ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇಂಟರ್‌ನೆಟ್ ಇಲ್ಲದೇ ಮೊಬೈಲ್‌ನಲ್ಲಿ ವಿಡಿಯೊ

Published 28 ಮೇ 2024, 23:30 IST
Last Updated 28 ಮೇ 2024, 23:30 IST
ಅಕ್ಷರ ಗಾತ್ರ

ಇಷ್ಟು ದಿನ ನಮ್ಮ ಮೊಬೈಲ್‌ಗಳಿಗೆ ಡೇಟಾ ಬಿತ್ತರಿಸುತ್ತ ನಮ್ಮನ್ನು ವಿಡಿಯೊ ನೋಡುವ ಹುಕಿಗೆ ದೂಡುತ್ತಿದ್ದ ಟೆಲಿಕಾಂ ಕಂಪನಿಗಳ ಜೇಬಿಗೆ ಒಂದು ಸಣ್ಣ ರಂಧ್ರ ಕೊರೆಯುವ ಕೆಲಸವೊಂದು ಸದ್ದಿಲ್ಲದೇ ನಡೆಯುತ್ತಿದೆ. ಈ ಕೆಲಸಕ್ಕೆ ಪ್ರಸ್ತಾವ ಹೊರಬೀಳುತ್ತಿದ್ದಂತೆಯೇ ಟೆಲಿಕಾಂ ಕಂಪನಿಗಳು ಆಕ್ಷೇಪ ತೆಗೆಯಲು ಶುರು ಮಾಡಿವೆ! ಇಂಥದ್ದೊಂದು ಪ್ರಸ್ತಾವದ ಹೆಸರೇ ‘ಡಿಟುಎಂ’. ಎಂದರೆ, ‘ಡೈರೆಕ್ಟ್ ಟು ಮೊಬೈಲ್’ ತಂತ್ರಜ್ಞಾನ. ಅಂದಹಾಗೆ ಇದೇನೂ ಹೊಸ ಪರಿಕಲ್ಪನೆಯಲ್ಲ. ಆದರೆ, ಹಳೆಯ ವೈನನ್ನೇ ಹೊಸ ಬಾಟಲಿಯಲ್ಲಿ ಹಾಕಿಕೊಟ್ಟ ಹಾಗೆ! ಟಿ.ವಿ ಬಂದ ಆರಂಭದಲ್ಲಿ ಒಂದು ಆ್ಯಂಟೆನಾ ಸಿಕ್ಕಿಸಿ, ಅದರ ಸಿಗ್ನಲ್ ರಿಸೀವ್ ಮಾಡಿ ಟಿ.ವಿಯಲ್ಲಿ ಚಾನೆಲ್‌ಗಳನ್ನು ನೋಡುತ್ತಿದ್ದ ಕಾಲದ ತಂತ್ರಜ್ಞಾನಕ್ಕೇ ಒಂಚೂರು ವಾರ್ನಿಶ್ ಹೊಡೆದು ಸೀದಾ ಮೊಬೈಲಿಗೆ ಇಂಥ ಸಿಗ್ನಲ್‌ಗಳನ್ನು ಕಳುಹಿಸುವ ಯೋಜನೆಯ ಆರಂಭಿಕ ಪ್ರಯೋಗ ಯಶಸ್ವಿಯಾಗಿದ್ದು, ಇದರ ಪ್ರಸ್ತಾವನೆಯನ್ನೂ ಕೇಂದ್ರ ಸರ್ಕಾರದ ದೂರಸಂಪರ್ಕ ಇಲಾಖೆ ಪ್ರಕಟಿಸಿದೆ.

ಈ ತಂತ್ರಜ್ಞಾನ ತುಂಬಾ ಸರಳ. ಪ್ರಸಾರ ಭಾರತಿ ದೇಶದ ಉದ್ದಗಲಕ್ಕೂ ಎತ್ತರೆತ್ತರ ಟವರ್‌ಗಳನ್ನು ನಿರ್ಮಿಸಿ, ಅದಕ್ಕೊಂದು ಟ್ರಾನ್ಮಿಟರ್‌ಗಳನ್ನು ಅಳವಡಿಸಿ ತನ್ನ ಉಚಿತ ಟಿ.ವಿ ಚಾನೆಲ್‌ಗಳನ್ನು ಜನರಿಗೆ ಉಚಿತವಾಗಿ ಪ್ರಸಾರ ಮಾಡುತ್ತಿದೆ. ಇತ್ತೀಚೆಗೆ ಇಂಟರ್‌ನೆಟ್, ಡಿಟಿಎಚ್ ಹಾಗೂ ಕೇಬಲ್ ಬಂದ ಮೇಲೆ ಈ ತಂತ್ರಜ್ಞಾನ ಹಳೆಯದಾಗಿ, ಬಳಕೆ ಕಡಿಮೆಯಾಗಿದೆಯಾದರೂ, ಇದು ಇನ್ನೂ ಚಾಲ್ತಿಯಲ್ಲಿದೆ. ಇದೇ ಟವರ್‌ಗಳು ಇನ್ನು ಟಿ.ವಿ ಸೆಟ್‌ಗಳಿಗೆ ಸಿಗ್ನಲ್‌ಗಳನ್ನು ಕಳುಹಿಸುವುದರ ಜೊತೆಗೆ ಮೊಬೈಲ್‌ನಲ್ಲೂ ಸಿಗ್ನಲ್‌ಗಳನ್ನು ಕಳುಹಿಸಲಿದೆ. ಅಷ್ಟೇ ಅಲ್ಲ, ಇದರಲ್ಲೇ 4K ವರೆಗಿನ ಹೈ ಡೆಫಿನಿಶನ್ ವಿಡಿಯೊವನ್ನೂ ಪ್ರಸಾರ ಮಾಡಬಹುದು.

ಇದಕ್ಕೆ ಸಂಬಂಧಿಸಿದ ಆರಂಭಿಕ ಪ್ರಯೋಗ ಪ್ರಸಾರ ಭಾರತಿ, ಐಐಟಿ ಕಾನ್ಪುರ ಮತ್ತು ಬೆಂಗಳೂರಿನ ಖಾಸಗಿ ಸಂಸ್ಥೆ ನಡೆಸಿದ್ದು, ಯಶಸ್ವಿಯೂ ಆಗಿದೆ. ಸದ್ಯದಲ್ಲೇ 19 ರಾಜ್ಯಗಳಲ್ಲಿ ಇದರ ಮುಂದಿನ ಹಂತದ ಪ್ರಯೋಗವೂ ನಡೆಯಲಿದೆ. ಈಗಾಗಲೇ ದಕ್ಷಿಣ ಕೊರಿಯಾದಲ್ಲಿ 2017ರಿಂದಲೂ ಈ ತಂತ್ರಜ್ಞಾನ ಯಶಸ್ವಿಯಾಗಿ ಬಳಕೆಯಾಗುತ್ತಿದೆ. ಅಮೆರಿಕ, ಮೆಕ್ಸಿಕೋ ಹಾಗೂ ಬ್ರೆಜಿಲ್‌ನಲ್ಲೂ ಇದರ ಪ್ರಯೋಗ ನಡೆಯುತ್ತಿದೆ. ಶೀಘ್ರದಲ್ಲೇ ಅಲ್ಲೂ ಈ ಸೌಲಭ್ಯ ಜಾರಿಗೆ ಬರಲಿದೆ. ಈಗ ಪ್ರಸಾರ ಭಾರತಿಗೆ ನೀಡಿರುವ 526 MHz-582 MHz ಅನ್ನೇ ಈ ವಲಯಕ್ಕೆ ನೀಡುವ ಯೋಜನೆ ಸರ್ಕಾರದ್ದು.

ಏನಿದು ಹೊಸ ತಂತ್ರಜ್ಞಾನ?

ಹಳೆಯ ಡೈರೆಕ್ಟ್ ಟು ಟಿ.ವಿ ತಂತ್ರಜ್ಞಾನವನ್ನು ಈಗಿನ ಡೈರೆಕ್ಟ್ ಟು ಮೊಬೈಲ್ ತಂತ್ರಜ್ಞಾನಕ್ಕೆ ಅಳವಡಿಸಲು ಕೆಲವು ತಾಂತ್ರಿಕ ಬದಲಾವಣೆಗಳನ್ನು ಮಾಡಲಾಗಿದೆ. ಈವರೆಗೆ ನಾವು 3GPP ಸ್ಟಾಂಡರ್ಡ್‌ನಲ್ಲಿ ವಿಡಿಯೊಗಳನ್ನು ನೋಡುತ್ತಿದ್ದೇವೆ. ಆದರೆ, ಈ ಹೊಸ ತಂತ್ರಜ್ಞಾನದಲ್ಲಿ ATSC 3.0 ಸ್ಟಾಂಡರ್ಡ್ ಅನ್ನು ಬಳಕೆ ಮಾಡಲಾಗಿದೆ. ಇದರಿಂದ, ಹೊಸದಾಗಿ ಮಾರುಕಟ್ಟೆಗೆ ಬರುವ ಮೊಬೈಲ್‌ಗಳಲ್ಲಿ ಈ ಡಿಟುಎಂ ಸೌಲಭ್ಯದ ಅಡಿಯಲ್ಲಿ ವಿಡಿಯೊವನ್ನು ನೋಡಲು ಸಾಧ್ಯವಾಗಬೇಕು ಎಂದಾದರೆ, ಅದರ ಚಿಪ್ಸೆಟ್‌ಗಳಲ್ಲೇ ಬದಲಾವಣೆ ಆಗಬೇಕಾಗುತ್ತದೆ. ಒಂದು ವೇಳೆ ಈ ಮಾನದಂಡವನ್ನು ಎಲ್ಲ ಮೊಬೈಲ್‌ಗಳಿಗೆ ಕಡ್ಡಾಯ ಎಂದು ಸರ್ಕಾರ ನಿಯಮ ಮಾಡಿದರೆ, ಸ್ಮಾರ್ಟ್‌ಫೋನ್‌ಗಳ ಬೆಲೆ 2-3 ಸಾವಿರದಷ್ಟು ಏರಿಕೆಯಾಗಬಹುದು.

ಟೆಲಿಕಾಂ ಕಂಪನಿಗಳ ಆಕ್ಷೇಪವೇನು?

ಟೆಲಿಕಾಂ ಕಂಪನಿಗಳ ಸದ್ಯದ ಆಕ್ಷೇಪ ಹಲವು ರೀತಿಯಲ್ಲಿದೆ. ಈ ATSC 3.0 ಸ್ಟಾಂಡರ್ಡ್ ಹೊಸದು. ಇದಕ್ಕೆ ಇನ್ನೂ ಪರೀಕ್ಷೆ ಸಾಲದು. ಗಡಿಬಿಡಿಯಲ್ಲಿ ಇದನ್ನು ಸರ್ಕಾರ ಜಾರಿಗೆ ತರಬಾರದು. ಸದ್ಯ ಡಿಟುಎಂಗೆ 526 MHz-582 MHz ಫ್ರೀಕ್ವೆನ್ಸಿಯನ್ನು ನಿಯೋಜನೆ ಮಾಡುವುದಕ್ಕೆ ಸರ್ಕಾರ ಯೋಚಿಸಿದೆ. ಆದರೆ, ಇದನ್ನು ಹರಾಜು ಹಾಕಬೇಕು. ಹಾಗೇ ಸುಮ್ಮನೆ, ಪ್ರಸಾರ ಭಾರತಿಗೆ ಕೊಟ್ಟುಬಿಡಬಾರದು – ಎಂದೆಲ್ಲ ಟೆಲಿಕಾಂ ಕಂಪನಿಗಳು ಆಕ್ಷೇಪ ತೆಗೆಯುತ್ತಿವೆ.

ಇದಕ್ಕೆ ಮೂಲ ಕಾರಣವೆಂದರೆ, ಈ ತಂತ್ರಜ್ಞಾನ ಜಾರಿಗೆ ಬಂದಿದ್ದೇ ಆದರೆ, ನೇರ ಹೊಡೆತ ಬೀಳುವುದು ಈ ಟೆಲಿಕಾಂ ಕಂಪನಿಗಳಿಗೆ! ಏಕೆಂದರೆ, ಟೆಲಿಕಾಂ ಕಂಪನಿಗಳ ಅತಿ ಹೆಚ್ಚು ಆದಾಯ ಬರುತ್ತಿರುವುದೇ ಡೇಟಾ ಬಳಕೆಯಿಂದಾಗಿ. ಎಂದರೆ ಸುಮಾರು 80ರಷ್ಟು ಆದಾಯ ಡೇಟಾ ಮಾರಾಟದಿಂದ ಬರುತ್ತಿದೆ. ಅದೇ ಸಮಯದಲ್ಲಿ, ಸುಮಾರು ಇಷ್ಟೇ ಪ್ರಮಾಣದ ಡೇಟಾ ಬಳಕೆಯಾಗುವುದೇ ವಿಡಿಯೊಗಳನ್ನು ನೋಡುವುದಕ್ಕೆ! ಈಗ ವಿಡಿಯೊಗಳನ್ನು ನೋಡುವುದಕ್ಕೆ ಡೇಟಾ ಬೇಡ ಎಂದಾದರೆ, ಈ ಟೆಲಿಕಾಂ ಕಂಪನಿಗಳ ಆದಾಯಕ್ಕೆ ಭಾರಿ ದೊಡ್ಡ ಖೋತಾ ಆಗುವುದು ನಿಶ್ಚಿತವಲ್ಲವೇ! ಹೀಗಾಗಿ, ಡಿ2ಎಂ ಪ್ರಸ್ತಾವಕ್ಕೇ ಟೆಲಿಕಾಂ ಕಂಪನಿಗಳು ಆಕ್ಷೇಪ ಎತ್ತುತ್ತಿವೆ.

5G ಕಾಲದಲ್ಲೂ ಇದು ಬೇಕೆ?

ಈ ತಂತ್ರಜ್ಞಾನ ಎಷ್ಟು ಯಶಸ್ವಿಯಾಗುತ್ತದೆ ಎಂಬುದಕ್ಕೆ ಹಲವು ದಿಕ್ಕಿನ ಚಿಂತನೆಗಳಿವೆ. ಸಾಮಾನ್ಯವಾಗಿ ಡಿ2ಎಂನಲ್ಲಿ ನಮಗೆ ಬೇಕಾದ್ದನ್ನು ನೋಡುವ ಆಯ್ಕೆ ಕಡಿಮೆ! ಅಂದರೆ, ಚಾನೆಲ್‌ಗ ನಮಗೆ ಏನನ್ನು ತೋರಿಸುತ್ತವೆಯೋ ಅದನ್ನು ನಾವು ನೋಡಬೇಕು. 526 ಮೆಗಾಹರ್ಟ್ಸ್‌ನಿಂದ ದ 586 ಮೆಗಾಹರ್ಟ್ಸ್‌ವರೆಗಿನ ಫ್ರೀಕ್ವೆನ್ಸಿಯಲ್ಲಿ ಎಷ್ಟು ಚಾನೆಲ್‌ಗಳು ಬರುತ್ತವೆಯೋ ಅಷ್ಟು ಚಾನೆಲ್‌ಗಳಲ್ಲಿ ಬರುವ ವೀಡಿಯೋಗಳನ್ನು ನಾವು ನೋಡಬಹುದು. ಈ ಸೋಷಿಯಲ್ ಮೀಡಿಯಾ, ಯೂಟ್ಯೂಬ್ ಕಾಲದಲ್ಲಿ ನಾವು ನಮಗೆ ಏನನ್ನು ತೋರಿಸಲಾಗುತ್ತದೆಯೋ ಅದನ್ನು ನೋಡುವುದಕ್ಕಿಂತ ಹೆಚ್ಚಾಗಿ ನಮಗೆ ಏನು ಬೇಕೋ ಅದನ್ನು ನೋಡುವುದಕ್ಕೆ ನಾವು ಟ್ಯೂನ್ ಆಗಿದ್ದೇವೆ. ಡೇಟಾ ಪ್ಯಾಕ್ ಮೂಲಕ ಉಚಿತವಾಗಿಯೇ ಮೊಬೈಲ್‌ನಲ್ಲಿ ಸಿಗುವ ಟಿವಿ ಚಾನೆಲ್‌ಗಳನ್ನು ನೋಡುವುದಕ್ಕೇ ಜನರಲ್ಲಿ ಅಷ್ಟೇನೂ ಉತ್ಸಾಹ ಕಾಣುತ್ತಿಲ್ಲ. ಹೀಗಿದ್ದಾಗ ಈ ವ್ಯವಸ್ಥೆ ಜನರಿಗೆ ಎಷ್ಟರ ಮಟ್ಟಿಗೆ ಪ್ರಿಯವಾಗುತ್ತದೆ ಎಂಬುದು ಅನುಮಾನದ ಸಂಗತಿ. ಹಾಗೆಂದ ಮಾತ್ರಕ್ಕೆ ಈ ತಂತ್ರಜ್ಞಾನ ಬೇಡ ಎನ್ನಲಾಗದು. ಏಕೆಂದರೆ, ತುರ್ತು ಸಂದರ್ಭದಲ್ಲಿ ಅಗತ್ಯ ಮಾಹಿತಿ ಪ್ರಸಾರಕ್ಕೆ ಇದು ತಡೆರಹಿತ, ಸುಲಭದ ವಿಧಾನ. ಎಲ್ಲಕ್ಕಿಂತ ಮುಖ್ಯವಾಗಿ ಇದು ಕಡಿಮೆ ಖರ್ಚಿನ ವ್ಯವಹಾರ. ಈ ವಿಧಾನದಲ್ಲಿ ಮಾಹಿತಿ ಪ್ರಸಾರಕ್ಕೆ ಖರ್ಚು ಅತ್ಯಂತ ಕಡಿಮೆಯಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT