ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಬವಣೆ: ‘ 6 ಹೋಗಿ 12 ದಿನಕ್ಕೊಮ್ಮೆ ನೀರು ಬರ್ತೈತ್ರೀ...’

ಬೋರ್‌ವೆಲ್ ನೀರು ಕುಡಿಯೋಕಾಗಲ್ಲ: ಕೂಡಿಟ್ಟ ನೀರು ಉಳಿಯೋದಿಲ್ಲ
Last Updated 15 ಮೇ 2019, 20:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ದಿನದ 24 ಗಂಟೆ ವಾರದಾಗ ಏಳು ದಿನ ನಿಮಗ ಕುಡಿಯೋ ನೀರು ಕೊಡ್ತೀವಿ ಅಂತ ನಾವು ಸಣ್ಣವರಿದ್ದಾಗಿನಿಂದ ಎಲ್ಲರೂ ಹೇಳಿದ್ದನ್ನ ಕೇಳಿಸ್ಕೋಂತಾನೇ ಬಂದು ನಾವ್ ಈಗ ಮುದುಕರಾದ್ವಿ, ಇನ್ನೂ ಸೈತ ನಮಗ ವಾರಕ್ಕೊಮ್ಮೆ ಛಲೋತ್ನಾಗ್ ನೀರು ಸಿಗ್ತಿಲ್ಲ ಬಿಡ್ರೀ...’ ಎಂದು ತಮ್ಮ ಅಸಮಾಧಾನ ಹೊರ ಹಾಕಿದವರು ಹಳೇ ಹುಬ್ಬಳ್ಳಿಯ ಕಮ್ಮಾರಸಾಲಿ ಓಣಿಯ 65 ವರ್ಷದ ಶರಣಪ್ಪ.

‘ಉಳ್ಳವರು ಟ್ಯಾಂಕರ್‌ ನೀರು ತರಿಸ್ಕೋತಾರ, ವಾರಕ್ಕೊಮ್ಮೆ ನೀರು ಬಿಟ್ರೂ ದೊಡ್ಡ ದೊಡ್ಡ ಟ್ಯಾಂಕು, ಪಾತ್ರಿಯೊಳಗ ತುಂಬಿಸಿ ಇಟ್ಕೋತಾರ... ನಮ್ಮಂಥ ಬಡವರು ಏನ್‌ ಮಾಡಬೇಕ್ರೀ? ಕಾರ್ಪೊರೇಷನ್‌ನವರು ಟಾಕಿಯೊಳಗ ತುಂಬಿಸೋ ಬೋರ್‌ವೆಲ್‌ ನೀರು ಉಪಯೋಗಿಲ್ರೀ, ಅದನ್ನ ಯಾರ್‌ ಕುಡೀತಾರ? ಚುನಾವಣೆ ಬಂದಾಗ ಎಲ್ಲ ಪಕ್ಷದವರೂ ಬಂದು ಭರವಸೆ ಕೊಟ್ಟು ಹೋಗ್ತಾರ... ನೀರಿಲ್ಲದೇ ನಮ್ಮ ಕಮ್ಮಾರಿಕಿ ಕೆಲಸಕ್ಕ ಸೈತ ತೊಂದ್ರೆ ಆಗೈತ್ರೀ’ ಎನ್ನುತ್ತ ಖಾಲಿ ಹೊಡೆಯುತ್ತಿದ್ದ ಕುಲುಮೆಯತ್ತ ಅಸಹಾಯಕ ನೋಟ ಹರಿಸಿದರು.

ಹುಬ್ಬಳ್ಳಿ ಮಹಾನಗರದ ಬಹುತೇಕ ಯಾವ ಬಡಾವಣೆಗೆ ಕಾಲಿಟ್ಟರೂ ನೀರಿನ ಸಮಸ್ಯೆ ಇದ್ದೇ ಇದೆ. ನೃಪತುಂಗ ಬೆಟ್ಟದ ಬುಡದ ಮೂರ್ನಾಲ್ಕು ಬಡಾವಣೆಗಳನ್ನು ಹೊರತು ಪಡಿಸಿದರೆ ಉಳಿದೆಲ್ಲೆಡೆ 3–4 ದಿನಗಳಿಗೊಮ್ಮೆ, ಇಲ್ಲವೇ ವಾರಕ್ಕೊಮ್ಮೆ ಜಲಮಂಡಳಿಯಿಂದ ಕುಡಿಯುವ ನೀರು ಪೂರೈಕೆಯಾಗುತ್ತಿತ್ತು. ಆದರೆ ಈ ಬಾರಿ ಬೇಸಿಗೆಯಲ್ಲಿ ಎರಡು ವಾರಕ್ಕೊಮ್ಮೆ ನೀರು ಸಿಗುತ್ತಿದೆ.

ಮನೆಮುಂದಿನ ಹಳದಿ, ನೀಲಿ, ಕಪ್ಪು ಬಣ್ಣದ ದೊಡ್ಡ ದೊಡ್ಡ ಪ್ಲಾಸ್ಟಿಕ್‌ ಟ್ಯಾಂಕ್‌ಗಳ ರಾಶಿ ನೀರಿನ ಬವಣೆಯನ್ನು ಸಾರಿ ಹೇಳುತ್ತಿವೆ. ಆದರೆ ಹೀಗೆ ಕೂಡಿಟ್ಟ ನೀರಲ್ಲಿ ಹುಳುಗಳಾಗಿ ಮತ್ತೆ ಚರಂಡಿಗೆ ಚೆಲ್ಲುವುದೇ ಬಹುತೇಕರ ಪಾಡಾಗಿದೆ.

‘15 ದಿನಕ್ಕೊಮ್ಮೆ ನೀರ್ ಬಿಟ್ರ ಬದುಕು ಮಾಡೋದು ಹ್ಯಾಂಗ್ರೀ, 3 ದಿನಾ ಬಿಟ್ರ ನೀರಿನ್ಯಾಗ ಹುಳ ಆಗ್ತಾವು... ಎಷ್ಟೂಂತ ನೀರ್‌ ಪಾತ್ರಿಯೊಳಗ ಹಿಡಿದ್ ಇಡೋದ್ರೀ?’ ಎನ್ನುತ್ತಾರೆವೀರಮಾರುತಿ ನಗರದ ಬೇಬಿಜಾನ್‌ ಸಾಬಣ್ಣವರ.

‘ಏನ್‌ ಮಾಡೋದ್ರೀ ಹಂಗ ಹೊಂಟೀವ್ರೀ ಬಾಳುವೆ ಮಾಡ್ಕೊಂಡು, ನಮಗ 12 ದಿನಕ್ಕೊಮ್ಮೆಯಾದ್ರೂ ನೀರ್‌ ಸಿಗ್ತೈತ್ರಿ, ನಮ್ಮ ಪಕ್ಕದ ಬಡಾವಣೆಯಾಗ ಬೋರ್‌ವೆಲ್, ಟಾಕಿ ಏನೂ ಇಲ್ರೀ... ಅಲ್ಲಿ ಇನ್ನೂ ಭಾಳ ಸಮಸ್ಯೆ ಐತ್ರೀ... ’ ಎಂದು ಸಮಾಧಾನ ಮಾಡಿಕೊಂಡವರು ದಾಳಿಂಬ್ರಿಪೇಟ್‌ನ ರುಕ್ಮಿಣಿ.

ಹಳೆಯ ಪೈಪ್‌ಲೈನ್‌ ವ್ಯವಸ್ಥೆಯಿಂದಲೇ ಸಮಸ್ಯೆ...

ಹುಬ್ಬಳ್ಳಿ ಮಹಾನಗರಕ್ಕೆ ಮಲಪ್ರಭೆ ಜೀವಜಲ. ಪ್ರತಿದಿನ 155 ಎಂ.ಎಲ್‌.ಡಿ ನೀರನ್ನು ಪಡೆಯಲಾಗುತ್ತಿದೆ. ಅದರಲ್ಲಿ 90 ಎಂ.ಎಲ್‌.ಡಿ ನೀರು ಹುಬ್ಬಳ್ಳಿಗೆ ಉಳಿದವನ್ನು ಧಾರವಾಡಕ್ಕೆ ಬಳಸಲಾಗುತ್ತದೆ.

‘ಹುಬ್ಬಳ್ಳಿಗೆ ಪ್ರತಿದಿನ ನೀರು ಕೊಡಬೇಕೆಂದರೆ 180 ಎಂ.ಎಲ್‌.ಡಿ ನೀರು ಬೇಕು. ಸದ್ಯಕ್ಕೆ ಅದು ಸಾಧ್ಯವಿಲ್ಲ. ಜತೆಗೆ ಇಲ್ಲಿಯ ನೀರು ಪೂರೈಕೆ ಜಾಲ 50–60 ವರ್ಷ ಹಳೆಯದು. ಕಿಲೊಮೀಟರ್‌ಗಟ್ಟಲೆ ಪೈಪ್‌ಲೈನ್‌ ಮೂಲಕವೇ ನೀರು ಪೂರೈಕೆ ಮಾಡಬೇಕು. ಓವರ್‌ಹೆಡ್‌ ಟ್ಯಾಂಕ್‌ಗಳಿಲ್ಲ. ತುಕ್ಕು ಹಿಡಿದ ಪೈಪ್‌ಗಳಲ್ಲಿ ನೀರು ಒತ್ತಡದಿಂದ ಸಾಗುವುದೂ ಇಲ್ಲ. ಸವದತ್ತಿ ಜಾಕ್‌ವೆಲ್‌ ಬಳಿ ವಿದ್ಯುತ್‌ ಸಮಸ್ಯೆ ಬೇರೆ. ಹೀಗಾಗಿ ನೀರು ಪೂರೈಕೆ ಸಮಸ್ಯೆಯಾಗಿದೆ’ ಎನ್ನುತ್ತಾರೆ ಜಲಮಂಡಳಿ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT