‘ನನ್ನ ಭೇಟಿಗೆ ಸುಪ್ರೀಂ ಕೋರ್ಟ್‌ ಅನುಮತಿ ಬೇಕಾ’

ಭಾನುವಾರ, ಜೂಲೈ 21, 2019
28 °C
ರಾಜೀನಾಮೆ ಕೊಟ್ಟ ತಕ್ಷಣ ಸ್ವೀಕರಿಸಬೇಕು ಎಂದೇನಿಲ್ಲ–ಸ್ಪೀಕರ್‌ ರಮೇಶ್‌ ಕುಮಾರ್‌

‘ನನ್ನ ಭೇಟಿಗೆ ಸುಪ್ರೀಂ ಕೋರ್ಟ್‌ ಅನುಮತಿ ಬೇಕಾ’

Published:
Updated:
Prajavani

ಬೆಂಗಳೂರು: ‘ಸ್ಪೀಕರ್‌ ನಿಧಾನ ಮಾಡಿದ್ದರಿಂದಲೇ ಅತೃಪ್ತ ಶಾಸಕರು ಸುಪ್ರೀಂ ಕೋರ್ಟ್‌ ಮೊರೆ ಹೋದರು ಎಂದು ಬಿಂಬಿಸುವ ಪ್ರಯತ್ನ ನಡೆದಿದೆ. ನಾನು ಅನಗತ್ಯ ವಿಳಂಬ ಮಾಡಿಯೇ ಇಲ್ಲ. ರಾಜೀನಾಮೆ ಸಲ್ಲಿಕೆಯ ಕಾರಣ ನನಗೆ ಮನವರಿಕೆ ಆಗದೆ ಹೋದರೆ ಅದನ್ನು ಸ್ವೀಕರಿಸುವುದಾದರೂ ಹೇಗೆ‘ ಎಂದು ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್ ಕೇಳಿದರು.

ಗುರುವಾರ ಸಂಜೆ ಮುಂಬೈಯಿಂದ ಬಂದ ಅತೃಪ್ತ ಶಾಸಕರು ಸಲ್ಲಿಸಿದ ರಾಜೀನಾಮೆ ಪತ್ರವನ್ನು ಸ್ವೀಕರಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯಾರನ್ನೋ ಉಳಿಸುವುದು, ಯಾರನ್ನೋ ಕಳುಹಿಸುವುದು ನನ್ನ ಕೆಲಸ ಅಲ್ಲ. ಅದಕ್ಕೆ ನಾನು ಕೈ ಹಾಕುವುದೂ ಇಲ್ಲ. 40 ವರ್ಷದಿಂದ ಮರ್ಯಾದೆಯಿಂದ ಬದುಕಿದ್ದೇನೆ. ನಾನು ಸಾಯುವಾಗಲೂ ಸತ್ಯವನ್ನೇ ಹೇಳಿ ನೆಮ್ಮದಿಯಿಂದ ಸಾಯಲು ಬಿಡಿ’ ಎಂದರು.

‘ಈ ಶಾಸಕರಿಗೆ ಸುಪ್ರೀಂ ಕೋರ್ಟ್‌ಗೆ ಹೋಗುವ ಅಗತ್ಯ ಏನಿತ್ತು? ಇವರನ್ನು ಹಿಡಿದಿಟ್ಟವರು ಯಾರು? ಇದೇ ಆರನೇ ತಾರೀಕಿನಂದು ನನ್ನ ಕಚೇರಿಯಲ್ಲಿ ಕೆಲವರಿಗೆ ಅಡಚಣೆ ಉಂಟುಮಾಡಿದ ಪ್ರಸಂಗ ಎದುರಾಗಿತ್ತು, ಭಯದಿಂದ ಮುಂಬೈಗೆ ಹೋಗಿದ್ದಾಗಿ ಒಂದಿಬ್ಬರು ಹೇಳಿದರು. ಜೀವ ಭಯ ಇದೆ ಎಂದು ಹೇಳಿದ್ದರೆ ನಾನೇ ರಕ್ಷಣೆಯ ವ್ಯವಸ್ಥೆ ಮಾಡುತ್ತಿದ್ದೆನಲ್ಲ’ ಎಂದು ಅವರು ಹೇಳಿದರು.

ಭೂಕಂಪ ಆದಂತೆ ವರ್ತಿಸಿದರು: ‘ರಾಜೀನಾಮೆ ಸಲ್ಲಿಸಿ ಮೂರು ದಿನಕ್ಕೇ ಭೂಕಂಪ ಆದಂತೆ ವರ್ತಿಸಿದರು. ಆದರೆ ಕೆಲವು ರಾಜ್ಯಗಳಲ್ಲಿ ವರ್ಷಾನುಗಟ್ಟಲೆ ರಾಜೀನಾಮೆ ಅಂಗೀಕರಿಸದೆ ಉಳಿದ, ಅನರ್ಹತೆ ಪ್ರಶ್ನೆಯನ್ನು ಇತ್ಯರ್ಥಪಡಿಸದೆ ಹೋದ ನಿದರ್ಶನ ಇದೆ. ಅವರಿಗೆ ಸಮಯ ಇತ್ತು, ಹಣ ಇತ್ತು. ಹೀಗಾಗಿ ಬೊಂಬಾಯಿಗೆ ಹೋದರು, ಅಲ್ಲಿಂದ ಸುಪ್ರೀಂ ಕೋರ್ಟ್‌ಗೂ ಹೋದರು. ವಿಶೇಷ ವಿಮಾನದಲ್ಲಿ ಬಂದರು, ಪೊಲೀಸ್ ಭದ್ರತೆಯಲ್ಲಿ ಕಚೇರಿಗೆ ಧಾವಿಸಿ ಬಂದರು. ಆದರೆ ನಾನು ನಿಯಮ ಬಿಟ್ಟು ಹೋಗಲು ಸಾಧ್ಯವಿಲ್ಲ’ ಎಂದರು.

‘ಸುಪ್ರೀಂ ಕೋರ್ಟ್‌ ನನಗೆ ತಕ್ಷಣ ರಾಜೀನಾಮೆ ಅಂಗೀಕರಿಸಬೇಕು ಎಂದು ತಿಳಿಸಿಲ್ಲ. ನೀವು ಕೈಗೊಂಡ ಕ್ರಮಗಳನ್ನು ತಿಳಿಸಿ ಎಂದು ಹೇಳಿದೆ. ಅದರಂತೆ ನಾನು ಶಾಸಕರ ರಾಜೀನಾಮೆ ‍‍ಪತ್ರ ಸ್ವೀಕರಿಸಿದ ದೃಶ್ಯವನ್ನು ಚಿತ್ರೀಕರಿಸಿ ಅದನ್ನು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌ ಅವರಿಗ ಕಳುಹಿಸಿಕೊಡುತ್ತಿದ್ದೇನೆ’ ಎಂದು ರಮೇಶ್ ಕುಮಾರ್ ಹೇಳಿದರು.

‘ಸುಪ್ರೀಂ ಕೋರ್ಟ್ ಹೇಳಿದ ತಕ್ಷಣ ರಾಜೀನಾಮೆ ಕ್ರಮಬದ್ಧ ಆಗುವುದಿಲ್ಲ. ಕ್ರಮಬದ್ಧವಾಗಿ ಕೊಟ್ಟರಷ್ಟೇ ಅದು ಕ್ರಮಬದ್ಧವಾಗುತ್ತದೆ. ಇದುವರೆಗೆ ಕೊಟ್ಟ ರಾಜೀನಾಮೆಗಳು ಸಮರ್ಪಕವಾಗಿವೆ. ಇನ್ನು ನಾಳೆ ಯಾರಾದರೂ ರಾಜೀನಾಮೆ ಕೊಟ್ಟರೆ ಅದೂ ಕ್ರಮಬದ್ಧ ಇರುತ್ತದೆ ಎಂದು ನಾನು ಹೇಗೆ ಹೇಳಲಿ?’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಅವರು ಕೊಟ್ಟ ರಾಜೀನಾಮೆಯಂತೆ ನಿರ್ದಿಷ್ಟ ದಿನಗಳಂದು ವಿಚಾರಣೆಗೆ ನಾನು ಸೂಚಿಸಿದ್ದೇನೆ. ಅದರ ಹೊರತು ಈಗಲೇ ರಾಜೀನಾಮೆ ಅಂಗೀಕರಿಸಬೇಕು ಎಂದು ಹೇಳಿದರೆ ಅದು ಸಾಧ್ಯವಿಲ್ಲ. ಕೆಲವರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯಂತೆ ದಾಖಲಾದ ಪ್ರಕರಣವೂ ಇದೆ. ರಾಜೀನಾಮೆ ಅಂಗೀಕಾರಕ್ಕೆ ಮೊದಲು ಅದರ ವಿಚಾರಣೆಯೂ ಆಗಬೇಕು. ಇಲ್ಲವಾದರೆ ನಾನು ಇನ್ನೊಂದು ಬಗೆಯಲ್ಲಿ ಅನ್ಯಾಯ ಮಾಡಿದಂತಾಗುತ್ತದೆ’ ಎಂದರು.

‘ರಾಜೀನಾಮೆ ಅಂಗೀಕಾರ ಆಗುವ ತನಕವೂ ಸದಸ್ಯರು ಒಂದು ಪಕ್ಷದ ಶಾಸಕಾಂಗದ ಸದಸ್ಯರೇ ಆಗಿರುತ್ತಾರೆ. ಹೀಗಾಗಿ ಶುಕ್ರವಾರದಿಂದ ಆರಂಭವಾಗುವ ವಿಪ್ ಇದೀಗ ರಾಜೀನಾಮೆ ಸಲ್ಲಿಸಿದ ಶಾಸಕರಿಗೂ ಅನ್ವಯವಾಗುತ್ತದೆ’ ಎಂದು ಸ್ಪಷ್ಪಪಡಿಸಿದರು.

‘ಸರಿಯಾಗಿ ದೂರೇ ಬಂದಿಲ್ಲ'
‘ಜೆಡಿಎಸ್‌ ಶಾಸಕರ ವಿರುದ್ಧ ಸರಿಯಾಗಿ ದೂರೇ ಬಂದಿಲ್ಲ. ನಾನು ಅವರ ಅನರ್ಹತೆಯ ಬಗ್ಗೆ ಹೇಗೆ ವಿಚಾರಣೆ ನಡೆಸಲಿ’ ಎಂದು ವಿಧಾನಸಭಾಧ್ಯಕ್ಷ ರಮೇಶ್‌ ಕುಮಾರ್ ಪ್ರಶ್ನಿಸಿದರು.

ಬರಹ ಇಷ್ಟವಾಯಿತೆ?

 • 11

  Happy
 • 2

  Amused
 • 1

  Sad
 • 1

  Frustrated
 • 2

  Angry

Comments:

0 comments

Write the first review for this !