ಗುರುವಾರ , ಡಿಸೆಂಬರ್ 1, 2022
24 °C
ಭೂ ಸುಧಾರಣಾ ಕಾಯ್ದೆ ತಿದ್ದುಪಡಿ: ಸ್ವರ್ಣವಲ್ಲಿ ಮಠದಲ್ಲಿ ಸಮಾಲೋಚನಾ ಸಭೆ

ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯಿಂದ ಪಶ್ಚಿಮ ಘಟ್ಟವನ್ನು ಹೊರಗಿಡಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಪರಿಸರದ ದೃಷ್ಟಿಯಿಂದ ಅತ್ಯಂತ ಮಹತ್ವದ ಪಾತ್ರ ಹೊಂದಿರುವ ಪಶ್ಚಿಮ ಘಟ್ಟ ಹಾಗೂ ಕರಾವಳಿ ಪ್ರದೇಶಗಳನ್ನು, ನೀತಿ ಆಯೋಗದ ಗುಡ್ಡಗಾಡು ಪ್ರದೇಶಗಳ ಅಧ್ಯಯನದ ಹಿನ್ನೆಲೆಯಲ್ಲಿ ಉದ್ದೇಶಿತ ತಿದ್ದುಪಡಿಯ ವ್ಯಾಪ್ತಿಯಿಂದ ಹೊರಗೆ ಇಡಬೇಕು ಎಂದು ತಾಲ್ಲೂಕಿನ ಸೋಂದಾ ಸ್ವರ್ಣವಲ್ಲಿ ಮಠದಲ್ಲಿ ಶನಿವಾರ ಸಂಜೆ ನಡೆದ ಸಮಾಲೋಚನಾ ಸಭೆ ಒತ್ತಾಯಿಸಿದೆ.

ಕರ್ನಾಟಕ ಸರ್ಕಾರ ಉದ್ದೇಶಿಸಿರುವ ಭೂ ಸುಧಾರಣಾ ಕಾಯ್ದೆ ಕುರಿತು ಚರ್ಚಿಸಲು ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕರೆದಿದ್ದ ಸಭೆಯಲ್ಲಿ ವಿವಿಧ ನಿರ್ಣಯ ಸ್ವೀಕರಿಸಲಾಯಿತು. ಪ್ರಾದೇಶಿಕ ಸೂಕ್ಷ್ಮತೆಗಳನ್ನು ಆಧರಿಸಿರುವ ಭೂ-ಬಳಕೆಯ ನೀತಿಯನ್ನು ಸಿದ್ಧಪಡಿಸಿ, ಆ ನೀತಿಯ ಹಿನ್ನೆಲೆಯಲ್ಲಿ ಭೂಸುಧಾರಣಾ ತಿದ್ದುಪಡಿ ಮಾಡಬೇಕು. ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಪರಭಾರೆ ಮಾಡುವುದನ್ನು ತಪ್ಪಿಸಲು ತಿದ್ದುಪಡಿಯಲ್ಲಿ 30 ವರ್ಷ ಕೃಷಿ ಚಟುವಟಿಕೆಯನ್ನೇ ಮಾಡಬೇಕು ಎನ್ನುವ ಷರತ್ತನ್ನು ವಿಧಿಸುವುದು ಅವಶ್ಯ ಹಾಗೂ 30 ವರ್ಷ ಅದನ್ನು ಪರಭಾರೆ ಮಾಡಬಾರದು ಎನ್ನುವ ನಿರ್ಬಂಧವೂ ಅಗತ್ಯ. ಅಲ್ಲದೇ ಈಗ ಇರುವ ಕೃಷಿ ಜಮೀನಿನ ಗರಿಷ್ಠ ಮಿತಿಯನ್ನು ಹೆಚ್ಚಿಸಬಾರದು ಎಂದು ಸಭೆ ಸರ್ಕಾರವನ್ನು ಆಗ್ರಹಿಸಿದೆ.

‘ಭೂಮಿಯಿಂದ ಬರುವ ಆದಾಯ ಹೆಚ್ಚಿಸಬೇಕು. ಕೊರೊನಾ ಕಾರಣಕ್ಕೆ ಆಗಿರುವ ಆಘಾತದಿಂದ ಚೇತರಿಸಿಕೊಳ್ಳುವ ಸದುದ್ದೇಶದಿಂದ ಸರ್ಕಾರ ಕಾಯ್ದೆ ತಿದ್ದುಪಡಿಗೆ ಮುಂದಾಗಿರಬಹುದು. ಆದರೆ, ತರಾತುರಿಯಲ್ಲಿ ಸುಗ್ರೀವಾಜ್ಞೆ ಹೊರಡಿಸುವ ಬದಲು ಸದನದಲ್ಲಿ ಚರ್ಚಿಸಿ, ಸರ್ವಸಮ್ಮತ ನಿರ್ಣಯ ಕೈಗೊಳ್ಳುವುದು ಉಚಿತ. ತಿದ್ದುಪಡಿಯಿಂದ ಸಣ್ಣ ಹಿಡುವಳಿಯೂ ಕಾಲಕ್ರಮೇಣ ಕೃಷಿಕರಿಂದ ಕೈತಪ್ಪುವ ಸಾಧ್ಯತೆಯಿದೆ. ರೈತರ ಹಿತಾಸಕ್ತಿ ಗಮನದಲ್ಲಿಟ್ಟು ತಿದ್ದುಪಡಿ ಮಾಡಬೇಕು. ನೀರಾವರಿ ಜಮೀನುಗಳನ್ನು ಈ ತಿದ್ದುಪಡಿಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಅದೇ ರೀತಿ ಪಶ್ಚಿಮ ಘಟ್ಟ ಪ್ರದೇಶವನ್ನೂ ಹೊರಗಿಟ್ಟರೆ ಒಳಿತು’ ಎಂದು ಶ್ರೀಗಳು ಅಭಿಪ್ರಾಯಪಟ್ಟರು.

ಕಾನೂನಾತ್ಮಕ ಆಂಶಗಳನ್ನು ಪ್ರಸ್ತಾಪಿಸಿದ ವಕೀಲ ಎ.ಆರ್.ಹೂಡ್ಲಮನೆ ಅವರು, ‘ಉದ್ದೇಶಿತ ತಿದ್ದುಪಡಿಯು, ಕೃಷಿಕರಲ್ಲದ, ಆದರೆ ಕೃಷಿಯಲ್ಲಿ ಆಸಕ್ತರಾದವರಿಗೆ ಜಮೀನು ಖರೀದಿಸಲು ಅವಕಾಶ ಒದಗಿಸಬೇಕು ಮತ್ತು ಭೂವ್ಯವಹಾರದಲ್ಲಿ ಆಗುತ್ತಿರುವ ಅವ್ಯವಹಾರಗಳ ನಿವಾರಣೆ ಮಾಡಬೇಕು ಎನ್ನುವುದಾಗಿದೆ. ಕೃಷಿಕರಲ್ಲದವರಿಗೆ ಕೃಷಿ ಭೂಮಿ ಖರೀದಿಸಲು ಅವಕಾಶ ನೀಡಿದರೆ ರಿಯಲ್ ಎಸ್ಟೇಟ್ ಎಜೆಂಟರು ಕೃಷಿಭೂಮಿಯನ್ನು ಖರೀದಿಸಬಹುದು. ಉದ್ದೇಶಿತ ತಿದ್ದುಪಡಿಯಿಂದ ಅನಿವಾರ್ಯವಾಗಿ ಕೃಷಿ ಭೂಮಿ ಮಾರುವವರಿಗೆ ಹೆಚ್ಚಿನ ಬೆಲೆ ದೊರಕುತ್ತದೆ. ಉತ್ತರ ಕನ್ನಡದಲ್ಲಿ ಅರಣ್ಯ ಭೂಮಿ ಹೆಚ್ಚು ಇರುವುದರಿಂದ 54 ಎಕರೆಯ ಬದಲು ಕಡಿಮೆ ಮಿತಿಯನ್ನು ವಿಧಿಸಬಹುದು’ ಎಂದರು.

ತಿದ್ದುಪಡಿ ಕುರಿತು ಮಾತನಾಡಿದ ಡಾ.ಕೇಶವ ಕೊರ್ಸೆ ಅವರು, ‘ಉತ್ತರ ಕನ್ನಡದಲ್ಲಿ ಖುಷ್ಕಿ ಜಮೀನು ಕೂಡ ಪರಿಸರದ ದೃಷ್ಟಿಯಿಂದ ಅತ್ಯಂತ ಮಹತ್ವದ ಪಾತ್ರ ಹೊಂದಿರಬಹುದು. ನೀತಿ ಆಯೋಗದ ಅಧ್ಯಯನದ ಹಿನ್ನೆಲೆಯಲ್ಲಿ ಗುಡ್ಡಗಾಡು ಪ್ರದೇಶವನ್ನು ಈ ತಿದ್ದುಪಡಿಯ ವ್ಯಾಪ್ತಿಯಿಂದ ಹೊರಗೆ ಇಡಬೇಕು. ರಾಜ್ಯಕ್ಕೆ ಅಗತ್ಯವಿರುವ ಭೂಬಳಕೆ ನೀತಿಯ ಹಿನ್ನೆಲೆಯಲ್ಲಿ ತಿದ್ದುಪಡಿ ಆದರೆ ಸೂಕ್ತ’ ಎಂದರು. 

ಈಶಣ್ಣ ನೀರ್ನಳ್ಳಿ, ಗುರುಪಾದ ಹೆಗಡೆ ಬೊಮ್ಮನಳ್ಳಿ, ನಾಗರಾಜ ಭಟ್ಟ ಮಾತನಾಡಿದರು. ಯಲ್ಲಾಪುರ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಚಂದ್ರಕಲಾ ಭಟ್ಟ, ಸದಸ್ಯರಾದ ರಾಧಾ ಹೆಗಡೆ, ನಾಗರಾಜ ಕವಡಿಕೆರೆ ಇದ್ದರು. ವಿ.ಎನ್.ಹೆಗಡೆ ಸ್ವಾಗತಿಸಿದರು. ನಾರಾಯಣ ಗಡೀಕೈ ನಿರ್ಣಯ ಮಂಡಿಸಿದರು. ಗಣಪತಿ ಬಿಸಲಕೊಪ್ಪ ನಿರೂಪಿಸಿದರು.
 

ಕೃಷಿ, ಅರಣ್ಯ ಪ್ರದೇಶದಲ್ಲಿ ಕೃಷಿಯೇತರ ಚಟುವಟಿಕೆ ಹೆಚ್ಚಾದಾಗ ಭೂಕುಸಿತ, ನೆರೆಹಾವಳಿಯಂತಹ ನೈಸರ್ಗಿಕ ವಿಕೋಪಗಳು ಉಂಟಾಗುತ್ತವೆ. ‌ತಿದ್ದುಪಡಿಯಲ್ಲಿ ನಿರ್ಬಂಧ ಅಳವಡಿಸಬೇಕು ಎನ್ನುವುದು ಮಲೆನಾಡಿನ ಕೂಗು ಆಗಬೇಕು

–ಅನಂತ ಅಶೀಸರ, ಜೀವವೈವಿಧ್ಯ ಮಂಡಳಿ ಅಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು