ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಡಗಳ ಮರೆಯಲ್ಲಿ ‘ಸೂರ್ಯಗ್ರಹಣ’ ವೀಕ್ಷಣೆ

Last Updated 21 ಜೂನ್ 2020, 13:19 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣದ ಮಧ್ಯೆಯೂ ಭಾನುವಾರ ಕೆಲವು ಕಾಲ ಸೂರ್ಯಗ್ರಹಣ ಗೋಚರವಾಯಿತು. ಪ್ರಕೃತಿಯ ಕೌತುಕವನ್ನು ವೈಜ್ಞಾನಿಕವಾಗಿ ವೀಕ್ಷಿಸುವುದಕ್ಕಾಗಿ ಇಲ್ಲಿನ ಎಸ್.ಜಿ. ನಾಗಲೋಟಿಮಠ ವಿಜ್ಞಾನ ಕೇಂದ್ರದ ಆವರಣ ಸೇರಿದಂತೆ ವಿವಿಧೆಡೆ ವ್ಯವಸ್ಥೆ ಮಾಡಲಾಗಿತ್ತು.

ಕೊರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಕೇಂದ್ರಕ್ಕೆ ಹೆಚ್ಚಿನ ಮಂದಿ ಬಂದಿರಲಿಲ್ಲ. ಬಂದಿದ್ದ ಆಸಕ್ತರಿಗೆ ಟೆಲಿಸ್ಕೋಪ್ ಹಾಗೂ ಕನ್ನಡಕದ ವ್ಯವಸ್ಥೆ ಮಾಡಲಾಗಿತ್ತು. ಮೋಡ ಕವಿದ ವಾತಾವರಣ ಇದ್ದಿದ್ದರಿಂದ ಆಗಾಗ ಗ್ರಹಣ ಪ್ರಕ್ರಿಯೆ ಗೋಚರಿಸಲಿಲ್ಲ.

ಸೂರ್ಯಗ್ರಹಣ ಹಿನ್ನೆಲೆಯಲ್ಲಿ ದೇವಸ್ಥಾನಗಳಲ್ಲಿ ಭಕ್ತರ ದರ್ಶಕ್ಕೆ ಅವಕಾಶವಿರಲಿಲ್ಲ. ಬೆಳಿಗ್ಗೆಯೇ ಮಂದಿರಗಳಲ್ಲಿ ಪೂಜೆ ಸಲ್ಲಿಸಿ ಬಳಿಕ ಬಾಗಿಲು ಮುಚ್ಚಲಾಗಿತ್ತು. ಕೆಲವು ದೇವಸ್ಥಾನಗಳಲ್ಲಿ ಹೋಮ–ಹವನ ಮಾಡಲಾಗುತ್ತಿತ್ತು. ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ನಗರದ ಕಪಿಲೇಶ್ವರ ದೇವಸ್ಥಾನದಲ್ಲಿ ದೇವರ ಮೂರ್ತಿಗಳಿಗೆ ಪೂಜೆ ಸಲ್ಲಿಸಿ ನಂತರ ಬಟ್ಟೆಯಿಂದ ಮುಚ್ಚಲಾಗಿತ್ತು. ಗ್ರಹಣ ಮೋಕ್ಷದ ಬಳಿಕ ವಿಶೇಷ ಪೂಜೆ ಸಲ್ಲಿಸಲಾಯಿತು.

ತಾಲ್ಲೂಕಿನ ಸುಳೇಭಾವಿಯ ಮಹಾಲಕ್ಷ್ಮಿ ದೇವಸ್ಥಾನದ ಬಾಗಿಲು ಮುಚ್ಚಲಾಗಿತ್ತು. ಅಮಾವಾಸ್ಯೆ ಸಂದರ್ಭದಲ್ಲಿ ಇಲ್ಲಿ ಭಕ್ತರಿಂದ ಗಿಜಿಗುಡುತ್ತಿದ್ದ ದೃಶ್ಯ ಸಾಮಾನ್ಯವಾಗಿರುತ್ತಿತ್ತು. ಈ ಭಾನುವಾರ ಅಂತಹ ಸನ್ನಿವೇಶ ಕಂಡುಬರಲಿಲ್ಲ. ಗ್ರಹಣ ಮೋಕ್ಷವಾದ ಬಳಿಕ ಮಧ್ಯಾಹ್ನ ಬಾಗಿಲು ತೆರೆದು ದೇವಸ್ಥಾನ ಆವರಣ ಸ್ವಚ್ಛಗೊಳಿಸಿ ದೇವಿಗೆ ವಿಶೇಷ ಪೂಜೆ ಹಾಗೂ ಅಭಿಷೇಕ ನೆರವೇರಿಸಲಾಯಿತು.

ಬೆಳಿಗ್ಗೆಯಿಂದ ಗ್ರಹಣದ ಮುಕ್ತಾಯವರೆಗೂ ನಗರದ ಬಹುತೇಕ ರಸ್ತೆಗಳಲ್ಲಿ ಜನರ ಸಂಚಾರ ವಿರಳವಾಗಿತ್ತು. ಮುಖ್ಯ ರಸ್ತೆಗಳು ಕೂಡ ಬಿಕೋ ಎನ್ನುತ್ತಿದ್ದವು! ವಾರಾಂತ್ಯದ ದಿನವಾದರೂ ಕೆಲವೆಡೆ ಹೋಟೆಲ್‌ಗಳು, ಅಂಗಡಿಗಳು ಹಾಗೂ ಮಳಿಗೆಗಳು ಕೂಡ ಮುಚ್ಚಿದ್ದವು. ಗ್ರಹಣದ ಮೋಕ್ಷದ ನಂತರ, ರಸ್ತೆಗಳಲ್ಲಿ ಜನರ ಸಂಚಾರ ಆರಂಭವಾಯಿತು.

ಹಳ್ಳಿಗಳಲ್ಲಿ ಸೂರ್ಯಗ್ರಹಣ ವಿದ್ಯಮಾನ ನಡೆಯುತ್ತಿದೆಯೇ ಎಂದು ಪತ್ತೆ ಹಚ್ಚಲು ಸ್ಥಳೀಯರು ಅಚ್ಚರಿಯ ಕಲೆಯೊಂದನ್ನು ಪ್ರದರ್ಶಿಸಿದರು. ತ್ರಾಮದ ಅಥವಾ ಇತರ ತಟ್ಟೆಯಲ್ಲಿ ನೀರು ಹಾಕಿ ಒನಕೆ ನಿಲ್ಲಿಸುವುದು ಅವರ ಕಲೆ. ಗ್ರಹಣವಿದ್ದ ಸಮಯದಲ್ಲಿ ಮಾತ್ರ ಈ ಒನಕೆಯು ಯಾವುದೇ ಸಹಾಯವಿಲ್ಲದೇ ನಿಲ್ಲುತ್ತದೆ. ಗ್ರಹಣ ಬಿಟ್ಟ ನಂತರ ತಾನಾಗಿಯೇ ಬೀಳುತ್ತದೆ ಎಂಬುದು ಅವರ ನಂಬಿಕೆ. ಹಲವು ಹಳ್ಳಿಗಳಲ್ಲಿ ಈ ಪ್ರಯೋಗ ಮಾಡಲಾಯಿತು. ಗ್ರಹಣ ಮೋಕ್ಷದ ನಂತರ ಒನಕೆ ಬಿದ್ದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT