ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳಿ ಬಂದೀತೆ ವಯಸ್ಸು!

Published 17 ಮೇ 2023, 0:40 IST
Last Updated 17 ಮೇ 2023, 0:40 IST
ಅಕ್ಷರ ಗಾತ್ರ

ಸಮಯ ಯಾರಿಗಾಗಿಯೂ ನಿಲ್ಲುವುದಿಲ್ಲ. ಮುನ್ನಡೆದ ಸಮಯ ಎಂದಿಗೂ ಹಿಂದಿರುಗುವುದಿಲ್ಲ. ಹಾಗೆಯೇ ನಮ್ಮ ವಯಸ್ಸು ಕೂಡ ಇಳಿಯುವುದಿಲ್ಲ. ಇದು ನಮ್ಮೆಲ್ಲರಿಗೂ ತಿಳಿದಿರುವ ಸಾರ್ವಕಾಲಿಕ ಸತ್ಯ. ಸಮಯವೇ ಹಾಗೆ ಸದಾ ಏರುತ್ತಲೇ ಸಾಗುತ್ತದೆ. ನಮಗೆ ಕೆಲವೊಮ್ಮೆ ಇನ್ನೂ ಚಿಕ್ಕವರಾಗಿದ್ದಿದ್ದರೆ ಅಥವಾ ಮತ್ತೆ ಮಕ್ಕಳಾಗಿಬಿಡುವಂತಿದ್ದರೆ ಎಷ್ಟು ಚಂದವಿರುತ್ತಿತ್ತು ಅನ್ನಿಸುವುದುಂಟು. ಆದರೆ ಅದು ಅಸಾಧ್ಯ ಎನ್ನುವುದೂ ಸರಿ. ಒಮ್ಮೆ ಕಲ್ಪಿಸಿಕೊಂಡು ನೋಡಿ, ದೇಹಕ್ಕೆ ವಯಸ್ಸಾಗುತ್ತಿದ್ದರೂ, ಎಳೆಯರಂತೆ ಕಾಣಿಸಿಕೊಳ್ಳಬಲ್ಲರಾದರೆ, ನಾವು ನಮ್ಮ ಮನಸ್ಸನ್ನು ಮಕ್ಕಳಷ್ಟೇ ತಾಜಾ, ಕ್ರಿಯಾಶೀಲ ಹಾಗೂ ಕುತೂಹಲಿಗಳಾಗಿ ಇರಿಸಿಕೊಳ್ಳಬಲ್ಲರಾದರೆ ಎಷ್ಟು ಚೆನ್ನ? ಇದೋ ಸಾಧ್ಯವಿದೆ ಎನ್ನುತ್ತಿದ್ದಾರೆ, ‘ಬೃಗ್ಯಾಮ್ಸ್‌ ಡಿವಿಷನ್‌ ಆಫ್‌ ಜೆನಿಟಿಕ್ಸ್‌’ನ ಸಂಶೋಧಕರಾದ ಜೆಸ್ಸಿ ಪೊಗಾನಿಕ್‌. ಇತ್ತೀಚೆಗೆ ‘ಸೆಲ್‌ ಮೆಟಬಾಲಿಸಮ್‌’ ಪತ್ರಿಕೆಯಲ್ಲಿ ವರದಿಯಾಗಿರುವ ಈ ಸಂಶೋಧನೆಯು, ಮಾನಸಿಕ ಒತ್ತಡದಿಂದ ನಮ್ಮ ಜೈವಿಕ ವಯಸ್ಸು ಏರುತ್ತದಾದರೂ, ಮೊದಲಿನಂತಾಗಿಸಿಕೊಳ್ಳಬಹುದು ಎನ್ನುತ್ತಿದೆ.

ಇತ್ತೀಚೆಗೆ ಕೊರೊನಾ ವೈರಸ್ಸು ಇಡೀ ಮನುಕುಲವನ್ನೇ ಬಳಲಿಸಿತ್ತು. ಸೋಂಕಿಗೆ ತುತ್ತಾಗದೇ ಮನೆಯೊಳಗೆ ಬಂಧಿಯಾಗಿದ್ದವರು ಮತ್ತು ಸೋಂಕಿಗೆ ತುತ್ತಾಗಿದ್ದವರ ಮಾನಸಿಕ ಒತ್ತಡ ಬೇರೆಬೇರೆಯಾಗಿತ್ತು, ಜೊತೆಗೆ ಇತರೆ ಯಾವುದೇ ಶಸ್ತ್ರಚಿಕಿತ್ಸೆಗೆ ಒಳಗಾದವರು ಅಥವಾ ಗರ್ಭಿಣಿಯರ ಖಿನ್ನತೆ ಹಾಗೂ ಜೀವನಶೈಲಿಯಿಂದ ಉಂಟಾಗುತ್ತಿರುವ ಒತ್ತಡ ಮತ್ತೊಂದು ಕಡೆ. ಈ ಮನೋವ್ಯಾಧಿಗೆ ಕಾರಣ ಸಾಕಷ್ಟು, ಪರಿಣಾಮ ಒಂದೇ. ಒಟ್ಟಾರೆ ಕಾರಣ ಏನೇ ಇರಲಿ, ನಾವು ಖಿನ್ನತೆಗೊಳಗಾದರೆ ನಾವು ಜೈವಿಕವಾಗಿ ವೃದ್ದರಾಗಿಬಿಡುತ್ತೇವೆ; ಮಾಡುವ ಕಾರ್ಯದಲ್ಲಿ ಕ್ಷಮತೆಯಿರದೆ, ನಿರುತ್ಸಾಹಿಗಳಾಗಿಬಿಡುತ್ತೇವೆ ಎನ್ನುವುದು ಸರಿಯಷ್ಟೇ. ಈ ಒತ್ತಡವನ್ನು ಸರಿಯಾಗಿ ನಿರ್ವಹಿಸಿದರೆ ನಾವು ಮತ್ತೆ ಎಳೆಯರಂತಾಗಬಹುದು ಎನ್ನುತ್ತಾರೆ, ಜೆಸ್ಸಿ.

ನಮ್ಮ ದೇಹಕ್ಕೆ ಗಡಿಯಾರದ ಅವಶ್ಯಕತೆಯಿಲ್ಲ. ಅದು ತನ್ನಷ್ಟಕ್ಕೆ ತಾನೇ ಎಲ್ಲ ಕಾರ್ಯವನ್ನೂ ನಿರ್ವಹಿಸುತ್ತಿರುತ್ತದೆ. ಬೆಳಗಾಗುತ್ತಿದ್ದಂತೆ ಏಳುವ, ಕತ್ತಲಾಗುತ್ತಿದ್ದಂತೆ ಮಲಗಿಸುವ, ನಮ್ಮ ಜೀವಿತಾವಧಿಯನ್ನು ನಿಯಂತ್ರಿಸುವವುದು ವಯಸ್ಸಾಗುತ್ತಿದ್ದಂತೆ ಸಂತಾನೋತ್ಪತ್ತಿ ಶಕ್ತಿ ಕುಗ್ಗುವುದು – ಎಲ್ಲವೂ ತಂತಾನೇ ಯಾರ ಆದೇಶವೂ ಇಲ್ಲದೆ ನಡೆಯುತ್ತಿದೆ. ಇದನ್ನೇ ಜೈವಿಕ ಗಡಿಯಾರ ಎನ್ನುತ್ತೇವೆ. ಈ ಜೈವಿಕ ಗಡಿಯಾರ ನಮ್ಮ ದೇಹದ ಪ್ರತಿ ಕೋಶದ ಆರೋಗ್ಯ ಮತ್ತು ಕಾರ್ಯವೈಖರಿಯನ್ನು ನಿರ್ಧರಿಸುತ್ತದೆ. ಡಿ. ಎನ್‌. ಎ.ದಲ್ಲಾಗುವ ಆಣ್ವಿಕ ಬದಲಾವಣೆಯನ್ನು ತಿಳಿಸುತ್ತದೆ, ಹಾಗೂ ಅದರಿಂದ ಅನಾರೋಗ್ಯ ಅಥವಾ ಸಾವಿನ ಅಪಾಯ ಮುನ್ಸೂಚನೆಯನ್ನು ನೀಡುತ್ತದೆ. ಆ ಮೂಲಕ ನಮ್ಮ ಜೈವಿಕ ವಯಸ್ಸನ್ನೂ ತಿಳಿಸುತ್ತದೆ. ಜೆಸ್ಸಿ ಮತ್ತು ತಂಡದವರು, ರಕ್ತ, ಮೂತ್ರ ಅಥವಾ ಅಂಗಾಂಶಗಳನ್ನು ಜೈವಿಕ ಗುರುತುಗಳನ್ನಾಗಿ ಬಳಸಿಕೊಂಡು ಜೈವಿಕ ವಯಸ್ಸಾಗುವಿಕೆಯನ್ನು ಹಾಗೂ ಪರಿಣಾಮಗಳನ್ನು ಅಂದಾಜಿಸಿದ್ದಾರೆ. ಇದಕ್ಕಾಗಿ ಜೆಸ್ಸಿ ಮತ್ತು ಸಂಗಡಿಗರು, ಮೂರು ಬಗೆಯ ರೋಗಿಗಳನ್ನು ಪರೀಕ್ಷಿಸಿದ್ದಾರೆ. ಮೊದಲನೆಯದಾಗಿ ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾದ ಹಿರಿಯ ರೋಗಿಗಳ ರಕ್ತವನ್ನು, ಶಸ್ತ್ರಚಿಕಿತ್ಸೆಗೂ ಮುನ್ನ, ನಂತರ ಹಾಗೂ ಆಸ್ಪತ್ರೆಯಿಂದ ಮನೆಗೆ ಹೊರಡುವ ಹಂತದಲ್ಲಿ ಪರೀಕ್ಷೆ ಮಾಡಿದ್ದಾರೆ. ಹಾಗೂ ಗರ್ಭಿಣಿಯರು ಹಾಗೂ ಗರ್ಭಧರಿಸಿದ ಇಲಿಗಳ ರಕ್ತವನ್ನೂ, ಗರ್ಭಾವಸ್ಥೆಯ ಆರಂಭಿಕ ದಿನ, ಕಡೆಯ ದಿನಗಳು ಹಾಗೂ ಹೆರಿಗೆಯ ನಂತರ ಪರೀಕ್ಷಿಸಿದ್ದಾರೆ. ಕೊನೆಯದಾಗಿ ಕೊರೊನಾ ಸೋಂಕು ತಗುಲಿ ತೀವ್ರ ನಿಗಾ ಘಟಕ ಸೇರಿದ್ದ ರೋಗಿಗಳ ರಕ್ತವನ್ನೂ ಪರೀಕ್ಷಿಸಿದ್ದಾರೆ.

ಈ ಪರೀಕ್ಷೆಗಳ ಫಲಿತಾಂಶಗಳ ಪ್ರಕಾರ, ಅಪಘಾತವಾಗಿ ಶಸ್ತ್ರಚಿಕಿತ್ಸೆಗೊಳಗಾದ ರೋಗಿಗಳ ಮಾನಸಿಕ ಒತ್ತಡ ಒಂದು ವಾರದಲ್ಲೇ ಮೊದಲಿನ ಸ್ಥಿತಿಗೆ ಬಂದಿತ್ತು. ಆದರೆ ಇತರೆ ಶಸ್ತ್ರಚಿಕಿತ್ಸೆಯಾದ ರೋಗಿಗಳ ಮನಃಸ್ಥಿತಿ ಹೀಗೆ ಶೀಘ್ರವಾಗಿ ಗುಣವಾಗಲಿಲ್ಲವಂತೆ. ಗರ್ಭಿಣಿಯರೂ ಹೆರಿಗೆಯ ನಂತರ ಮಾನಸಿಕ ಸ್ತಿಮಿತಕ್ಕೆ ಬಂದು, ಜೈವಿಕವಾಗಿ ವಯಸ್ಸಾದಂತೆ ಕಾಣಿಸುತ್ತಿದ್ದ ಸಮಸ್ಯೆ ಕ್ರಮೇಣ ಬಗಹರಿಯಿತಂತೆ. ಕೊರೊನಾ ಸೋಂಕಿತರಲ್ಲಿಯೂ ಈ ರೀತಿಯ ಧನಾತ್ಮ ಬದಲಾವಣೆ ಕಂಡಿತ್ತಂತೆ. ಆದರೆ ಎಲ್ಲ ರೋಗಿಗಳೂ ಒಂದೇ ರೀತಿಯಲ್ಲಿ, ಒಂದೇ ವೇಗದಲ್ಲಿ ಚೇತರಿಸಿಕೊಳ್ಳದೇ, ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಆ್ಯಂಟಿ-ಏಜಿಂಗ್‌ನ ಬಗೆಗಿನ ಸಂಶೋಧನೆಗಳ ಫಲಿತಾಂಶಗಳನ್ನು ಹೋಲಿಸಿ ನೋಡಿದಾಗ ಜೈವಿಕವಾಗಿ ವಯಸ್ಸಾಗುವಿಕೆಯನ್ನು ಇನ್ನಷ್ಟು ಅರ್ಥಮಾಡಿಕೊಳ್ಳಬಹುದು ಎನ್ನುವುದು ಇವರ ಅಭಿಪ್ರಾಯ. ಮುಂದಿನ ಸಂಶೋಧನೆಯಲ್ಲಿ ಚೇತರಿಕೆಯನ್ನು ಇನ್ನಷ್ಟು ವೇಗವಾಗಿಸುವ ಬಗ್ಗೆ ಕೆಲಸ ಮಾಡಲಿದ್ದೇವೆ ಎನ್ನುತ್ತಾರೆ, ಜೆಸ್ಸಿ.

ಒಮ್ಮೆ ಮನಸ್ಸು-ದೇಹಕ್ಕೆ ವಯಸ್ಸಾಗಿಬಿಟ್ಟರೆ ಅದನ್ನು ಮರಳಿ ಪಡೆಯಲು ಅಥವಾ ಕಡಿಮೆ ಮಾಡಲು ಸಾಧ್ಯವೇ ಇಲ್ಲ ಎನ್ನುವ ವಾದಕ್ಕೆ ಜೆಸ್ಸಿ ಅವರ ಸಂಶೋಧನೆ ಉತ್ತರ ನೀಡಿದೆ. ಒತ್ತಡವನ್ನು ಕಡಿಮೆ ಮಾಡಿಕೊಂಡರೆ ಮತ್ತೆ ಎಳೆಯರಾಗಬಹುದು. ತರುಣರಂತೆ ಕಾಣಬಹುದು. ಹಾಗಾಗಿ ಒತ್ತಡವನ್ನು ಹೇಗೆ ನಿರ್ವಹಿಸಬೇಕು ಎನ್ನುವುದಕ್ಕೆ ಪರಿಹಾರ ಕಂಡುಕೊಂಡರೆ ದೀರ್ಘಾಯುಷಿಗಳಾಗಬಹುದು ಎನ್ನುತ್ತಾರೆ, ಸಂಶೋಧಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT