ಭಾನುವಾರ, ಜೂಲೈ 12, 2020
22 °C

ಪಾಕಿಸ್ತಾನದಲ್ಲಿ ಚೀನಾ ಕಂಪೆನಿ ಉದ್ಯೋಗಿಗಳು ನಮಾಜ್ ಮಾಡುವುದು ನಿಷಿದ್ಧ!

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವು ಚೀನಾ ಕಂಪೆನಿಗಳು ತಮ್ಮ ನೌಕರರು ನಮಾಜ್‌ ಮಾಡುವುದಕ್ಕೆ ಸಮಯ ನೀಡಲು ನಿರಾಕರಿಸಿವೆ. ಇಸ್ಲಾಂ ಧರ್ಮದ ಐದು ಮೂಲ ಸಿದ್ಧಾಂತಗಳಲ್ಲಿ ನಮಾಜ್ ಕೂಡ ಒಂದಾಗಿದೆ.

ಈ ಸಂಬಂಧ ಇಸ್ಲಾಂ ಧರ್ಮಗುರುವೊಬ್ಬರು ಉಪದೇಶ ನೀಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಅವರು, ‘ಪಾಕಿಸ್ತಾನೀಯರು ದೃಢವಾಗಿರಬೇಕು ಮತ್ತು ಚೀನೀಯರು ಪಾಕಿಸ್ತಾನದಲ್ಲಿ ಇರುವಾಗ ಇಲ್ಲಿನ (ಸ್ಥಳೀಯ) ಕಾನೂನುಗಳನ್ನು ಅನುಸರಿಸಬೇಕು. ದೇಶವು ಚೀನೀಯರದ್ದಲ್ಲ ಎಂದು ಹೇಳಬೇಕು’ ಎಂದು ಒತ್ತಾಯಿಸಿದ್ದಾರೆ.

‘ನಾವು ನಮಾಜ್‌ ಮಾಡುವುದನ್ನು ಬಿಡಲಾಗದು. ಜನರು ತಮ್ಮ ಉದ್ಯೋಗ ಕಳೆದುಕೊಳ್ಳುತ್ತೇವೆಂದು ಭಯಗೊಂಡಿದ್ದಾರೆ. ಆದರೆ, ಇದು ನಮಗೆ ಸ್ವಾಭಿಮಾನದ ವಿಚಾರವಾಗಿದೆ’ ಎಂದು ಹೇಳಿದ್ದಾರೆ.

ಪಾಕಿಸ್ತಾನದ ‘ಆತ್ಮೀಯ ಸ್ನೇಹಿತ’ನಾಗಿರುವ ಚೀನಾ, ಅದರ (ಪಾಕಿಸ್ತಾನದ) ಆರ್ಥಿಕ ಭರವಸೆ ಮತ್ತು ವಿಶ್ವಾಸಾರ್ಹ ಮಿಲಿಟರಿ ಪಾಲುದಾರನಾಗಿದೆ. ಆದರೆ, ತನ್ನ ದೇಶದಲ್ಲಿರುವ ಮುಸ್ಲಿಮರ ಮೇಲೆ, ಅದರಲ್ಲೂ ವಾಯುವ್ಯ ಕ್ಸಿನ್‌ಜಿಯಾಂಗ್‌ ಪ್ರಾಂತ್ಯದಲ್ಲಿರುವ ಉಯಿಘರ್‌ ಸಮುದಾಯದವರೆ ಮೇಲೆ ನಿರಂತರವಾಗಿ ಆಕ್ರಮಣಕಾರಿ ನಡೆಯನ್ನು ಮುಂದುವರಿಸಿದೆ. ಇದು ಚೀನಾ ಬಗ್ಗೆ ಪಾಕಿಸ್ತಾನೀಯರ ಅಭಿಪ್ರಾಯದ ಮೇಲೆ ಪರಿಣಾಮ ಉಂಟುಮಾಡುವ ಸಾಧ್ಯತೆ ಇದೆ. ಹಾಗಾಗಿ ಚೀನಾ, ಪಾಕಿಸ್ತಾನದೊಂದಿಗೆ ಮುನ್ನಡೆಯುವುದು ಕಷ್ಟ ಎನ್ನಲಾಗುತ್ತಿದೆ.

ದೇಶದಲ್ಲಿರುವ ಉಯಿಘರ್‌ ಮುಸ್ಲಿಮರು ಉಗ್ರ ಸಂಘಟನೆಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬ ಗ್ರಹಿಕೆಯಿಂದಾಗಿ ಕ್ಸಿನ್‌ಜಿಯಾಂಗ್‌ನಲ್ಲಿ ಗಡ್ಡಧಾರಿ ಮುಸ್ಲಿಮರು ಮತ್ತು ಬುರ್ಖಾ ಧರಿಸುವ ಮಹಿಳೆಯರು ಸಾರ್ವಜನಿಕ ಸಾರಿಗೆ ಬಳಸುವುದನ್ನು ನಿಷೇಧಿಸಲಾಗಿದೆ. ಮುಸ್ಲಿಮರ ವಿರುದ್ಧ ಚೀನಾದಲ್ಲಿ ತಾರತ್ಯಮ ಹೆಚ್ಚುತ್ತಿದೆ. ಅಲ್ಲಿನ ಕಾನೂನುಗಳೂ ವಿವಾದಕ್ಕೆ ಎಡೆಮಾಡಿಕೊಡುತ್ತಿವೆ. ಆದಾಗ್ಯೂ ಮಾಧ್ಯಮಗಳ ವರದಿ ಪ್ರಕಾರ 2014ರಲ್ಲಿ ಚೀನಾ, ಉಯಿಘರ್‌ ಸಮುದಾಯದವರು ಚೀನೀಯರ ವಿರುದ್ಧ ದಾಳಿ ನಡೆಸುತ್ತಿರುವ ಬಗ್ಗೆ ಅಫ್ಗಾನಿಸ್ತಾನ ಮತ್ತು ಪಾಕಿಸ್ತಾನದ ನಾಯಕರೆದುರು ಕಳವಳ ವ್ಯಕ್ತಪಡಿಸಿತ್ತು ಎನ್ನಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು