ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಬ್ಯಾಗ್ ತೂಕ ಇಳಿಕೆ?: ಮುಂದಿನ ವಾರ ತಜ್ಞರೊಂದಿಗೆ ಸಂವಾದ

Last Updated 11 ಜನವರಿ 2020, 20:00 IST
ಅಕ್ಷರ ಗಾತ್ರ

ಮೈಸೂರು: ‘ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ವಾರಕ್ಕೊಮ್ಮೆ ಬ್ಯಾಗ್‌ ರಹಿತ ದಿನ ಜಾರಿಗೊಳಿಸುವ ಜತೆಗೆ, ಬ್ಯಾಗ್ ತೂಕ ಇಳಿಸುವ ಚಿಂತನೆಯೂ ನಡೆದಿದೆ. ಈ ನಿಟ್ಟಿನಲ್ಲಿ ಶಿಕ್ಷಣ ತಜ್ಞರ ಸಲಹೆ ಕೇಳಲಾಗಿದೆ’ ಎಂದು ಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್ ಶನಿವಾರ ಇಲ್ಲಿ ತಿಳಿಸಿದರು.

ನಗರದ ಕೌಟಿಲ್ಯ ವಿದ್ಯಾಲಯದಲ್ಲಿ ‘ಪೌರ ಪ್ರಜ್ಞೆ–ನನ್ನ ಕರ್ತವ್ಯ, ಪ್ರಶ್ನಿಸುವುದು ನನ್ನ ಹಕ್ಕು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಕ್ಕಳು ಹಮಾಲಿಗಳ ರೀತಿ ಶಾಲಾ ಬ್ಯಾಗ್‌ನ ಭಾರ ಹೊರುವುದನ್ನು ತಪ್ಪಿಸಬೇಕಿದೆ. ಇದಕ್ಕಾಗಿಯೇ ಮುಂದಿನ ವಾರದಲ್ಲಿ 50ಕ್ಕೂ ಹೆಚ್ಚು ಶಿಕ್ಷಣ ತಜ್ಞರ ಜತೆ ಸಂವಾದ ಆಯೋಜಿಸಲಾಗಿದೆ. ಕೆಲವರಿಗೆ ಪತ್ರ ಬರೆದು ಸಲಹೆ ಕೇಳಲಾಗಿದೆ’ ಎಂದರು.

‘ಸರ್ಕಾರಿ ಶಾಲೆಗೆ ಮಕ್ಕಳು ಸಂತಸದಿಂದ ಬರಬೇಕು. ಪೋಷಕರು ಖುಷಿಯಿಂದ ದಾಖಲಿಸಬೇಕು ಎಂಬಂತಹ ವಾತಾವರಣ ನಿರ್ಮಿಸುವ ಆಸೆ ನನ್ನದು. ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ ಕೊಡಲೇಬೇಕಿದೆ. ರಾಜ್ಯದಲ್ಲಿ 60 ಸಾವಿರ ಕಟ್ಟಡಗಳಿದ್ದು, 50 ವರ್ಷ ದಾಟಿದ ಬಹುತೇಕ ಕಟ್ಟಡಕ್ಕೆ ಕಾಯಕಲ್ಪ ಬೇಕಿದೆ. ಶಿಥಿಲಗೊಂಡ ಕಟ್ಟಡಗಳನ್ನು ನೆಲಸಮಗೊಳಿಸಿ ಹೊಸದಾಗಿ ನಿರ್ಮಿಸಬೇಕಿದೆ. ಇದಕ್ಕಾಗಿ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಕೋರಿದ್ದೇವೆ’ ಎಂದು ತಿಳಿಸಿದರು.

ಶಿಕ್ಷಕರಿಗೆ ಸಚಿವರ ಕಿವಿಮಾತು
‘ಶಿಕ್ಷಕರು ವಿದ್ಯಾರ್ಥಿಗಳ ಕೈ ಹಿಡಿದು ದಾರಿ ತೋರಬೇಕೇ ವಿನಾ ಅವರ ತಪ್ಪುಗಳನ್ನು ವಿಡಿಯೊ ಮಾಡುವುದು ಸಲ್ಲ’ ಎಂದು ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಕಿವಿಮಾತು ಹೇಳಿದರು.

‘ಕವಿ ಲಕ್ಷ್ಮೀನಾರಾಯಣ ಭಟ್ಟರು ಒಂದನೇ ತರಗತಿ ಪರೀಕ್ಷೆಗೆ ಗೈರಾಗಿರುತ್ತಾರೆ. ಆದರೆ, ಅವರ ಶಿಕ್ಷಕರಾದ ಶ್ಯಾಮಣ್ಣ, ಅವರಿಂದ ಪಾಠವೊಂದನ್ನು ಓದಿಸುತ್ತಾರೆ. ತಪ್ಪಿಲ್ಲದೇ ಪಾಠ ಓದಿದ್ದನ್ನು ಕಂಡು 2ನೇ ತರಗತಿಯಲ್ಲಿ ಕುಳಿತುಕೊಳ್ಳುವಂತೆ ಹೇಳುತ್ತಾರೆ. ಆದರೆ, ಈಗ ಶಿಕ್ಷಕರು ‘ಪಕ್ಕೆಲುಬು’ ಎಂಬ ಪದವನ್ನು ಸರಿಯಾಗಿ ಉಚ್ಚರಿಸಲು ಬಾರದಿರುವುದನ್ನೇ ವಿಡಿಯೊ ಮಾಡುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಪಕ್ಕೆಲುಬು’: ಶಿಕ್ಷಕನ ಮೇಲೆ ಕ್ರಮ ಬೇಡ
ಹೂವಿನಹಡಗಲಿ (ಬಳ್ಳಾರಿ ಜಿಲ್ಲೆ):
ಬಾಲಕನೊಬ್ಬನ ‘ಪಕ್ಕೆಲುಬು’ ಉಚ್ಛಾರಣೆ ದೋಷ ತಿದ್ದಲು ಪ್ರಯತ್ನಿಸಿದ ತಾಲ್ಲೂಕಿನ ಕುರುವತ್ತಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಟಿ.ಚಂದ್ರಶೇಖರಪ್ಪ ಅವರ ಮೇಲೆ ಯಾವುದೇ ಕ್ರಮ ಜರುಗಿಸಬಾರದು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ. ಈ ಕುರಿತು ಎಸ್.ಡಿ.ಎಂ.ಸಿ. ಪದಾಧಿಕಾರಿಗಳು, ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT