ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಗಳು ತಾಳೆಯಾಗದೆ ಗೊಂದಲ: ಲೆಕ್ಕಾಚಾರ ಸರಿ ಇದೆ ಎಂದ ಚುನಾವಣಾ ಆಯೋಗ

22 ಸಾವಿರ ಮತಗಳ ವ್ಯತ್ಯಾಸ ಎಂದು ಹೇಳಿದ್ದ ಆಯೋಗ
Last Updated 1 ಜೂನ್ 2019, 20:46 IST
ಅಕ್ಷರ ಗಾತ್ರ

ಬೆಂಗಳೂರು: ಈಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಚಲಾವಣೆಯಾದ ಮತ ಹಾಗೂ ಎಣಿಕೆಯಾದ ಮತಗಳು ತಾಳೆಯಾಗದೆ ಇದ್ದ ಗೊಂದಲ ಮುಂದುವರಿದಿದೆ. ಆದರೆ, ಲೆಕ್ಕಾಚಾರ ಸರಿ ಇದೆ ಎಂದು ಚುನಾವಣಾ ಆಯೋಗ ಸಮರ್ಥಿಸಿಕೊಂಡಿದೆ.

ಮತ ಎಣಿಕೆಯ ಎರಡು ದಿನದ ಮೊದಲು ಅಂದರೆ ಮೇ 21ರಂದು ಮುಖ್ಯ ಚುನಾವಣಾ ಅಧಿಕಾರಿ ಸಂಜೀವ್‌ ಕುಮಾರ್‌ ಅವರು ಮತ ಚಲಾವಣೆಯಾದ ಲೆಕ್ಕಾಚಾರ ನೀಡಿದ್ದರು. ಆದರೆ ಅವರು ನೀಡಿದ ಲೆಕ್ಕ ಚಲಾವಣೆಯಾದ ಮತಗಳಿಗೆ ಹೋಲಿಸಿದಾಗ ತಾಳೆಯಾಗದೆ ಇರುವುದು ಗೊತ್ತಾಗಿತ್ತು.

ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಪುತ್ರನಿಖಿಲ್‌ ಕುಮಾರಸ್ವಾಮಿ ಸ್ಪರ್ಧಿಸಿದ್ದ ಮಂಡ್ಯ ಕ್ಷೇತ್ರದಲ್ಲಿ ನಿಜವಾಗಿಯೂ ಚಲಾವಣೆಯಾದ ಮತಕ್ಕಿಂತ 3,459 ಮತಗಳು ಎಣಿಕೆ ವೇಳೆ ಹೆಚ್ಚಾಗಿದ್ದುದು ಕಂಡುಬಂದಿತ್ತು. ರಾಯಚೂರಿನಲ್ಲಿ 5,721 ಮತಗಳು ಹೆಚ್ಚುವರಿಮತಗಳೆಂದು ದಾಖಲಾಗಿತ್ತು. ಬೆಳಗಾವಿ (4,208), ಶಿವಮೊಗ್ಗ (2,286) ಮತ್ತು ಧಾರವಾಡಗಳಲ್ಲಿ (2,242) ಸಹ ಮತಗಳು ತಾಳೆಯಾಗಿರಲಿಲ್ಲ.

‘ನಮ್ಮ ಲೆಕ್ಕಾಚಾರ ಸಮರ್ಪಕವಾಗಿದೆ, ಈಗ ಎಲ್ಲವೂ ಸರಿಹೋಗಿದೆ. ಅಂತಹ ಪ್ರಮಾದ ನಡೆದಿಲ್ಲ’ ಎಂದು ಚುನಾವಣಾ ಆಯೋಗದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಪ್ರತಿಪಾದಿಸಿದ್ದಾರೆ.

28 ಲೋಕಸಭಾ ಕ್ಷೇತ್ರಗಳಲ್ಲಿತಾಳೆಯಾಗದ ಮತಗಳ ಸಂಖ್ಯೆ 22 ಸಾವಿರಕ್ಕಿಂತ ಸ್ವಲ್ಪ ಅಧಿಕ ಇತ್ತು. ಆದರೆ ವಿದ್ಯುನ್ಮಾನ ಮತಯಂತ್ರಗಳಲ್ಲಿ (ಇವಿಎಂ) ಚಲಾವಣೆಯಾದ ಮತಗಳು ಮತ್ತು ಎಣಿಕೆ ಮಾಡಿದ ಮತಗಳ ಸಂಖ್ಯೆಯಲ್ಲಿ ಯಾವುದೇ ವ್ಯತ್ಯಾಸವೂ ಇಲ್ಲ ಎಂಬುದು ಆಯೋಗದ ವಾದ.

‘ಅಧಿಕಾರಿಗಳು ಸರಿಯಾದ ಲೆಕ್ಕಾಚಾರ ನೀಡುವುದಕ್ಕೆ ಮೊದಲಾಗಿ ದಾಖಲಾದ ಮಾಹಿತಿ ಅದಾಗಿತ್ತು. ಶನಿವಾರ ನಿಜವಾದ ಅಂಕಿ ಅಂಶವನ್ನು ನೀಡಲಾಗಿದ್ದು, ಇದೀಗ ಲೆಕ್ಕಾಚಾರವೆಲ್ಲವೂ ಸರಿಯಾಗಿಯೇ ಇದೆ. ಯಾವುದೇ ವ್ಯತ್ಯಾಸವೂ ಇಲ್ಲ’ ಎಂದು ಸಂಜೀವ್ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಿಸೈಡಿಂಗ್‌ ಆಫೀಸರ್‌ಗಳು ಮತ್ತು ಫಾರಂ 17ಎದಲ್ಲಿ ದಾಖಲಾದ ಮತದಾರರ ವಿವರವನ್ನು ನೋಡಿಕೊಂಡು ಈಗಿನ ಲೆಕ್ಕಾಚಾರ ಮಾಡಲಾಗಿದೆ. ಇದೀಗ ಸರಿಯಾಗಿ ತಾಳೆಯಾಗುವ ಮತದಾನದ ವಿವರ ಲಭ್ಯವಾಗಿದೆ’ ಎಂದು ಅವರು ಹೇಳಿದರು.

ದೇಶದೆಲ್ಲೆಡೆ 542 ಲೋಕಸಭಾ ಕ್ಷೇತ್ರಗಳಲ್ಲಿ ತಾಳೆಯಾಗದ ಮತಗಳ ಸಂಖ್ಯೆ 58.34 ಲಕ್ಷ ಎಂಬುದು ದಾಖಲಾಗಿದೆ. ತಮಿಳುನಾಡಿನ ಕಾಂಚೀಪುರಂ ಕ್ಷೇತ್ರದಲ್ಲಿ ಗರಿಷ್ಠ ಅಂದರೆ 18,331 ಮತಗಳು ಹೆಚ್ಚುವರಿಯಾಗಿ ಲೆಕ್ಕಕ್ಕೆ ಸಿಕ್ಕಿದ್ದವು.ಮಥುರಾ ಕ್ಷೇತ್ರದಲ್ಲಿ 9,906 ಮತಗಳು ತಾಳೆಯಾಗಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT