣದ ತನಿಖೆಯು ರಾಜಕೀಯ ನಾಯಕರ ಒತ್ತಡದಿಂದಾಗಿ ಸರಿಯಾಗಿ ಆಗುತ್ತಿಲ್ಲ’ ಎಂದು ಆರೋಪಿಸಿದರು. ‘ಪೊಲೀಸರು ಯಾವುದೇ ಪ್ರಭಾವಕ್ಕೆ ಒಳಗಾಗದೇ ತನಿಖೆ ನಡೆಸಬೇಕು. ಆರೋಪಿ ಹಾಗೂ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಮರುಕಳಿಸದಂತೆ ನೋಡಿಕೊಳ್ಳಬೇಕು:ಸಾಮಾಜಿಕ ಕಾರ್ಯಕರ್ತೆ ಪ್ರಮೋದ ಹಜಾರೆ ಮಾತನಾಡಿ, ‘ನಿರ್ಭಯಾ ಪ್ರಕರಣದ ಬಳಿಕ ರಚಿಸಲಾಗಿರುವ ಮಾರ್ಗಸೂಚಿಯಂತೆ ಪೊಲೀಸರು ಮಗು ಇದ್ದಲ್ಲಿಗೇ ಬಂದು ವಿಚಾರಣೆ ನಡೆಸಬೇಕು. ‘ನಿರ್ಭಯಾ ನಿಧಿ’ಯಲ್ಲಿ ಸಂತ್ರಸ್ತ ಬಾಲಕಿಯ ಕುಟುಂಬಕ್ಕೆ ತಕ್ಷಣ ಪರಿಹಾರ ನೀಡಬೇಕು. ಪ್ರಕರಣದ ತನಿಖೆಗೆ ಹೆಚ್ಚು ಕಾಲಾವಕಾಶ ತೆಗೆದುಕೊಳ್ಳದೇ, ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು. ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕು. ಮರುಕಳಿಸದಂತೆ ಕಠಿಣ ಕಾನೂನು ಜಾರಿಗಳಿಸಬೇಕು’ ಎಂದು ಆಗ್ರಹಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸತೀಶ್‌ಕುಮಾರ್‌ ಮನವಿ ಸ್ವೀಕರಿಸಿದರು. ಮುಂಜಾಗ್ರತಾ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಅರುಣ ಕಟಾಂಬಳೆ, ಸದಸ್ಯೆ ಸರಸ್ವತಿ ಪಾಟೀಲ, ಮುಖಂಡರಾದ ಶಂಕರ ಕಾಂಬಳೆ, ಕಲ್ಲಪ್ಪ ರಾಮಚಂದ್ರನವರ, ಸಿದ್ದರಾಯಿ ಮೈತ್ರಿ, ರವಿ ಬಸ್ತವಾಡಕರ, ವಿನಾಯಕ ಕೋಲಕಾರ, ಜ್ಯೋತಿರಾಜ ದೊಡ್ಡಮನಿ, ದೀಲಿಪ ಕಾಂಬಳೆ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT