ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ–ಕುಮಟಾ ರಸ್ತೆ ವಿಸ್ತರಣೆ; ಯೋಜನೆ ಪುನರ್ ವಿಮರ್ಶೆಗೆ ಆಗ್ರಹ

ಪರಿಸರ ಕಾರ್ಯಕರ್ತರಿಂದ ಮನವಿ ಸಲ್ಲಿಕೆ
Last Updated 22 ಅಕ್ಟೋಬರ್ 2018, 11:55 IST
ಅಕ್ಷರ ಗಾತ್ರ

ಶಿರಸಿ: ಪಶ್ಚಿಮಘಟ್ಟದ ನದಿ ಕಣಿವೆಗಳ ಮಧ್ಯೆ ಹಾದು ಹೋಗಿರುವ ಶಿರಸಿ–ಕುಮಟಾ ರಸ್ತೆ ವಿಸ್ತರಣೆ ಯೋಜನೆಯನ್ನು ಪುನರ್ ವಿಮರ್ಶಿಸಬೇಕು ಎಂದು ಪರಿಸರ ಸಂಘಟನೆಗಳು ಒತ್ತಾಯಿಸಿವೆ.

ಕೆನರಾ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಶೋಕ ಬಾಸರಕೋಡ ಅವರಿಗೆ ಸೋಮವಾರ ಇಲ್ಲಿ ಮನವಿ ಸಲ್ಲಿಸಿದ ಪರಿಸರ ಕಾರ್ಯಕರ್ತರು, ಶಿರಸಿ–ಕುಮಟಾ ರಸ್ತೆ ವಿಸ್ತರಣೆಯಿಂದ ಪರಿಸರದ ಮೇಲೆ ಗಂಭೀರ ದುಷ್ಟರಿಣಾಮ ಉಂಟಾಗಲಿದೆ ಎಂದು ತಿಳಿಸಿ, ವೃಕ್ಷಲಕ್ಷ ಆಂದೋಲನವು ಈ ಕುರಿತು ನಡೆಸಿರುವ ಪರಿಸರ ವಿಶ್ಲೇಷಣಾ ವರದಿಯನ್ನು ನೀಡಿದರು.

60 ಕಿ.ಮೀ ರಸ್ತೆ ವಿಸ್ತರಣೆ ಮಾಡಲು ಕಣಿವೆಗಳನ್ನು ಕಡಿಯಬೇಕಾಗುತ್ತದೆ. ಇದರಿಂದ ಭೂಕುಸಿತ ಆಗುವ ಸಾಧ್ಯತೆಗಳಿವೆ. ಕೊಡಗಿನ ಪರಿಸರ ಅವಘಡಗಳನ್ನು ನೆನಪಿಸಿಕೊಂಡಾಗ, ದೇವಿನಮನೆ ಘಟ್ಟದ ರಸ್ತೆ ವಿಸ್ತರಣೆಯು ಇಂತಹುದೇ ದುರಂತಕ್ಕೆ ಕಾರಣವಾಗಲಿದೆ. ಅಲ್ಲದೇ, ಅರಣ್ಯ, ಕಾಯ್ದೆ, ‍ಪರಿಸರ ಕಾಯ್ದೆ, ವನ್ಯಜೀವಿ ಕಾಯ್ದೆ ಉಲ್ಲಂಘನೆಯಾಗಲಿದೆ. ದೇವಿಮನೆ ಕಣಿವೆಯನ್ನು ಔಷಧ ಮೂಲಿಕೆಗಳ ಸಂರಕ್ಷಿತ ಪ್ರದೇಶ ಎಂದು ಘೋಷಿಸಲಾಗಿದೆ. ವಿನಾಶದ ಅಂಚಿನ ಹಲವು ಸಸ್ಯ-ವನ್ಯಜೀವಿ ಪ್ರಭೇದಗಳು ಇಲ್ಲಿವೆ ಎಂಬ ವರದಿಯನ್ನು ರಾಷ್ಟ್ರೀಯ ಔಷಧ ಮೂಲಿಕೆಗಳ ಸಂರಕ್ಷಣಾ ಸಂಸ್ಥೆಯ ವಿಜ್ಞಾನಿಗಳು 20 ವರ್ಷಗಳ ಹಿಂದೆಯೇ ನೀಡಿದ್ದಾರೆ ಎಂಬ ಸಂಗತಿಯನ್ನು ಪರಿಗಣಿಸಬೇಕು. ಕುಮಟಾ-ಶಿರಸಿ ರಸ್ತೆ ಸುಮಾರು 6 ಮೀಟರ್ ಅಗಲವಿದೆ. ಇನ್ನೂ 6 ಮೀಟರ್ ವಿಸ್ತರಣೆಯಾದರೆ, 60 ಕಿ.ಮೀ ಉದ್ದದ ಮಾರ್ಗದಲ್ಲಿ ಅರಣ್ಯ ನಾಶವಾಗುತ್ತದೆ. ಸರ್ಕಾರಿ ಲೆಕ್ಕದಲ್ಲಿ ದೊಡ್ಡ ಮರಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ಪರಿಸರ ಪರಿಣಾಮ ವರದಿಯಲ್ಲಿ ಅಪಾರ ಜೀವ ವೈವಿಧ್ಯತೆಯ ಪಾರಿಸಾರಿಕ ಮೌಲ್ಯವನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಶರಾವತಿ ಅಭಯಾರಣ್ಯ, ಅಘನಾಶಿನಿ-ಬೇಡ್ತಿ ಸಂರಕ್ಷಿತ ಪ್ರದೇಶ, ದಾಂಡೇಲಿ ಅಭಯಾರಣ್ಯಗಳ ವನ್ಯ ಜೀವಿಗಳ ಕಾರಿಡಾರ್‌ಗಳು, ದಾಟು ಸಾಲುಗಳು ಇಲ್ಲೇ ಇವೆ. ಶಿರಸಿ-ಕುಮಟಾ ರಸ್ತೆ ವಿಸ್ತರಣೆಯಿಂದ ವನ್ಯಜೀವಿಗಳ ಸ್ವತಂತ್ರ ಓಡಾಟಕ್ಕೆ ಧಕ್ಕೆ ಬರಲಿದೆ. ರಸ್ತೆ ವಿಸ್ತರಣೆಯಿಂದ ಶಿರಸಿ, ಹೊನ್ನಾವರ, ಕಾರವಾರ ಅರಣ್ಯ ವಿಭಾಗಗಳಲ್ಲಿ ಎಷ್ಟು ಅರಣ್ಯ ನಾಶವಾಗಲಿದೆ ಎಂಬ ನಿಖರ ಮಾಹಿತಿಯನ್ನು ರಾಜ್ಯ ಅರಣ್ಯ ಇಲಾಖೆ ನೀಡಿಲ್ಲ. ರಾಜ್ಯ ಅರಣ್ಯ ಇಲಾಖೆ ಇನ್ನೂ ಪರವಾನಿಗೆ ನೀಡಿಲ್ಲ. 100 ಎಕರೆಗಿಂತ ಹೆಚ್ಚು ಅರಣ್ಯ ಭೂಮಿ ಈ ರಸ್ತೆ ವಿಸ್ತರಣೆಗೆ ಬೇಕಾಗುವುದರಿಂದ ಕೇಂದ್ರ ಅರಣ್ಯ ಮಂತ್ರಾಲಯದ ಅನುಮತಿ ಪಡೆಯಬೇಕು. ಯೋಜನೆ ಜಾರಿಗೊಳಿಸುವ ಮೊದಲು ಪರಿಸರ-ಅರಣ್ಯ ತಜ್ಞರ ಸಭೆ ಕರೆದು ಸಮಾಲೋಚನೆ ನಡೆಸಬೇಕು ಎಂದು ವಿನಂತಿಸಲಾಗಿದೆ.

ಇದೇ ಮನವಿಯ ಪ್ರತಿಯನ್ನು ಉಪವಿಭಾಗಾಧಿಕಾರಿ ಕೆ.ರಾಜು ಮೊಗವೀರ ಅವರಿಗೂ ನೀಡಲಾಗಿದೆ.

ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಪರಿಸರ ಕಾರ್ಯಕರ್ತರಾದ ವಾಸಂತಿ ಹೆಗಡೆ, ಕೇಶವ ಕೊರ್ಸೆ, ಮಧುಮತಿ ಹೆಗಡೆ, ಬಿ.ಜಿ.ಹೆಗಡೆ ಗೇರಾಳ, ಗಣೇಶ ಯಡಳ್ಳಿ, ವಿಶ್ವನಾಥ ಬುಗಡಿಮನೆ, ವಿ.ಪಿ.ಹೆಗಡೆ, ಶ್ರೀಪಾದ ದೊಡ್ನಳ್ಳಿ, ರಮೇಶ ಕಾನಗೋಡ, ಈಶಣ್ಣ ನೀರ್ನಳ್ಳಿ, ನರಸಿಂಹ ವಾನಳ್ಳಿ, ರತ್ನಾಕರ ಬಾಡಲಕೊಪ್ಪ, ಗಣಪತಿ ಕೆ, ರಾಘವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT