ಮಂಗಳವಾರ, ಆಗಸ್ಟ್ 20, 2019
25 °C

‘ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಆಗದಿದ್ದರೆ ಸಿದ್ದರಾಮಯ್ಯ ಬಳೆ ತೊಟ್ಟುಕೊಳ್ಳಲಿ’

Published:
Updated:

ಹುಬ್ಬಳ್ಳಿ: ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿ ತಮ್ಮ ಶಾಸಕರನ್ನು ಹಿಡಿದುಕೊಳ್ಳಲಾಗದಿದ್ದರೆ ಬಳೆ ತೊಟ್ಟುಕೊಳ್ಳಲಿ ಎಂದು ಸಂಸದೆ ಶೋಭಾ ಕರಂದ್ಲಾಜೆ, ಸಿದ್ದರಾಮಯ್ಯ ಅವರಿಗೆ ಸಲಹೆ ಮಾಡಿದರು.

ಯಡಿಯೂರಪ್ಪ ಅವರು ಕಾಂಗ್ರೆಸ್‌ ಶಾಸಕರನ್ನು ಖರೀದಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಶೋಭಾ, ಅವರವರ ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದೆ ಸಾಗಬೇಕು. ಅದನ್ನು ಮಾಡಲಾಗಿದ್ದರೆ, ಅವರೆಂತಹ ನಾಯಕ ಎಂದು ಪ್ರಶ್ನಿಸಿದರು.

ತಮ್ಮ ಶಾಸಕರನ್ನು ಸಮಾಧಾನ ಪಡಿಸಲು ಸಾಧ್ಯವಾಗದ ಸಿದ್ದರಾಮಯ್ಯ ಅವರು, ಅನವಶ್ಯಕವಾಗಿ ಯಡಿಯೂರಪ್ಪ ಅವರ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಟೀಕಿಸಿದರು.

ಸಮ್ಮಿಶ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಶಾಸಕರನ್ನು ಎತ್ತಿಕಟ್ಟುವ ಕೆಲಸ ಮಾಡುವ ಮೂಲಕ ಸಿದ್ದರಾಮಯ್ಯ ಅವರು, ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಅದೆಲ್ಲವನ್ನು ಯಡಿಯೂರಪ್ಪ ಅವರ ಮೇಲೆ ಹಾಕುತ್ತಾರೆ. ಮುಂದಿನ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್‌ ಹೈಕಮಾಂಡ್‌ಗೆ ಬ್ಲಾಕ್‌ಮೇಲ್‌ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ದೇವರಾಜು ಅರಸು ಹಿಂದುಳಿದವರ ಪರವಾಗಿ ದುಡಿದವರು. ಸಮಾಜದಲ್ಲಿ ಒಗ್ಗಟ್ಟು ತಂದವರು. ಸಿದ್ದರಾಮಯ್ಯ ಅವರು ಜಾತಿ, ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಅವರ ಹೆಸರು ಹೇಳಲು ನಾಲಾಯಕ್‌ ಆಗಿದ್ದಾರೆ ಎಂದು ಟೀಕಿಸಿದರು.

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಚುನಾವಣೆ ನಂತರ 18 ದಿನಗಳ ಕಾಲ ರೆಸಾರ್ಟ್‌ನಲ್ಲಿದ್ದಾರೆ. ಕಾಂಗ್ರೆಸ್‌ನ ಕಿರುಕುಳದಿಂದ ಅವರು ಸುಸ್ತಾಗಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಬೇಕಿತ್ತು ಅವರು ಕುಮಾರಸ್ವಾಮಿ ಹೇಳಿದ್ದಾರೆ. ಅವರು ರಾಜೀನಾಮೆ ನೀಡಿ, ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಿ ಎಂದರು.

 

ಶೋಭಾ ಕರಂದ್ಲಾಜೆ ಹೇಳಿಕೆಗೆ ತಿರುಗೇಟುಕೊಟ್ಟಿದ್ದು, ‘ಒಬ್ಬ ಹೆಣ್ಣಾಗಿ ತಾವು ಮಹಿಳಾ ಸಂಕುಲವೇ ಅಸಮರ್ಥರು ಎಂಬಂತೆ ಕೀಳುಮಟ್ಟದ ಹೇಳಿಕೆ ನೀಡಿರುವುದು ಸರಿಯಲ್ಲ. ಸಂಸದರಾಗಿ ತಾವೊಬ್ಬರು ಸರಿಯಾಗಿ ಕೆಲಸ ಮಾಡಿಲ್ಲ ಎಂಬ ಮಾತ್ರಕ್ಕೆ ಬಳೆ ತೊಟ್ಟವರೆಲ್ಲ ಕೆಲಸ ಮಾಡಲಾಗದವರು ಎಂದಲ್ಲ. ನೆನಪಿರಲಿ, ಕಿತ್ತೂರು ರಾಣಿ ಚೆನ್ನಮ್ಮ, ಒಣಕೆ ಓಬವ್ವ, ಇಂದಿರಾಗಾಂಧಿ ಇವರೆಲ್ಲ ಬಳೆ ತೊಟ್ಟೆ ಸಾಧನೆಯ ಉತ್ತುಂಗಕ್ಕೇರಿದವರು’ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. 

Post Comments (+)