ಶನಿವಾರ, ಏಪ್ರಿಲ್ 4, 2020
19 °C

ಶೃಂಗೇರಿ: ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಇಬ್ಬರಿಗೆ ಮರಣದಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಶೃಂಗೇರಿ ತಾಲ್ಲೂಕಿನ ಮೆಣಸೆ ಪಕ್ಕದ ಹೊಸೆಕೆರೆ ಸೈಟಿನ ಪ್ರದೀಪ (32) ಮತ್ತು ಸಂತೋಷ (26) ಅವರಿಗೆ ನಗರದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಶನಿವಾರ ಗಲ್ಲು ಶಿಕ್ಷೆ ವಿಧಿಸಿದೆ.

ನ್ಯಾಯಾಧೀಶರಾದ ಉಮೇಶ್‌ ಎಂ.ಅಡಿಗ ಈ ಆದೇಶ ನೀಡಿದ್ದಾರೆ. ಕೊಲೆ ಕೃತ್ಯಕ್ಕೆ ಗಲ್ಲು, ಸಾಮೂಹಿಕ ಅತ್ಯಾಚಾರ ಎಸಗಿದ್ದಕ್ಕೆ 25 ವರ್ಷಗಳ ಕಠಿಣ ಶಿಕ್ಷೆ ಮತ್ತು ತಲಾ ₹ 25,000 ದಂಡ, ಸಾಕ್ಷ್ಯ ನಾಶಪಡಿಸಿದ್ದಕ್ಕೆ ಏಳು ವರ್ಷ ಕಠಿಣ ಶಿಕ್ಷೆ ಮತ್ತು ತಲಾ ₹ 5,000 ದಂಡ, ವಿದ್ಯಾರ್ಥಿನಿಯ ಆಭರಣ ಕಳವಿಗೆ ಆರು ತಿಂಗಳು ಕಠಿಣ ಶಿಕ್ಷೆ, ತಲಾ ₹ 1,000 ದಂಡ ವಿಧಿಸಲಾಗಿದೆ.

ಏನಿದು ಪ್ರಕರಣ?: 2016ರ ಫೆಬ್ರುವರಿ 16ರಂದು ಪ್ರಕರಣ ನಡೆದಿತ್ತು. ಬಿ.ಕಾಂ ವಿದ್ಯಾರ್ಥಿನಿ (18) ಕಾಲೇಜು ಮುಗಿಸಿಕೊಂಡು ಮಧ್ಯಾಹ್ನ 1.30ರ ಹೊತ್ತಿನಲ್ಲಿ ಊರಿಗೆ ಕಾಲುದಾರಿಯಲ್ಲಿ ಸಾಗುವಾಗ ಪ್ರದೀಪ ಮತ್ತು ಸಂತೋಷ ಹೊತ್ತೊಯ್ದು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದರು. ನಂತರ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದರು. ಶವವನ್ನು ಸಮೀಪದ ಪಾಳು ಬಾವಿಗೆ ಎಸೆದಿದ್ದರು. ಆಭರಣಗಳನ್ನು ಕದ್ದೊಯ್ದಿದ್ದರು.

ಸಂಜೆಯಾದರೂ ಮಗಳು ಮನೆಗೆ ಬಾರದಿದ್ದರಿಂದ ಕುಟುಂಬದವರು ಹುಡುಕಾಡಿದ್ದರು. ಪಾಳು ಬಾವಿಯಲ್ಲಿ ಶವ ಪತ್ತೆಯಾಗಿತ್ತು. ವಿದ್ಯಾರ್ಥಿನಿಯ ತಂದೆ ದೂರು ದಾಖಲಿಸಿದ್ದರು.

‘ಜಿಲ್ಲೆಯ ಐತಿಹಾಸಿಕ ತೀರ್ಪು’
ಪಬ್ಲಿಕ್‌ ಪ್ರಾಸಿಕ್ಯುಟರ್‌ ವಿ.ಜಿ. ಯಳಗೇರಿ ಮಾತನಾಡಿ, ‘ಕೋರ್ಟ್‌, ಜಿಲ್ಲೆಯಲ್ಲಿ ಐತಿಹಾಸಿಕ ತೀರ್ಪು ನೀಡಿದೆ. ‘ನಿರ್ಭಯಾ’ ತೀರ್ಪು ಸಹಿತ ಕೋರ್ಟ್‌ಗಳು ನೀಡಿರುವ ತೀರ್ಪುಗಳನ್ನು ಪ್ರಸ್ತಾಪಿಸಲಾಗಿತ್ತು’ ಎಂದರು.

‘ಸಮ್ಮತಿಗೆ ದಾಖಲೆಗಳನ್ನು ಹೈಕೋರ್ಟ್‌ಗೆ ರವಾನಿಸುತ್ತಾರೆ. ಅಲ್ಲಿ ದೃಢೀಕರಣವಾದ ನಂತರ ಶಿಕ್ಷೆ ಜಾರಿಯಾಗುತ್ತದೆ’ ಎಂದು ಪ್ರತಿಕ್ರಿಯಿಸಿದರು.

*
ನಿರ್ಭಯಾ ತೀರ್ಪಿನ ನಂತರ ಈ ಪ್ರಕರಣದಲ್ಲೂ ಅದೇ ತೀರ್ಪು ಬರಬಹುದು ಅನಿಸಿತ್ತು. ಸಮಾಧಾನ ತಂದಿದೆ. ಸಮಾಜದಲ್ಲಿ ಇಂಥ ಪ್ರಕರಣಗಳು ಮರುಕಳಿಸಬಾರದು.
-ಮೃತ ವಿದ್ಯಾರ್ಥಿನಿಯ ತಂದೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು