ಮಂಗಳವಾರ, ಸೆಪ್ಟೆಂಬರ್ 17, 2019
25 °C

ರಾಯಚೂರಿನಲ್ಲಿ ಜೀವಜಲಕ್ಕೆ ತತ್ವಾರ

Published:
Updated:

ಬೆಂಗಳೂರು: ರಾಯಚೂರು ಜಿಲ್ಲೆಯ ನೂರಾರು ಹಳ್ಳಿಗಳು ಬರದಿಂದ ತತ್ತರಿಸಿದ್ದು, ಗುಟುಕು ನೀರಿಗಾಗಿ ಪರದಾಡುತ್ತಿವೆ. ದಿನದಿಂದ ದಿನಕ್ಕೆ ಬಿಸಿಲಿನ ತಾಪವೂ ಏರಿಕೆಯಾಗುತ್ತಿದ್ದು, ಜನರು ಹೈರಾಣಾಗಿದ್ದಾರೆ.

ರಾಯಚೂರು ನಗರಕ್ಕೆ ಹೊಂದಿಕೊಂಡಿರುವ ತುಂಟಾಪುರ ಗ್ರಾಮದಲ್ಲಿ 400 ಕುಟುಂಬಗಳು ನೆಲೆಸಿವೆ. ಇಲ್ಲಿ ಸಾರ್ವಜನಿಕವಾಗಿ ಎರಡು ಕೊಳವೆ ಬಾವಿಗಳಿದ್ದು, ಪ್ರತಿಯೊಂದರಲ್ಲಿ ಅರ್ಧ ಇಂಚು ನೀರು ಬರುತ್ತಿದೆ. ನೀರಿಗಾಗಿ ಈ ಕೊಳವೆ ಬಾವಿಗಳನ್ನೇ ನಂಬಿದ್ದು, ಪ್ರತಿ ದಿನ ಒಬ್ಬರಿಗೆ 2 ಕೊಡ ನೀರು ಸಿಗುತ್ತದೆ. ಅತ್ಯಲ್ಪ ನೀರಿನಲ್ಲೇ ಜೀವ ಉಳಿಸಿಕೊಳ್ಳಬೇಕಾಗಿದೆ.

ಕಳೆದ ಎರಡು ವಾರಗಳಲ್ಲಿ 10 ಕೊಳವೆ ಬಾವಿಗಳನ್ನು ಕೊರೆಸಿದ್ದು, ಎರಡರಲ್ಲಿ ಮಾತ್ರ ನೀರು ಜಿನುಗುತ್ತಿದೆ. ಕುಟುಂಬದ ಒಬ್ಬರು ಪ್ರತಿ ದಿನವೂ ನೀರು ತುಂಬಿಸುವ ಕಾಯಕ ಮಾಡಬೇಕಾಗಿದೆ. ಇದಕ್ಕೂ ಮುನ್ನ 3 ಕಿ.ಮೀ ದೂರದ ಪ್ರದೇಶಕ್ಕೆ ಹೋಗಿ, ಅಲ್ಲಿಂದ ನೀರು ಹೊತ್ತು ತರಬೇಕಿತ್ತು ಎಂದು ಗ್ರಾಮ ಪಂಚಾಯಿತಿ ಸದಸ್ಯ ಆನಂದ್ ನಾಯಕ್ ಹೇಳುತ್ತಾರೆ.

ಕೊಳವೆ ಬಾವಿಗಳನ್ನು ಕೊರೆಸಲು ಮೂರು ಹಂತಗಳಲ್ಲಿ ₹7.5 ಕೋಟಿ ಬಿಡುಗಡೆ ಮಾಡಲಾಗಿದೆ. ಕೊಳವೆ ಬಾವಿ ಕೊರೆಸಿದರೂ ನೀರು ಬರುತ್ತಿಲ್ಲ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಳಿನಿ ಅತುಲ್ ಹೇಳುತ್ತಾರೆ.

Post Comments (+)