ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರಿ ಮಳೆ: ನದಿಗಳ ನೀರಿನ ಮಟ್ಟ ಏರಿಕೆ

ಕೃಷ್ಣಾ ನದಿ ಪಾತ್ರದಲ್ಲಿ ಮಳೆ: ಸುರಕ್ಷಿತ ಸ್ಥಳಕ್ಕೆ ತೆರಳಲು ಆಲಮಟ್ಟಿ ಅಣೆಕಟ್ಟೆಯ ಕೆಳಭಾಗದ ಜನರಿಗೆ ಸೂಚನೆ
Last Updated 8 ಜುಲೈ 2020, 19:31 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಕರಾವಳಿ, ಮಲೆನಾಡಿನಲ್ಲಿ ಬುಧವಾರ ಜೋರಾಗಿ ಮಳೆ ಸುರಿದಿದೆ. ನದಿ ಪಾತ್ರಗಳಲ್ಲಿ ಗಣನೀಯ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ದಕ್ಷಿಣ ಮಹಾರಾಷ್ಟ್ರದಲ್ಲಿಯೂ ಮಳೆ ಬಿರುಸಾಗಿರುವುದರಿಂದ ಕೃಷ್ಣಾ ನದಿ ನೀರಿನ ಮಟ್ಟ ಹೆಚ್ಚಳವಾಗಿದೆ. ಆಲಮಟ್ಟಿ ಅಣೆಕಟ್ಟೆಯ ಕೆಳಭಾಗದ ಪ್ರದೇಶದ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಮನ್ನೆಚ್ಚರಿಕೆ ನೀಡಲಾಗಿದೆ.

ಕರಾವಳಿಯಲ್ಲಿ ಮಳೆ ಬಿರುಸಾಗಿದ್ದು, ಉಡುಪಿ ಜಿಲ್ಲೆಯ ಬೈಂದೂರು, ಕುಂದಾಪುರ ತಾಲ್ಲೂಕಿನಲ್ಲಿ ಮನೆಗಳಿಗೆ ಹಾನಿಯಾಗಿದೆ. ಬೈಂದೂರಿನಲ್ಲಿ ನದಿಗಳ ನೀರಿನ ಮಟ್ಟ ಹೆಚ್ಚಾಗಿದ್ದು, ನೆರೆ ಭೀತಿ ಸೃಷ್ಟಿಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನೇತ್ರಾವತಿ ನದಿ ನೀರಿನ ಮಟ್ಟ ಗರಿಷ್ಠ 8.5 ಮೀಟರ್‌ ಇದ್ದು, ಬುಧವಾರ 5.2 ಮೀಟರ್‌ ದಾಖಲಾಗಿದೆ. ಕುಂಡಡ್ಕ ವಿಷ್ಣುಮೂರ್ತಿ ದೇವಸ್ಥಾನದ ತಡೆಗೋಡೆ ಕುಸಿದಿದೆ. ಸುಳ್ಯದ ಜಟ್ಟಿಪಳ್ಳ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಗೋಡೆಯ ಕುಸಿದು ಬಿದ್ದಿದೆ.ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದೆ.

ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿದಿದೆ. ಹಾರಂಗಿ ಜಲಾಶಯದ ಒಳಹರಿವು ಮತ್ತಷ್ಟು ಏರಿಕೆಯಾಗಿದೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ತಾಲ್ಲೂಕಿನಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಜೋರು ಮಳೆಯಿಂದಾಗಿ ನದಿಗಳು ತುಂಬಿ ಹರಿಯುತ್ತಿವೆ. ಹಲವು ಪ್ರದೇಶದಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ.

ತುಂಬಿದ ತುಂಗೆ: ಗಾಜನೂರು ತುಂಗಾ ಡ್ಯಾಂ ಭರ್ತಿಯಾಗಿದ್ದು, ತುಂಗಾನದಿ ಐತಿಹಾಸಿಕ ಮಂಟಪ ಮುಳುಗಲು ಇನ್ನು 2 ಅಡಿ ಬಾಕಿ ಇದೆ. ತುಂಗಾನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದೆ. ದಾವಣಗೆರೆ, ನ್ಯಾಮತಿ, ಹೊನ್ನಾಳಿ ತಾಲ್ಲೂಕುಗಳಲ್ಲಿ ಸಾಧಾರಣ ಮಳೆಯಾಗಿದೆ.

ಕೃಷ್ಣಾ ನದಿ ಒಳಹರಿವು ಹೆಚ್ಚಳ: ಕೃಷ್ಣಾ ನದಿ ಪಾತ್ರದಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿದ್ದು, ವಿಜಯಪುರದ ಆಲಮಟ್ಟಿ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಹೆಚ್ಚಾಗಿದೆ.

ನೆರೆಯ ದಕ್ಷಿಣ ಮಹಾರಾಷ್ಟ್ರದಲ್ಲಿಯೂ ಮಳೆ ಬಿರುಸಾಗಿ ಸುರಿಯುತ್ತಿರುವುದರಿಂದ ಕೃಷ್ಣಾ ನದಿ ನೀರಿನ ಒಳಹರಿವು ಹೆಚ್ಚಳವಾಗಿದೆ. ದೂಧ್‌ಗಂಗಾ ನದಿಯಿಂದ 9,856 ಕ್ಯುಸೆಕ್‌ ಹಾಗೂ ರಾಜಾಪುರ ಬ್ಯಾರೇಜ್‌ದಿಂದ 36,250 ಕ್ಯುಸೆಕ್‌ ಸೇರಿದಂತೆ ಚಿಕ್ಕೋಡಿಯ ಕಲ್ಲೋಳ ಬಳಿ ಕೃಷ್ಣಾ ನದಿಗೆ 46,106 ಕ್ಯುಸೆಕ್‌ ನೀರು ಸೇರಿಕೊಳ್ಳುತ್ತಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ ದಿನವಿಡೀ ಮಳೆ ಸುರಿದಿದೆ. ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ಕಲಬುರ್ಗಿ, ಯಾದಗಿರಿ ಜಿಲ್ಲೆಗಳಲ್ಲಿ ಹಾಗೂ ಹೊಸಪೇಟೆಯಲ್ಲಿ ಉತ್ತಮ ಮಳೆಯಾಗಿದೆ.

ಸೂಚನೆ:ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯದಿಂದ ಯಾವುದೇ ಕ್ಷಣದಲ್ಲಿ ನೀರನ್ನು ಹೊರಬಿಡುವ ಸಾಧ್ಯತೆ ಇರುವುದರಿಂದ ಅಣೆಕಟ್ಟಿ ಕೆಳಭಾಗದ ಪ್ರದೇಶಗಳಲ್ಲಿ ಮುಳುಗಡೆಯಾಗಲಿರುವ ಎಲ್ಲ ಪಟ್ಟಣ ಹಾಗೂ ಹಳ್ಳಿಗಳ ಸಾರ್ವಜನಿಕರು ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರವಾಗಬೇಕು ಎಂದು ಆಣೆಕಟ್ಟು ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ತಿಳಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ‘ರೆಡ್‌ ಅಲರ್ಟ್‌’

ಮಡಿಕೇರಿ: ಕೊಡಗು ಜಿಲ್ಲೆಯ ಗುಡ್ಡಗಾಡು ಪ್ರದೇಶದಲ್ಲಿ ಗುರುವಾರ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ‘ರೆಡ್‌ ಅಲರ್ಟ್‌’ ಘೋಷಿಸಲಾಗಿದೆ. ಗುಡ್ಡಗಾಡು ಪ್ರದೇಶದ ನಿವಾಸಿಗಳು ಎಚ್ಚರ ವಹಿಸುವಂತೆ ಜಿಲ್ಲಾಡಳಿತ ಸೂಚಿಸಿದೆ. ಗುಡ್ಡ ಕುಸಿದು ವಾಹನ ಸಂಚಾರ ಬಂದ್‌ ಆಗಿದ್ದ ಭಾಗಮಂಡಲ–ತಲಕಾವೇರಿ ರಸ್ತೆಯ ಚೇರಂಗಾಲದ ಬಳಿ ಮಣ್ಣು ತೆರವು ಕಾರ್ಯಾಚರಣೆ ಪೂರ್ಣಗೊಂಡಿದೆ. ವಾಹನ ಸಂಚಾರ ಆರಂಭವಾಗಿದೆ.ಭಾಗಮಂಡಲದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದರೆ ಪರಿಸ್ಥಿತಿ ನಿಭಾಯಿಸಲು ಹೋಂ ಗಾರ್ಡ್ಸ್‌ ನಿಯೋಜಿಸಲಾಗಿದೆ. ಮೋಟಾರ್‌ ಬೋಟ್‌ಗಳನ್ನುಸನ್ನದ್ಧವಾಗಿ ಇಡಲಾಗಿದೆ.

ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಭಾಗಮಂಡಲಕ್ಕೆ ಬುಧವಾರ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿದರು.

ಮರುಕಳಿಸಿದ ಜೋಗ ಜಲಪಾತದ ವೈಭವ

ಕಾರ್ಗಲ್‌: ಶರಾವತಿ ಕಣಿವೆಯಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಮಳೆಯ ಅಬ್ಬರಕ್ಕೆ ಜೋಗ ಜಲಪಾತದ ವೈಭವ ಮರುಕಳಿಸಿದೆ.
ಜಲಪಾತದ ಪ್ರಮುಖ 4 ಕವಲುಗಳಾದ ರಾಜಾ, ರೋರರ್, ರಾಕೆಟ್, ರಾಣಿ ಜಲಪಾತಗಳು ಮೈದುಂಬಿ ಹರಿಯುತ್ತಿರುವ ಮೋಹಕ ದೃಶ್ಯ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಕೊರೊನಾ ಹಿನ್ನೆಲೆಯಲ್ಲಿ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಿದ್ದ ಜೋಗ ನಿರ್ವಹಣಾ ಪ್ರಾಧಿಕಾರ ಈತ್ತಿಚೆಗೆ ನಿಷೇಧವನ್ನು ಹಿಂಪಡೆದಿತ್ತು. ಅಗತ್ಯ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಮುಖ್ಯ ಪ್ರವೇಶ ದ್ವಾರದೊಳಗೆ ಪ್ರವಾಸಿಗರನ್ನು ಬಿಡಲಾಗುತ್ತಿದೆ. ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದ್ದು, ಸ್ಯಾನಿಟೈಸರ್, ಮಾಸ್ಕ್ ಬಳಕೆಯನ್ನು ಪ್ರವಾಸಿಗರಿಗೆ ಕಡ್ಡಾಯಗೊಳಿಸಲಾಗಿದೆ. ಹೊರರಾಜ್ಯದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಸ್ಥಳೀಯ ನಿವಾಸಿಗಳು ಆತಂಕಗೊಂಡಿದ್ದಾರೆ. ಪ್ರವಾಸಿಗರಿಗೆ ನಿಷೇಧ ಹೇರಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT