ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದ ಹ್ಯಾಕರ್‌ಗಳಿಂದ ಬೌದ್ಧಿಕ ಸೊತ್ತು ಕಳ್ಳತನ: ಅಮೆರಿಕ ಆರೋಪ

Last Updated 22 ಜುಲೈ 2020, 7:38 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ‘ಚೀನಾ ಸರ್ಕಾರದ ಜತೆಗೆ ಕೆಲಸ ಮಾಡುವ ಹ್ಯಾಕರ್‌ಗಳು ಜಗತ್ತಿನ ವಿವಿಧ ಕಂಪನಿಗಳಿಂದ ಲಕ್ಷಾಂತರ ಕೋಟಿ ರೂಪಾಯಿ ಮೌಲ್ಯದ ಬೌದ್ಧಿಕ ಆಸ್ತಿ ಹಾಗೂ ವ್ಯಾಪಾರ ರಹಸ್ಯಗಳ ಕಳ್ಳತನ ಮಾಡುತ್ತಿದ್ದಾರೆ’ ಎಂದು ಅಮೆರಿಕದ ನ್ಯಾಯಾಂಗ ಇಲಾಖೆ ಆರೋಪಿಸಿದೆ.

ಚೀನಾ ಮೂಲದ ಇಬ್ಬರು ಹ್ಯಾಕರ್‌ಗಳು ಔಷಧ ಸಂಸ್ಥೆಯೊಂದರಿಂದ ಮಾಹಿತಿ ಕಳ್ಳತನಕ್ಕೆ ಪ್ರಯತ್ನಿಸಿದ ಘಟನೆ ಈಚೆಗೆ ಬೆಳಕಿಗೆ ಬಂದಿತ್ತು. ಈ ಆರೋಪಿಗಳ ವಿರುದ್ಧ ವ್ಯಾಪಾರ ರಹಸ್ಯ ಕಳ್ಳತನ ಮತ್ತು ವಂಚನೆಯ ಸಂಚು ಆರೋಪ ಹೊರಿಸಲಾಗಿದೆ.

ಎಲೆಕ್ಟ್ರಾನಿಕ್ಸ್ಎಂಜಿನಿಯರಿಂಗ್‌ ಮಾಡಿರುವ ಈ ಇಬ್ಬರು ಸಹಪಾಠಿಗಳು ಒಂದು ದಶಕಕ್ಕೂ ಕೆಚ್ಚು ಕಾಲದಿಂದ ಜತೆಯಾಗಿ ಈ ಕೆಲಸ ಮಾಡುತ್ತಿದ್ದಾರೆ. ಹತ್ತಕ್ಕೂ ಹೆಚ್ಚು ದೇಶಗಳ ಮುಂಚೂಣಿಯ ಸಂಸ್ಥೆಗಳಿಂದ ಮಾಹಿತಿ ಕಳ್ಳತನ ನಡೆಸುತ್ತಿದ್ದರು ಎನ್ನಲಾಗಿದೆ. ಈಗ ಕೊರೊನಾಗೆ ಲಸಿಕೆ ಸಂಶೋಧನೆಯಲ್ಲಿ ತೊಡಗಿರುವ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಕೆಲಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

‘ಚೀನಾದ ಇಬ್ಬರು ಆರೋಪಿಗಳು ಅಮೆರಿಕದ ಕಂಪನಿಗಳಿಂದ ಕೊರೊನಾವೈರಸ್ ಲಸಿಕೆ ಸಂಶೋಧನೆ ಕುರಿತ ಮಾಹಿತಿ ಕಳ್ಳತನ ಮಾಡಿದ್ದಾರೆ ಎಂದು ನಾವು ಆರೋಪಿಸುತ್ತಿಲ್ಲ. ಆದರೆ, ಅಮೆರಿಕನ್ ಕಂಪನಿಗಳ ವೈಜ್ಞಾನಿಕ ಆವಿಷ್ಕಾರಗಳನ್ನು ವಿದೇಶಿ ಸರ್ಕಾರಗಳು ಮತ್ತು ಹ್ಯಾಕರ್‌ಗಳು ಹೇಗೆ ಗುರಿಯಾಗಿಸಿಕೊಂಡಿದ್ದಾರೆ ಎಂಬುದನ್ನು ಈ ಪ್ರಕರಣ ಒತ್ತಿ ಹೇಳುತ್ತದೆ. ಲಸಿಕೆ ಮತ್ತು ಪರೀಕ್ಷಾ ಕಿಟ್‌ಗಳನ್ನು ಅಭಿವೃದ್ಧಿಪಡಿಸುವ ಮತ್ತು ಔಷಧ ಸಂಶೋಧನೆಯಲ್ಲಿ ತೊಡಗಿರುವ ಬಯೋಟೆಕ್ ಸಂಸ್ಥೆಗಳು ಮತ್ತು ರೋಗನಿರ್ಣಯ ಕಂಪನಿಗಳ ಕಂಪ್ಯೂಟರ್ ನೆಟ್‌ವರ್ಕ್‌ಗಳಲ್ಲಿನ ನ್ಯೂನತೆಯ ಲಾಭವನ್ನು ಹ್ಯಾಕರ್‌ಗಳು ಬಳಸಿಕೊಂಡಿದ್ದಾರೆ ಎಂದು ಇಲಾಖೆ ಹೇಳಿದೆ.

‘ಕೊರೊನಾ ವೈರಸ್‌ ವಿಶ್ವದಾದ್ಯಂತ ಪಸರಿಸಲು ಚೀನಾ ದೇಶವೇ ಕಾರಣ’ ಎಂದು ಟ್ರಂಪ್‌ ಆಡಳಿತವು ಆರೋಪಿಸುತ್ತಾ ಬಂದಿದೆ. ಮುಂಬರುವ ಚುನಾವಣೆಯ ಮೇಲೆ ಕೊರೊನಾ ಪರಿಣಾಮ ಉಂಟುಮಾಡಲಿದೆ ಎಂದು ಭಾವಿಸಲಾಗಿದೆ. ಆದ್ದರಿಂದ ಟ್ರಂಪ್‌ ಆಡಳಿತವು ಚೀನಾವನ್ನು ಗುರಿಯಾಗಿಸಿಕೊಂದು ಆರೋಪಗಳ ಮಳೆ ಸುರಿಯುತ್ತಿದೆ.

‘ಈ ಆರೋಪಿಗಳು ಕೆಲವು ಸಂದರ್ಭದಲ್ಲಿ ಚೀನಾದ ಗುಪ್ತಚರ ಇಲಾಖೆ ಅಧಿಕಾರಿಗಳ ಜತೆಗೆ ಕೆಲಸ ಮಾಡಿದ್ದಾರೆ. ಭಿನ್ನಮತೀಯರು ಮತ್ತು ಪ್ರಜಾಪ್ರಭುತ್ವ ಪರ ಹೋರಾಟಗಾರರ ಇ–ಮೇಲ್ ಖಾತೆಗಳು ಮತ್ತು ಪಾಸ್‌ವರ್ಡ್‌ಗಳನ್ನು ಕಳ್ಳತನ ಮಾಡುವ ಕೆಲಸವನ್ನೂ ಇವರು ಮಾಡಿದ್ದಾರೆ. ಬರ್ಮಾದ ಮಾನವಹಕ್ಕುಗಳ ಹೋರಾಟ ಸಂಘಟನೆಯ ಇ–ಮೇಲ್‌ ಸರ್ವರ್‌ ಅನ್ನು ಪ್ರವೇಶಿಸಲು ಹ್ಯಾಕರ್‌ಗಳು ಬಹಳ ಪ್ರಯತ್ನ ಮಾಡಿದ್ದರು. ‘ಕಳ್ಳ ಸಾಫ್ಟ್‌ವೇರ್‌’ ನೀಡುವ ಮೂಲಕ ಚೀನಾದ ಗುಪ್ತಚರ ಅಧಿಕಾರಿಗಳು ಇದಕ್ಕೆ ಸಹಕರಿಸಿದ್ದರು ಎಂದು ಆರೋಪಿಸಲಾಗಿದೆ. ಆರೋಪಿಗಳನ್ನು ಈವರೆಗೆ ಬಂಧಿಸಲಾಗಿಲ್ಲ ಎಂದು ನ್ಯಾಯಾಂಗ ಇಲಾಖೆ ತಿಳಿಸಿದೆ.

‘ತಮ್ಮ ಸ್ವಂತ ಲಾಭಕ್ಕಾಗಿ ಹ್ಯಾಕಿಂಗ್‌ ದಂಧೆ ನಡೆಸುವ, ಆದರೆ ಅಗತ್ಯಬಿದ್ದಾಗ ಸರ್ಕಾರಕ್ಕೆ ನೆರವು ಒದಗಿಸುವ ಹ್ಯಾಕರ್‌ಗಳಿಗೆ ಚೀನಾ ಸುರಕ್ಷತೆಯನ್ನು ಒದಗಿಸುತ್ತಿದೆ’ ಎಂದು ಅಮೆರಿಕದ ಸಹಾಯಕ ಅಟಾರ್ನಿ ಜನರಲ್‌ ಜಾನ್‌ ಡಿಮರ್ಸ್‌ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT