ಶುಕ್ರವಾರ, ಆಗಸ್ಟ್ 6, 2021
25 °C

3 ಶೈಕ್ಷಣಿಕ ಚಾನಲ್‌ಗೆ ಮನವಿ: ಸಚಿವ ಸುರೇಶ್‌‌ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ‘ಭವಿಷ್ಯದ ಶೈಕ್ಷಣಿಕ ದೃಷ್ಟಿಯಿಂದ ಮೂರು ಪ್ರತ್ಯೇಕ ಟಿ.ವಿ ಚಾನಲ್‌ಗೆ ಅವಕಾಶ ನೀಡಬೇಕು ಎಂದು ಕೇಂದ್ರಕ್ಕೆ ಮನವಿ ಮಾಡಿದ್ದೇವೆ’ ಎಂದು ಶಿಕ್ಷಣ ಸಚಿವ ಎಸ್‌. ಸುರೇಶ್‌‌ಕುಮಾರ ತಿಳಿಸಿದರು.

‘ಶಿಕ್ಷಣ ಇಲಾಖೆ ಮೇಲೆ ಕೊರೊನಾ ದೂರಗಾಮಿ ಪರಿಣಾಮ ಬೀರಿದೆ. ಪಠ್ಯಕ್ರಮ, ತರಗತಿ, ಕ್ರೀಡೆ ಮುಂತಾದ ವಿಚಾರಗಳಲ್ಲೂ ಸವಾಲುಗಳು ಎದುರಾಗಲಿವೆ. ಅದಕ್ಕೆ ತಕ್ಕಂತೆ ನಾವು ಭವಿಷ್ಯದ ತಯಾರಿ ಮಾಡಿಕೊಳ್ಳಬೇಕಾಗಿದೆ. ಕೇಂದ್ರದಿಂದ ಕೂಡ ಮಾರ್ಗಸೂಚಿಗಳನ್ನು ನಿರೀಕ್ಷಿಸಲಾಗುತ್ತಿದೆ’ ಎಂದು ಅವರು ನಗರದಲ್ಲಿ ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

‘ಈಗಾಗಲೇ ‘ಚಂದನ ವಾಹಿನಿ’ಯಲ್ಲಿ ಮಾರ್ಗದರ್ಶನ ನಡೆದಿದೆ. ‘ಮಕ್ಕಳವಾಣಿ’ ಎಂಬ ಯೂಟೂಬ್‌ ಚಾನಲ್ ಕೂಡ ಆರಂಭಿಸಲಾಗಿದೆ. ಅದರಲ್ಲಿ ಪಠ್ಯ, ಬೋಧನೆ, ಪ್ರಶ್ನೋತ್ತರ, ಕ್ರೀಡೆ ಲಭ್ಯವಿದೆ. ವಿದ್ಯಾರ್ಥಿಗಳಿಂದ ಉತ್ತಮ ಬಳಕೆ ಕಂಡುಬರುತ್ತಿದೆ. ಇದರೊಂದಿಗೆ ಇನ್ನೂ ಮೂರು ಚಾನಲ್‌ ಅವಶ್ಯಕತೆ ಇರುವುದನ್ನು ಕೇಂದ್ರಕ್ಕೆ ಮನವರಿಕೆ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ದೂರದರ್ಶನದ ಪಾಠಗಳೇ ಹೆಚ್ಚು ಅಗತ್ಯವಾಗಲಿವೆ’ ಎಂದರು.

‘ಈ ಬಾರಿ 18,48,203 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ. 200 ಮಕ್ಕಳಿಗೆ ಒಂದರಂತೆ ಥರ್ಮಲ್‌ ಗನ್‌ ನೀಡಲಾಗುವುದು. ಸೋಂಕಿತ ಮಕ್ಕಳು, ಕಂಟೈನ್ಮೆಂಟ್‌ ಝೋನ್‌ ನಿವಾಸಿಗಳು ಅಥವಾ ಸೀಲ್‌ಡೌನ್‌ ಆದ ಪ್ರದೇಶದವರು ಪ‍ರೀಕ್ಷೆಗೆ ಹಾಜರಾಗದೇ ಇದ್ದರೆ ಮುಂದಿನ ಪೂರಕ ಪರೀಕ್ಷೆಯಲ್ಲೂ ಅವರಿಗೆ ಅವಕಾಶ ನೀಡಲಾಗುವುದು. ಆದರೆ, ಅವರನ್ನೂ ‘ಫ್ರೆಷರ್ಸ್‌’ ಎಂದೇ ಪರಿಗಣಿಸಲಾಗುವುದು’ ಎಂದರು.

‘ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಮಾನದಂಡಗಳನ್ನು ಬದಲಾಯಿಸುವ ಚಿಂತನೆ ನಡೆದಿದೆ. ಈಗಾಗಲೇ ಮೂವರು ತಜ್ಞರ ಸಮಿತಿ ಮಾಡಿ ಚರ್ಚೆ ಆರಂಭಿಸಲಾಗಿದೆ. ಜೂನ್‌ 18ರ ನಂತರ ಪದವಿಪೂರ್ವ ಉಪನ್ಯಾಸಕರಿಗೆ ನೇಮಕಾತಿ ಕೌನ್ಸೆಲಿಂಗ್‌ ನಡೆಯಲಿದೆ’ ಎಂದೂ ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು