ಶುಕ್ರವಾರ, ಜನವರಿ 21, 2022
30 °C
ಹೈಕೋರ್ಟ್‌ನಿಂದ ‘ನ್ಯಾಯಾಂಗ ನಿಂದನೆ’ ಅಸ್ತ್ರ ಪ್ರಯೋಗದ ಎಚ್ಚರಿಕೆ * ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ

ಅನಧಿಕೃತ ನಿರ್ಮಾಣಗಳ ತೆರವಿಗೆ ಮರು ಚಾಲನೆ?

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹೈಕೋರ್ಟ್‌ ‘ನ್ಯಾಯಾಂಗ ನಿಂದನೆ’ ಅಸ್ತ್ರ ಪ್ರಯೋಗಿಸುವ ಮೊದಲೇ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ರಸ್ತೆ, ಉದ್ಯಾನ ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿರುವ ದೇವಸ್ಥಾನ, ಮಸೀದಿ, ಚರ್ಚ್‌, ಗುರುದ್ವಾರ ಮತ್ತಿತರ ಧಾರ್ಮಿಕ ಕಟ್ಟಡಗಳ ತೆರವು ಪ್ರಕ್ರಿಯೆಗೆ ಮತ್ತೆ ಚಾಲನೆ ನೀಡಿದೆ.

ಸುಪ್ರೀಂ ಕೋರ್ಟ್‌ 2010ರಲ್ಲಿ ನೀಡಿದ್ದ ಆದೇಶದ ಹೊರತಾಗಿಯೂ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವಿಗೆ ಮುಂದಾಗದ ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್‌, ಸ್ವಯಂ ಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್‌) ದಾಖಲಿಸಿತ್ತು.

ಅಷ್ಟೇ ಅಲ್ಲ, ಇದೇ ಜುಲೈ 2 ಮತ್ತು ಆಗಸ್ಟ್‌ 28ರಂದು ನೀಡಿದ್ದ ಮಧ್ಯಂತರ ಆದೇಶದಲ್ಲಿ ಯಥಾಸ್ಥಿತಿ ವರದಿಯನ್ನು ಆಗಸ್ಟ್‌ 30ರ ಒಳಗಾಗಿ ಸಲ್ಲಿಸಬೇಕು. ಇಲ್ಲದಿದ್ದರೆ ಸೆ. 3ರಂದು ನ್ಯಾಯಾಂಗ ನಿಂದನಾ ಪ್ರಕ್ರಿಯೆ ಆರಂಭಿಸುವುದಾಗಿ ಎಚ್ಚರಿಕೆ ನೀಡಿತ್ತು.

ಹೈಕೋರ್ಟ್‌ ಎಚ್ಚರಿಕೆ ನೀಡುತ್ತಿದ್ದಂತೆ, ಬಾಗಲಕೋಟೆ, ಚಿಕ್ಕಬಳ್ಳಾಪುರ, ರಾಯಚೂರು, ಶಿವಮೊಗ್ಗ ಜಿಲ್ಲೆಗಳ ವಿವರಗಳನ್ನು ಹೊರತುಪಡಿಸಿ, ಉಳಿದ 26 ಜಿಲ್ಲೆಗಳ ಮಾಹಿತಿ ಕ್ರೋಡೀಕರಿಸಿ ಸಲ್ಲಿಸಲಾಗಿದೆ. ಈ ಮಾಹಿತಿ ಪ್ರಕಾರ, 151 ತಾಲ್ಲೂಕುಗಳಲ್ಲಿ 4,363 ಅನಧಿಕೃತ ಧಾರ್ಮಿಕ ಕಟ್ಟಡಗಳಿವೆ. ಸುಪ್ರೀಂ ಕೋರ್ಟ್‌ ಆದೇಶದ ಬಳಿಕ 1,706 ಕಟ್ಟಡಗಳನ್ನು ತೆರವುಗೊಳಿಸಲಾಗಿದೆ. 122 ನಿರ್ಮಾಣಗಳನ್ನು ಸ್ಥಳಾಂತರಿ ಸಲಾಗಿದೆ. 483 ಕಟ್ಟಡ ಸಕ್ರಮಗೊಳಿಸಲಾಗಿದೆ ಎಂದು ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಈ ಮಧ್ಯೆ, ತೆರವು ಕಾರ್ಯಾಚರಣೆ ಯಾರು ಮಾಡಬೇಕು ಎಂಬ ಗೊಂದಲ ಸೃಷ್ಟಿಯಾಗಿದೆ. ಹೈಕೋರ್ಟ್‌ ಆದೇಶ
ದಲ್ಲಿ ಗೃಹ ಇಲಾಖೆಯನ್ನು (ಕಾನೂನು ಮತ್ತು ಸುವ್ಯವಸ್ಥೆ) ಪ್ರತಿವಾದಿಯಾಗಿ ಮಾಡದಿರುವುದರಿಂದ ಈ ಇಲಾಖೆ, ಎಲ್ಲ ಜಿಲ್ಲಾಧಿಕಾರಿಗಳಿಂದ ಸಂಗ್ರಹಿಸಿದ್ದ ಮಾಹಿತಿಯನ್ನು ಕಂದಾಯ ಇಲಾಖೆಗೆ (ಮುಜರಾಯಿ) ವರ್ಗಾಯಿಸಿದೆ.

ಆದರೆ, ಕಟ್ಟಡಗಳ ತೆರವು ಕಾರ್ಯಾಚರಣೆ ವಿಷಯ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ್ದು ಎಂದು ಷರಾ ಬರೆದು ಕಡತವನ್ನು ರಾಜ್ಯ ಮುಖ್ಯ ಕಾರ್ಯದರ್ಶಿಗೆ ಮುಜರಾಯಿ ಇಲಾಖೆ ಸಲ್ಲಿಸಿದೆ. ಈ ವಿಷಯ ಕಾನೂನು ಸುವ್ಯವಸ್ಥೆಗೆ ಭಂಗ ತರುವ ವಿಷಯ ಆಗಿರುವುದರಿಂದ ಗೃಹ ಇಲಾಖೆಯೇ ಈ ಕೆಲಸ ನಿಭಾಯಿಸುವಂತೆ ಮುಖ್ಯ ಕಾರ್ಯದರ್ಶಿ ಸೂಚಿಸಿದ್ದಾರೆ ಎಂದು ಮುಜರಾಯಿ ಇಲಾಖೆ ಮೂಲಗಳು ತಿಳಿಸಿವೆ.

2009 ಡಿ. 7ರಂದು ಸುಪ್ರೀಂ ಕೋರ್ಟ್‌ ನೀಡಿದ್ದ ಮಧ್ಯಂತರ ಆದೇಶದ ಅನ್ವಯ, ರಸ್ತೆ, ಉದ್ಯಾನ ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಕೇಂದ್ರಗಳು ತಲೆ ಎತ್ತದಂತೆ ಮತ್ತು 2009 ಡಿ.7ಕ್ಕೂ ಮೊದಲು ನಿರ್ಮಾಣಗೊಂಡಿರುವ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸುವ ಸಂಬಂಧ 2010ರ ಫೆ.17ರಂದು ಗೃಹ ಇಲಾಖೆ ಮಾರ್ಗಸೂಚಿ ಸಿದ್ಧಪಡಿಸಿತ್ತು.

ಈ ಮಾರ್ಗಸೂಚಿ ಅನ್ವಯ, ಪ್ರತಿ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಕ್ರಮ ತೆಗೆದುಕೊಂಡ ಬಗ್ಗೆ ಜಿಲ್ಲಾಧಿಕಾರಿಗಳಿಂದ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತ್ರೈಮಾಸಿಕ ವರದಿ ಪಡೆದು ಹೈಕೋರ್ಟ್‌ಗೆ ಸಲ್ಲಿಸಬೇಕಿತ್ತು. ಆದರೆ ಈ ‍ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತೀ ಹೆಚ್ಚು 1,619 ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ಗುರುತಿಸಲಾಗಿದೆ. ಈ ಪೈಕಿ, 366 ಕಟ್ಟಡಗಳನ್ನು ತೆರವುಗೊಳಿಸಲಾಗಿದೆ. 209 ಕಟ್ಟಡಗಳನ್ನು ಸಕ್ರಮಗೊಳಿಸಲಾಗಿದೆ. 104 ಕಟ್ಟಡಗಳ ತೆರವು ಪ್ರಕ್ರಿಯೆ ವಿಚಾರಣಾ ಹಂತದಲ್ಲಿದೆ ಎಂದು ಜಿಲ್ಲಾಡಳಿತ ಹೇಳಿಕೊಂಡಿದೆ.

ಬೆಳಗಾವಿ ಜಿಲ್ಲೆಯಲ್ಲಿ 204 ಅನಧಿಕೃತ ಧಾರ್ಮಿಕ ಕೇಂದ್ರಗಳಿದ್ದು, ಸಾರ್ವಜನಿಕರ ಪ್ರತಿಭಟನೆ ಮತ್ತು ಕಾನೂನು ಸುವ್ಯವಸ್ಥೆ ಕಾರಣಕ್ಕೆ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ವಿಜಯಪುರ (283) ಮತ್ತು ಗದಗ (242) ಜಿಲ್ಲೆಯಲ್ಲಿ ಗುರುತಿಸಿದ್ದ ಎಲ್ಲ ಕೇಂದ್ರಗಳನ್ನೂ ತೆರವುಗೊಳಿಸಲಾಗಿದೆ ಎಂದು ಆಯಾ ಜಿಲ್ಲಾಡಳಿತ ಮಾಹಿತಿ ನೀಡಿದೆ.

ಧಾರ್ಮಿಕ ಕಟ್ಟಡಗಳ ವಿವರ

4,363: ರಾಜ್ಯದಲ್ಲಿರುವ ಅನಧಿಕೃತ ಧಾರ್ಮಿಕ ಕಟ್ಟಡಗಳು

1,703: ಈವರೆಗೆ ತೆರವು

122: ಈವರೆಗೆ ಸ್ಥಳಾಂತರ

483: ಸಕ್ರಮಗೊಳಿಸಿದ ಕಟ್ಟಡಗಳು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು