ಶುಕ್ರವಾರ, ಫೆಬ್ರವರಿ 21, 2020
19 °C
ಮಾಸಾಶನ ಜಾರಿಗೆ ಸರ್ಕಾರದ ಸಿದ್ಧತೆ

ತುರ್ತುಪರಿಸ್ಥಿತಿ ಪಿಂಚಣಿಗೆ ಆರ್‌ಎಸ್‌ಎಸ್‌ ವಿರೋಧ

ಎಸ್‌.ರವಿಪ್ರಕಾಶ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ತುರ್ತುಪರಿಸ್ಥಿತಿಯಲ್ಲಿ ಜೈಲು ಶಿಕ್ಷೆ ಅನುಭವಿಸಿದ ಹೋರಾಟಗಾರರಿಗೆ ಮಾಸಿಕ ಪಿಂಚಣಿ ನೀಡಲು ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರ ನಿರ್ಧರಿಸಿದ್ದು, ಇದು ಚರ್ಚೆಗೆ ಕಾರಣವಾಗಿದೆ.

ಉದ್ದೇಶಿತ ಈ ಯೋಜನೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ವಲಯದಲ್ಲೇ ಈಗಾಗಲೇ ಪರ–ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.

ತುರ್ತುಪರಿಸ್ಥಿತಿ ವಿರುದ್ಧದ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ಈ ಯೋಜನೆಯನ್ನು ವಿರೋಧಿಸಿದೆ. ಆದರೆ, ಬೆರಳೆಣಿಕೆಯ ಸ್ವಯಂ ಸೇವಕರು ಪಿಂಚಣಿ ಯೋಜನೆ ಜಾರಿಗೆ ತೆರೆಮರೆಯಲ್ಲೇ ಪ್ರಯತ್ನ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.

ತುರ್ತುಪರಿಸ್ಥಿತಿ ಹೇರಿಕೆಯಾದ 40ನೇ ವರ್ಷದ ನೆನಪಿನಲ್ಲಿ (2015) ದೆಹಲಿಯಲ್ಲಿ ಬಿಜೆಪಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಹೋರಾಟಗಾರರಿಗೆ ಮಾಸಾಶನ ನೀಡುವ ವಿಷಯ ಅಲ್ಲಿ ಮುನ್ನೆಲೆಗೆ ಬಂದಿತ್ತು. ಆ ಬಳಿಕ ಬಿಜೆಪಿ ಅಧಿಕಾರವಿದ್ದ ರಾಜ್ಯಗಳಲ್ಲಿ ಈ ಯೋಜನೆ ಜಾರಿಗೆ ಬಂತು. 

ರಾಜ್ಯದಲ್ಲಿ ತುರ್ತುಪರಿಸ್ಥಿತಿ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟ ನಡೆದಿತ್ತು. 2015 ರಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದ ಕಾರಣ ಪಿಂಚಣಿ ಯೋಜನೆ ಜಾರಿಗೆ ಬರಲಿಲ್ಲ. ಇದೀಗ ಬಿಜೆಪಿ ಅಧಿಕಾರ ಹಿಡಿದಿರುವುದರಿಂದ ಸಂಘದ ಕೆಲವರು ಪಿಂಚಣಿ ಯೋಜನೆ ಜಾರಿಗೆ ತರಬೇಕೆಂದು ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ. ಅದಕ್ಕೆ ಮುಖ್ಯಮಂತ್ರಿ ಸಮ್ಮತಿಸಿದ್ದಾರೆ.

ಆರ್‌ಎಸ್‌ಎಸ್‌ ನಿಲುವೇನು?: ‘ತುರ್ತು ಪರಿಸ್ಥಿತಿ ವಿರುದ್ಧ ಸ್ವಯಂ ಸೇವಕರು ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಿದ್ದರು. ಅದು ದೇಶಕ್ಕಾಗಿ ಮಾಡಿದ ಕೆಲಸ. ಇದಕ್ಕಾಗಿ ಪಿಂಚಣಿ ಪಡೆಯುವುದು ಸರಿಯಲ್ಲ ಎಂಬುದು ಸಂಘದ ನಿಲುವು’ ಎಂದು ಆರ್‌ಎಸ್‌ಎಸ್‌ನ ಕ್ಷೇತ್ರೀಯ ಸಂಘ ಚಾಲಕ (ದಕ್ಷಿಣ ಮಧ್ಯ ಕ್ಷೇತ್ರ) ವಿ. ನಾಗರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಬಿಜೆಪಿಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರ ಮುಂದೆ ಈ ವಿಷಯ ಪ್ರಸ್ತಾಪಿಸಿದಾಗ, ಅದಕ್ಕೆ ಅವರು ಸಮ್ಮತಿಸಲಿಲ್ಲ ಎಂದು ಮೂಲಗಳು ತಿಳಿಸಿವೆ.

ಪಿಂಚಣಿ ಜಾರಿಗೆ ಯತ್ನಿಸಿದವರು, ಹೋರಾಟದಲ್ಲಿ ಭಾಗವಹಿಸಿದವರಿಗೆ ತಾವು ಬಂಧಿಯಾಗಿದ್ದ ಜೈಲುಗಳಿಂದ ಪ್ರಮಾಣ ಪತ್ರ ಸಂಗ್ರಹಿಸಿಟ್ಟುಕೊಳ್ಳಲು ಸೂಚಿಸಿದ್ದಾರೆ ಎನ್ನಲಾಗಿದೆ.

ಯಾವ ರಾಜ್ಯದಲ್ಲಿ ಎಷ್ಟು ಪಿಂಚಣಿ

ಉತ್ತರ ಪ್ರದೇಶದಲ್ಲಿ ತಿಂಗಳಿಗೆ ₹25 ಸಾವಿರ ಪಿಂಚಣಿ ನೀಡಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಎರಡು ಹಂತಗಳಲ್ಲಿ ಇದು ಜಾರಿಯಾಗಿದೆ. 1 ತಿಂಗಳು ಜೈಲುವಾಸ ಅನುಭವಿಸಿದವರಿಗೆ ₹5 ಸಾವಿರ ಮತ್ತು 1 ತಿಂಗಳಿಗಿಂತ ಹೆಚ್ಚು ಅವಧಿ ಜೈಲುವಾಸ ಅನುಭವಿಸಿದವರಿಗೆ ₹10 ಸಾವಿರ ನಿಗದಿ ಮಾಡಲಾಗಿದೆ.

ಮಧ್ಯಪ್ರದೇಶ, ರಾಜಸ್ಥಾನ, ಜಾರ್ಖಂಡ್‌, ಛತ್ತೀಸ್‌ಗಡದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ತುರ್ತುಪರಿಸ್ಥಿತಿ ಹೋರಾಟಗಾರರಿಗೆ ನೀಡುತ್ತಿದ್ದ ಪಿಂಚಣಿಯನ್ನು ನಿಲ್ಲಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು