ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರಾಟವಾಯಿತು ರೈತ ಮಹಿಳೆ ಈರುಳ್ಳಿ: ಚೀಲಕ್ಕೆ ₹ 600 ಬೆಲೆ ನಿಗದಿ

ಬ್ರಹ್ಮಾವರದ ವ್ಯಾಪಾರಿಗಳಿಂದ ಖರೀದಿ
Last Updated 29 ಏಪ್ರಿಲ್ 2020, 19:59 IST
ಅಕ್ಷರ ಗಾತ್ರ

ಚಿತ್ರದುರ್ಗ: ಹಿರಿಯೂರು ತಾಲ್ಲೂಕಿನ ಕಾಟನಾಯಕನಹಳ್ಳಿಯ ರೈತ ಮಹಿಳೆ ವಸಂತಕುಮಾರಿ ಬೆಳೆದ ಈರುಳ್ಳಿ ಬುಧವಾರ ಮಾರಾಟವಾಯಿತು. ಉಡುಪಿ ಜಿಲ್ಲೆಯ ಬ್ರಹ್ಮಾವರದ ವ್ಯಾಪಾರಿಗಳು ಈರುಳ್ಳಿ ಖರೀದಿಸಿ ಮಹಿಳೆ ಸಂಕಷ್ಟವನ್ನು ಪರಿಹರಿಸಿದರು.

ತೋಟಗಾರಿಕೆ ಇಲಾಖೆ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಈರುಳ್ಳಿ ಬೆಲೆ ನಿಗದಿಪಡಿಸಲಾಯಿತು. ಮಧ್ಯಮ ಗುಣಮಟ್ಟದ ಈರುಳ್ಳಿಯ 60 ಕೆ.ಜಿ ತೂಕದ ಚೀಲಕ್ಕೆ ₹ 600ದರ ನೀಡಲು ವ್ಯಾಪಾರಿಗಳು ಒಪ್ಪಿದರು. ಖರೀದಿದಾರರೇ ಸಾಗಣೆ ವೆಚ್ಚ ಭರಿಸಿದ್ದರಿಂದ ವಸಂತಕುಮಾರಿ ಮೊಗದಲ್ಲಿ ಮಂದಹಾಸ ಮೂಡಿದೆ.

ಐದು ಎಕರೆಯಲ್ಲಿ ಬೆಳೆದ ಈರುಳ್ಳಿ ಕೀಳುವ ಮೊದಲೇ ಲಾಕ್‌ಡೌನ್‌ ಘೋಷಣೆಯಾಗಿದ್ದರಿಂದ ಮಾರುಕಟ್ಟೆ ಸಮಸ್ಯೆ ಎದುರಾಗಿತ್ತು. ಮಾರುಕಟ್ಟೆಗೆ ಸಾಗಿಸಲು ಹಣವಿಲ್ಲದೇ ಕುಟುಂಬ ಕಂಗಾಲಾಗಿತ್ತು. ಈ ಸಂಕಷ್ಟದ ವಿಡಿಯೊವನ್ನು ಮಹಿಳೆ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಖುದ್ದು ಕರೆ ಮಾಡಿ ಈರುಳ್ಳಿಗೆ ಮಾರುಕಟ್ಟೆ ಒದಗಿಸುವ ಆಶ್ವಾಸನೆ ನೀಡಿದ್ದರು.

‘ನಿರೀಕ್ಷಿತ ಬೆಲೆ ಸಿಗದೇ ಇದ್ದರೂ ನ್ಯಾಯಯುತ ದರಕ್ಕೆ ಮಾರಾಟವಾಗುತ್ತಿದೆ. ಬೆಳೆಗೆ ತಗುಲಿದ ವೆಚ್ಚವಾದರೂ ಸಿಕ್ಕರೆ ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ಮಾರಾಟಕ್ಕೆ ಒಪ್ಪಿಕೊಂಡಿದ್ದೇವೆ’ ಎಂದರು ವಸಂತಕುಮಾರಿ.

180 ಚೀಲ ಈರುಳ್ಳಿಗೆ ₹ 1.08 ಲಕ್ಷ ಆದಾಯ ಸಿಕ್ಕಿತು. ಬ್ರಹ್ಮಾವರದ ಸುರೇಶ ನಾಯ್ಕ ಹಾಗೂ ಚೈತನ್ಯ ಎಂಬುವರು ಈರುಳ್ಳಿ ಖರೀದಿಸಿದರು. ಇದೇ ಗ್ರಾಮದಲ್ಲಿರುವ 50ಕ್ಕೂ ಹೆಚ್ಚು ರೈತರ 2,500 ಚೀಲ ಈರುಳ್ಳಿಯನ್ನು ಖರೀದಿಸಲು ಕೋಲಾರದ ವ್ಯಾಪಾರಿಗಳು ಮುಂದೆ ಬಂದಿದ್ದಾರೆ.

ಕೊಳೆಯುತ್ತಿದೆ ಈರುಳ್ಳಿ
ಮುಂಗಾರು ಹಂಗಾಮು ಈರುಳ್ಳಿಗೆ ಬಂಪರ್‌ ಬೆಲೆ ಸಿಕ್ಕಿದ್ದರಿಂದ ಬೇಸಿಗೆ ಹಂಗಾಮಿನಲ್ಲಿ ಅತಿ ಹೆಚ್ಚು ರೈತರು ಈರುಳ್ಳಿ ಬೆಳೆದಿದ್ದಾರೆ. ರೈತರ ಕೈಸೇರುವ ಮೊದಲೇ ಲಾಕ್‌ಡೌನ್‌ ಘೋಷಣೆಯಾಗಿದ್ದರಿಂದ ಬಹುಪಾಲು ಈರುಳ್ಳಿ ರೈತರ ಜಮೀನು ಹಾಗೂ ಮನೆಯಲ್ಲಿ ಕೊಳೆಯುತ್ತಿದೆ.

ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಡಾ. ಸವಿತಾ ಅವರ ಪ್ರಕಾರ ಚಿತ್ರದುರ್ಗ ಜಿಲ್ಲೆಯೊಂದರಲ್ಲೇ 3,202 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಯಾಗಿತ್ತು. 64 ಸಾವಿರ ಮೆಟ್ರಿಕ್‌ ಟನ್‌ ಈರುಳ್ಳಿ ಬೆಳೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT