ವೈದ್ಯರಿಗೆ ಬೆದರಿಕೆ: ಜಿ.ಪಂ. ಅಧ್ಯಕ್ಷೆ ವಿರುದ್ಧ ಪ್ರಕರಣ ದಾಖಲು

ಸೋಮವಾರ, ಜೂಲೈ 22, 2019
27 °C

ವೈದ್ಯರಿಗೆ ಬೆದರಿಕೆ: ಜಿ.ಪಂ. ಅಧ್ಯಕ್ಷೆ ವಿರುದ್ಧ ಪ್ರಕರಣ ದಾಖಲು

Published:
Updated:
Prajavani

ಮಂಗಳೂರು: ಜಿಲ್ಲೆಯ ಪುತ್ತೂರು ಸರ್ಕಾರಿ ಆಸ್ಪತ್ರೆಯ ಮಕ್ಕಳ ತಜ್ಞೆ ಡಾ. ಅರ್ಚನಾ ಅವರನ್ನು ಸಾರ್ವಜನಿಕವಾಗಿ ನಿಂದಿಸಿ, ಬೆದರಿಕೆ ಒಡ್ಡಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸ್ ದೌರ್ಜನ್ಯಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿಯನ್ನು ಭೇಟಿ ಮಾಡಲು ಜೂನ್‌ 29 ರಂದು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ತೆರಳಿದ್ದರು. ಈ ಸಂದರ್ಭದಲ್ಲಿ ತಾನು ಕರೆದ ತಕ್ಷಣ ವಾರ್ಡ್‌ಗೆ ಬಂದು ಮಾಹಿತಿ ನೀಡಲಿಲ್ಲ ಎಂಬ ಕಾರಣಕ್ಕೆ, ಕರ್ತವ್ಯದಲ್ಲಿದ್ದ ವೈದ್ಯರ ಕೊಠಡಿಗೆ ಹೋಗಿ, ಬೆದರಿಕೆ ಒಡ್ಡಿದ್ದು, ನಿಂದಿಸಿದ್ದಾರೆ. ಇದನ್ನು ಅವರ ಆಪ್ತರ ಮೂಲಕ ವಿಡಿಯೊ ಚಿತ್ರೀಕರಣ ಮಾಡಿಸಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಎಂದು ಡಾ. ಅರ್ಚನಾ ಅವರು ಅಂದು ಸಂಜೆ ಮಹಿಳಾ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಈ ಘಟನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಐಎಂಎ ಮಂಗಳೂರು ಶಾಖೆ ಅಧ್ಯಕ್ಷ ಸಚ್ಚಿದಾನಂದ ರೈ, ‘ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೂಡಲೇ ಕ್ಷಮೆಯಾಚಿಸಬೇಕು. ಡಾ. ಅರ್ಚನಾ ಈಗ ಗರ್ಭಿಣಿಯಾಗಿದ್ದು, ಘಟನೆಯಿಂದ ಸಾಕಷ್ಟು ನೊಂದಿದ್ದಾರೆ. ತಮ್ಮ ಕೆಲಸವನ್ನು ಬಿಡುವ ನಿರ್ಧಾರಕ್ಕೆ ಬಂದಿದ್ದಾರೆ’ ಎಂದು ತಿಳಿಸಿದ್ದಾರೆ.

ಈ ಘಟನೆ ಮಂಗಳವಾರ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲೂ ಪ್ರತಿಧ್ವನಿಸಿದ್ದು, ಕ್ರಿಮಿನಲ್‌ ಪ್ರಕರಣ ಎದುರಿಸುತ್ತಿರುವ ಅಧ್ಯಕ್ಷರು ಜಿಲ್ಲಾ ಪಂಚಾಯಿತಿ ಸಭೆಯ ಅಧ್ಯಕ್ಷತೆ ವಹಿಸಬಹುದೇ ಎಂದು ಪ್ರತಿಪಕ್ಷಗಳ ಸದಸ್ಯರು ಪ್ರಶ್ನಿಸಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !