ಭಾನುವಾರ, ಜೂಲೈ 5, 2020
22 °C

ಸ್ಮಾರಕ ರಕ್ಷಣೆ: ಕಠಿಣ ಆದೇಶಕ್ಕೆ ಟ್ರಂಪ್‌ ಸಹಿ

ಪಿಟಿಐ Updated:

ಅಕ್ಷರ ಗಾತ್ರ : | |

ಜನಾಂಗೀಯ ದ್ವೇಷದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕಪ್ಪುವರ್ಣೀಯರು ಅಮೆರಿಕದ ಮಾಜಿ ಅಧ್ಯಕ್ಷ ಆ್ಯಂಡ್ರ್ಯು ಜಾಕ್ಸನ್‌ ಅವರ ಪ್ರತಿಮೆಯನ್ನು ಕೆಡವಲು ಪ್ರಯತ್ನಿಸಿದ ಸಂದರ್ಭ –ರಾಯಿಟರ್ಸ್‌ ಚಿತ್ರ

ವಾಷಿಂಗ್ಟನ್‌: ರಾಷ್ಟ್ರೀಯ ಸ್ಮಾರಕಗಳನ್ನು ರಕ್ಷಿಸುವುದಕ್ಕೆ ಸಂಬಂಧಿಸಿದಂತೆ ಅತ್ಯಂತ ಕಠಿಣವಾದ ಕಾರ್ಯಕಾರಿ ಆದೇಶವೊಂದಕ್ಕೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಶುಕ್ರವಾರ ಸಹಿ ಮಾಡಿದ್ದಾರೆ.

ಸ್ಮಾರಕ ಅಥವಾ ಪ್ರತಿಮೆಯನ್ನು ಧ್ವಂಸ ಮಾಡುವ ವ್ಯಕ್ತಿ ಅಥವಾ ಗುಂಪನ್ನು ವಿಚಾರಣೆಗೆ ಒಳಪಡಿಸಿ, ಗರಿಷ್ಠ 10 ವರ್ಷಗಳ ಜೈಲು ಶಿಕ್ಷೆಗೆ ಗುರಿಪಡಿಸುವ ಅವಕಾಶವನ್ನು ಈ ಆದೇಶವು ನೀಡುತ್ತದೆ. ಹಿಂಸಾಚಾರ ಮತ್ತು ಕಾನೂನುಬಾಹಿರ ಚಟುವಟಿಕೆಯನ್ನು ಪ್ರಚೋದಿಸುವವರ ವಿರುದ್ಧ ಮತ್ತು ಸ್ಮಾರಕಗಳನ್ನು ರಕ್ಷಿಸುವಲ್ಲಿ ವಿಫಲವಾದ ರಾಜ್ಯ ಮತ್ತು ಸ್ಥಳೀಯ ಕಾನೂನು ಜಾರಿ ಸಂಸ್ಥೆಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲು ಈ ಆದೇಶ ಅವಕಾಶ ಕಲ್ಪಿಸುತ್ತದೆ. ದೇಶದಲ್ಲಿ ‘ಜನಾಂಗೀಯ ದ್ವೇಷ’ದ ಆರೋಪ–ಪ್ರತ್ಯಾರೋಪ ಹಾಗೂ ಪ್ರತಿಭಟನೆಗಳು ತೀವ್ರಗೊಂಡಿರುವ ಸಂದರ್ಭದಲ್ಲೇ ಟ್ರಂಪ್‌ ಈ ಆದೇಶಕ್ಕೆ ಸಹಿ ಮಾಡಿದ್ದಾರೆ.

ಜನಾಂಗೀಯ ದ್ವೇಷದ ವಿರುದ್ಧ ಹಿಂಸಾತ್ಮಕ ಪ್ರತಿಭಟನೆ ನಡೆಸುತ್ತಿರುವ ಕಪ್ಪುವರ್ಣೀಯರು, ಶ್ವೇತಭವನದ ಸಮೀಪದ ಉದ್ಯಾನದಲ್ಲಿ ಸ್ಥಾಪಿಸಲಾಗಿರುವ ಮಾಜಿ ಅಧ್ಯಕ್ಷ ಆ್ಯಂಡ್ರ್ಯು ಜಾಕ್ಸನ್‌ ಅವರ ಪ್ರತಿಮೆಯನ್ನು ಕೆಡವುವ ಪ್ರಯತ್ನವನ್ನು ಇತ್ತೀಚೆಗೆ ನಡೆಸಿದ್ದರು. ಈ ಘಟನೆಯ ಬಳಿಕ, ‘ಇಂಥ ಕೃತ್ಯಗಳನ್ನು ತಡೆಯಲು ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಟ್ರಂಪ್‌ ಹೇಳಿದ್ದರು.

‘ಪ್ರತಿಮೆ ಧ್ವಂಸಗೊಳಿಸಲು ಪ್ರಯತ್ನಿಸಿದ ಅರಾಜಕತಾವಾದಿಗಳು, ಲೂಟಿಕೋರರು, ಚಳವಳಿಗಾರರನ್ನು ಈಗಾಗಲೇ ತಡೆಯಲಾಗಿದೆ. ನಮ್ಮ ಸಮುದಾಯವನ್ನು ಸುರಕ್ಷಿತವಾಗಿಡಲು ಏನೇನು ಮಾಡಬೇಕೋ ಅದನ್ನು ನಾನು ಮಾಡಿದ್ದೇನೆ. ‘ಕಠಿಣ’ವಾದ ಆದೇಶವೊಂದಕ್ಕೆ ಇಂದು ಸಹಿ ಮಾಡಿದ್ದೇನೆ’ ಎಂದು ಟ್ರಂಪ್‌ ಅವರು ಶುಕ್ರವಾರ ಟ್ವೀಟ್‌ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು