ಬುಧವಾರ, ಸೆಪ್ಟೆಂಬರ್ 22, 2021
29 °C
ಕಂಠೀರವ ಕ್ರೀಡಾಂಗಣದಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿ ಭಾಗಿ

5ನೇ ವಿಶ್ವ ಯೋಗ ದಿನಾಚರಣೆ l ಯೋಗದಲ್ಲಿ ಮಿಂದೆದ್ದ ಸಿಲಿಕಾನ್‌ ಸಿಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಿಲಿಕಾನ್ ಸಿಟಿಯ ಜನ ಶುಕ್ರವಾರ ಯೋಗದ ಗುಂಗಿನಲ್ಲಿ ಮುಳುಗಿದ್ದರು. 5ನೇ ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಅಲ್ಲಲ್ಲಿ ಸಾಮೂಹಿಕವಾಗಿ ಯೋಗಾಭ್ಯಾಸ ಮಾಡಿದರು.

ಆಯುಷ್ ಇಲಾಖೆ ಕಂಠೀರವ ಕ್ರೀಡಾಂಗಣದಲ್ಲಿ ‘ಹೃದಯಕ್ಕಾಗಿ ಯೋ‌ಗ’ ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಿದ್ದ ಯೋಗ ದಿನದಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿ ಸಾಮೂಹಿಕ ಯೋಗಾಭ್ಯಾಸ ಮಾಡಿದರು.

ಯೋಗ ದಿನವನ್ನು ಉದ್ಘಾಟಿಸಿದ ಆರೋಗ್ಯ ಸಚಿವ ಶಿವಾನಂದ ಪಾಟೀಲ, ‘ಯೋಗ ನಮ್ಮ ಪೂರ್ವಜರು ನೀಡಿದ ಕೊಡುಗೆಯಾಗಿದ್ದು, ಅದನ್ನು ವಾಣಿಜ್ಯೀಕರಣ ಮಾಡಿಕೊಳ್ಳಬಾರದು’ ಎಂದು ಹೇಳಿದರು.

‘2011ರ ಕ್ರಿಕೆಟ್ ವಿಶ್ವಕಪ್ ಅನ್ನು ಭಾರತ ತಂಡದ ಆಟಗಾರು ಗೆಲ್ಲಲು ಯೋಗಭ್ಯಾಸ ಕಾರಣವಾಯಿತು. ಅದೇ ರೀತಿ ಈ ಬಾರಿಯೂ ಭಾರತದ ಆಟಗಾರರು ಯೋಗದ ಮೂಲಕ ಏಕಾಗ್ರತೆ ಹೆಚ್ಚಿಸಿಕೊಂಡು ಚಾಂಪಿಯನ್ ಆಗಿ ಹೊರ ಹೊಮ್ಮಲಿ’ ಎಂದು ಆಶಿಸಿದರು. 

ಕ್ರೀಡಾ ಸಚಿವ ರಹೀಂ‌ಖಾನ್, ವಿಧಾನ ಪರಿಷತ್ತಿನ ಸದಸ್ಯರಾದ ಟಿ.ಎ.ಶರವಣ, ಗೋವಿಂದರಾಜು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಪಂಕಜಕುಮಾರ್ ಪಾಂಡೆ, ಆಯುಷ್ ಇಲಾಖೆ ಆಯುಕ್ತೆ ಮೀನಾಕ್ಷಿ ನೇಗಿ ಯೋಗಾಭ್ಯಾಸ ಮಾಡಿದರು.


ಕಂಠೀರವ ಕ್ರೀಡಾಂಗಣದಲ್ಲಿ ಕ್ರೀಡಾ ಸಚಿವ ರಹೀಂಖಾನ್, ಆರೋಗ್ಯ ಸಚಿವ ಶಿವಾನಂದ ಪಾಟೀಲ, ಶ್ವಾಸ ಗುರೂಜಿ ವಚನಾನಂದ ಸ್ವಾಮೀಜಿ ಯೋಗ ಮಾಡಿದರು  –ಪ್ರಜಾವಾಣಿ ಚಿತ್ರ

ಮೊದಲಿಗೆ ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯಿಂದ ಪ್ರಣವ ಓಂಕಾರ, ಶಾಂತಿ ಮಂತ್ರ, ಶ್ವಾಸ ಕ್ರಿಯೆ ಹಾಗೂ ಮಾನಸಿಕ ಸಿದ್ಧತೆ ನಡೆಯಿತು. ನಂತರ ರಕ್ಷಾ ಯೋಗ ಟ್ರಸ್ಟ್‌ನಿಂದ ಕ್ರಿಯಾತ್ಮಕ ಯೋಗ ನಡೆಯಿತು.

ಬಳಿಕ ಯೋಗ ಗಂಗೋತ್ರಿ ಟ್ರಸ್ಟ್‌ನಿಂದ ಯೋಗ ಗುಚ್ಛ, ಪೇರ್ ಯೋಗ, ಪ್ರಕಾಶ್ ಗುರೂಜಿಯಿಂದ ಷಟ್‌ ಕರ್ಮ‌ವಿಧಿ, ಗಂಗಾ ಯೋಗ ಟ್ರಸ್ಟ್‌ನಿಂದ ದಂಡ ಬೈಠಕ್ ಯೋಗ ಕಸರತ್ತು, ಸ್ವಾಮಿ ವಚನಾನಂದರಿಂದ ಲಾಫಿಂಗ್ ಯೋಗ ನಡೆಯಿತು. ನಂತರ ಸಾಮಾನ್ಯ ಯೋಗ ಶಿಷ್ಟಾಚಾರ ನಡೆಸಲಾಯಿತು.

ಕೋಲ್ಕತ್ತದ 123 ವರ್ಷ ವಯಸ್ಸಿನ ಸ್ವಾಮಿ ಶಿವಾನಂದ ಬಾಬು ಮಾಡಿದ ಯೋಗಾಭ್ಯಾಸ ಗಮನ ಸೆಳೆಯಿತು.


ಬಿಜೆಪಿ ಕಚೇರಿ ಬಳಿ ನಡೆದ ಯೋಗ ದಿನಾಚರಣೆದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಶೆಟ್ಟಿ, ಸಹ ವಕ್ತಾರರಾದ ಮಾಳವಿಕಾ ಯೋಗ ಮಾಡಿದರು

ಎಲ್ಲೆಡೆ ಯೋಗ: ಪಿಇಎಸ್ ವಿಶ್ವವಿದ್ಯಾಲಯದಲ್ಲಿ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಯೋಗಾಭ್ಯಾಸ ಮಾಡಿದರು.  ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಎಂ.ಆರ್. ದೊರೆಸ್ವಾಮಿ, ಯೋಗದ ಮಹತ್ವ ಅರಿತು ಯೋಗ ಶಿಕ್ಷಣವನ್ನು ವಿಶ್ವವಿದ್ಯಾಲಯದ ಶೈಕ್ಷಣಿಕ ವೇಳಾಪಟ್ಟಿಯಲ್ಲಿ ಸೇರಿಸಲಾಗಿದೆ ಎಂದರು.

ಮೌಲಾನಾ ಆಜಾದ್ ಅಂತರರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯದ(ಮನ್ನೂ) ಪಾಲಿಟೆಕ್ನಿಕ್‌ ಮತ್ತು ಪ್ರಾದೇಶಿಕ ಕೇಂದ್ರದಲ್ಲಿ ಸಿಬ್ಬಂದಿ ಯೋಗಾಭ್ಯಾಸ ಮಾಡಿದರು. ಕೇಂದ್ರದ ನಿರ್ದೇಶಕ ಖಾಜಿ ಜಿಯಾವುಲ್ಲಾ ಅವರು ಯೋಗದ ಮಹತ್ವ ತಿಳಿಸಿದರು. 

ವಿಭೂತಿಪುರ ಮಠದ ವೀರಭದ್ರೇಶ್ವರ ವಸತಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾರ್ಗದರ್ಶನದಲ್ಲಿ ಸಾಮೂಹಿಕ ಯೋಗಾಭ್ಯಾಸ ಮಾಡಿದರು.

ಜಯನಗರ 4ನೇ ಬ್ಲಾಕ್‌ನಲ್ಲಿ ಶಂಕರ ಅಷ್ಟಾಂಗ ಯೋಗ ಟ್ರಸ್ಟ್‌ ಆಯೋಜಿಸಿದ್ದ ಯೋಗ ದಿನಾಚರಣೆಯಲ್ಲಿ ಜನಪ್ರತಿನಿಧಿಗಳು, ಸಾರ್ವಜನಿಕರು ಭಾಗವಹಿಸಿ ಸಾಮೂಹಿಕ ಯೋಗಾಭ್ಯಾಸ ಮಾಡಿದರು. ರಾಜಾಜಿನಗರದ ಇಸ್ಕಾನ್ ದೇವಸ್ಥಾನದ ಬಳಿಯ ಆರೋಗ್ಯ ಮಂದಿರದಲ್ಲಿ, ಬಸವಜ್ಯೋತಿ ಯೋಗ ಕೇಂದ್ರದಿಂದ ಹಂಪಿನಗರದ ಗ್ರಂಥಾಲಯ ಸಭಾಂಗಣದಲ್ಲಿ ಯೋಗಾಭ್ಯಾಸ ನಡೆಯಿತು.

ಆರ್ಟ್‌ ಆಫ್‌ ಲಿವಿಂಗ್‌ ಇಂಟರ್‌ನ್ಯಾಷನಲ್‌ ಸೆಂಟರ್‌ನಲ್ಲಿ ಯುವಜನ ಮತ್ತು ಕ್ರೀಡಾ ಇಲಾಖೆ ವತಿಯಿಂದ ಯೋಗ ದಿನ ಆಚರಿಸಲಾಯಿತು. 

ಅಕ್ಷಯ ಪಾತ್ರ ಸಂಸ್ಥೆಯಿಂದ ಮರಳಕುಂಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ‘ಯಂಗ್‌ ಫಾರ್‌ ಯೋಗ’ ಆಯೋಜಿಸ
ಲಾಗಿತ್ತು. ಒರಾಯನ್‌ ಈಸ್ಟ್‌ ಮಾಲ್‌ನಲ್ಲೂ ಯೋಗ, ಧ್ಯಾನ ಮಾಡಲಾಯಿತು.


ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಯೋಗಾಭ್ಯಾಸ ಮಾಡಿದರು

ದೇವೇಗೌಡರಿಂದ ಯೋಗಾಭ್ಯಾಸ
ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಪದ್ಮನಾಭನಗರದ ತಮ್ಮ ಮನೆಯಲ್ಲಿ ಯೋಗಾಭ್ಯಾಸ ಮಾಡಿದರು.

ಬಳಿಕ ಮಾತನಾಡಿದ ಅವರು, ‘ವಿದ್ಯಾರ್ಥಿಯಾಗಿದ್ದಾಗ ಶಿಕ್ಷಕರು ಸೂರ್ಯ ನಮಸ್ಕಾರ ಮಾಡಿಸುತ್ತಿದ್ದರು. ಬಾಲ್ಯದಿಂದಲೂ ನಾನು ಯೋಗ ಅಭ್ಯಾಸ ಮಾಡಿದ್ದೇನೆ’ ಎಂದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಯೋಗಕ್ಕೆ ಮಹತ್ವ ನೀಡಿದ್ದಾರೆ. ಅದನ್ನು ನಾನು ಸ್ವಾಗತಿಸುತ್ತೇನೆ’ ಎಂದು ಹೇಳಿದರು.


ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯೊಂದಿಗೆ ಯೋಗಾಭ್ಯಾಸ ಮಾಡಿದ ರಾಜ್ಯಪಾಲ ವಜುಭಾಯಿ ವಾಲಾ ಮತ್ತು ಕುಲಪತಿ ಪ್ರೊ. ಕೆ.ಆರ್.ವೇಣುಗೋಪಾಲ

ಆರೋಗ್ಯವೃದ್ಧಿ: ವಜುಭಾಯಿ ವಾಲಾ
‘ಯೋಗದಿಂದ ದೈಹಿಕ ದೃಢತೆಯೊಂದಿಗೆ ಮಾನಸಿಕ ಸ್ಥೈರ್ಯವೂ ಹೆಚ್ಚುತ್ತದೆ’ ಎಂದು ರಾಜ್ಯಪಾಲ ವಜುಭಾಯಿ ವಾಲಾ ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶತಮಾನಗಳ ಕಾಲ ಅವಗಣನೆಗೆ ಒಳಗಾಗಿದ್ದ ಯೋಗ ವಿದ್ಯೆ, ಕೇಂದ್ರ ಸರ್ಕಾರದ ಸಂಪೂರ್ಣ ಸಹಕಾರದಿಂದ ಇಂದು ಪ್ರಪಂಚದಲ್ಲಿ ಮಾನ್ಯತೆ ಗಳಿಸಲು ಸಾಧ್ಯವಾಯಿತು ಎಂದು ತಿಳಿಸಿದರು.‌

ಯೋಗವನ್ನು ಪ್ರತಿನಿತ್ಯ ಅಭ್ಯಾಸ ಮಾಡುವುದರಿಂದ ಚಿತ್ತವನ್ನು ಸಮಸ್ಥಿತಿಯಲ್ಲಿರಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಯೋಗಾಭ್ಯಾಸದತ್ತ ದೃಷ್ಟಿ ಹರಿಸಬೇಕು ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಆರ್.ವೇಣುಗೋಪಾಲ್ ಹೇಳಿದರು.

ನೆಮ್ಮದಿ ಜೀವನಕ್ಕೆ ಸಹಕಾರಿ
ಸರ್ವ ರೋಗಗಳಿಗೂ ಯೋಗ ಮದ್ದಾಗಿದ್ದು ಇದನ್ನು ದಿನನಿತ್ಯ ಮಾಡುವುದರ ಮೂಲಕ ಆರೋಗ್ಯ ವೃದ್ಧಿಸಿಕೊಳ್ಳಬೇಕು ಎಂದು ಪುಣ್ಯಭೂಮಿ ಸೇವಾ ಫೌಂಡೇಷನ್ ಅಧ್ಯಕ್ಷೆ ಶಾಂತಾ ಕೃಷ್ಣಮೂರ್ತಿ ಹೇಳಿದರು.

ಕೆ.ಆರ್.ಪುರ ಸಮೀಪದ ರಾಮಮೂರ್ತಿನಗರದ ಎನ್.ಆರ್.ಐ ಬಡಾವಣೆಯಲ್ಲಿ ಪುಣ್ಯಭೂಮಿ ಸೇವಾ ಫೌಂಡೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ಯೋಗ ದಿನಾಚರಣೆಯಲ್ಲಿ ಮಾತನಾಡಿದರು.

ಸರಳ ಜೀವನ, ಉದಾತ್ತ ಚಿಂತನೆ ಮತ್ತು ನೆಮ್ಮದಿ ಜೀವನಕ್ಕೆ ಯೋಗ ಅತ್ಯಂತ ಅವಶ್ಯ. ತಮ್ಮ ಒತ್ತಡದ ಜೀವನದಲ್ಲಿ ಯೋಗದ ಕಡೆ ಗಮನ ಹರಿಸಿದರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು