ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಪೆಯಿಂದ ನಾಪತ್ತೆಯಾಗಿದ್ದ ಮೀನುಗಾರಿಕಾ ದೋಣಿಯ ಅವಶೇಷ ಪತ್ತೆ

ಮಾಲ್ವಾನ್ ನಿಂದ 33 ಕಿ.ಮೀ ದೂರದಲ್ಲಿದೆ: ನೌಕಾಪಡೆ ವಕ್ತಾರರಿಂದ ಟ್ವೀಟ್
Last Updated 2 ಮೇ 2019, 19:07 IST
ಅಕ್ಷರ ಗಾತ್ರ

ಕಾರವಾರ: ಉಡುಪಿಯ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ಹೊರಟ 'ಸುವರ್ಣ ತ್ರಿಭುಜ' ದೋಣಿಯ ಅವಶೇಷಗಳು ಮಹಾರಾಷ್ಟ್ರದ ಮಾಲ್ವಾನ್ ಬಳಿ ಸಮುದ್ರದಲ್ಲಿ ಪತ್ತೆಯಾಗಿವೆ. ನೌಕಾಪಡೆಯ 'ಐಎನ್ಎಸ್ ನಿರೀಕ್ಷಕ್' ಹಡಗಿನ ಸಿಬ್ಬಂದಿ ಹಾಗೂ ಮುಳುಗು ತಜ್ಞರು ಇದನ್ನು ಬುಧವಾರ ಪತ್ತೆ ಹಚ್ಚಿದ್ದಾರೆ ಎಂದು ನೌಕಾಪಡೆಯ ವಕ್ತಾರರು ಟ್ವೀಟ್ ಮಾಡಿದ್ದಾರೆ.

ಡಿಸೆಂಬರ್ 15ರಂದು ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ದೋಣಿಯಲ್ಲಿ ಮಲ್ಪೆಯ ಇಬ್ಬರು ಮತ್ತು ಉತ್ತರ ಕನ್ನಡ ಜಿಲ್ಲೆಯ ಐವರು ಮೀನುಗಾರರಿದ್ದರು. ಮಹಾರಾಷ್ಟ್ರದ ಸಿಂಧುದುರ್ಗಾ ಜಿಲ್ಲೆಯ ತೀರದ ಸಮೀಪದಿಂದ ದೋಣಿಯು ಮೀನುಗಾರರ ಸಹಿತ ನಿಗೂಢ ರೀತಿಯಲ್ಲಿ ಕಾಣೆಯಾಗಿತ್ತು. ಪೊಲೀಸ್‌, ಕರಾವಳಿ ಕಾವಲು ಪಡೆ ಮತ್ತು ನೌಕಾಸೇನೆಯಿಂದ ಸಾಕಷ್ಟು ಶೋಧನೆ ನಡೆದರೂ ಪತ್ತೆಯಾಗಿರಲಿಲ್ಲ. ಕೊನೆಗೆ ಸುವರ್ಣ ತ್ರಿಭುಜ ದೋಣಿ ಯಾವುದೋ ಅವಘಡಕ್ಕೆ ಈಡಾಗಿ ಸಮುದ್ರದಲ್ಲಿ ಮುಳುಗಿರಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಸುವರ್ಣ ತ್ರಿಭುಜ ದೋಣಿಯಲ್ಲಿದ್ದ ಬುಟ್ಟಿಗಳು ಮಹಾರಾಷ್ಟ್ರದ ಮಾಲ್ವಾನ್ ಬಂದರಿನ ದಡದ ಬಳಿ ದೊರೆತಿದ್ದವು.

‘ಐಎನ್‌ಎಸ್‌ ನಿರೀಕ್ಷಕ್‘ ಎಂಬ ಯುದ್ಧನೌಕೆಯ ಸಹಾಯದಿಂದ ಸೋನಾರ್‌ ತಂತ್ರಜ್ಞಾನ ಬಳಸಿ ಸಿಂಧುದುರ್ಗಾ ತೀರದಲ್ಲಿ ಡಿಸೆಂಬರ್ ತಿಂಗಳಿನಿಂದ ಸಾಗರತಳದಲ್ಲಿ ಶೋಧನೆ ನಡೆಸಲಾಗುತ್ತಿತ್ತು. ಈ ಹಿಂದೆ, ಸಮುದ್ರದಾಳದಲ್ಲಿ ದೋಣಿಯ ಕೆಲವು ಅವಶೇಷಗಳು ಪತ್ತೆಯಾಗಿದ್ದವು. ಸಾಗರದಾಳದಲ್ಲಿ ಸುಮಾರು 60-70 ಮೀಟರ್‌ ಕೆಳಗೆ ದೋಣಿಯ ವಿವಿಧ ಬಗೆಯ ಚಿಕ್ಕ- ದೊಡ್ಡ ಅವಶೇಷಗಳು ಕಂಡುಬಂದಿ‌ದ್ದವು. ಅದರಲ್ಲಿ ಒಂದು ಸುಮಾರು 75-78 ಅಡಿ ಉದ್ದವಿತ್ತು. ಅದು ಮೀನುಗಾರಿಕಾ ದೋಣಿಯದ್ದು ಇರಬಹುದು ಎಂಬ ನಿರ್ಧಾರಕ್ಕೆ ತಜ್ಞರು ಈ ಹಿಂದೆಯೇ ಬಂದಿದ್ದರು.

ಮುಳುಗು ತಜ್ಞರಿಂದ ದೃಢೀಕರಣ: ಮಹಾರಾಷ್ಟ್ರದ ಮಾಲ್ವಾನ್ ಕಡಲ ತೀರದಿಂದ 33 ಕಿ.ಮೀ. ದೂರದಲ್ಲಿ ಸುಮಾರು 60 ಮೀಟರ್ ಆಳದಲ್ಲಿ ಅವಶೇಷಗಳು ಪತ್ತೆಯಾಗಿವೆ. ಅವುಗಳು ಸುವರ್ಣ ತ್ರಿಭುಜದ್ದೇ ಎಂದು ಮುಳುಗು ತಜ್ಞರು ಖಚಿತಪಡಿಸಿದ್ದಾಗಿ ನೌಕಾಪಡೆಯ ವಕ್ತಾರರು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಕುಟುಂಬದವರನ್ನು ಕರೆದೊಯ್ದಿದ್ದರು: ಪ್ರಕರಣಕ್ಕೆ ಸಂಬಂಧಿಸಿ ನಾಪತ್ತೆಯಾದ ಮೀನುಗಾರರಾದ ಚಂದ್ರಶೇಖರ್ ಮತ್ತು ದಾಮೋದರ್ ಅವರ ಮನೆಯವರನ್ನು, ಘಟನೆ ನಡೆದಿದೆ ಎನ್ನಲಾದ ಸಮುದ್ರದ ಪ್ರದೇಶಕ್ಕೆ ನೌಕಾಪಡೆಯ ಅಧಿಕಾರಿಗಳು ಇತ್ತೀಚೆಗೆ ಕರೆದುಕೊಂಡು ಹೋಗಿದ್ದರು.

ಕಾಣೆಯಾದ ಮಲ್ಪೆಯ ಮೀನುಗಾರರ ಕುಟುಂಬದವರ ಉಪಸ್ಥಿತಿಯಲ್ಲಿ ಶೋಧನಾ ಕಾರ್ಯ ನಡೆಸಲಾಗುವುದು ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್ ಕೂಡ ಈ ಹಿಂದೆ ಭರವಸೆ ನೀಡಿದ್ದರು.

ಇತ್ತೀಚೆಗೆ ಮಲ್ಪೆ ಮೀನುಗಾರರ ಮನೆಗೆ ಅವರು ಭೇಟಿ ನೀಡಿದ್ದಾಗ, 'ನಮ್ಮನ್ನೂ ಹುಡುಕಾಟದ ಕಾರ್ಯಾಚರಣೆಯಲ್ಲಿ ಸೇರಿಸಿಕೊಳ್ಳಬೇಕು' ಎಂದು ಮನೆಯವರು ಪಟ್ಟು ಹಿಡಿದಿದ್ದರು.

'ಮೀನುಗಾರರು ನಾಪತ್ತೆಯಾದ ಸ್ಥಳವನ್ನು ನಾವು ನೋಡಬೇಕು' ಎಂದು ಮನವಿ ಮಾಡಿದ್ದರು. ಅದರಂತೆ ಭಾರತೀಯ ನೌಕಾಪಡೆ ಅಧಿಕಾರಿಗಳು ಕರೆದುಕೊಂಡು ಹೋಗಿದ್ದರು ಎಂದು ಮೂಲಗಳು ತಿಳಿಸಿವೆ.

ತಿಂಗಳುಗಳೇ ಕಳೆದರೂ ಮೀನುಗಾರರ ಸುಳಿವು ಲಭಿಸದ ಬಗ್ಗೆ ಉಭಯ ಜಿಲ್ಲೆಗಳ ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದ್ದರು. ಬೃಹತ್ ಪ್ರತಿಭಟನೆಯನ್ನೂ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT