ಮಂಗಳವಾರ, ಮೇ 11, 2021
28 °C
ನದಿಗಳ ಪಾತ್ರದಲ್ಲಿ ಅವ್ಯಾಹತ ಗಣಿಗಾರಿಕೆ

ಮಾಯವಾಗುತ್ತಿರುವ ಮರಳು: ಸಾರ್ವಜನಿಕ ವಲಯದಲ್ಲಿ ಆಕ್ರೋಶ

ಎಸ್‌.ರವಿಪ್ರಕಾಶ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜಲಕ್ಷಾಮ, ಪ್ರವಾಹದಿಂದ ಕಂಗೆಟ್ಟಿರುವ ರಾಜ್ಯಕ್ಕೆ ನದಿ ಪಾತ್ರದ ಗಣಿಗಾರಿಕೆ ಆತಂಕವಾಗಿ ಕಾಡಿದೆ. ಪರಿಸರ ತಜ್ಞರು, ವಿಜ್ಞಾನಿಗಳ ಎಚ್ಚರಿಕೆ ನಡುವೆಯೂ ನದಿಗಳ ವ್ಯವಸ್ಥೆಗೇ ಧಕ್ಕೆ ಆಗುವಂತೆ ಮರಳು ಗಣಿಗಾರಿಕೆಗೆ ಬೇಕಾಬಿಟ್ಟಿ ಅನುಮತಿ ನೀಡಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ನದಿ ಪಾತ್ರಗಳಿಂದ ಮರಳು ಅಧಿಕ ಪ್ರಮಾಣದಲ್ಲಿ ತೆಗೆಯುತ್ತಿರುವುದರಿಂದ ನದಿಗಳ ಅಸ್ತಿತ್ವಕ್ಕೆ ಸಂಚಕಾರ ಬಂದಿದೆ. ಬೇಸಿಗೆಯಲ್ಲಿ ನದಿಗಳಲ್ಲಿ ನೀರು ಇಂಗಿ ಹೋದರೆ, ಮಳೆಗಾಲದಲ್ಲಿ ಪ್ರವಾಹದಿಂದ ನದಿಗಳು ದಿಕ್ಕು ಬದಲಿಸುವ ಬೆಳವಣಿಗೆಗಳು ಹೆಚ್ಚುತ್ತಿವೆ. ಪ್ರವಾಹದ ನೀರಿನ ಮೂಲಕ ಮಣ್ಣು ಭಾರಿ ಪ್ರಮಾಣದಲ್ಲಿ ಜಲಾಶಯಗಳನ್ನು ಸೇರುತ್ತಿವೆ. ಆದರೆ, ಜನಪ್ರತಿನಿಧಿಗಳು ಮತ್ತು ಗುತ್ತಿಗೆದಾರರ ಒತ್ತಡಕ್ಕೆ ಮಣಿದು ಸರ್ಕಾರ ನದಿ ಪಾತ್ರಗಳಲ್ಲಿ ಗಣಿಗಾರಿಕೆಗೆ ಹೆಚ್ಚಾಗಿ ಅನುಮತಿ ನೀಡುತ್ತಿದೆ.

ನದಿ ಪಾತ್ರಗಳಲ್ಲಿ ಅವ್ಯಾಹತವಾಗಿ ಮರಳು ತೆಗೆಯುತ್ತಿರುವುದು ಪ್ರವಾಹಕ್ಕೆ ಕಾರಣವಾಗುತ್ತಿದೆ. ಅಳಿದುಳಿದ ಮರಳನ್ನು ಬರಿದಾಗಿಸಿದರೆ ಭವಿಷ್ಯದಲ್ಲಿ ನದಿಗಳೂ ಒಣಗಿ ಹೋದರೆ ಅಚ್ಚರಿ ಇಲ್ಲ ಎನ್ನುತ್ತಾರೆ ಪರಿಸರ ತಜ್ಞರು.

ರಾಜ್ಯದ ವಿವಿಧ ನದಿಗಳ ಪಾತ್ರಗಳಲ್ಲಿ ಸುಮಾರು 255 ಮರಳು ಬ್ಲಾಕ್‌ಗಳನ್ನು ಹರಾಜು ಹಾಕಲು ಗುರುತಿಸಲಾಗಿದೆ. ಈ ಬ್ಲಾಕ್‌ಗಳು ಸಾರ್ವಜನಿಕ ಉದ್ದೇಶದ್ದಾಗಿದ್ದು; ಈ ಸಾಲಿನಲ್ಲಿ 237 ಬ್ಲಾಕ್‌ಗಳಿಂದ 28.16 ಲಕ್ಷ ಮೆಟ್ರಿಕ್‌ ಟನ್‌ ಮರಳನ್ನು ತೆಗೆಯಲು ಅವಕಾಶ ನೀಡಲಾಗಿದೆ. ಇದರ ಸಂಪೂರ್ಣ ಪ್ರಯೋಜನ ಪಡೆಯುತ್ತಿರುವವರು ಬಿಲ್ಡರ್‌ಗಳು ಎಂದೂ ಅಧಿಕಾರಿಯೊಬ್ಬರು ಹೇಳಿದ್ದಾರೆ.

ವಿವಿಧ ಮೂಲಗಳಿಂದ ಗಣಿಗಾರಿಕೆ
* ಪಟ್ಟಾ ಜಮೀನಿನಲ್ಲಿ ಮರಳು ಗಣಿಗಾರಿಕೆಗೆ 44 ಲೈಸೆನ್ಸ್‌ ಮಂಜೂರು ಮಾಡಲಾಗಿದ್ದು, 2.95 ಲಕ್ಷ ಮೆಟ್ರಿಕ್‌ ಟನ್‌ಗೂ ಅಧಿಕ ಮರಳು ಗಣಿಗಾರಿಕೆ ಮಾಡಲಾಗಿದೆ.

* ಕರಾವಳಿ ನಿಯಂತ್ರಣ ವಲಯಗಳಲ್ಲಿ 30 ಮರಳು ದಿಬ್ಬಗಳಲ್ಲಿ ಮರಳು ತೆರವುಗೊಳಿಸಲು ಅನುಮತಿ ನೀಡಿದ್ದು, ಫೆಬ್ರುವರಿ ಮೊದಲ ವಾರದವರೆಗೆ 7.8 ಲಕ್ಷ ಮೆಟ್ರಿಕ್‌ ಟನ್‌ ಮರಳು ತೆಗೆಯಲಾಗಿದೆ.

ಅಪಾಯದಲ್ಲಿರುವ ನದಿಗಳು

* ಕಾವೇರಿ, ಕೃಷ್ಣಾ, ಭೀಮಾ, ಘಟಪ್ರಭಾ, ಮಲಪ್ರಭಾ, ತುಂಗಾ–ಭದ್ರಾ, ಹೇಮಾವತಿ, ನೇತ್ರಾವತಿ, ಕುಮಾರಧಾರಾ

* 2015 ರಿಂದ2019 ರ ಡಿಸೆಂಬರ್‌ಗೆ ದಾಖಲಾದ ಪ್ರಕರಣಗಳು 25,000, 11 ಸಾವಿರಕ್ಕೂ ಹೆಚ್ಚು ಎಫ್‌ಐಆರ್‌ ದಾಖಲು

*
ಮರಳು ಗಣಿಗಾರಿಕೆ ಮತ್ತು ವಿತರಣೆಗೆ ಸಮರ್ಪಕ ಕ್ರಮ ಅನುಸರಿಸಲು ಹೊಸ ಮರಳು ನೀತಿ ಜಾರಿಗೆ ತರುತ್ತಿದ್ದು, ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ.
-ಸಿ.ಸಿ.ಪಾಟೀಲ, ಗಣಿ ಮತ್ತು ಭೂ ವಿಜ್ಞಾನ ಸಚಿವ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು