ಶನಿವಾರ, ಆಗಸ್ಟ್ 8, 2020
28 °C

ಹಾಂಗ್‍ಕಾಂಗ್ ಮೇಲೆ ಚೀನಾ ಪ್ರಾಬಲ್ಯಕ್ಕೆ ಕಡಿವಾಣ; ಮಸೂದೆಗೆ ಅಂಗೀಕಾರ

ಎಪಿ Updated:

ಅಕ್ಷರ ಗಾತ್ರ : | |

prajavani

ವಾಷಿಂಗ್ಟನ್: ಹಾಂಗ್‍ಕಾಂಗ್ ಮೇಲೆ ಚೀನಾದ ಪ್ರಾಬಲ್ಯ ಕುಗ್ಗಿಸುವ ಕ್ರಮಗಳನ್ನು ಕೈಗೊಳ್ಳಲು ಅವಕಾಶ ಕಲ್ಪಿಸುವ ಮಸೂದೆಯನ್ನು ಅಮೆರಿಕ ಸಂಸತ್ತು ಗುರುವಾರ ಅಂಗೀಕರಿಸಿತು.

ಹಾಂಗ್‍ಕಾಂಗ್‍ ಮೇಲಿನ ನಿಯಂತ್ರಣ ಹೊಂದುವ ಚೀನಾದ ರಾಷ್ಟ್ರೀಯ ಭದ್ರತಾ ಕಾಯ್ದೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಸಂದರ್ಭದಲ್ಲೇ ಮಸೂದೆಗೆ ಅಂಗೀಕಾರ ದೊರೆತಿದೆ.

‘ಹಾಂಗ್‍ಕಾಂಗ್‍ನ ಚಟುವಟಿಕೆಗಳಲ್ಲಿ ವಿದೇಶಿ ಶಕ್ತಿಗಳ ಹಸ್ತಕ್ಷೇಪ ತಡೆಯುವುದು, ನಗರದಲ್ಲಿ ಉಗ್ರರ ಕೃತ್ಯಗಳನ್ನು ಹತ್ತಿಕ್ಕುವುದು ರಾಷ್ಟ್ರೀಯ ಭದ್ರತಾ ಕಾಯ್ದೆಯ ಉದ್ದೇಶ’ ಎಂದು ಚೀನಾ ಸಮರ್ಥಿಸಿಕೊಂಡಿತ್ತು.

ಅಮೆರಿಕ ಸಂಸತ್ತು ಈಗ ಅಂಗೀಕರಿಸಿರುವ ಮಸೂದೆಯು ಹಾಂಗ್‍ಕಾಂಗ್‍ನ ಸ್ವಾಯತ್ತೆಗೆ ಭಂಗ ತರುವ ಸಮೂಹ, ಸಂಸ್ಥೆಗಳ ಮೇಲೆ ನಿರ್ಬಂಧ ಹೇರಲು ಅವಕಾಶ ಕಲ್ಪಿಸಲಿದೆ. ಹಾಂಗ್‍ಕಾಂಗ್‍ನಲ್ಲಿ ಪ್ರತಿಭಟನೆ ಹತ್ತಿಕ್ಕುತ್ತಿರುವ ಪೊಲೀಸ್‍ ವ್ಯವಸ್ಥೆ, ಕಾಯ್ದೆ ರೂಪಿಸಲು ಕಾರಣಕರ್ತರಾದ ಚೀನಾದ ಕಮ್ಯುನಿಸ್ಟ್ ಪಕ್ಷದ ಅಧಿಕಾರಿವರ್ಗವು ಈ ಸಮೂಹದಲ್ಲಿ ಸೇರಲಿವೆ. ಅಲ್ಲದೆ, ಚೀನಾದ ಭದ್ರತಾ ಕಾಯ್ದೆಯನ್ನು ಬೆಂಬಲಿಸುವ ಉದ್ದಿಮೆಗಳ ಮೇಲೆ ನಿರ್ಬಂಧ ಹೇರಲೂ ಮಸೂದೆ ಅಮೆರಿಕಕ್ಕೆ ಅವಕಾಶ ನೀಡಲಿದೆ.

ಮಸೂದೆಗೆ ಅಮೆರಿಕ ಸಂಸತ್ತಿನ ಅಂಗೀಕಾರ ದೊರೆಯುವುದಕ್ಕೂ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯಾನ್ ಅವರು, ‘ಹಾಂಗ್‍ಕಾಂಗ್‍ನ ರಾಷ್ಟ್ರೀಯ ಭದ್ರತೆ ಮತ್ತು ಸ್ಥಿರತೆ, ಅಭಿವೃದ್ಧಿ ಕುರಿತ ಚೀನಾದ ಬದ್ಧತೆಗೆ ಯಾವುದೇ ಬಾಹ್ಯ ಶಕ್ತಿಗಳು ಧಕ್ಕೆ ತರಲಾರವು’ ಎಂದು ಪ್ರತಿಪಾದಿಸಿದರು.

‘ಅಮೆರಿಕವು ಅಂತರರಾಷ್ಟ್ರೀಯ ಕಾಯ್ದೆಗೆ ಬದ್ಧವಾಗಿರಬೇಕು, ಹಾಂಗ್‍ಕಾಂಗ್ ಚಟುವಟಿಕೆಯಲ್ಲಿ ಹಸ್ತಕ್ಷೇಪ ಮಾಡುವುದರಿಂದ ದೂರ ಉಳಿಯಬೇಕು. ಪೂರಕವಾಗಿ ಉದ್ದೇಶಿತ ಮಸೂದೆಗೆ ಅಂಗೀಕಾರ ನೀಡಬಾರದು’ ಎಂದೂ ಒತ್ತಾಯಿಸಿದ್ದರು.

‘ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಸೂದೆಗೆ ಸಹಿ ಹಾಕಿದ್ದೇ ಆದಲ್ಲಿ ಚೀನಾ ಖಂಡಿತವಾಗಿ ಕಟ್ಟುನಿಟ್ಟಿನ ಪ್ರತಿರೋಧ ಕ್ರಮಗಳನ್ನು ಕೈಗೊಳ್ಳಲಿದೆ. ಇದರ ಪರಿಣಾಮಗಳಿಗೆ ಅಮೆರಿಕವೇ ಹೊಣೆಯಾಗಲಿದೆ’ ಎಂದೂ ಝಾವೊ ಎಚ್ಚರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು