ಗುರುವಾರ , ಏಪ್ರಿಲ್ 15, 2021
22 °C
ಹೋರಾಟಕ್ಕೆ ಬಿಜೆಪಿ ಸಜ್ಜು | ಆಡಳಿತ ಪಕ್ಷದ ಶಾಸಕರಿಗೆ ವಿಪ್ ಜಾರಿ

ಮುಗಿಯದ ರಾಜಕೀಯ ‘ಆಟ’ | ಅಧಿವೇಶನದ ಮೇಲೆ ಕಾರ್ಮೋಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶಾಸಕರು ನೀಡಿರುವ ರಾಜೀನಾಮೆಯನ್ನು ತಕ್ಷಣಕ್ಕೆ ಅಂಗೀಕರಿಸಲು ಸಭಾಧ್ಯಕ್ಷ ಕೆ.ಆರ್. ರಮೇಶ್ ಕುಮಾರ್‌ ನಿರಾಕರಿಸಿದ್ದು, ಸರ್ಕಾರ ಹಾಗೂ ವಿರೋಧ ಪಕ್ಷದ ಮುಂದಿನ ನಡೆ ಕುತೂಹಲ ಕೆರಳಿಸಿದೆ.

ಶಾಸಕರ ರಾಜೀನಾಮೆ ವಿಷಯ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದು, ಶುಕ್ರವಾರ ಈ ಪ್ರಕರಣ ಮರು ವಿಚಾರಣೆಗೆ ಬರಲಿದೆ. ಮುಂದುವರಿದ ಬಜೆಟ್ ಅಧಿವೇಶನವೂ ಶುಕ್ರವಾರದಿಂದ ಆರಂಭವಾಗಲಿದೆ.

ಸರ್ಕಾರವನ್ನು ಉಳಿಸಿಕೊಳ್ಳಲು ಮೈತ್ರಿಕೂಟದ ನಾಯಕರು ತರಹೇವಾರಿ ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಶಾಸಕರ ರಾಜೀನಾಮೆ ಕೊಡಿಸಿ ಸರ್ಕಾರ ಪತನಕ್ಕೆ ಸೂತ್ರ ಹೆಣೆದಿರುವ ಬಿಜೆಪಿ ನಾಯಕರು, ‘ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ರಾಜೀನಾಮೆ ಕೊಡಬೇಕು’ ಎಂದು ಆಗ್ರಹಿಸಿ ಸದನದಲ್ಲೇ ಹೋರಾಟ ನಡೆಸಲು ಸಜ್ಜಾಗಿದ್ದಾರೆ. ಹೀಗಾಗಿ, ಮುಂದಿನ 11 ದಿನ ನಡೆಯಲಿರುವ ಕಲಾಪವು ವಾಗ್ಯುದ್ಧ–ಧರಣಿ– ಆರೋಪ–ಪ್ರತ್ಯಾರೋಪಗಳ ಅಖಾಡವಾಗಿ ಪರಿಣಮಿಸುವುದು ನಿಚ್ಚಳವಾಗಿದೆ.

‘ಸಭಾಧ್ಯಕ್ಷರು ಪಕ್ಷಪಾತ ಮಾಡುತ್ತಿದ್ದಾರೆ’ ಎಂದು ರಾಜೀನಾಮೆ ಇತ್ತ ಶಾಸಕರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.‘ಮತ್ತೊಮ್ಮೆ ರಾಜೀನಾಮೆ ಸಲ್ಲಿಸಿ’ ಎಂದು ಕೋರ್ಟ್ ಸೂಚಿಸಿತ್ತು. ಈ ಬೆಳವಣಿಗೆ ಬೆನ್ನಲ್ಲೇ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ದೌಡಾಯಿಸಿದ ಶಾಸಕರು, ಪೊಲೀಸರ ಸರ್ಪಗಾವಲಿನಲ್ಲಿ ವಿಧಾನಸೌಧಕ್ಕೆ ತೆರಳಿ ರಾಜೀನಾಮೆ ಸಲ್ಲಿಸಿದರು. ಬಳಿಕ, ಮತ್ತೆ ವಿಮಾನದಲ್ಲಿ ಮುಂಬೈಗೆ ವಾಪಸ್ ಆದರು.

ಬಳಿಕ ಮಾತನಾಡಿದ ಸಭಾಧ್ಯಕ್ಷ ರಮೇಶ್‌ ಕುಮಾರ್‌, ‘ಅತೃಪ್ತ ಶಾಸಕರು ಸಲ್ಲಿಸಿದ ರಾಜೀನಾಮೆ ಪತ್ರಗಳೆಲ್ಲ ಕ್ರಮಬದ್ಧವಾಗಿವೆ. ಅವಸರದಲ್ಲಿ ಅವುಗಳನ್ನು ಇತ್ಯರ್ಥ ಮಾಡುವುದಿಲ್ಲ. ನನಗೆ ಮನವರಿಕೆ ಆದ ಬಳಿಕವಷ್ಟೇ ಅವುಗಳನ್ನು ಅಂಗೀಕರಿಸುವೆ. ಶಾಸಕರ ಸಹಕಾರ ದೊರೆತರೆ ವಾರದಲ್ಲೇ ವಿಚಾರಣೆ ಮುಗಿಯಬಹುದು. ಇಲ್ಲದಿದ್ದರೆ ತಿಂಗಳೂ ಆಗಬಹುದು. ನಾನು ಯಾರ ಹಂಗಿನಲ್ಲೂ ಇಲ್ಲ. ನಾನು ಸಂವಿಧಾನ ಮತ್ತು ಜನರ ಪರ’ ಎಂದು ’ ಎಂದರು.

ಏತನ್ಮಧ್ಯೆ, ಶಾಸಕರಿಗೆ ವಿಪ್ ಜಾರಿ ಮಾಡಿರುವ ಆಡಳಿತ ಪಕ್ಷ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಸಚೇತಕರು, ‘ಸದನ ನಡೆಯುವಾಗ ಕಡ್ಡಾಯವಾಗಿ ಹಾಜರಿದ್ದು, ಮಸೂದೆಗಳು ಮಂಡನೆಯಾಗುವಾಗ ಸರ್ಕಾರದ ಪರವಾಗಿ ಮತ ಚಲಾಯಿಸಬೇಕು. ಇಲ್ಲದಿದ್ದರೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಅನರ್ಹಗೊಳಿಸಲಾಗುವುದು’ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ರಾಜೀನಾಮೆ ಕೊಟ್ಟಿರುವ 16 ಶಾಸಕರು ಸದನಕ್ಕೆ ಹಾಜರಾಗದೇ ಇದ್ದರೆ, ಅವರ ವಿರುದ್ಧ ಅನರ್ಹತೆಯ ಅಸ್ತ್ರ ಬಳಸಲು ಮೈತ್ರಿ ಕೂಟ ನಿರ್ಧರಿಸಿದೆ.

ಅವಿಶ್ವಾಸ: ಬಿಜೆಪಿಗೆ ಸಿ.ಎಂ ಸವಾಲು
‘ಬಿಜೆಪಿಗೆ ಬಹುಮತ ಇದ್ದರೆ ವಿಧಾನಸಭೆಯಲ್ಲಿ ನಮ್ಮ ವಿರುದ್ಧ ಅವಿಶ್ವಾಸ ಮಂಡಿಸಲಿ. ನಮ್ಮ ಅಭ್ಯಂತರ ಇಲ್ಲ’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಸವಾಲು ಎಸೆದಿದ್ದಾರೆ. ‘ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. 2009ರಲ್ಲಿ ಇಂತಹದೇ ಪರಿಸ್ಥಿತಿ ಇದ್ದಾಗ ಯಡಿಯೂರಪ್ಪ ರಾಜೀನಾಮೆ ಕೊಟ್ಟಿದ್ದರಾ? ಮೈತ್ರಿ ಸರ್ಕಾರವನ್ನು ಪತನಗೊಳಿಸಲು ಕೇಂದ್ರ ಸರ್ಕಾರ ಯತ್ನಿಸಿದೆ. ಮೈತ್ರಿ ಮಧ್ಯೆ ಇರುವ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಸರ್ಕಾರವನ್ನು ರಕ್ಷಿಸಿಕೊಳ್ಳಲಿದ್ದೇವೆ’ ಎಂದರು.

ಬಿಜೆಪಿ ಜತೆ ಜೆಡಿಎಸ್‌ ಕೈಜೋಡಿಸುತ್ತಾ?
ಬೆಂಗಳೂರು: ಬಿಜೆಪಿ ರಾಜ್ಯ ಉಸ್ತುವಾರಿ ಕೆ.ಮುರಳೀಧರ ರಾವ್ ಮತ್ತು ಶಾಸಕ ಕೆ.ಎಸ್‌.ಈಶ್ವರಪ್ಪ ಅವರನ್ನು ಜೆಡಿಎಸ್‌ನ ಪ್ರಭಾವಿ ಸಚಿವ ಸಾ.ರಾ.ಮಹೇಶ್‌ ಗುರುವಾರ ರಾತ್ರಿ ನಗರದ ಕುಮಾರಕೃಪಾ ಅತಿಥಿಗೃಹದಲ್ಲಿ ಭೇಟಿಯಾಗಿ ಚರ್ಚೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

‘ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ’ ಎಂಬ ವದಂತಿ ಹಬ್ಬಿತ್ತು. ಇದಕ್ಕೆ ಪ್ರತಿಯಾಗಿ ಜೆಡಿಎಸ್‌ ಬಿಟ್ಟಿರುವ ಪ್ರತ್ಯಸ್ತ್ರ ಇದು ಎಂದು ಹೇಳಲಾಗುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು