ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Artificial Intelligence: ಪರಿಸರಕ್ಕೆ ಎಐ ಶಾಪವೇ?

Published : 24 ಸೆಪ್ಟೆಂಬರ್ 2024, 23:31 IST
Last Updated : 24 ಸೆಪ್ಟೆಂಬರ್ 2024, 23:31 IST
ಫಾಲೋ ಮಾಡಿ
Comments

ತಂತ್ರಜ್ಞಾನ ದೈತ್ಯ ಕಂಪನಿ ಮೈಕ್ರೋಸಾಫ್ಟ್‌, ಇತ್ತೀಚೆಗೆ ಅಮೆರಿಕದ ವಿದ್ಯುತ್‌ ಸರಬರಾಜು ಕಂಪನಿ ಕಾನ್‌ಸ್ಟಲೇಷನ್‌ ಎನರ್ಜಿಯೊಂದಿಗೆ ಒಪ್ಪಂದವೊಂದು ಮಾಡಿಕೊಂಡಿದೆ. ಐದು ವರ್ಷಗಳ ಹಿಂದೆ ಮುಚ್ಚಲಾಗಿದ್ದ ತ್ರೀ ಮೈಲ್‌ ಐಲ್ಯಾಂಡ್‌ನಲ್ಲಿರುವ ಪರಮಾಣು ಸ್ಥಾವರದ ಒಂದನೇ ಘಟಕದಿಂದ ನಿರಂತರವಾಗಿ ವಿದ್ಯುತ್‌ ಪೂರೈಸುವುದಕ್ಕೆ ಸಂಬಂಧಿಸಿದ ಒಪ್ಪಂದ ಇದು. ಇಲ್ಲಿ ಉತ್ಪಾದನೆಯಾಗುವ ವಿದ್ಯುತ್‌ ಅನ್ನು ಮೈಕ್ರೋಸಾಫ್ಟ್‌ ತನ್ನ ಕೃತಕ ಬುದ್ಧಿಮತ್ತೆ (ಎಐ) ಮತ್ತು ಕ್ಲೌಡ್‌ ಸೇವೆಗಳನ್ನು ವಿಸ್ತರಿಸುವುದಕ್ಕೆ ಬಳಸಲಿದೆ. ಕಂಪನಿ ಹೊಂದಿರುವ ಬೃಹತ್‌ ಡೇಟಾ ಸೆಂಟರ್‌ಗಳಿಗೆ ಹೆಚ್ಚಿನ ವಿದ್ಯುತ್‌ ಅವಶ್ಯಕತೆ ಇದ್ದು, ಸ್ಥಳೀಯ ವಿದ್ಯುತ್‌ ಕಂಪನಿಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಪೂರೈಸಲು ಸಾಧ್ಯವಾಗದಿರುವುದರಿಂದ ಕಂಪನಿ ಈ ಒಪ್ಪಂದ ಮಾಡಿಕೊಂಡಿವೆ.  

ಮೈಕ್ರೋಸಾಫ್ಟ್‌ ಮಾತ್ರ ಅಲ್ಲ, ಗೂಗಲ್‌ ಸೇರಿದಂತೆ ಜಗತ್ತಿನಾದ್ಯಂತ ಇರುವ ತಂತ್ರಜ್ಞಾನ ಹಾಗೂ ಇತರ ಕಂಪನಿಗಳು ಕೂಡ ಎಐ ತಂತ್ರಜ್ಞಾನವನ್ನು ಭಾರಿ ಪ್ರಮಾಣದಲ್ಲಿ ವಿಸ್ತರಿಸುತ್ತಿದ್ದು, ಅದಕ್ಕಾಗಿ ದೊಡ್ಡ ದೊಡ್ಡ ಸರ್ವರ್‌ಗಳು, ಡೇಟಾ ಸೆಂಟರ್‌ಗಳನ್ನು ಸ್ಥಾಪಿಸುತ್ತಿವೆ. ಈ ಕೇಂದ್ರಗಳು ಭಾರಿ ಪ್ರಮಾಣದಲ್ಲಿ ವಿದ್ಯುತ್‌ ಬಳಸಲಿವೆ. 

ಕೃತಕ ಬುದ್ಧಿಮತ್ತೆಯು ತಂತ್ರಜ್ಞಾನ ಜಗತ್ತಿಗೆ ಪ್ರವೇಶಿಸಿದ ಸಂದರ್ಭ. ಅಪಾಯಕಾರಿ ಮಟ್ಟಕ್ಕೆ ಹೋಗುತ್ತಿರುವ ಹವಾಮಾನ ಬದಲಾವಣೆ ತಡೆಗೆ ಎಐಯನ್ನು ಪರಿಣಾಮಕಾರಿಯಾಗಿ ಬಳಸಬಹುದು ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ತಂತ್ರಜ್ಞಾನ ಕ್ಷೇತ್ರದಲ್ಲಿ ಎಐ ಕ್ರಾಂತಿ ಸೃಷ್ಟಿ ಮಾಡುತ್ತಿದ್ದಂತೆಯೇ, ಅದರಿಂದ ಪರಿಸರದ ಮೇಲಾಗುವ ಪರಿಣಾಮಗಳು, ಹವಾಮಾನ ಬದಲಾವಣೆ ಬಿಕ್ಕಟ್ಟನ್ನು ಅದು ಮತ್ತಷ್ಟು ಹೆಚ್ಚಿಸಬಹುದು ಎಂಬ ಚರ್ಚೆಗಳು ಶುರುವಾಗಿವೆ.   

ಎಐ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಕೆನಡಾದ ಕಂಪ್ಯೂಟರ್‌ ವಿಜ್ಞಾನಿ, ಸಂಶೋಧಕಿ ಸಾಶಾ ಲುಚೋನಿ ಅವರು ಕೆಲವು ದಿನಗಳ ಹಿಂದೆ ಎಐನಿಂದ ಹವಾಮಾನ ಬದಲಾವಣೆ ಮೇಲಾಗುವ ಪರಿಣಾಮಗಳ ಬಗ್ಗೆ ಜಗತ್ತಿನ ಗಮನ ಸೆಳೆದಿದ್ದಾರೆ. ಅಮೆರಿಕದ ನಿಯತಕಾಲಿಕ ‘ಟೈಮ್‌’ ಮಾಡಿರುವ ಪಟ್ಟಿಯ ಪ್ರಕಾರ, ಎಐ ಜಗತ್ತಿನ ಅತ್ಯಂತ ಪ್ರಭಾವಿಶಾಲಿ 100 ಮಂದಿಯಲ್ಲಿ ಸಾಶಾ ಕೂಡ ಒಬ್ಬರು. ಎಐ ತಂತ್ರಜ್ಞಾನವು ಪರಿಸರದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಅವರೀಗ ಜಾಗೃತಿ ಮೂಡಿಸುತ್ತಿದ್ದಾರೆ.  

ಉತ್ಪಾದಕ ಕೃತಕ ಬುದ್ಧಿಮತ್ತೆ ಅಥವಾ ಜನರೇಟಿವ್‌ ಎಐ ಇಂಟರ್‌ನೆಟ್‌ನಲ್ಲಿ ಮಾಹಿತಿ ಹುಡುಕಿ ನೀಡಲು, ಸಾಮಾನ್ಯ ಇಂಟರ್‌ನೆಟ್‌ ಸರ್ಚ್‌ ಎಂಜಿನ್‌ ಬಳಸುವುದಕ್ಕಿಂತ 30 ಪಟ್ಟು ಹೆಚ್ಚು ವಿದ್ಯುತ್‌ ಅನ್ನು ಬಳಸುತ್ತದೆ ಎಂದು ಹೇಳಿರುವ ಸಾಶಾ, ಇಂಟರ್‌ನೆಟ್‌ನಲ್ಲಿ ಮಾಹಿತಿಯನ್ನು ಜಾಲಾಡಲು ಜನರೇಟಿವ್‌ ಎಐ ಬಳಸುವುದಕ್ಕೆ ಬೇಸರವನ್ನೂ ವ್ಯಕ್ತಪಡಿಸಿದ್ದಾರೆ. ಎಐ ಪ್ರೋಗ್ರಾಂಗಳನ್ನು ರೂಪಿಸಿರುವ ಕಂಪ್ಯೂಟರ್‌ ಭಾಷಾ ಮಾದರಿಗಳ ಕಾರ್ಯನಿರ್ವಹಣೆಗೆ ಅಗಾಧ ಸಾಮರ್ಥ್ಯದ ಸರ್ವರ್‌ಗಳು ಬೇಕಾಗುತ್ತವೆ. ಇವು ಹೆಚ್ಚು ವಿದ್ಯುತ್‌ ಬಳಸುತ್ತವೆ ಎಂಬುದು ಅವರ ವಾದ. 

ಅಂತರರಾಷ್ಟ್ರೀಯ ಇಂಧನ ಸಂಸ್ಥೆಯ ಪ್ರಕಾರ, 2022ರಲ್ಲಿ ಎಐ ಮತ್ತು ಕ್ರಿಪ್ಟೋಕರೆನ್ಸಿ ವಲಯಗಳು 460 ಟೆರಾ ವ್ಯಾಟ್‌ ಗಂಟೆಗಳಷ್ಟು ವಿದ್ಯುತ್‌ ವ್ಯಯಿಸಿವೆ. ಅಂದರೆ, ಜಾಗತಿಕವಾಗಿ ಉತ್ಪಾದನೆಯಾಗುವ ಒಟ್ಟು ವಿದ್ಯುತ್‌ನಲ್ಲಿ ಶೇ 2ರಷ್ಟನ್ನು ಈ ಎರಡು ಕ್ಷೇತ್ರಗಳು ಬಳಸಿವೆ! 

ಗೋಲ್ಡ್‌ಮನ್‌ ಸ್ಯಾಚ್ಸ್‌ ಇತ್ತೀಚೆಗೆ ನಡೆಸಿರುವ ಅಧ್ಯಯನ ಕೂಡ ಸಾಶಾ ಅವರ ವಾದಕ್ಕೆ ಪೂರಕವಾಗಿದೆ. ಅದರ ಪ್ರಕಾರ, ಚಾಟ್‌ಜಿಪಿಟಿಯಲ್ಲಿ ನಾವು ಒಂದು ಪ್ರಶ್ನೆ ಕೇಳಿದರೆ, ಅದು ಅಂತರಜಾಲದಲ್ಲಿ ಮಾಹಿತಿ ಹುಡುಕಾಡಿ ಉತ್ತರವನ್ನು ನೀಡಲು ಸಾಂಪ್ರದಾಯಿಕ ಸರ್ಚ್‌ ಎಂಜಿನ್‌ಗಿಂತ ಸರಾಸರಿ 10 ಪಟ್ಟು ಹೆಚ್ಚು ವಿದ್ಯುತ್‌ ಖರ್ಚು ಮಾಡುತ್ತದೆ. 

ತಂತ್ರಜ್ಞಾನ ಕಂಪನಿಗಳಿಗೆ ಸೇರಿದ ಡಾಟಾ ಸೆಂಟರ್‌ಗಳು ಹಲವು ವರ್ಷಗಳಿಂದ ವಿದ್ಯುತ್‌ ಬಳಕೆಯಲ್ಲಿ ಸ್ಥಿರತೆ ಕಾಯ್ದುಕೊಂಡು ಬರುತ್ತಿದ್ದವು. ಆದರೆ, ಕ್ರಾಂತಿಕಾರಕ ಎಐ ತಂತ್ರಜ್ಞಾನ ಬಳಕೆ ಆರಂಭಗೊಂಡ ಬಳಿಕ ವಿದ್ಯುತ್‌ ಬಳಕೆ ಹೆಚ್ಚಾಗಿದೆ. 2030ರ ವೇಳೆಗೆ ವಿದ್ಯುತ್‌ ಬೇಡಿಕೆ ಶೇ 160ರಷ್ಟು ಹೆಚ್ಚಲಿದೆ. ಸದ್ಯ ಡೇಟಾ ಸೆಂಟರ್‌ಗಳು ಜಗತ್ತಿನಾದ್ಯಂತ ಒಟ್ಟಾರೆಯಾಗಿ ಶೇ 1ರಿಂದ 2ರಷ್ಟು ವಿದ್ಯುತ್‌ ಬಳಸುತ್ತಿವೆ. ಈ ದಶಕದ ಕೊನೆಯ ವೇಳೆಗೆ ಈ ಪ್ರಮಾಣ ಶೇ 3ರಿಂದ ಶೇ 4ಕ್ಕೆ ಏರಬಹುದು ಎಂಬ ಬಗ್ಗೆ ಗೋಲ್ಡ್‌ಮನ್‌ ಸ್ಯಾಚ್ಸ್‌ ಅಧ್ಯಯನ ಬೆಳಕು ಚೆಲ್ಲಿದೆ. 

ಎಐ ತಂತ್ರಜ್ಞಾನಕ್ಕೂ ಹವಾಮಾನ ಬದಲಾವಣೆಗೂ ಏನು ಸಂಬಂಧ ಎಂದು ಕೇಳಬಹುದು. ಜಗತ್ತಿನಾದ್ಯಂತ ಪರಿಸರ ಸ್ನೇಹಿಯಾದಂತಹ ಸೌರ, ಪವನ, ಜಲಶಕ್ತಿಗಳಿಂದ ಹೆಚ್ಚೆಚ್ಚು ವಿದ್ಯುತ್‌ ಉತ್ಪಾದನೆ ಮಾಡಲು ಪ್ರಯತ್ನ ನಡೆಯುತ್ತಿರುವುದು ನಿಜ. ಆದರೆ, ಇವುಗಳಿಂದಲೇ ಪೂರ್ಣ ವಿದ್ಯುತ್‌ ಬೇಡಿಕೆಯನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ ಎಂಬುದೂ ಅಷ್ಟೇ ಸತ್ಯ. ಕಲ್ಲಿದ್ದಲಿನಂತಹ ಪಳೆಯುಳಿಕೆ ಇಂಧನ ಬಳಸಿ ದೊಡ್ಡ ಪ್ರಮಾಣದಲ್ಲಿ ವಿದ್ಯುತ್‌ ಉತ್ಪಾದನೆ ಮಾಡಲಾಗುತ್ತಿದೆ. ಇದು ದೊಡ್ಡ ಮಟ್ಟದಲ್ಲಿ ಹಸಿರು ಮನೆ ಅನಿಲಗಳನ್ನು ಹೊರಸೂಸುತ್ತದೆ. 

ಪರಮಾಣು ಶಕ್ತಿ ಬಳಸಿ ವಿದ್ಯುತ್‌ ಉತ್ಪಾದನೆ ಮಾಡುವಾಗ ಪರಿಸರಕ್ಕೆ ಹೆಚ್ಚು ಹಾನಿಯಾಗುವುದಿಲ್ಲ (ಪರಮಾಣು ಸ್ಥಾವರಗಳು ಇಂಗಾಲವನ್ನು ಹೆಚ್ಚು ಹೊರಸೂಸುವುದಿಲ್ಲ) ಎಂದೂ ವಾದಿಸಬಹುದು. ಆದರೆ, ಪರಮಾಣು ವಿದ್ಯುತ್‌ ಉತ್ಪಾದನೆಗೆ ಬಳಸುವ ಮೂಲವಸ್ತು ಯುರೇನಿಯಂ ಅದಿರನ್ನು ಸಂಗ್ರಹಿಸಲು ನಡೆಸುವ ಗಣಿಗಾರಿಕೆ, ಸಂಸ್ಕರಣೆ ಪ್ರಕ್ರಿಯೆಗಳಿಂದ ಪರಿಸರಕ್ಕೆ ಹಾನಿಯಾಗುತ್ತದೆ.

ಕೃತಕಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸುವಾಗ ಭಾರಿ ಪ್ರಮಾಣದಲ್ಲಿ ವಿದ್ಯುತ್‌ ವ್ಯಯವಾಗುವುದರಿಂದ ಹೆಚ್ಚೆಚ್ಚು ವಿದ್ಯುತ್‌ ಉತ್ಪಾದನೆ ಮಾಡಬೇಕಾಗುತ್ತದೆ. ಪರಿಸರ ಸ್ನೇಹಿ ವಿಧಾನದಲ್ಲಿ ಉತ್ಪಾದನೆ ಸಾಧ್ಯವಾಗದಿದ್ದರೆ, ಮತ್ತೆ ಪರಿಸರದ ಮೇಲೆ ವ್ಯತಿರಿಕ್ತ ಪ್ರಭಾವ ಬೀರುವಂತಹ ವಿಧಾನಗಳಲ್ಲೇ ವಿದ್ಯುತ್‌ ತಯಾರಿಸಬೇಕಾಗುತ್ತದೆ. 

2030ರ ವೇಳೆಗೆ ಇಂಗಾಲ ತಟಸ್ಥ (ಇಂಗಾಲ ಹೊರಸೂಸುವಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವ) ಗುರಿಯನ್ನು ಸಾಧಿಸುವ ವಾಗ್ದಾನವನ್ನು ಮೈಕ್ರೋಸಾಫ್ಟ್‌ ಮತ್ತು ಗೂಗಲ್‌ ಕಂಪನಿಗಳು ನೀಡಿವೆ. ಗೂಗಲ್‌ ಕಂಪನಿಯ ಹಸಿರು ಮನೆ ಅನಿಲ ಉಗುಳುವಿಕೆ ಪ್ರಮಾಣ 2019ಕ್ಕೆ ಹೋಲಿಸಿದರೆ 2023ರಲ್ಲಿ ಶೇ 48ರಷ್ಟು ಹೆಚ್ಚಾಗಿದೆ. ಮೈಕ್ರೋಸಾಫ್ಟ್‌ನ ಪ್ರಮಾಣ 2020ಕ್ಕೆ ಹೋಲಿಸಿದರೆ, 2023ರಲ್ಲಿ ಶೇ 29ರಷ್ಟು ಏರಿಕೆಯಾಗಿದೆ. ಇದಕ್ಕೆ ಕೃತಕ ಬುದ್ಧಿಮತ್ತೆ ಕಾರಣ. 

ಭವಿಷ್ಯದಲ್ಲಿ ಇದು ಖಂಡಿತವಾಗಿಯೂ ಹವಾಮಾನ ಬದಲಾವಣೆಯ ಬಿಕ್ಕಟ್ಟನ್ನು ತೀವ್ರಗೊಳಿಸಲಿದೆ ಎಂಬುದು ಸಾಶಾ ಅವರ ಪ್ರತಿಪಾದನೆ. 

ಏನಿದು ಜನರೇಟಿವ್‌ ಎಐ?
ಕೃತಕ ಬುದ್ಧಿಮತ್ತೆಯ ಇನ್ನೊಂದು ರೂಪವೇ ಜನರೇಟಿವ್‌ ಎಐ. ಇದು ಲೇಖನ, ಚಿತ್ರಗಳು, ಸಂಗೀತ, ಧ್ವನಿ, ಮತ್ತು ವಿಡಿಯೊಗಳಂತಹ ಹೊಸ ವಿಷಯಗಳನ್ನು (ಕಂಟೆಂಟ್‌) ಸೃಷ್ಟಿಸುತ್ತದೆ. ಇಂಟರ್‌ನೆಟ್‌ನ ದತ್ತಾಂಶಗಳ ಸಾಗರದಲ್ಲಿ ಅಗಾಧ ಪ್ರಮಾಣದಲ್ಲಿರುವ ಮಾಹಿತಿಗಳನ್ನು ಹೆಕ್ಕಿ ತೆಗೆದು, ಅದನ್ನು ಅತ್ಯಂತ ವ್ಯವಸ್ಥಿತ ಮತ್ತು ಸಮಗ್ರವಾಗಿ ಕಟ್ಟಿಕೊಡುವ ಕೆಲಸವನ್ನು ಜನರೇಟಿವ್‌ ಎಐ ಮಾಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT