ಮಂಗಳವಾರ, ಜುಲೈ 5, 2022
26 °C

ಡ್ಯೂಯೆಲ್ ಸಿಮ್‌ ದ್ವಂದ್ವಕ್ಕೀಗ ಕೊನೆಗಾಲ!

ಕೃಷ್ಣ ಭಟ್‌ Updated:

ಅಕ್ಷರ ಗಾತ್ರ : | |

Prajavani

ಹತ್ತು ವರ್ಷಗಳ ಹಿಂದೆ ಒಂದೇ ಸಿಮ್ ಫೋನ್‌ಗಳು ಎಂದರೆ ಜನರು ಮಾರು ದೂರ ಓಡುತ್ತಿದ್ದರು. ಎರಡು ಸಿಮ್ ಹಾಕುವ ಅವಕಾಶ ಇಲ್ಲದಿದ್ದರೆ ಜನರಿಗೆ ಅಂಥ ಫೋನ್‌ಗಳು ಎರಡನೇ, ಮೂರನೇ ಆಯ್ಕೆಯಾಗಿರುತ್ತಿದ್ದವು. ಡ್ಯೂಯೆಲ್ ಸಿಮ್‌ ಫೋನ್‌ಗಳು 2000ದ ಹೊತ್ತಿಗೇ ಬಂದಿದ್ದರೂ, ಭಾರತಕ್ಕೆ ಈ ಟೆಕ್ನಾಲಜಿ ಸ್ವಲ್ಪ ತಡವಾಗಿಯೇ ಬಂತು.

ಚೀನಾದ ಸ್ಮಾರ್ಟ್‌ಫೋನ್‌ಗಳು ಕಾಲಿಡುತ್ತಿದ್ದ ಹಾಗೆಯೇ ಡ್ಯುಯೆಲ್ ಸಿಮ್ ಜನಪ್ರಿಯವಾಯಿತು. ನೆಟ್‌ವರ್ಕ್‌ ಸೇವಾ ಪೂರೈಕೆದಾರರ ಜೊತೆಗೆ ಒಪ್ಪಂದದ ಅಡಿಯಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಖರೀದಿ ಮಾಡುವ ವ್ಯವಸ್ಥೆ ಇಲ್ಲದ ದೇಶಗಳಲ್ಲಿ ಈ ಸಿಂಗಲ್‌ ಸಿಮ್‌ ಫೋನ್‌ಗಳು ಅಷ್ಟಾಗಿ ಜನಪ್ರಿಯವಾಗಲೇ ಇಲ್ಲ. ಇದಕ್ಕೆ ಕಾರಣಗಳು ಹಲವು. ಟೆಲಿಕಾಂ ಕಂಪನಿಗಳೇ ಈ ಡ್ಯೂಯೆಲ್ ಸಿಮ್ ಫೋನ್‌ಗಳಿಗೆ ಹೆಚ್ಚು ಒಲವು ತೋರಿದ್ದು ಒಂದಾದರೆ, ಒಂದೊಂದು ಕಂಪನಿಯೂ ವಿಭಿನ್ನ ರೀತಿಯ ಟ್ಯಾರಿಫ್‌ ಹೊಂದಿರುವುದು ಕೂಡ ಇದಕ್ಕೆ ಕಾರಣವಾಗಿತ್ತು. ಕೆಲವು ನೆಟ್‌ವರ್ಕ್ ಸೇವೆಯ ಪೂರೈಕೆದಾರ ಕಂಪನಿಗಳು ಕರೆಗೆ ದರ ಕಡಿಮೆ ಇಟ್ಟಿದ್ದರೆ, ಇನ್ನು ಕೆಲವು ಕಂಪನಿಗಳು ಡೇಟಾಗೆ ದರ ಕಡಿಮೆ ಇಟ್ಟಿದ್ದವು. ಹೀಗೆ ತಮ್ಮ ಅನುಕೂಲಕ್ಕೆ ಎರಡು ಸಿಮ್‌ಗಳನ್ನು ಖರೀದಿ ಮಾಡುತ್ತಿದ್ದರು. ಇನ್ನು ಗ್ರಾಮೀಣ ಪ್ರದೇಶಗಳಲ್ಲಿ, ನೆಟ್‌ವರ್ಕ್ ಸಮಸ್ಯೆಯಿಂದಾಗಿಯೂ ಜನರು ಎರಡು ಸಿಮ್ ಇಟ್ಟುಕೊಳ್ಳುತ್ತಿದ್ದರು.

ಒಂದು ಹಂತಕ್ಕೆ ಎಲ್ಲ ನೆಟ್‌ವರ್ಕ್ ಸೇವೆ ಪೂರೈಕೆದಾರರೂ ಒಂದೇ ರೀತಿಯ ಟ್ಯಾರಿಫ್‌ ಶುರು ಮಾಡಿದ ಹಾಗೆ ಡ್ಯೂಯೆಲ್ ಸಿಮ್‌ ಫೋನ್‌ಗಳು ತಮ್ಮ ಜನಪ್ರಿಯತೆ ಕಳೆದುಕೊಳ್ಳ ಹತ್ತಿದವು. ಆದರೆ, 4ಜಿ ನೆಟ್‌ವರ್ಕ್ ಬರುತ್ತಿದ್ದಂತೆಯೇ ಮತ್ತೆ ನೆಟ್‌ವರ್ಕ್‌ ಸಮಸ್ಯೆ ಹಾಗೂ ಡೇಟಾ ಹಾಗೂ ಕರೆ ದರದ ಮಧ್ಯೆ ವ್ಯತ್ಯಾಸ ಕಾಣಿಸಿಕೊಂಡಿತು. ಆಗ ಮತ್ತೆ ಜನರು ಡೇಟಾಗೆ ಒಂದು, ಕರೆಗೆ ಇನ್ನೊಂದು ಸಿಮ್‌ ಇಟ್ಟುಕೊಳ್ಳಲು ಶುರು ಮಾಡಿದರು.

ಸದ್ಯ, ಎಲ್ಲ ಟೆಲಿಕಾಂ ಸೇವಾ ಪೂರೈಕೆದಾರರ ಪ್ಯಾಕೇಜ್‌ಗಳೂ ಒಂದೇ ರೀತಿ ಇವೆ! ಇನ್ನು ಮುಂದಿನ ದಿನಗಳಲ್ಲಿ ಟ್ಯಾರಿಫ್‌ ಏರಿಕೆಯಾಗುತ್ತಲೇ ಹೋಗುತ್ತದೆಯೇ ಹೊರತು ಕಡಿಮೆಯಂತೂ ಆಗದು. ನೆಟ್‌ವರ್ಕ್‌ ಕವರೇಜ್‌ ಸಮಸ್ಯೆಯೂ ಈಗ ಮೊದಲಿನಷ್ಟು ಇಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ವರ್ಕ್‌ ಫ್ರಮ್ ಹೋಮ್‌ ಶುರುವಾದ ಮೇಲೆ ಜನರು ಬ್ರ್ಯಾಡ್‌ಬ್ಯಾಂಡ್ ಖರೀದಿ ಮಾಡುತ್ತಿದ್ದಾರೆ. ಮೊಬೈಲ್‌ ನೆಟ್‌ವರ್ಕ್ ಪೂರೈಕೆದಾರರು ಒದಗಿಸುವ ಡೇಟಾ ಇಂಥವರಿಗೆ ಹೆಚ್ಚಾಗಿ ಬೇಕಾಗಿರುವುದಿಲ್ಲ. ಮನೆಯಿಂದ ಹೊರಗೆ ಹೋದಾಗಲಷ್ಟೇ ಡೇಟಾ ಬಳಕೆಯಾಗುತ್ತದೆ. ಅಲ್ಲದೆ, 4ಜಿ ವ್ಯಾಪಕವಾಗಿ ಬಳಕೆಗೆ ಬಂದ ನಂತರ ನೆಟ್‌ವರ್ಕ್‌ ಮೂಲಕ ಕರೆ ಮಾಡುವ ತಂತ್ರಜ್ಞಾನವೇ ಮರೆಯಾಗಿ, ಡೇಟಾ ಮೂಲಕ ಕರೆ ಮಾಡುವ ತಂತ್ರಜ್ಞಾನ ಚಾಲ್ತಿಗೆ ಬಂದಿದೆ. ಹೀಗಾಗಿ, ಈಗ ನಮಗೆ ಕರೆ ಮಾಡಲು, ಇಂಟರ್ನೆಟ್ ಬಳಸಲು ಡೇಟಾ ಇದ್ದರೆ ಸಾಕು ಎಂಬಂತಾಗಿದೆ. ಇದೆಲ್ಲ ಕಾರಣದಿಂದ ಜನರಿಗೆ ಎರಡನೇ ಸಿಮ್ ಹೊರೆಯಾಗುತ್ತಿದೆ. ಹೀಗಾಗಿ ಅವರು, ಎರಡನೇ ಸಿಮ್ ಅನ್ನು ಕಸದ ಬುಟ್ಟಿಗೆ ಎಸೆಯಲು ಆರಂಭಿಸಿದ್ದಾರೆ.

ಮುಂದಿನ ದಿನಗಳಲ್ಲಿ ಈ ಪ್ರವೃತ್ತಿ ಇನ್ನೂ ಹೆಚ್ಚುವ ಸಾಧ್ಯತೆ ಇದೆ. ಟ್ಯಾರಿಫ್‌ ಹೆಚ್ಚಾಗುತ್ತಿದ್ದ ಹಾಗೆ ಈ ಪ್ರವೃತ್ತಿ ಹೆಚ್ಚುವುದು ಸಹಜ.
ಹಾಗಂತ ಈ ಟ್ರೆಂಡ್ ಕಾಯಂ ಏನಲ್ಲ. ಇನ್ನೊಂದೆರಡು ವರ್ಷಗಳಲ್ಲಿ 5ಜಿ ನೆಟ್‌ವರ್ಕ್ ಬರಲಿದೆ. ಅಲ್ಲಿಯವರೆಗೆ ಟೆಲಿಕಾಂ ನೆಟ್‌ವರ್ಕ್‌ ಸೇವೆ ಪೂರೈಸುವ ಕಂಪನಿಗಳು ಬೆಲೆ ಇಳಿಸುವ ಗೋಜಿಗೆ ಹೋಗುವುದಿಲ್ಲ. ಅವುಗಳಿಗೆ 5ಜಿ ನೆಟ್‌ವರ್ಕ್‌ ಅನ್ನು ಎಲ್ಲ ಕಡೆ ವಿಸ್ತರಿಸುವುದಕ್ಕೆ ಹಣ ಬೇಕಾಗಿದೆ. ಅಲ್ಲಿಯವರೆಗೆ ಟ್ಯಾರಿಫ್‌ ಏರಿಕೆಯಾಗುತ್ತಲೇ ಇರುತ್ತದೆ. ಆದರೆ, 5ಜಿ ನೆಟ್‌ವರ್ಕ್ ವ್ಯಾಪಿಸಲು ಆರಂಭಿಸಿದ ನಂತರ ಮತ್ತೊಮ್ಮೆ ಡೇಟಾ ದರದಲ್ಲಿ ಕಂಪನಿಗಳ ಮಧ್ಯೆ ವ್ಯತ್ಯಾಸ ಕಾಣಿಸಲು ಆರಂಭವಾಗುತ್ತದೆ. ಅಷ್ಟೇ ಅಲ್ಲ, ನೆಟ್‌ವರ್ಕ್ ಕವರೇಜ್‌ನಲ್ಲಿ ವ್ಯತ್ಯಾಸವೂ ಆಗುತ್ತದೆ. ಆಗ ಮತ್ತೊಮ್ಮೆ ಡ್ಯೂಯೆಲ್ ಸಿಮ್ ಬಳಕೆ ಶುರುವಾಗುತ್ತದೆ.

ಹೀಗಾಗಿ, ಎಲ್ಲ ಟೆಲಿಕಾಂ ಕಂಪನಿಗಳ ಡೇಟಾ ದರವೂ ಒಂದೇ ಆಗಿರುವ ಈ ಹೊತ್ತಿನಲ್ಲಿ ಎರಡು ಸಿಮ್ ಇಟ್ಟುಕೊಂಡು, ಎರಡೂ ಸಿಮ್‌ಗೂ ರಿಚಾರ್ಜ್ ಮಾಡುತ್ತ ಹಣ ಪೋಲು ಮಾಡುವುದು ಜಾಣತನವಲ್ಲ. ಸದ್ಯಕ್ಕೆ, ನಿಮ್ಮ ಬಳಿ ಡ್ಯೂಯೆಲ್ ಸಿಮ್ ಇದೆಯೇ? ನೀವು ಒಂದೇ ಸಿಮ್ ಅನ್ನು ನಿಮ್ಮ ಎಲ್ಲ ವ್ಯವಹಾರಗಳಿಗೆ ಬಳಸುತ್ತಿದ್ದೀರಾ? ಹಾಗಾದರೆ, ಒಂದು ಸಿಮ್‌ಗೆ ತೆಗೆದು ಬದಿಗಿಡಿ. ಮುಂದೊಮ್ಮೆ ಟೆಲಿಕಾಂ ಕಂಪನಿಗಳ ಸೇವಾ ದರ ಇಳಿಕೆಯಾಗಲು ಶುರುವಾದಾಗ ಮತ್ತೊಂದು ಸಿಮ್ ಬಳಕೆ ಶುರು ಮಾಡಿಕೊಳ್ಳಬಹುದು. ಅಲ್ಲಿಯವರೆಗೆ, ‘ಏಕಸಿಮ್ ವ್ರತಸ್ಥ’ರಾದರೆ ಯಾವ ತೊಂದರೆಯೂ ಆಗದು! 

ಬಳಕೆದಾರರ ಸಂಖ್ಯೆಯಲ್ಲಿ ಇಳಿಕೆ

2019ರಿಂದಲೂ ಹೊಸ ಮೊಬೈಲ್ ಬಳಕೆದಾರರ ಸಂಖ್ಯೆಯಲ್ಲಿ ಇಳಿಕೆ ಕಾಣುತ್ತಿದೆ. 2019ರ ಮಾರ್ಚ್‌ನಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆ 2.18 ಕೋಟಿ ಕಡಿಮೆಯಾಗಿದೆ. ಇನ್ನು 2021ರ ಡಿಸೆಂಬರ್‌ನಲ್ಲಿ ಸುಮಾರು 1.29 ಕೋಟಿಯಷ್ಟು ಮೊಬೈಲ್‌ ಸಬ್‌ಸ್ಕ್ರೈಬರ್‌ಗಳ ಸಂಖ್ಯೆ ಇಳಿಕೆಯಾಗಿದೆ. ಈ ಇಳಿಕೆಗೆ ಮುಖ್ಯ ಕಾರಣವೇ, ಜನರು ತಮ್ಮ ಬಳಿ ಇರುವ ಎರಡು ಸಿಮ್‌ಗಳಲ್ಲಿ ಒಂದು ಸಿಮ್ ತೆಗೆದುಹಾಕಿ, ಒಂದೇ ಸಿಮ್ ಬಳಕೆ ಮಾಡಲು ಶುರು ಮಾಡಿದ್ದು ಎಂದು ಭಾರತೀಯ ಸೆಲ್ಯುಲರ್ ಆಪರೇಟರ್‌ಗಳ ಸಂಘಟನೆ (ಸಿಒಎಐ) ವಿಶ್ಲೇಷಿಸಿದೆ. ಹಾಗೆಂದ ಮಾತ್ರಕ್ಕೆ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಕಡಿಮೆಯಾಗಿಲ್ಲ, ಅದು ಏರುತ್ತಲೇ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು