ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಹತ್ಯೆಗೆ ಆರೆಸ್ಸೆಸ್‌ ಸಂಚು, ಬಿಜೆಪಿ ಒಕ್ಕಲಿಗ ಅಸ್ಮಿತೆ ವಿರೋಧಿ: ಎಚ್‌ಡಿಕೆ

‘ನಾಜಿಗಳಿಗೂ ಆರ್‌ಎಸ್‌ಎಸ್‌ಗೂ ವ್ಯತ್ಯಾಸವಿಲ್ಲ’
Last Updated 25 ಜನವರಿ 2020, 19:41 IST
ಅಕ್ಷರ ಗಾತ್ರ

ಬೆಂಗಳೂರು: ‘ಆರ್‌ಎಸ್‌ಎಸ್‌, ವಿಶ್ವ ಹಿಂದೂ ಪರಿಷತ್‌ ಹಾಗೂ ಬಿಜೆಪಿಯ ರಹಸ್ಯ ಕಾರ್ಯಸೂಚಿಗಳನ್ನು ಬಯಲಿಗೆಳೆಯುವ ಹೋರಾಟ ನಡೆಸುತ್ತಿರುವ ಕಾರಣಕ್ಕೆ ನನ್ನ ಹತ್ಯೆಗೆ ಆರ್‌ಎಸ್‌ಎಸ್ ಸಂಚು ರೂಪಿಸಿದೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಮಹಾತ್ಮಗಾಂಧಿಯನ್ನೇಹತ್ಯೆ ಮಾಡಿದವರು ಅವರು. ಅಂತಹವರಿಗೆ ನಾನು ಯಾವ ಲೆಕ್ಕ. ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದವರ ಹಿಂದೆ ಯಾರಿದ್ದಾರೆ ಎಂದು ಗೊತ್ತಿದೆ. ಮತ್ತೊಂದು ಸಮಾಜದ ಭಯೋತ್ಪಾದಕರ ಬಗ್ಗೆ ಮಾತನಾಡುವ ಬಿಜೆಪಿಯ ಅಂಗಸಂಸ್ಥೆಗಳಲ್ಲೇ ಭಯೋತ್ಪಾದಕರು ಇದ್ದಾರೆ. ಅತ್ಯಂತ ಜಾಗರೂಕತೆಯಿಂದ ಅವರು ನಡೆಸುವ ಚಟುವಟಿಕೆಯನ್ನು ಲಘುವಾಗಿ ಪರಿಗಣಿಸುವುದಿಲ್ಲ. ಹಾಗಂತ ಅವರು ಹಾಕಿರುವ ಗೊಡ್ಡು ಬೆದರಿಕೆಗೆ ಹೆದರಿ ಮೌನಕ್ಕೆ ಶರಣಾಗುವುದಿಲ್ಲ’ ಎಂದರು.

‘ಮಾಜಿ ಮುಖ್ಯಮಂತ್ರಿ ಎಂಬ ಕಾರಣಕ್ಕೆ ನನಗೆ ಸರ್ಕಾರ ಭದ್ರತೆ ಕೊಟ್ಟಿದೆ. ಅದನ್ನು ಲೆಕ್ಕಿಸದೇ ನಾನು ನೇರವಾಗಿ ಜನರ ಬಳಿಗೆ ಹೋಗುವ ಅಭ್ಯಾಸ ಬೆಳೆಸಿಕೊಂಡಿದ್ದೇನೆ. ನನ್ನ ದೇಹದ ಮೇಲೆ ಸಣ್ಣ ದಬ್ಬಾಳಿಕೆ, ದೌರ್ಜನ್ಯ ನಡೆಸಿದರೆ ಅಂತಹವರು ಸುಟ್ಟು ಭಸ್ಮವಾಗುತ್ತಾರೆ. ಬೆಂಕಿ ಬಿದ್ದುಬಿಡುತ್ತದೆ’ ಎಂದು ಹೇಳಿದರು.

‘ಜರ್ಮನಿಯಲ್ಲಿ ಹಿಟ್ಲರ್‌ನ ನಾಜಿಪಂಥ ಹುಟ್ಟಿಕೊಂಡಾಗಲೇ ಆರ್‌ಎಸ್‌ಎಸ್‌ ಕೂಡ ಹುಟ್ಟಿದೆ. ನಾಜಿ ಸಂಘಟನೆಗೂ ಸ್ವಾತಂತ್ರ್ಯಪೂರ್ವದಲ್ಲಿ ಹುಟ್ಟಿದ ಆರ್‌ಎಸ್‌ಎಸ್‌ಗೂ ವ್ಯತ್ಯಾಸವಿಲ್ಲ’ ಎಂದು ಟೀಕಿಸಿದರು.

‘ಮಂಗಳೂರಿನ ಘಟನೆಗಳ ಬಗ್ಗೆ ಮಾತನಾಡಿದ್ದಕ್ಕೆ ನನ್ನನ್ನು ಪಾಕಿಸ್ತಾನಕ್ಕೆ ಕಳುಹಿಸಿ ಎಂದು ಕೆಲವರು ಹೇಳಿದ್ದಾರೆ. ಪಾಕಿಸ್ತಾನದ ಭಜನೆ ಮಾಡುತ್ತಿರುವವರು ಬಿಜೆಪಿಯವರೇ ವಿನಃ ನಾವಲ್ಲ. ನಿಮ್ಮ ಜೀನ್ ಗಳು ಪಾಕಿಸ್ತಾನದಲ್ಲಿರಬಹುದು ಅಥವಾ ಜರ್ಮನಿಯ ನಾಜಿಗಳಲ್ಲಿರಬಹುದು. ನನ್ನ‌ ಜೀನ್ ಈ ಮಣ್ಣಿನಲ್ಲಿದೆ’ ಎಂದು ಪ್ರತಿಪಾದಿಸಿದರು.

‘ಒಕ್ಕಲಿಗ ಅಸ್ಮಿತೆಯ ವಿರೋಧಿಗಳು’

‘ನನ್ನನ್ನು ಕೊಲ್ಲಲೆತ್ನಿಸುವವರು ನವ ಉಗ್ರರು. ಅಪಮಾನಿಸಲು ಯತ್ನಿಸುತ್ತಿರುವವರು ಒಕ್ಕಲಿಗ ಅಸ್ಮಿತೆಯ ವಿರೋಧಿಗಳು’ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

‘ಒಕ್ಕಲಿಗರ ಪ್ರತಿನಿಧಿ ನಾನು. ನೀವು ನನ್ನನ್ನು ಕೊಲ್ಲಲಾದೀತೇ? ನನ್ನನ್ನು ಪಾಕಿಸ್ತಾನಿ ಎನ್ನುವಿರೇ? ಒಕ್ಕಲಿಗರು ಹೋರಾಟಕ್ಕಿಳಿದರೆ, ಅಧಿಕಾರಕ್ಕೆ ಬಂದರೆ ಅವರನ್ನು ಬೆದರಿಸುವ, ಸರ್ಕಾರಗಳನ್ನು ಬೀಳಿಸುವ ಕಾಯಕ ಹಿಂದಿನಿಂದ ನಡೆದುಕೊಂಡು ಬಂದಿದೆ. ಆದರೆ ಈಗಿನ ಕೊಲ್ಲುವ ಸಂಚು, ಪಾಕಿಸ್ತಾನಿ ಪ್ರಯೋಗ ಒಕ್ಕಲಿಗ ರಾಜಕಾರಣದ ವಿರುದ್ಧ ನಡೆಯುತ್ತಿರುವ ಮತ್ತೊಂದು ಬಗೆಯ ದೌರ್ಜನ್ಯ’ ಎಂದವರು ಮತ್ತೊಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.

ಎಚ್‌ಡಿಕೆ ವಿವರ ನೀಡಿದರೆ ತನಿಖೆ:

ಬೆಂಗಳೂರು:‘ಎಚ್‌.ಡಿ.ಕುಮಾರಸ್ವಾಮಿ ಅವರು ಜೀವ ಬೆದರಿಕೆ ಇರುವ ಸಂಬಂಧ ವಿವರ ನೀಡಿದರೆ ತನಿಖೆ ನಡೆಸಲಾಗುವುದು’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

‘ಕುಮಾರಸ್ವಾಮಿಯವರ ರಕ್ಷಣೆ ನಮ್ಮ ಆದ್ಯತೆ. ಅವರಿಗೆ ಹೆಚ್ಚಿನ ರಕ್ಷಣೆ ನೀಡುತ್ತೇವೆ. ಸುಖಾಸುಮ್ಮನೆ ಅವರು ಆರೋಪ ಮಾಡುವುದು ಸರಿಯಲ್ಲ. ಗೃಹ ಸಚಿವನಾಗಿ ಸರಿಯಾಗಿಯೇ ಕೆಲಸ ಮಾಡುತ್ತಿದ್ದೇನೆ’ ಎಂದು ಹೇಳಿದರು.

‘ಈ ಹಿಂದೆ ಯಡಿಯೂರಪ್ಪ ಅವರು ಮಾಜಿ ಮುಖ್ಯಮಂತ್ರಿ ಆಗಿದ್ದಾಗ ಯಾವ ಮಟ್ಟದ ಭದ್ರತೆ ಒದಗಿಸಲಾಗಿತ್ತೊ ಅಷ್ಟೇ ಭದ್ರತೆಯನ್ನು ಕುಮಾರಸ್ವಾಮಿಯವರಿಗೂ ನೀಡಲಾಗಿದೆ’ ಎಂದು ಬೊಮ್ಮಾಯಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT