ಶುಕ್ರವಾರ, ಸೆಪ್ಟೆಂಬರ್ 17, 2021
22 °C
ವೈಯಕ್ತಿಕ ಮಾಹಿತಿಗೆ ಕನ್ನ ಹಾಕುತ್ತಿವೆ ಆ್ಯಪ್‌ಗಳು

PV Web Exclusive: ಆ್ಯಪ್‌ಗಳ ಗೀಳು ಬಿಟ್ಟುಬಿಡೋಣ

ವಿಶ್ವನಾಥ ಎಸ್. Updated:

ಅಕ್ಷರ ಗಾತ್ರ : | |

Prajavani

ಒಂದು ಸ್ಮಾರ್ಟ್‌ಫೋನ್‌ ಖರೀದಿಸಿದ ಬಳಿಕ, ಗೂಗಲ್‌, ಫೇಸ್‌ಬುಕ್‌, ವಾಟ್ಸ್‌ಆ್ಯಪ್‌, ಇನ್‌ಸ್ಟಾಗ್ರಾಂ ಹೀಗೆ ನಾವು ಇನ್‌ಸ್ಟಾಲ್‌ ಮಾಡುವ ಪ್ರತಿಯೊಂದು ಆ್ಯಪ್‌ಗಳಿಗೂ  ನಾವೇ ಒಂದು ಸರಕಾಗಿ ಬಿಡುತ್ತೇವೆ. ಹೇಗೆ ಎನ್ನುವಿರಾ!?  ಈ ಡಿಜಿಟಲ್‌ ಯುಗದಲ್ಲಿ ವೈಯಕ್ತಿಕ ಮಾಹಿತಿಗಿಂತಲೂ ಮಿಗಿಲಾದ ಬೆಲೆಬಾಳುವ ವಸ್ತು ಬೇರೊಂದಿಲ್ಲ.

ಗೂಗಲ್‌ ಪ್ಲೇಸ್ಟೋರ್‌ನಲ್ಲಿ ವೈಯಕ್ತಿಕ ಮಾಹಿತಿ ಕದಿಯುವ ಆ್ಯಪ್‌ಗಳ ಸಂಖ್ಯೆ ಪ್ರತಿ ವರ್ಷವೂ ಹೆಚ್ಚಾಗುತ್ತಲೇ ಇದೆ. ಮಾಹಿತಿಗಳು ಸೋರಿಕೆಯಾದ ನಂತರವೇ ಆ್ಯಪ್‌ಗಳನ್ನು ಪ್ಲೇಸ್ಟೋರ್‌ನಿಂದ ತೆಗೆಯಲಾಗುತ್ತಿದೆ. ಈ ಬಗ್ಗೆ ತಜ್ಞರು, ಬಳಕೆದಾರರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಲೇ ಇದ್ದಾರೆ. ಆದಾಗ್ಯೂ ಗೂಗಲ್‌ ಮಾತ್ರ ಸುರಕ್ಷತಾ ಮಾನದಂಡಗಳನ್ನು ಬಿಗಿಗೊಳಿಸುವ ಕಡೆಗೆ ಗಮನ ತೋರಿದಂತೆ ಕಾಣುತ್ತಿಲ್ಲ.

ಮಾಲ್‌ವೇರ್‌ಗಳಿವೆ ಎನ್ನುವ ಕಾರಣಕ್ಕೆ 2017ರಿಂದ 2020ರ ಆಗಸ್ಟ್‌ವರೆಗೆ ಪ್ಲೇಸ್ಟೋರ್‌ನಿಂದ ತೆಗೆದುಹಾಕಿರುವ ಅ್ಯಪ್‌ಗಳ ಸಂಖ್ಯೆ 1,700 ಕ್ಕೂ ಅಧಿಕ. ಸ್ಮಾರ್ಟ್‌ಫೋನ್‌ನ ಮೈಕ್‌ ಮೂಲಕ ಬಳಕೆದಾರ ಏನ್ನು ಮಾತನಾಡುತ್ತಿದ್ದಾನೆ ಮತ್ತು ಕೇಳುತ್ತಿದ್ದಾನೆ ಎನ್ನುವುದನ್ನು ಅವನಿಗೆ ಗೊತ್ತಿಲ್ಲದೆಯೇ ಅಕ್ರಮವಾಗಿ ಸಂಗ್ರಹಿಸುತ್ತಿದ್ದ ಕಾರಣಕ್ಕಾಗಿ 2018ರಲ್ಲಿ ಆ್ಯಪಲ್‌ ಮತ್ತು ಗೂಗಲ್‌ ಪ್ಲೇ ಸ್ಟೋರ್‌ನಿಂದ 250 ಕ್ಕೂ ಅಧಿಕ ಆ್ಯಪ್‌ಗಳನ್ನು ತೆಗೆದುಹಾಕಲಾಗಿದೆ. ಇನ್ನು ಜಾಹೀರಾತಿನ ಮೂಲಕ ವಂಚಿಸುವುದಕ್ಕೆ ಸಂಬಂಧಿಸಿದಂತೆ 600 ಕ್ಕೂ ಹೆಚ್ಚಿನ ಆ್ಯಪ್‌ಗಳನ್ನು ಗೂಗಲ್‌ ಬ್ಯಾನ್‌ ಮಾಡಿದೆ. ಈ ರೀತಿ, ಬ್ಯಾನ್‌ ಮಾಡಿದ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಆದರೆ, ಗೂಗಲ್‌ ಮಾತ್ರ ಬಳಕೆದಾರರ ಮಾಹಿತಿ ಕಳುವಾದ ಬಳಿಕವೇ ಆ್ಯಪ್‌ಗಳನ್ನು ಬ್ಯಾನ್‌ ಮಾಡುವ ತನ್ನ ಚಾಳಿ ಮುಂದುವರಿಸಿದೆ.

ಮೊಬೈಲ್‌ನಲ್ಲಿ ಇರುವ ಕೆಲವು ಆ್ಯಪ್‌ಗಳು ನಮಗರಿವಿಲ್ಲದೇ ನಮ್ಮ ಮಾತು ಮತ್ತು ಪ್ರತಿಯೊಂದು ಚಲನವಲನಗಳನ್ನೂ ಅಕ್ರಮವಾಗಿ ಗಮನಿಸುತ್ತಲೇ ಇರುತ್ತವೆ. ಇವು ಇನ್‌ಬಿಲ್ಟ್‌ ಆ್ಯಪ್‌ ಆಗಿರಬಹುದು ಅಥವಾ ನಾವೇ ಇನ್‌ಸ್ಟಾಲ್‌ ಮಾಡಿದವೇ ಆಗಿರಬಹುದು. ಸ್ಮಾರ್ಟ್‌ಫೋನ್‌ನ ಮೈಕ್‌ ಮತ್ತು ಕ್ಯಾಮೆರಾ ಮೂಲಕ ನಮ್ಮ ಮೇಲೆ ನಿಗಾ ಇಡುತ್ತವೆ. ಇದಲ್ಲದೆ, ಫೋನ್‌ ಕಾಲ್‌ ಹಿಸ್ಟರಿ, ಮೆಸೆಜ್‌ಗಳನ್ನು ಕದಿಯುತ್ತಿರುತ್ತವೆ.

ಬಹಳಷ್ಟು ಆ್ಯಪ್‌ಗಳು ಅವಶ್ಯಕತೆ ಇಲ್ಲದೇ ಇದ್ದರೂ ಫೋನ್‌ನ ಮೈಕ್‌, ಕ್ಯಾಮೆರಾ, ಕಾಲ್‌ ಲಾಗ್‌, ಮೆಸೇಜ್‌ ನಮ್ಮ ಅನುಮತಿ ಇಲ್ಲದೇ ಸಂಗ್ರಹಿಸುತ್ತವೆ. ಇದು ನಮ್ಮ ಅರಿವಿಗೆ ಬಂದಿರುವುದೇ ಇಲ್ಲ. ಇಂದಿನ ಬಹುತೇಕ ಆನ್‌ಲೈನ್‌ ಗೇಮ್‌ಗಳಿಗೆ ಲಾಗಿನ್‌ ಆದ ಬಳಿಕವೇ ಆಡಲು ಸಾಧ್ಯ. ಹಾಗೆ ಲಾಗಿನ್‌ ಆಗುವಾಗ ನಮ್ಮ ಮೊಬೈಲ್‌ ನಂಬರ್‌, ಇ–ಮೇಲ್‌ ವಿಳಾಸ ನೀಡಲೇಬೇಕು. ಹೀಗೆ ಲಾಗಿನ್‌ ಆದಾಗ ನಮ್ಮ ಐ.ಡಿ.ಗೊಂದು ಫೋಟೊ ಹಾಕಲು ಗ್ಯಾಲರಿ, ಕ್ಯಾಮೆರಾ ಬಳಸಲು ಅನುಮತಿಯನ್ನೂ ಅದು ಕೇಳುತ್ತದೆ. ಇದಿಷ್ಟನ್ನು ಬಳಸಿಕೊಂಡು ಗೇಮ್‌ ಅಭಿವೃದ್ಧಿಪಡಿಸಿ ಕಂಪನಿ ನಮ್ಮ ಮೊಬೈಲ್‌ಗೆ ಜಾಹೀರಾತುಗಳನ್ನು ನೀಡಲು ಸುಲಭವಾಗುತ್ತದೆ. ಅಲ್ಲದೆ, ನಾವು ಎಷ್ಟು ಹೊತ್ತು ಆಟವಾಡಿದ್ದೀರಿ ಎಂದೆಲ್ಲಾ ತಿಳಿದುಕೊಳ್ಳಬಹುದು. ಇಷ್ಟೇ ಅಲ್ಲ, ಇಂತಹ ಹಲವು ಗೇಮ್‌ಗಳು ಇನ್‌ಸ್ಟಾಲ್‌ ಮಾಡುವಾಗ ನಮ್ಮ ಫೋನ್‌ ಕಾಲ್ ಮತ್ತು ಎಸ್‌ಎಂಎಸ್‌ ಅಕ್ಸೆಸ್‌ ಮಾಡುವ ಅನುಮತಿಯನ್ನೂ ಪಡೆಯುತ್ತವೆ. ಅಷ್ಟಕ್ಕೂ ಆಡವಾಡಲು ನಮ್ಮ ಫೋನ್ ಕಾಲ್‌, ಎಸ್‌ಎಂಎಸ್‌ ಯಾಕೆ ಬೇಕು? 

ಮಾಲ್‌ವೇರ್‌ ಮೂಲಕ ಬಳಕೆದಾರರ ಮೆಸೇಜ್‌, ಕಾಂಟ್ಯಾಕ್ಟ್‌ ಲಿಸ್ಟ್‌ ಮತ್ತು ಡಿವೈಸ್‌ ಮಾಹಿತಿಗಳನ್ನು ಕದಿಯುತ್ತಿದ್ದ 17 ಆಂಡ್ರಾಯ್ಡ್‌ ಆಪ್‌ಗಳನ್ನು ಗೂಗಲ್‌ ಕಳೆದವಾರವಷ್ಟೇ ಪ್ಲೇಸ್ಟೋರ್‌ನಿಂದ ತೆಗೆದುಹಾಕಿದೆ. ಅವುಗಳಲ್ಲಿ ಕೆಲವು  ಆ್ಯಪ್‌ಗಳೆಂದರೆ: All Good PDF Scanner, Unique Keyboard - Fancy Fonts & Free Emoticons, Direct Messenger, Private SMS, One Sentence Translator - Multifunctional Translator, Style Photo Collage, Talent Photo Editor - Blur focus, Paper Doc Scanner, Hummingbird PDF Converter - Photo to PDF.

ಹಾಗಾದರೆ ಇಂತಹ ಆ್ಯಪ್‌ಗಳಿಂದ ರಕ್ಷಣೆ ಇಲ್ಲವೇ ಎಂದು ಕೇಳಿದರೆ? ಮೊದಲನೆಯದಾಗಿ, ನಮ್ಮ ದೈನಂದಿನ ಅಗತ್ಯಗಳಿಗೆ ಯಾವ ಆ್ಯಪ್‌ಗಳು ಸಹಾಯಕವೋ ಅವುಗಳನ್ನು ಮಾತ್ರವೇ ಇನ್‌ಸ್ಟಾಲ್‌ ಮಾಡುವುದು ಒಳಿತು. ಹವ್ಯಾಸ, ಆಸಕ್ತಿಗಳಿಗೆ ಸಂಬಂಧಿಸಿದ ಆ್ಯಪ್‌ಗಳನ್ನು ಬಳಸುವುದಾದರೆ, ಇನ್‌ಸ್ಟಾಲ್‌ ಮಾಡುವಾಗ ಯಾವುದಕ್ಕೆಲ್ಲಾ ಪರ್ಮಿಷನ್‌ ಕೇಳುತ್ತದೆ ಎನ್ನುವುದನ್ನು ಗಮನಿಸಿದ ಬಳಿಕ ಮುಂದುವರಿಯಬೇಕು.

ಕ್ಯಾಮೆರಾ ಮತ್ತು ಮೈಕ್‌  ಅನುಮತಿ:  ಇನ್‌ಸ್ಟಾಲ್‌ ಆಗಿರುವ ಯಾವೆಲ್ಲಾ ಆ್ಯಪ್‌ಗಳು ಕ್ಯಾಮೆರಾ ಮತ್ತು ಮೈಕ್ರೊಫೋನ್‌ ಬಳಸುವ ಅನುಮತಿ ಪಡೆದುಕೊಂಡಿವೆ ಎನ್ನುವುದನ್ನು ಪರಿಶೀಲಿಸಿ. ಕೆಲವೊಂದು  ಆ್ಯಪ್‌ಗಳು ಅನಗತ್ಯವಾಗಿ ಇವುಗಳನ್ನು ಬಳಸುತ್ತಿರುತ್ತವೆ. ಅದನ್ನು ಪತ್ತೆ ಮಾಡಲು ಈ ಕೆಳಗಿನಂತೆ ಮಾಡಿ.

ಆಂಡ್ರಾಯ್ಡ್‌ ಫೋನಿನಲ್ಲಿ  Settings * Apps & Notifications * Scroll down and click Advanced * Permission Manager *  ಇಲ್ಲಿ ಕಾಲ್‌ಲಾಗ್‌, ಮೈಕ್ರೊಫೋನ್‌, ಕ್ಯಾಮೆರಾ ಹೀಗೆ ಇನ್ನೂ ಹಲವು ಇರುತ್ತವೆ. ಕ್ಯಾಮೆರಾ ಮೇಲೆ ಕ್ಲಿಕ್  ಮಾಡಿದರೆ ಅಲ್ಲಿ ನಿರ್ದಿಷ್ಟ ಆ್ಯಪ್‌ಗೆ ಅನುಮತಿ ನೀಡಬೇಕೆ ಅಥವಾ ಬೇಡವೇ ಎನ್ನುವ ಬಗ್ಗೆ  Allow or Deny ಎಂದಿರುತ್ತದೆ. ಅಲ್ಲಿ  ಅದನ್ನು ಬದಲಿಸಬಹುದು.

ಐಒಎಸ್‌ನಲ್ಲಿ Settings * Privacy * Microphone or Camera on/off ಮಾಡಿ. 

ಕ್ಯಾಮೆರಾ ಆ್ಯಪ್‌ಗೆ ಕ್ಯಾಮೆರಾ ಮತ್ತು ಮೈಕ್ರೊಫೋನ್‌ ಬಳಸಲು ಅನುಮತಿ ನೀಡಲೇಬೇಕು. ಅದಕ್ಕೆ ಒಪ್ಪಿಗೆ ನೀಡದೇ ಇದ್ದರೆ ಅವು ಸರಿಯಾಗಿ ಕೆಲಸ ಮಾಡುವುದಿಲ್ಲ. ಆದೇ ರೀತಿ, ಪ್ಲೇ ಸ್ಟೋರ್‌ ಮತ್ತು ಬ್ರೌಸರ್‌ಗೆ ಬ್ಯಾಗ್ರೌಂಡ್‌ ಡೇಟಾ ಬಳಕೆಗೆ ಅನುಮತಿ ನೀಡಲೇಬೇಕು. ಆದರೆ, ಎಸ್‌ಎಂಎಸ್‌ಗೆ ಬ್ಯಾಗ್ರೌಂಡ್‌ ಡೇಟಾ ಬಳಕೆಯ ಅನುಮತಿ ಬೇಕಿಲ್ಲ.

ನಮ್ಮ ರಕ್ಷಣೆ, ನಮ್ಮದೇ ಹೊಣೆ: ಭಾರತದ ಸಾರ್ವಭೌಮತೆಗೆ ಧಕ್ಕೆ ಉಂಟುಮಾಡುತ್ತಿರುವ ಹಾಗೂ ಬಳಕೆದಾರರ ಮಾಹಿತಿಯನ್ನು ಚೀನಾದ ಸರ್ವರ್‌ನಲ್ಲಿ ಶೇಖರಿಸಿ ಇಡಲಾಗುತ್ತಿದೆ ಎನ್ನುವ ಕಾರಣಕ್ಕೆ ಟಿಕ್‌ಟಾಕ್‌, ಪಬ್‌ಜಿ, ವಿ-ಚಾಟ್ ಒಳಗೊಂಡು 118 ಕ್ಕೂ ಅಧಿಕ ಆ್ಯಪ್‌ಗಳನ್ನು ಭಾರತ ಸರ್ಕಾರ ನಿಷೇಧಿಸಿರುವುದು ಎಲ್ಲರಿಗೂ ತಿಳಿದಿದೆ. ಈ ಆ್ಯಪ್‌ಗಳು ನಮ್ಮ ದೈನಂದಿನ ಕೆಲಸಗಳಿಗೆ ಅತ್ಯಗತ್ಯವಾಗಿದ್ದವೇ ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕು. ಏಕೆಂದರೆ, ನಮ್ಮ ವೈಯಕ್ತಿಕ ಮಾಹಿತಿಯ ಸುರಕ್ಷತೆಗೆ ಧಕ್ಕೆ ತರುತ್ತವೆ ಎಂದ ಮೇಲೆ ಅವುಗಳನ್ನು ಏಕೆ ಬಳಸಬೇಕು ಅಲ್ಲವೇ? ಹಾಗಾಗಿ, ನಮ್ಮ ರಕ್ಷಣೆಗೆ ನಾವೂ ಒಂದಿಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಿದೆ.

ಲೊಕೇಶನ್‌ ಟ್ಯಾಗ್‌ ಆಫ್‌ ಮಾಡುವ ಸೆಟ್ಟಿಂಗ್ಸ್‌:  ಮೊಬೈಲ್‌ನ ಲೊಕೇಷನ್‌ ಬಳಸಿಯೇ ಅತಿ ಹೆಚ್ಚಿನ ಟ್ರ್ಯಾಕಿಂಗ್‌ ನಡೆಯುತ್ತಿದೆ. ಹೀಗಾಗಿ ಇದನ್ನು ಆಫ್‌ ಮಾಡಲು:  

* Go to your Android phone's Settings app

* Tap Location

* Select Google Location Settings

* Slide the toggle switch off for Location Reporting and Location History

* You can go a step further by deleting all of your location history

ಲೊಕೇಶನ್‌ ಡೇಟಾ ಆಫ್‌ ಮಾಡಲು: 

* Go to your Android phone's Photos app

* Tap the menu and select Settings

* Tap Remove geo location

ಬಳಕೆದಾರನಿಗೆ ಸುಲಭ ಮಾಡಿಕೊಡುತ್ತಿದ್ದೇವೆ, ತಕ್ಷಣಕ್ಕೆ ಎಲ್ಲವೂ ಸಿಗುವಂತೆ ಮಾಡಲಾಗಿದೆ ಎನ್ನುವುದು ಸೋಗಿನ ಮಾತಷ್ಟೆ. ಅಷ್ಟಕ್ಕೂ ನಾವು ದುಡ್ಡು ಕೊಟ್ಟು ಖರೀದಿಸಿದ ಫೋನ್‌ ಹಾಗೂ ಅದರ ಬಳಕೆಯ ರೀತಿ ಹೇಗಿರಬೇಕು ಎನ್ನುವುದನ್ನು ನಾವು ನಿರ್ಧರಿಸಬೇಕೇ ಹೊರತು ಮೊಬೈಲ್‌, ಆ್ಯಪ್‌ ತಯಾರಿಸುವ ಕಂಪನಿಗಳಲ್ಲ. ಒಂದು ಹೊಸ ಫೋನ್‌ ಕೊಂಡು ಅದಕ್ಕೆ ಸಿಮ್‌ ಹಾಕಿ ಆನ್‌ ಮಾಡುತ್ತಿದ್ದಂತೆಯೇ ಡಿಫಾಲ್ಟ್‌ ಆಗಿ ಲೊಕೇಷನ್‌ ಟ್ಯಾಗ್‌ ಆಟೊ ಆನ್‌ ಆಗಿರುತ್ತದೆ. ಆನ್‌ಲೈನ್‌ ಬ್ಯಾಕಪ್‌, ಹಿಸ್ಟರಿ, ಆ್ಯಪ್‌ ಪರ್ಮಿಷನ್‌ಗಳೆಲ್ಲವೂ ಸಕ್ರಿಯಗೊಂಡಿರುತ್ತವೆ. ಇವೆಲ್ಲವನ್ನೂ ಡಿಫಾಲ್ಟ್‌ ಆಗಿ ನೀಡುವುದೇಕೆ? ಬೇಕೆಂದರೆ ಬಳಕೆದಾರನೇ ಅವನ್ನು ಸಕ್ರಿಯಗೊಳಿಸಿಕೊಳ್ಳುತ್ತಾನೆ. ಒಂದೊಮ್ಮೆ ನಿರ್ದಿಷ್ಟವಾದ ಆ್ಯಪ್‌ ಅದನ್ನು ನೀಡದೇ ಕೆಲಸ ಮಾಡುವುದೇ ಇಲ್ಲ ಎಂದಾದರೆ ಆಗ ಸಕ್ರಿಯಗೊಳಿಸಲು ಸೂಚನೆ ಬರುವಂತೆ ಮಾಡಬಹುದಲ್ಲವೇ? ಹಾಡ್ತಾ ಹಾಡ್ತಾ ರಾಗ ಅನ್ನೋ ಹಾಗೆ ಮೊಬೈಲ್‌ ಬಳಸುತ್ತಾ ಹೋದಂತೆ ಎಲ್ಲವನ್ನೂ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ನಮಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು