ಬುಧವಾರ, ಏಪ್ರಿಲ್ 8, 2020
19 °C
ಸಮಿತಿ/ ಆಯೋಗ ಆಯ್ಕೆ ಯಾವುದು?

ಮೀಸಲಾತಿಗಾಗಿ ‘ನಾಯಕ’ರ ಹೋರಾಟ: ಇಕ್ಕಟ್ಟಿಗೆ ಸಿಲುಕಿದ ಮೈತ್ರಿ ಸರ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೀಸಲಾತಿ ಪ್ರಮಾಣ ಹೆಚ್ಚಿಸಬೇಕೆಂದು ವಾಲ್ಮೀಕಿ– ನಾಯಕ ಸಮುದಾಯ ನಡೆಸುತ್ತಿರುವ ಹೋರಾಟ ‘ಮೈತ್ರಿ’ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು, ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯ ಪರ–ವಿರುದ್ಧದ ಚರ್ಚೆಗೆ ಕಾರಣವಾಗಿದೆ.

ಕೆಲವು ಸಚಿವರು ಮೀಸಲಾತಿ ಪ್ರಮಾಣ ಹೆಚ್ಚಿಸಬಹುದು ಎಂದೂ, ಮತ್ತೆ ಕೆಲವರು ಈ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡರೂ ‘ಜೇನುಗೂಡಿ’ಗೆ ಕಲ್ಲು ಹೊಡೆದಂತಾಗಿ ಬಿಕ್ಕಟ್ಟು ತಾರಕಕ್ಕೆ ಏರುತ್ತದೆ. ಸರ್ಕಾರ ಇಕ್ಕಟ್ಟಿಗೆ ಸಿಲುಕಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದರು ಎಂದು ಮೂಲಗಳು ಹೇಳಿವೆ.

ಮೀಸಲಾತಿ ನೀಡಲು ಶಿಫಾರಸು ಮಾಡುವ ವಿಷಯ ಅಂತಿಮವಾಗಿ ಗೊಂದಲದಲ್ಲೇ ಉಳಿದಿದ್ದರಿಂದಾಗಿ ಸಚಿವ ಸಂಪುಟ ಸಭೆ ಯಾವುದೇ ತೀರ್ಮಾನಕ್ಕೆ ಬರಲಿಲ್ಲ. ಇದರ ನಿರ್ಣಯಕ್ಕೆ ಸಮಿತಿ ರಚನೆ ಮಾಡಬೇಕೊ ಅಥವಾ ಸಾಂವಿಧಾನಿಕ ಅಧಿಕಾರ ಇರುವ ಆಯೋಗ ರಚಿಸಬೇಕೋ ಎಂಬ ಬಗ್ಗೆ ಪರಿಶೀಲನೆ ನಡೆಸಿ ಮಾಹಿತಿ ನೀಡುವಂತೆ ಮುಖ್ಯ ಕಾರ್ಯದರ್ಶಿಯವರಿಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೂಚಿಸಿದರು.

ಮಹಾರಾಷ್ಟ್ರದಲ್ಲಿ ಮರಾಠ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಲು ಅಲ್ಲಿನ ಸರ್ಕಾರ ತೀರ್ಮಾನ ತೆಗೆದುಕೊಂಡಿತ್ತು. ಶೇ 16 ರಷ್ಟು ಮೀಸಲು ನಿಗದಿ ಮಾಡಿತ್ತು. ಹೈಕೋರ್ಟ್‌ ಈ ನಿರ್ಧಾರವನ್ನು ಎತ್ತಿ ಹಿಡಿದಿದೆ. ಆದರೆ, ಮೀಸಲಾತಿ ಪ್ರಮಾಣವನ್ನು ಶೇ 12–13 ಕ್ಕೆ ಇಳಿಸಿದೆ. ಅದೇ ಮಾದರಿ ಅನುಸರಿಸಿ ರಾಜ್ಯದಲ್ಲಿ ಪರಿಶಿಷ್ಟ ವರ್ಗಕ್ಕೆ ಮೀಸಲಾತಿ ಪ್ರಮಾಣವನ್ನು ಈಗ ಇರುವ ಶೇ 3 ರಿಂದ ಶೇ 7 ಕ್ಕೆ ಹೆಚ್ಚಿಸಬಹುದು ಎಂಬ ಸಲಹೆಯೂ ಸಚಿವ ಸಂಪುಟ ಸಭೆಯಲ್ಲಿ ಬಂದಿತು.

ಒಂದು ವೇಳೆ ಈ ರೀತಿ ತೀರ್ಮಾನ ತೆಗೆದುಕೊಂಡರೆ, ಬೇರೆ ಜಾತಿಯವರೂ ಮೀಸಲಾತಿ ಪ್ರಮಾಣ ಹೆಚ್ಚಿಸಲು ಒತ್ತಡ ಹೇರುತ್ತಾರೆ. ಇದರಿಂದ ಸಾಮಾಜಿಕ ಬಿಕ್ಕಟ್ಟಿಗೆ ಕಾರಣವಾಗಬಹುದು ಎಂಬ ಆತಂಕ ವ್ಯಕ್ತವಾಯಿತು.

ರಾಜ್ಯದಲ್ಲಿ ಈಗ ಪರಿಶಿಷ್ಟ ಜಾತಿಗೆ ಶೇ 15, ಪರಿಶಿಷ್ಟಪಂಗಡಕ್ಕೆ ಶೇ 3 ಮತ್ತು ಇತರ ಹಿಂದುಳಿದ ವರ್ಗಗಳಿಗೆ ಶೇ 32 ಒಟ್ಟು ಸೇರಿ ಶೇ 50 ರಷ್ಟು ಮೀಸಲಾತಿ ಇದೆ. 

ಪರಿಶಿಷ್ಟ ಜಾತಿ ಮೀಸಲಾತಿ ಪ್ರಮಾಣವನ್ನು ಶೇ 2ರಷ್ಟು ಹೆಚ್ಚಿಸಬೇಕು ಎಂಬ ಬೇಡಿಕೆ ಈಗಾಗಲೇ ಇದೆ. ಒಳ ಮೀಸಲಾತಿ ಬೇಕು ಎಂಬ ಹೋರಾಟವೂ ಚಾಲ್ತಿಯಲ್ಲಿದೆ. ಈ ಸಂಬಂಧ ನ್ಯಾಯಮೂರ್ತಿ ಎ.ಜೆ.ಸದಾಶಿವ ಅವರು ನೀಡಿರುವ ವರದಿ ಇನ್ನೂ ಜಾರಿ ಆಗಲಿಲ್ಲ.
ಅಲ್ಲದೆ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ಆಧರಿಸಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕು ಎಂಬ ಕೂಗು ಇತರ ಹಿಂದುಳಿದ ವರ್ಗದಿಂದಲೂ ಕೇಳಿ ಬಂದಿದೆ. ವಾಲ್ಮೀಕಿ ಸಮುದಾಯದ ಮೀಸಲಾತಿ ಹೆಚ್ಚಿಸಿದರೆ ಈ ಎಲ್ಲ ಸಮುದಾಯದವರು ಬೀದಿಗೆ ಇಳಿಯಬಹುದು. ಇಂತಹ ಹೊತ್ತಿನಲ್ಲಿ ನಿರ್ಧಾರ ತೆಗೆದುಕೊಂಡು ಇಕ್ಕಟ್ಟಿಗೆ ಸಿಲುಕುವುದಕ್ಕಿಂತ ಬೀಸೊ ದೊಣ್ಣೆಯಿಂದ ಪಾರಾಗುವ ದಾರಿ ಹುಡುಕುವುದು ಸೂಕ್ತ ಎಂದು ಹಿರಿಯ ಸಚಿವರು ಸಲಹೆ ನೀಡಿದರು.

ಕಾಂಗ್ರೆಸ್‌ನಲ್ಲಿ ಹೆಚ್ಚಿದ ಒತ್ತಡ

ಪರಿಶಿಷ್ಟ ವರ್ಗದ ಮೀಸಲಾತಿ ಪ್ರಮಾಣವನ್ನು ಶೇ 7 ಕ್ಕೆ ಹೆಚ್ಚಳ ಮಾಡುವಂತೆ ಕಾಂಗ್ರೆಸ್‌ನಲ್ಲಿರುವ ವಾಲ್ಮೀಕಿ–ನಾಯಕ ಸಮುದಾಯದ ಮುಖಂಡರು ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್‌ ಅವರ ಮೇಲೆ ಒತ್ತಡ ಹೇರಿದರು.

ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಸಚಿವರಾದ ಸತೀಶ ಜಾರಕಿಹೊಳಿ, ಇ. ತುಕಾರಾಂ, ಶಾಸಕ ಟಿ. ರಘುಮೂರ್ತಿ ಮುಖಂಡರಾದ ವಿ.ಎಸ್‌.ಉಗ್ರಪ್ಪ, ಕೆ.ಎನ್.ರಾಜಣ್ಣ ಭಾಗವಹಿಸಿದ್ದರು. ವಾಲ್ಮೀಕಿ ಸಮುದಾಯ ಈಗಾಗಲೇ ಕಾಂಗ್ರೆಸ್‌ನಿಂದ ದೂರ ಸರಿದಿದೆ. ಈಗಲೂ ವಿಳಂಬ ಅಥವಾ ನಿರ್ಲಕ್ಷ್ಯ ಮಾಡಿದರೆ ಮತ್ತಷ್ಟು ಹೊಡೆತ ಬೀಳಲಿದೆ. ಮುಖ್ಯಮಂತ್ರಿ ಮೇಲೆ ಈ ವಿಷಯದಲ್ಲಿ ಒತ್ತಡ ಹಾಕಿ ಎಂದು ಮುಖಂಡರು ಮನವಿ ಮಾಡಿದರು ಎಂದು ತಿಳಿದುಬಂದಿದೆ.

ಮುಖ್ಯಮಂತ್ರಿ ಅವರಿಗೆ ಪತ್ರ ಬರೆಯುವುದಾಗಿ ದಿನೇಶ್ ಭರವಸೆ ನೀಡಿದರು.

***

ಮೀಸಲಾತಿ ಗರಿಷ್ಠ ಮಿತಿ ಶೇ 50 ಮೀರಬಾರದು ಎಂಬ ತೀರ್ಪು ಇದೆ. ಮುಂದೇನು ಮಾಡಬೇಕು ಎಂದು ಮುಖ್ಯ ಕಾರ್ಯದರ್ಶಿಯವರ ಸಲಹೆ ಕೇಳಿದ್ದೇವೆ
- ಕೃಷ್ಣಬೈರೇಗೌಡ, ಗ್ರಾಮೀಣಾಭಿವೃದ್ಧಿ ಸಚಿವ

**

ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು. ಬೇರೆ ಸಮುದಾಯಗಳಿಗೆ ಅನ್ಯಾಯ ಆಗದಂತೆ ಅನುಷ್ಠಾನಗೊಳಿಸಲು ಸಮಿತಿ ರಚಿಸಬೇಕು
- ಸತೀಶ ಜಾರಕಿಹೊಳಿ, ಅರಣ್ಯ ಸಚಿವ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು