ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಮಲತಾ ಔತಣಕೂಟದಲ್ಲಿ ಕಾಂಗ್ರೆಸ್‌ ಮುಖಂಡರು 

Last Updated 1 ಮೇ 2019, 16:49 IST
ಅಕ್ಷರ ಗಾತ್ರ

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ ಜತೆ ಕೆಲವು ಕಾಂಗ್ರೆಸ್‌ ಮುಖಂಡರು ಮಂಗಳವಾರ ರಾತ್ರಿ ಔತಣಕೂಟ ನಡೆಸಿರುವುದು ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ನಾಯಕರ ಮಧ್ಯೆ ಗಂಭೀರ ಚರ್ಚೆಗೆ ಕಾರಣವಾಗಿದೆ.

ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್‌ ಹಾಗೂ ಸುಮಲತಾ ಅವರು ನಗರದ ರ‍್ಯಾಡಿಸನ್‌ ಬ್ಲೂ (ಏಟ್ರಿಯಾ) ಹೋಟೆಲ್‌ನಲ್ಲಿ ಭೋಜನ ಕೂಟ ಹಮ್ಮಿಕೊಂಡಿದ್ದರು. 2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತಿದ್ದ ಎನ್. ಚಲುವರಾಯಸ್ವಾಮಿ (ನಾಗಮಂಗಲ), ಪಿ.ಎಂ.ನರೇಂದ್ರಸ್ವಾಮಿ (ಮಳವಳ್ಳಿ), ಕೆ.ಬಿ. ಚಂದ್ರಶೇಖರ್‌ (ಕೆ.ಆರ್‌. ಪೇಟೆ), ಗಣಿಗ ರವಿ (ಮಂಡ್ಯ) ಹಾಗೂ ಎಚ್.ಸಿ. ಬಾಲಕೃಷ್ಣ (ಮಾಗಡಿ) ಅವರು ಈ ಭೋಜನಕೂಟದಲ್ಲಿ ಭಾಗಿಯಾಗಿದ್ದರು. ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಮಳವಳ್ಳಿ ಶಿವಣ್ಣ ಕೂಡ ಇದ್ದರು.

ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದ ಕಾಂಗ್ರೆಸ್‌ ಮುಖಂಡರು ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಕೂಟದ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ (ಮುಖ್ಯಮಂತ್ರಿ ಪುತ್ರ) ಅವರಿಗೆ ಕೈ ಕೊಟ್ಟು, ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ ಪರ ನಿಂತಿದ್ದಾರೆ ಎಂಬ ಟೀಕೆ ಜೆಡಿಎಸ್‌ ವಲಯದಿಂದಲೇ ಮೂಡಿತ್ತು. ‘ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡದೇ ಇದ್ದರೆ ಶಿಸ್ತುಕ್ರಮ ಜರುಗಿಸಬೇಕಾಗುತ್ತದೆ’ ಎಂದು ಕಾಂಗ್ರೆಸ್‌ ನಾಯಕರು ಎಚ್ಚರಿಸಿದ್ದರು.

ಎಚ್ಚರಿಕೆಯನ್ನು ಅಲಕ್ಷಿಸಿದ್ದ ಕಾಂಗ್ರೆಸ್‌ ಮುಖಂಡರು ನಿಖಿಲ್ ಪರ ಪ್ರಚಾರದಲ್ಲಿ ಪಾಲ್ಗೊಂಡಿರಲಿಲ್ಲ. ‘ಕುಮಾರಸ್ವಾಮಿಯವರೇ ಪ್ರಚಾರ ಮಾಡುವುದು ಬೇಡ ಎಂದಿದ್ದಾರೆ; ನಾವ್ಯಾಕೆ ಹೋಗಬೇಕು’ ಎಂದು ಈ ಮುಖಂಡರು ಸಮರ್ಥನೆಯನ್ನು ಕೊಟ್ಟಿದ್ದರು. ಆದರೆ, ಸುಮಲತಾ ಪರ ಬಹಿರಂಗವಾಗಿ ಪ್ರಚಾರದಲ್ಲಿ ಯಾರೊಬ್ಬರೂ ಕಾಣಿಸಿಕೊಂಡಿರಲಿಲ್ಲ.

ಮತದಾನ ಮುಗಿದು 12 ದಿನ ಕಳೆಯುತ್ತಿದ್ದಂತೆ ಸುಮಲತಾ ಜತೆ ಕಾಣಿಸಿಕೊಳ್ಳುವ ಮೂಲಕ ಈ ಮುಖಂಡರು ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡಿಲ್ಲ ಎಂಬುದನ್ನು ತೋರಿಸಿದ್ದಾರೆ ಎಂದು ಜೆಡಿಎಸ್‌ ನಾಯಕರು ಪ್ರತಿಪಾದಿಸುತ್ತಿದ್ದಾರೆ.

ಸಿದ್ದರಾಮಯ್ಯ ಆಪ್ತರು: ಔತಣಕೂಟದಲ್ಲಿ ಪಾಲ್ಗೊಂಡಿರುವವರ ಪೈಕಿ ಹೆಚ್ಚಿನವರು ಸಿದ್ದರಾಮಯ್ಯ ಆಪ್ತರೇ ಆಗಿರುವುದು ಕಾಂಗ್ರೆಸ್‌ನಲ್ಲಿ ಬೇರೊಂದು ರೀತಿಯ ಚರ್ಚೆಯನ್ನು ಹುಟ್ಟುಹಾಕಿದೆ.

ಜೆಡಿಎಸ್‌ನಿಂದ ಶಾಸಕರಾಗಿದ್ದ ಆಯ್ಕೆಯಾಗಿದ್ದ ಚಲುವರಾಯ ಸ್ವಾಮಿ, ಬಾಲಕೃಷ್ಣ ಅವರು 2018ರ ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಸೇರಿದ್ದರು. ಅವರಿಗೆ ಸಿದ್ದರಾಮಯ್ಯ ಅವರೇ ಶ್ರೀರಕ್ಷೆಯಾಗಿದ್ದು, ಟಿಕೆಟ್‌ ಕೊಡಿಸುವಲ್ಲಿಯೂ ಪ್ರಮುಖಪಾತ್ರ ವಹಿಸಿದ್ದರು. ಒಮ್ಮೆ ಪಕ್ಷೇತರ ಶಾಸಕರಾಗಿ, ಮತ್ತೊಮ್ಮೆ ಕಾಂಗ್ರೆಸ್‌ ಶಾಸಕರಾಗಿ ಆಯ್ಕೆಯಾಗಿದ್ದ ನರೇಂದ್ರ ಸ್ವಾಮಿ ಕೂಡ ಸಿದ್ದರಾಮಯ್ಯ ಆಪ್ತವಲಯದಲ್ಲಿ ಗುರುತಿಸಿಕೊಂಡವರು. ಇವರ ಜತೆಯಲ್ಲಿ ಮಳವಳ್ಳಿ ಶಿವಣ್ಣ ಕೂಡ ಔತಣಕೂಟದಲ್ಲಿ ಕಾಣಿಸಿಕೊಂಡಿರುವುದು ಕಾಂಗ್ರೆಸ್‌ ನಾಯಕರು ನಿಖಿಲ್‌ ಕುಮಾರಸ್ವಾಮಿ ಪರ ಕೆಲಸ ಮಾಡಿಲ್ಲ ಎಂಬುದಕ್ಕೆ ಸಾಕ್ಷಿಯಾದಂತಿದೆ ಎಂದು ಕಾಂಗ್ರೆಸ್‌ ನಾಯಕರೊಬ್ಬರು ಹೇಳಿದರು.

*
ಔತಣಕೂಟದಲ್ಲಿ ಪಾಲ್ಗೊಂಡ ಕಾಂಗ್ರೆಸ್‌ ಮುಖಂಡರ <br/>ವಿರುದ್ಧ ಶಿಸ್ತುಕ್ರಮ ಕೈಗೊಳ್ಳ<br/>ಲಾಗುತ್ತದೆ. ಈ ಸಂಬಂಧ ವರದಿ ತರಿಸಿಕೊಳ್ಳಲಾಗುತ್ತದೆ.
-ಜಿ.ಪರಮೇಶ್ವರ, ಉಪಮುಖ್ಯಮಂತ್ರಿ

*
ಸೋತು ಸುಣ್ಣಗಾದವರು ಔತಣಕೂಟದಲ್ಲಿ ಪಾಲ್ಗೊಂಡಿದ್ದೇವೆ. ಈ ವಿಷಯಕ್ಕೆ ಅಷ್ಟೊಂದು ಪ್ರಾಮುಖ್ಯತೆ ನೀಡುವ ಅವಶ್ಯಕತೆ ಏನಿದೆ.
-ಎಚ್‌.ಸಿ.ಬಾಲಕೃಷ್ಣ, ಮಾಗಡಿಯ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT