ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬರುತ್ತಿದ್ದಾರೆ ‘ಎಐ’ ದಲ್ಲಾಳಿಗಳು!

Published : 6 ಆಗಸ್ಟ್ 2024, 23:30 IST
Last Updated : 6 ಆಗಸ್ಟ್ 2024, 23:30 IST
ಫಾಲೋ ಮಾಡಿ
Comments

ದಲ್ಲಾಳಿಗಳು ಎಂದ ತಕ್ಷಣ ನಮ್ಮ ತಲೆಯೊಳಗೊಂದು ಋಣಾತ್ಮಕ ಚಿತ್ರಣ ಬಂದು ಕೂರುತ್ತದೆ. ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡಿಸಿಕೊಳ್ಳಲು ಬೇಕಾಗುವ ದಲ್ಲಾಳಿಗಳು, ರಿಯಲ್ ಎಸ್ಟೇಟ್‌ ವಲಯದಲ್ಲಿರುವ ದಲ್ಲಾಳಿಗಳು ಎಂದೇ ನಾವು ಭಾವಿಸುತ್ತೇವೆ. ಆದರೆ, ಬಹುತೇಕ ಇದೇ ರೀತಿಯ ಕೆಲಸವನ್ನು ಮಾಡಿಯೂ, ನಮ್ಮ ಕೆಲಸವನ್ನು ಹಗುರವಾಗಿಸುವ ದಲ್ಲಾಳಿಗಳು ಈಗ ಆರ್ಟಿಫಿಶಿಯಲ್ ಇಂಟಲಿಜೆನ್ಸ್‌ ಕಾಲದಲ್ಲಿ ಮುನ್ನೆಲೆಗೆ ಬರುತ್ತಿದ್ದಾರೆ. ಇವರು ಮನುಷ್ಯರಲ್ಲ. ಆದರೆ ಇವರ ಹಿಂದೆ ಮನುಷ್ಯರಿರುತ್ತಾರೆ!

ಜನರೇಟಿವ್ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಂದ ಮೇಲಂತೂ ಈ ಏಜೆಂಟ್‌ಗಳ ಮಹತ್ವ ಇನ್ನಷ್ಟು ಹೆಚ್ಚಾಗಿದೆ. ಈಗಾಗಲೇ ಜನರೇಟಿವ್ ಎಐ ಒಂದು ಅಡಿಪಾಯವನ್ನು ಹಾಕಿಕೊಟ್ಟಿದೆ. ಈ ಅಡಿಪಾಯವನ್ನು ಆಧರಿಸಿ, ಇತರ ಸಂಸ್ಥೆಗಳು ಬೇರೆ ಬೇರೆ ಅಪ್ಲಿಕೇಶನ್‌ಗಳನ್ನು ರೂಪಿಸುತ್ತಾರೆ. ಇವು ಮೊಬೈಲ್ ಆ್ಯಪ್‌ಗಳು, ಕಂಪ್ಯೂಟರ್ ಅಪ್ಲಿಕೇಶನ್‌ಗಳು ಮಾತ್ರ ಆಗಬೇಕೆಂದೇನಿಲ್ಲ. ಸಣ್ಣ ಪ್ರಾಡಕ್ಟ್ ಕೂಡ ಆಗಿರಬಹುದು. ಆದರೆ, ನಮಗೆ ನಮ್ಮ ಸಣ್ಣ ಸಣ್ಣ ಅಗತ್ಯಗಳನ್ನು ಪೂರೈಸುವುದಕ್ಕೆ, ಸಣ್ಣ ಸಣ್ಣ ಕೆಲಸವನ್ನು ಮಾಡಿಕೊಡುವುದಕ್ಕೆ ಸಹಾಯ ಮಾಡುತ್ತವೆ. ಇವುಗಳನ್ನು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಜಗತ್ತು ಏಜೆಂಟ್‌ಗಳು ಎಂದು ಕರೆಯುತ್ತದೆ.

‘ಕತ್ತಿಗೆ ನೇತುಹಾಕಿಕೊಳ್ಳುವ ಸರವೊಂದರ ಪದಕಕ್ಕೆ ಕಂಪನಿಯೊಂದು ಹೊಸರೂಪ ಕೊಡುತ್ತದೆ. ಇದರಲ್ಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್‌ ಅನ್ನು ಸೇರಿಸಲಾಗಿದೆ. ಇದು ನಮ್ಮ ಹೃದಯ ಬಡಿತ ಸೇರಿದ ಹಾಗೆ ಎಲ್ಲ ಆರೋಗ್ಯ ಮಾಹಿತಿಯನ್ನೂ ಸಂಗ್ರಹಿಸಿ ಕೊಡುತ್ತದೆ. ಈ ಚೈನ್ ಮತ್ತು ಪದಕ ನಮ್ಮ ದೇಹಕ್ಕೆ ಅಂಟಿಕೊಂಡೇ ಇರುತ್ತದೆ. ಮಲಗುವಾಗಲೂ ನಾವು ಇದನ್ನು ತೆಗೆಯುವುದಿಲ್ಲ. ಹೀಗಾಗಿ, ಇದರ ಮಾಹಿತಿ ನಿಖರವಾಗಿರುತ್ತದೆ. ಮುಂದಿನ ದಿನಗಳಲ್ಲಿ ಇಂತಹ ಎಐ ಏಜೆಂಟ್‌ಗಳು ಹೊಸ ಹೊಸ ಉತ್ಪನ್ನಗಳನ್ನು ಹೊರತರುತ್ತವೆ. ಇವು ಮನುಷ್ಯನ ಬದುಕನ್ನು ಇನ್ನಷ್ಟು ಸುಲಲಿತವಾಗಿಸುತ್ತದೆ. ಜೊತೆಗೆ, ನಮ್ಮ ಉತ್ಪಾದಕತೆಯೂ ಹೆಚ್ಚುತ್ತದೆ’ ಎನ್ನುತ್ತಾರೆ ಮರ್ಸಿಡಿಸ್ ಸೊರಿಯಾ.

ಜನರೇಟಿವ್ ಆರ್ಟಿಫಿಶಿಯಲ್ ಇಂಟಲಿಜೆನ್ಸ್‌ನಲ್ಲಿ ಆಗುತ್ತಿರುವ ಬದಲಾವಣೆ, ಬ್ಯುಸಿನೆಸ್‌ನಲ್ಲಿ ಇದರ ಬಳಕೆ ಹಾಗೂ ಭವಿಷ್ಯದಲ್ಲಿ ಈ ವಲಯದ ಸಾಧ್ಯತೆಗಳ ಬಗ್ಗೆ ಮರ್ಸಿಡಿಸ್ ಸೊರಿಯಾ ಬೆಂಗಳೂರಿನ ಐಐಎಸ್‌ಸಿಯಲ್ಲಿ ಅಮೆರಿಕದ ರಾಯಭಾರ ಕಚೇರಿ ಹಮ್ಮಿಕೊಂಡಿದ್ದ ಸಂವಾದದಲ್ಲಿ ಅವರು, ಈ ಜನರೇಟಿವ್ ಆರ್ಟಿಫಿಶಿಯಲ್ ಇಂಟಲಿಜೆನ್ಸ್‌ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಏಜೆಂಟ್‌ಗಳು ಎಷ್ಟು ಹೆಚ್ಚು ಮಹತ್ವ ವಹಿಸುತ್ತವೆ ಎಂಬ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.

ಅಷ್ಟೇ ಅಲ್ಲ, ನಾವು ಈಗ ಬಳಸುತ್ತಿರುವ ಮೊಬೈಲ್‌ ಫೋನ್‌ಗಳಾಗಲಿ, ಲ್ಯಾಪ್‌ಟಾಪ್‌, ಟ್ಯಾಬ್‌ಗಳಾಗಲೀ... ಈ ಜೆನ್ ಎಐ ಬಳಸಿಕೊಂಡು ಮುಂದಿನ ದಿನಗಳಲ್ಲಿ ಹುಟ್ಟಿಕೊಳ್ಳುವ ಏಜೆಂಟ್‌ಗಳ ದಯೆಯಿಂದ ಇನ್ನಷ್ಟು ಸಣ್ಣದಾಗುತ್ತ ಸಾಗುತ್ತವೆ. ನಮ್ಮ ಕಿಸೆಯಲ್ಲಿರುವ ಫೋನು ಚಿಕ್ಕದಾಗುತ್ತ ಸಾಗಬಹುದು. ಏಕೆಂದರೆ, ನಾವು ಕೈಯಿಂದ ಮಾಡುವ ಬಹುತೇಕ ಕೆಲಸವನ್ನು ಮುಂದೆ ಈ ಜೆನ್ ಎಐ ಮಾಡುತ್ತದೆ.

ಅಷ್ಟೇ ಯಾಕೆ, ಈಗ ಒಂದು ವೆಬ್‌ಸೈಟ್ ತಯಾರಿಸಿ, ಅದನ್ನು ವಿವಿಧ ಭಾಷೆಗಳಲ್ಲಿ ಒಂದೇ ಕ್ಲಿಕ್‌ನಲ್ಲಿ ಓದುವಂತೆ ಮಾಡಬಲ್ಲ APIಗಳು ಇರುವ ಹಾಗೆಯೇ, ನಮಗೆ ಬೇಕಾದ ಯಾವುದೋ ಒಂದು ಸಾಧನಕ್ಕೋ, ಅಪ್ಲಿಕೇಶನ್‌ಗೋ ಯಾವುದಾದರೂ ಒಂದು ಕಂಪನಿಯ ಜೆನ್‌ ಎಐ ಅನ್ನು ಇಳಿಸಿಕೊಂಡು ನಮಗೆ ಬೇಕಾದ ಕೆಲಸ ಮಾಡುವಂತೆ ಅದನ್ನು ತಿದ್ದಬಹುದು. ಆಗ ಇದೂ ಒಂದು ಏಜೆಂಟ್ ರೀತಿ ಕೆಲಸ ಮಾಡುತ್ತದೆ. ಹೀಗಾಗಿ, ಇಡೀ ಜೆನ್ ಎಐ ವಲಯದ ಬೆಳವಣಿಗೆ ಮುಂದಿನ ದಿನಗಳಲ್ಲಿ ಈ ಏಜೆಂಟರನ್ನೇ ಅವಲಂಬಿಸಿದೆ.

ಇದು ಇನ್ನೊಂದು ರೀತಿಯ ಅನುಕೂಲವೂ ಹೌದು. ಏಕೆಂದರೆ, ಇದರಿಂದಾಗಿ ಯಾವುದೇ ಒಂದು ಕಂಪನಿಯ ಬಳಿಯೇ ಈ ಜೆನ್‌ ಎಐ ಎಂಬ ದೈತ್ಯನ ಮೂಗುದಾರ ಇರುವುದಿಲ್ಲ. ಒಂದು ವೇಳೆ, ಒಂದೇ ಕಂಪನಿಯ ಬಳಿಯೇ ಇಡೀ ಜೆನ್ ಎಐ ಎಂಜಿನ್‌ನ ಸೂತ್ರ ಇದ್ದರೆ, ಅದು ಅನಾಹುತಕ್ಕೆ ದಾರಿ. ಸದ್ಯಕ್ಕೆ ಮೂರು ಕಂಪನಿಗಳು ಈ ವಲಯದಲ್ಲಿವೆ. ಮುಂದಿನ ದಿನಗಳಲ್ಲಿ ಇದರ ಅಡಿಪಾಯವನ್ನು ಆಧರಿಸಿ ಇನ್ನಷ್ಟು ಕಂಪನಿಗಳು ತಮ್ಮದೇ ಸಣ್ಣ ಸಣ್ಣ ಕೆಲಸ ಮಾಡುವ ಏಜೆಂಟರನ್ನು ಸೃಷ್ಟಿಸಿಕೊಳ್ಳುತ್ತವೆ. ಈ ಮೂಲಕ ಈ ಕ್ಷೇತ್ರ ಇನ್ನಷ್ಟು ವ್ಯಾಪ್ತವಾಗುತ್ತ ಸಾಗುತ್ತದೆ.

ಅಷ್ಟೇ ಅಲ್ಲ, ಹೀಗೆ ಹೊಸ ಹೊಸ ಏಜೆಂಟರುಗಳು ಎಂಬ ಬಿಳಲುಗಳು ಈ ಜೆನ್ ಎಐ ಎಂಬ ಬೃಹತ್‌ ಗಾತ್ರದ ಮರದ ಕೆಳಗೆ ಹುಟ್ಟಿಕೊಳ್ಳುವ ಮೂಲಕ ಅದೊಂದು ಜಾಲವಾಗಿ, ಬಂಧವಾಗಿ ನಮ್ಮನ್ನು ಬೆಸೆಯುತ್ತದೆ. ಹೀಗೆ ಈ ವಲಯ ಯಾರದೋ ಒಬ್ಬರ ನಿಯಂತ್ರಣಕ್ಕೆ ಸಿಗದೇ ವಿಕೇಂದ್ರೀಕರಣವೂ ಆಗುತ್ತದೆ. ಜೊತೆಗೆ, ಜನರ ವೈವಿಧ್ಯಮಯ ಬಳಕೆಗೂ ಇದರ ಪ್ರಯೋಜನ ಸಿಗುವಂತಾಗುತ್ತದೆ ಎಂದು ಭವಿಷ್ಯದ ಬಗ್ಗೆ ಸೋರಿಯಾ ಹೇಳುತ್ತಾರೆ. ಸರ್ಕಾರಗಳಿಗೂ ಇದೇ ಬೇಕಾಗಿದೆ. ಯಾವುದೇ ಒಂದು ಕಂಪನಿ ಇದನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಏಕಸ್ವಾಮ್ಯ ಸಾಧಿಸುವುದರ ಬದಲಿಗೆ, ಹಲವು ಕಂಪನಿಗಳು ಇದರಲ್ಲಿ ಭಾಗವಹಿಸಿ, ತನ್ನದೇ ಆವೃತ್ತಿಯನ್ನು ಬೆಳೆಸುತ್ತ ಸಾಗಿದಾಗ ಜನರ ಗೌಪ್ಯತೆಯ ಉಲ್ಲಂಘನೆ ಹಾಗೂ ಇತರ ಅಪತ್ತಿನ ಸಾಧ್ಯತೆಯೂ ಕಡಿಮೆಯಾಗುತ್ತದೆ. ಈ ನಿಟ್ಟಿನಲ್ಲಿ, ಮುಂದಿನ ದಿನಗಳಲ್ಲಿ ಎಐ ಬಳಸಿಕೊಂಡು ಹೊಸ ಹೊಸ ಏಜೆಂಟರುಗಳು ನಮ್ಮೆದುರು ರೂಪವನ್ನು ತಾಳುವ ದಿನಗಳು ದೂರವಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT