ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ: ಸಿದ್ದಗಂಗಾ ಮಠಕ್ಕೆ ಭಕ್ತರ ದಂಡು

ಸಿದ್ಧಗಂಗಾ ಮಠ: ಸೇವೆಗೆ ನಿತ್ಯ ಸ್ಫೂರ್ತಿ ಶಿವಕುಮಾರ ಶ್ರೀ
Last Updated 19 ಜನವರಿ 2020, 1:32 IST
ಅಕ್ಷರ ಗಾತ್ರ
ADVERTISEMENT
""

ತುಮಕೂರು: ಸಿದ್ಧಗಂಗಾ ಮಠಾಧೀಶ ಡಾ.ಶಿವಕುಮಾರ ಸ್ವಾಮೀಜಿ ಅವರು ತಮ್ಮ ಜೀವಿತಾವಧಿಯಲ್ಲಿಯೇ ‘ನಡೆದಾಡುವ ದೇವರು’ ಎಂದು ಭಕ್ತರಿಂದ ಆರಾಧನೆಗೆ ಒಳಗಾಗಿದ್ದವರು. ಮಠದ ಆವರಣದಲ್ಲಿರುವ ಅವರ ಗದ್ದುಗೆಯು ದೇವಾಲಯವಾಗಿದೆ. ನಿತ್ಯ ಪೂಜಾ ಕಾರ್ಯಗಳು ನೆರವೇರುತ್ತಿದ್ದು ಹೆಚ್ಚು ಭಕ್ತರನ್ನು ಸೆಳೆಯುವ ಯಾತ್ರಾ ಸ್ಥಳವಾಗಿ ಹೊರಹೊಮ್ಮಿದೆ.

ಸಿದ್ಧಗಂಗಾ ಮಠದ ಪರಿಚಯ ಇಲ್ಲದವರಿಗೂ ಶಿವಕುಮಾರ ಸ್ವಾಮೀಜಿ ಅವರ ಹೆಸರು ಚಿರಪರಿಚಿತ. ಹೀಗಾಗಿ ಗದ್ದುಗೆ ದರ್ಶನಕ್ಕೆ ನಾಡಿನ ವಿವಿಧೆಡೆಗಳಿಂದಲ್ಲದೇ ಹೊರ ರಾಜ್ಯಗಳಿಂದಲೂ ಜನರು ಬಂದು ಹೋಗುತ್ತಿದ್ದಾರೆ. ವಿದೇಶಿಯರೂ ಭೇಟಿ ನೀಡಿ, ಶ್ರೀಗಳ ಸೇವಾ ಕಾರ್ಯದ ಬಗ್ಗೆ ಅಚ್ಚರಿಯ ಜತೆಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸುತ್ತಿದ್ದಾರೆ.

ನೂರಾ ಹನ್ನೊಂದು ವರ್ಷಗಳ ಸಾರ್ಥಕ ಬದುಕು ಪೂರ್ಣಗೊಳಿಸಿ ವರ್ಷದ ಹಿಂದೆ ಶಿವೈಕ್ಯರಾದ ಶ್ರೀಗಳು ಲೋಕಸೇವೆಗೆ ತಮ್ಮನ್ನು ತಾವು ಸಮರ್ಪಿಸಿಕೊಂಡ ಪರಿ ಅಸಂಖ್ಯ ಭಕ್ತರನ್ನು ಪ್ರಭಾವಿಸಿದೆ. ಸ್ವಾಮೀಜಿ ಅವರನ್ನು ಕುರಿತು ಈವರೆಗೆ ಐವತ್ತಕ್ಕೂ ಹೆಚ್ಚು ಕೃತಿಗಳು ಹೊರ ಬಂದಿವೆ. ಪುಸ್ತಕಗಳ ಜತೆ ಶ್ರೀಗಳ ಚಿತ್ರಗಳು, ಪ್ರಸಿದ್ಧ ಉಕ್ತಿಗಳ ಸ್ಟಿಕ್ಕರ್‌ಗಳು ಮತ್ತಿತರ ವಸ್ತುಗಳು ಮಾರಾಟವಾಗುತ್ತಿದ್ದು, ಜನರು ಶ್ರೀಗಳ ಮೇಲೆ ಇರಿಸಿರುವ ಭಕ್ತಿಗೆ ಸಾಕ್ಷಿಯಾಗಿದೆ.

ಶ್ರೀಗಳು ಶಿವೈಕ್ಯರಾದ ಜ. 21ರಂದು ತುಮಕೂರು ಸೇರಿದಂತೆ ನಾಡಿನ ಹಲವೆಡೆ ಪುಣ್ಯ ಸ್ಮರಣೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಠದ ಆವರಣದಲ್ಲಿ ಭಾನುವಾರ (ಎರಡು ದಿನ ಮೊದಲು) ಶ್ರೀಗಳ ಮೊದಲ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮ ಬೃಹತ್‌ ಪ್ರಮಾಣದಲ್ಲಿ ನಡೆಯಲಿದೆ.

ಅನ್ನ ದಾಸೋಹಕ್ಕೆ ಶ್ರೀಗಳು ಕೊಟ್ಟಿದ್ದ ಪ್ರಾಮುಖ್ಯವನ್ನು ಅರಿತಿರುವ ಭಕ್ತರು ಸಾಧ್ಯವಾದ ಕಡೆಗಳಲ್ಲೆಲ್ಲ ಅನ್ನ ದಾಸೋಹ ಏರ್ಪಡಿಸುತ್ತಿದ್ದಾರೆ. ಮಠದಲ್ಲಿನ ನಿತ್ಯ ದಾಸೋಹಕ್ಕಾಗಿ ವಿಶೇಷವಾಗಿ ಉತ್ತರ ಕರ್ನಾಟಕದ ಜನರು ಹೆಚ್ಚಿನ ಪ್ರಮಾಣದಲ್ಲಿ ದವಸ ಧಾನ್ಯಗಳನ್ನು ಕಳುಹಿಸಿಕೊಡುತ್ತಿದ್ದಾರೆ.ನಾಡಿನ ಉದ್ದಗಲಕ್ಕೂ ಶ್ರೀಗಳ ಹೆಸರಿನಲ್ಲಿ ಒಂದಲ್ಲ ಒಂದು ಸೇವಾ ಕಾರ್ಯಗಳು ನಡೆಯುತ್ತಿವೆ. ರಸ್ತೆ, ವೃತ್ತ, ಬಡಾವಣೆಗಳಿಗೆ ಶ್ರೀಗಳ ಹೆಸರಿನ್ನಿಟ್ಟು ಗೌರವ ಸಮರ್ಪಿಸಲಾಗುತ್ತಿದೆ.

ಡಾ.ಶಿವಕುಮಾರ ಸ್ವಾಮೀಜಿ

ಹೆಚ್ಚುವರಿ 2 ಸಾವಿರ ಮಕ್ಕಳಿಗೆ ಪ್ರವೇಶ!
ತ್ರಿವಿಧ ದಾಸೋಹದ ಕಾರಣಕ್ಕಾಗಿಯೇ ಶಿವಕುಮಾರ ಶ್ರೀಗಳು ಪ್ರಸಿದ್ಧರು. ಅನ್ನ, ಆಶ್ರಯದ ಜತೆಗೆ ವಿದ್ಯೆಯನ್ನು (ಇದೇ ತ್ರಿವಿಧ ದಾಸೋಹ) ಉಚಿತವಾಗಿ ನೀಡುವ ಮಠದ ಶಾಲೆಗಳಿಗೆ ಪ್ರತಿವರ್ಷ ಸರಾಸರಿ ಒಂಭತ್ತು ಸಾವಿರ ಮಕ್ಕಳಿಗೆ ಪ್ರವೇಶ ನೀಡಲಾಗುತ್ತದೆ. ಆದರೆ 2019ರ ಶೈಕ್ಷಣಿಕ ವರ್ಷದಲ್ಲಿ ಹದಿಮೂರು ಸಾವಿರಕ್ಕೂ ಹೆಚ್ಚು ಮಕ್ಕಳು ಪ್ರವೇಶ ಬಯಸಿದ್ದರು. ಕೊನೆಗೆ ಈ ವರ್ಷ ಹೆಚ್ಚುವರಿಯಾಗಿ ಎರಡು ಸಾವಿರ ಮಕ್ಕಳಿಗೆ ಒಟ್ಟು ಹನ್ನೊಂದು ಸಾವಿರ ಮಕ್ಕಳಿಗೆ ಪ್ರವೇಶ ನೀಡಲಾಯಿತು. ಉಳಿದ ಎರಡು ಸಾವಿರಕ್ಕೂ ಹೆಚ್ಚು ಮಕ್ಕಳು ಪ್ರವೇಶ ಸಿಗದೇ ನಿರಾಶೆಯಿಂದ ಹಿಂದಿರುಗಬೇಕಾಯಿತು ಎಂದು ಮಠದ ಆಡಳಿತಾಧಿಕಾರಿ ವಿಶ್ವನಾಥಯ್ಯ ಅವರು ನೊಂದು ನುಡಿದರು.

ಮಠದ ಶಾಲೆಗಳಲ್ಲಿ ಒಂದು ತರಗತಿಗೆ ನಿಯಮದ ಪ್ರಕಾರ 60 ಮಕ್ಕಳನ್ನು ಸೇರಿಸಿಕೊಳ್ಳಬಹುದು. ವರ್ಷ ವರ್ಷವೂ ಮಠ ಸೇರುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದ್ದು ಪ್ರಸಕ್ತ ಸಾಲಿನಲ್ಲಿ ಒಂದೊಂದು ತರಗತಿಯಲ್ಲಿ ಗರಿಷ್ಠ 140 ಮಕ್ಕಳು ಪ್ರವೇಶ ಪಡೆದಿದ್ದಾರೆ. ಶಾಲಾ ತರಗತಿ ಮತ್ತು ವಸತಿ ಕೊಠಡಿಗಳು ಮಕ್ಕಳಿಂದ ಕಿಕ್ಕಿರಿದಿವೆ. ಒಂದೆಡೆ ಪ್ರವೇಶ ಪಡೆದ ಎಲ್ಲ ಮಕ್ಕಳಿಗೂ ಕನಿಷ್ಠ ಸೌಕರ್ಯ ಒದಗಿಸಲಾಗದ ಅಸಹಾಯಕತೆ, ಇನ್ನೊಂದೆಡೆ ಪ್ರವೇಶಕ್ಕಾಗಿ ಕಾದಿರುವ ಸಾವಿರಾರು ಮಕ್ಕಳ ಆಸೆಗಣ್ಣಿನ ನೋಟ- ಇವು ಮಠದ ಆಡಳಿತ ವ್ಯವಸ್ಥೆಯನ್ನು ಇಕ್ಕಟ್ಟಿಗೆ ಸಿಲುಕಿಸಿವೆ. ಮುಂದಿನ ವರ್ಷದ ಹೊತ್ತಿಗೆ ಇನ್ನಷ್ಟು ಹೊಸ ಕೊಠಡಿಗಳನ್ನು ಕಟ್ಟಲು ಯೋಜನೆ ಸಿದ್ಧವಾಗುತ್ತಿದೆ ಎಂದು ಅವರು ತಿಳಿಸಿದರು.

ತುಮಕೂರಿನ ಸಿದ್ಧಗಂಗಾ ಬೆಟ್ಟದಲ್ಲಿ ದೊಡ್ಡ ಬಂಡೆಯನ್ನು ನಂದಿ ಆಕಾರದಲ್ಲಿ ಕೆತ್ತಿದ್ದು, ಅದರ ಹೊಟ್ಟೆಯೊಳಗೆ ಸವಣ್ಣ ಮತ್ತು ಶಿವಕುಮಾರ ಸ್ವಾಮೀಜಿ ಪ್ರತಿಮೆಗಳಿವೆ.
ಪ್ರಜಾವಾಣಿ ಚಿತ್ರ: ಎಸ್‌.ಚನ್ನದೇವರು

ಏಳು ಕಡೆಗಳಲ್ಲಿ ಊಟದ ವ್ಯವಸ್ಥೆ
ಸ್ಮರಣೋತ್ಸವಕ್ಕೆ ಬರುವ ಭಕ್ತರಿಗೆ ಮಠದ ಆವರಣದಲ್ಲಿ ಏಳು ಕಡೆಗಳಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಈ ಎಲ್ಲ ಕಡೆಗಳಲ್ಲಿ ಪ್ರಸಾದ ತಯಾರಕರು, ಪ್ರಸಾದ ವ್ಯವಸ್ಥೆಗೆ ಮುಖ್ಯಸ್ಥರನ್ನು ನಿಯೋಜಿಸಿ ಅವರ ಉಸ್ತುವಾರಿಯಲ್ಲಿ ಕಾರ್ಯಗಳು ಅಚ್ಚುಕಟ್ಟಾಗಿ ನಡೆಯುವಂತೆ ವ್ಯವಸ್ಥೆ ಮಾಡಲಾಗಿದೆ.

ಬೆಳಿಗ್ಗೆ 7ರಿಂದ ಉಪ್ಪಿಟ್ಟು ಮತ್ತು ಕೇಸರಿ ಬಾತ್ ನೀಡಲಾಗುತ್ತದೆ. ಮಧ್ಯಾಹ್ನ 11.30ರಿಂದ ರಾತ್ರಿವರೆಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಬೂಂದಿ, ತುಪ್ಪ, ಚಿತ್ರಾನ್ನ, ಅನ್ನ ಸಾಂಬಾರು, ಅನ್ನ ಮಜ್ಜಿಗೆ, ಪಾಯಸ, ಉಪ್ಪಿನಕಾಯಿ, ಉಪ್ಪು ಊಟದ ಮೆನುವಿನಲ್ಲಿ ಇವೆ.

*
ಶಿವಕುಮಾರ ಶ್ರೀ ಈಗಲೂ ಮಠದ ವ್ಯವಸ್ಥೆಯನ್ನು ಮುನ್ನಡೆಸುತ್ತಿದ್ದಾರೆಂದು ಅನ್ನಿಸುತ್ತಿದೆ. ಅವರ ಆಶೀರ್ವಾದದಿಂದಲೇ ಎಲ್ಲ ಕಾರ್ಯಗಳು ನಡೆಯುತ್ತಿವೆ.
-ಸಿದ್ಧಲಿಂಗ ಸ್ವಾಮೀಜಿ, ಸಿದ್ಧಗಂಗಾ ಮಠದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT