ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಶಿಯಲ್ ರೆಕಗ್ನೀಷನ್

Last Updated 4 ಜುಲೈ 2018, 20:28 IST
ಅಕ್ಷರ ಗಾತ್ರ

‘ನಿ ಮ್ಮ ಮುಖ ಗುರುತಿಸಿ ನಿಮ್ಮ ಫೋನ್ ತೆರೆದುಕೊಳ್ಳುತ್ತದೆ’- ಇಂಥ ಸೌಲಭ್ಯ ಹೊಂದಿದೆ ಎಂಬ ಕಾರಣಕ್ಕಾಗಿ ಐಫೋನ್ 10 ಬಿಡುಗಡೆ ವೇಳೆ ಭಾರಿ ಕೂತೂಹಲ ಕೆರಳಿಸಿತ್ತು. ತಮ್ಮ ಮುಖ ತೋರಿದರೆ ಮಾತ್ರ ತೆರೆದುಕೊಳ್ಳುವ ಈ ಮೊಬೈಲ್ ಫೋನ್‍ಗಾಗಿ ಮಳಿಗೆ ಮುಂದೆ ಗ್ರಾಹಕರು ಸಾಲುಗಟ್ಟಿ ನಿಂತು ಖರೀದಿಸಿದರು.

ಐಫೋನ್ ಬಿಡುಗಡೆಯ ವೇಳೆಯಲ್ಲಿ ‘ಫೇಶಿಯಲ್ ರೆಕಗ್ನಿಷನ್’ (ಮುಖ ನೋಡಿ ಗುರುತು ಪರಿಶೀಲಿಸುವ) ವ್ಯವಸ್ಥೆಯ ಕುರಿತು ವಿಶ್ವದಾದ್ಯಂತ ಸಾಕಷ್ಟು ಚರ್ಚೆ, ವಿಶ್ಲೇಷಣೆ ನಡೆದವು. ಈಗಲೂ ಈ ವಿಷಯಕ್ಕೆ ಸಂಬಂಧಿಸಿದಂತೆ ಸಂಶೋಧನೆ ಮುಂದುವರಿದಿದೆ. ಈ ತಂತ್ರಜ್ಞಾನದಲ್ಲಿನ ಕೆಲ ತೊಡಕುಗಳ ನಿವಾರಣೆಗೂ ಆ್ಯಪಲ್ ಸಂಸ್ಥೆ ಕ್ರಮವಹಿಸಿದೆ. ಅಮೆರಿಕದ ‘ಕ್ಯಾಪಿಟಲ್ ಗ್ಯಾಜೆಟ್’ ಪತ್ರಿಕಾ ಕಚೇರಿ ಮೇಲೆ ಗುಂಡಿನ ದಾಳಿ ನಡೆದ ನಂತರ ಫೇಶಿಯಲ್ ರೆಕಗ್ನಿಷನ್ ವಿಚಾರ ಪುನಃ ಮುನ್ನೆಲೆಗೆ ಬಂದಿದೆ. ಈ ದಾಳಿಯಲ್ಲಿ ಪತ್ರಿಕೆಯ ಸಿಬ್ಬಂದಿ ಹತ್ಯೆ ನಡೆಸಿದವನನ್ನು ಫೇಶಿಯಲ್ ರೆಕಗ್ನಿಷನ್ ವ್ಯವಸ್ಥೆ ಮೂಲಕ ಪೊಲೀಸರು ಪತ್ತೆ ಮಾಡಿದ್ದಾರೆ. ಆ ಭಾವಚಿತ್ರದೊಂದಿಗೆ ಶಂಕಿತ ಹಂತಕನ ಚಾಲನಾ ಪರವಾನಗಿ, ಅಪರಾಧ ಹಿನ್ನೆಲೆಯುಳ್ಳವರ ಪಟ್ಟಿ ಸೇರಿದಂತೆ ಬೇರೆ ಬೇರೆ ಗುರುತಿನ ಚೀಟಿಗಳಿಂದ ಭಾವಚಿತ್ರ, ಮಾಹಿತಿ ಸಂಗ್ರಹಿಸಿ, ‌ಹೋಲಿಕೆ ಮಾಡಿ ಹಂತಕನ ಗುರುತು ಪತ್ತೆ ಹಚ್ಚಲಾಗಿದೆ.

ಬೆರಳಚ್ಚು ಗುರುತು ಪತ್ತೆ ವಿಧಾನದ ನಂತರ ಅಪರಾಧಿಗಳನ್ನು ಕಂಡುಹಿಡಿಯಲು ಈ ತಂತ್ರಜ್ಞಾನ ಸಮರ್ಥ ಮಾರ್ಗವಾಗಿ ಬಳಕೆಯಾಗುತ್ತಿದೆ. ಇದರ ನಿಖರತೆ ಹಾಗೂ ದುರ್ಬಳಕೆ ಸಾಧ್ಯತೆಗಳ ಬಗೆಗೆ ಅನೇಕರು ಧ್ವನಿ ಎತ್ತಿದ್ದಾರೆ. ಪರ-ವಿರೋಧಗಳ ನಡುವೆಯೇ ಜಗತ್ತಿನ ಪ್ರಮುಖ ಸಾಫ್ಟ್‌ವೇರ್ ಕಂಪನಿಗಳು ಮುಖ ಗುರುತಿಸುವ ವ್ಯವಸ್ಥೆಯ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿವೆ.

ಬೇರೆ ಬೇರೆ ಕ್ಷೇತ್ರಕ್ಕೂ ವಿಸ್ತರಣೆ: ಭದ್ರತಾ ವಲಯಗಳ ಸೀಮಿತ ಬಳಕೆಗಾಗಿ ಅಭಿವೃದ್ಧಿಯಾಗುತ್ತಿದ್ದ ಫೇಶಿಯಲ್ ರೆಕಗ್ನಿಷನ್ ತಂತ್ರಜ್ಞಾನ ಈಗ ವ್ಯಾಪಾರ, ಆರೋಗ್ಯ ಸೇರಿದಂತೆ ಹಲವು ಕ್ಷೇತ್ರಗಳಿಗೆ ವಿಸ್ತರಿಸಿದೆ. 2022ರ ವೇಳೆಗೆ ಈ ತಂತ್ರಜ್ಞಾನದಿಂದ ಜಾಗತಿಕ ಮಾರುಕಟ್ಟೆಯಲ್ಲಿ ₹ 62 ಸಾವಿರ ಕೋಟಿ ಆದಾಯ ಉತ್ಪತ್ತಿಯಾಗಲಿದ್ದು, ವಾರ್ಷಿಕ ಶೇ 21.3ರಷ್ಟು ಬೆಳವಣಿಗೆ ಕಾಣುವುದಾಗಿ ವಿಶ್ಲೇಷಿಸಲಾಗುತ್ತಿದೆ.

ಕೃತಕ ಬುದ್ಧಿಮತ್ತೆಯ ವಿಸ್ತರಿಸಿದ ಭಾಗವಾಗಿರುವ ಫೇಶಿಯಲ್ ರೆಕಗ್ನಿಷನ್ ತಂತ್ರಜ್ಞಾನ ಭವಿಷ್ಯದಲ್ಲಿ ತರಬಹುದಾದ ಬದಲಾವಣೆ ಕುರಿತು ಅನೇಕ ಪ್ರಮುಖ ಉದ್ಯಮಿಗಳು ಮಾಹಿತಿ ಸಂಗ್ರಹದಲ್ಲಿ ತೊಡಗಿದ್ದಾರೆ. ಈ ತಂತ್ರಜ್ಞಾನ ಮುಂದೆ ಹೇಗೆಲ್ಲ ಅನುಷ್ಠಾನವಾಗುತ್ತದೆ, ಹೇಗೆ ಬಳಕೆ ಬಳಕೆಯಾಗುತ್ತದೆ ಹಾಗೂ ಆದಾಯ ಗಳಿಕೆಯ ಪ್ರಮಾಣ ಎಷ್ಟಿದೆ ಎಂಬುದರ ಬಗ್ಗೆಯೂ ವಿಷಯಗಳನ್ನು ಸಂಗ್ರಹಿಸುತ್ತಿದ್ದಾರೆ.

ಮುಖ ನೋಡಿ ಗುರುತು ಪರಿಶೀಲಿಸುವ ತಂತ್ರಜ್ಞಾನವು ಕಪ್ಪು ವರ್ಣದ ಹಾಗೂ ಸ್ತ್ರೀ-ಪುರುಷರ ಮುಖಗಳ ವ್ಯತ್ಯಾಸವನ್ನು ನಿಖರವಾಗಿ ಗುರುತಿಸುವಲ್ಲಿ ಶೇ 20ರಷ್ಟು ಅಸ್ಪಷ್ಟತೆ ಹೊಂದಿದೆ ಎಂದು ಎಂಐಟಿ ಸಂಶೋಧಕರು ಪತ್ತೆ ಮಾಡಿದ್ದರು. ಇದು ತಂತ್ರಜ್ಞಾನದಲ್ಲಿನ ತಾರತಮ್ಯವೆಂದೇ ಬಿಂಬಿತವಾಗಿತ್ತು. ಚಿತ್ರಗಳ ಮಾಹಿತಿ ಹೆಚ್ಚಿಸುವ ಮೂಲಕ ಯಂತ್ರಕ್ಕೆ ಬಣ್ಣ, ವಯಸ್ಸಿನ ವ್ಯತ್ಯಾಸ ಅರ್ಥೈಸಿಕೊಳ್ಳುವುದನ್ನು ಕಲಿಸಲಾಗಿದೆ. ಈಗ ಗಾಢ ಬಣ್ಣದ ಚರ್ಮದವರು ಮತ್ತು ಸ್ತ್ರೀ-ಪುರುಷ ಮುಖವನ್ನು ಶೇ 99ರಷ್ಟು ನಿಖರವಾಗಿ ಗುರುತಿಸುವಷ್ಟು ಸಮರ್ಥವಾಗಿ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದೆ ಎಂದು ಮೈಕ್ರೋಸಾಫ್ಟ್ ಇತ್ತೀಚೆಗೆ ಪ್ರಕಟಿಸಿದೆ. ಐಬಿಎಂ ಮತ್ತು ಚೀನಾದ ಎಐ ಸಂಸ್ಥೆ ಮೆಗ್ವಿ ರೂಪಿಸಿರುವ ತಂತ್ರಜ್ಞಾನದಲ್ಲಿಯೂ ಇಂಥದ್ದೇ ಸಮಸ್ಯೆ ಗುರಿತಿಸಲಾಗಿದೆ.

ಸುರಕ್ಷತೆಯ ಪಣ
ಕಂಪ್ಯೂಟರ್, ಮೊಬೈಲ್ ಫೋನ್ ಬಳಕೆ ಹೆಚ್ಚುತ್ತಿರುವುದು, ಅಗ್ಗದ ದರದಲ್ಲಿ ಇಂಟರ್‌ನೆಟ್‌ ಸೌಲಭ್ಯ ದೊರೆಯುತ್ತಿದ್ದು, ಆನ್‍ಲೈನ್ ವಹಿವಾಟು, ವರ್ಗಾವಣೆ ಸೇರಿದಂತೆ ಸಾಮಾನ್ಯ ಕಾರ್ಯಗಳಿಗೂ ಎಲೆಕ್ಟ್ರಾನಿಕ್ ಉಪಕರಣದ ಮೊರೆ ಹೋಗುತ್ತಿದ್ದೇವೆ. ಇದರಿಂದ ಪಾಸ್‍ವರ್ಡ್ ಹಾಗೂ ಇತರ ಮಾಹಿತಿ ಸುರಕ್ಷತೆ ಸವಾಲಿನದ್ದಾಗಿದೆ. ಹಾಗಾಗಿ ಫೇಸ್ ರೆಕಗ್ನೀಷನ್ ವ್ಯವಸ್ಥೆ ಮೋಸ ಮತ್ತು ಕಳ್ಳತನ ತಪ್ಪಿಸುವಲ್ಲಿ ‌‌ಪ್ರಮುಖ ಪಾತ್ರವಹಿಸಲಿದೆ.

ಮಾಸ್ಟರ್‌ ಕಾರ್ಡ್‌ ಗುರುತು
ಭಾರತದಲ್ಲಿ ರುಪೇ ಕಾರ್ಡ್ ಬಳಕೆಗೆ ಬರುವ ಮುನ್ನ ಬಹುತೇಕ ಬ್ಯಾಂಕ್‍ಗಳು ಮಾಸ್ಟರ್‌ ಕಾರ್ಡ್ ಸಂಸ್ಥೆಯ ಡೆಬಿಟ್, ಕ್ರೆಡಿಟ್ ಕಾರ್ಡ್‍ಗಳನ್ನು ಗ್ರಾಹಕರಿಗೆ ಪೂರೈಕೆ ಮಾಡಿದ್ದವು. ಈಗಲೂ ಭಾರತ ಸೇರಿದಂತೆ ಜಗತ್ತಿನಾದ್ಯಂತ ಇದೇ ಸಂಸ್ಥೆಯ ಕಾರ್ಡ್‌ ಹೆಚ್ಚು ಬಳಕೆಯಾಗುತ್ತಿದೆ. ಇದನ್ನು ಬಳಸಿ ಆನ್‍ಲೈನ್ ಪೇಮೆಂಟ್ ಮಾಡುವಾಗ ಫೇಶಿಯಲ್ ರೆಕಗ್ನಿಷನ್ ಬಳಸಿಕೊಳ್ಳಲಾಗುತ್ತಿದೆ. ಈ ವೇಳೆ ‘ಮಾಸ್ಟರ್ ಕಾರ್ಡ್‌ ಐಡೆಂಟಿಟಿ ಚೆಕ್’ ಮೊಬೈಲ್ ಅಪ್ಲಿಕೇಷನ್‍ನಲ್ಲಿ ಕ್ಯಾಮೆರಾ ಪರದೆ ತೆರೆದುಕೊಂಡು ಮುಖದ ಗುರುತನ್ನು ಪಾಸ್‍ವರ್ಡ್‍ನಂತೆ ಬಳಸಿಕೊಳ್ಳುತ್ತದೆ. ಪ್ರಸ್ತುತ 14 ರಾಷ್ಟ್ರಗಳಲ್ಲಿ ಈ ಅಪ್ಲಿಕೇಷನ್ ಬಳಕೆಯಲ್ಲಿದ್ದು, ಇತ್ತೀಚೆಗೆ ಬ್ರೆಜಿಲ್‍ಗೂ ವಿಸ್ತರಿಸಿದೆ. ಬಳಕೆದಾರರ ಕಣ್ಣನ್ನು ಸ್ಕ್ಯಾನ್ ಮಾಡಿ ಪಾಸ್‍ವರ್ಡ್ ರೀತಿಯಲ್ಲಿ ಲಾಗಿನ್ ಮಾಡಲು ಬ್ಯಾಂಕ್ ಆಫ್ ಅಮೆರಿಕ ಸೇರಿದಂತೆ ಬೇರೆ ಬೇರೆ ಪ್ರಮುಖ ಬ್ಯಾಂಕ್‍ಗಳು ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಷನ್‍ ಅನ್ನು ಪ್ರಾಯೋಗಿಕವಾಗಿ ಬಳಸುತ್ತಿವೆ.

ಮಾತ್ರೆ ನುಂಗಿದ್ರೋ, ಇಲ್ವೋ...
ರೋಗಿಯೊಬ್ಬರು ವೈದ್ಯರು ಸೂಚಿಸಿದಂತೆ, ನಿಗದಿ ಪಡಿಸಿದಷ್ಟು ಔಷಧಿ ಸೇವಿಸುವುದನ್ನು ಗಮನಿಸುವುದಕ್ಕಾಗಿಯೇ ‘ಎಐಕ್ಯೂರ್’ ಅಪ್ಲಿಕೇಷನ್ ಬಳಕೆಯಲ್ಲಿದೆ. ರೋಗಿ ವೈದ್ಯರ ಸಲಹೆಯನ್ನು ಪಾಲಿಸುವುದರ ಮೇಲೆ ಇದು ನಿಗಾವಹಿಸುತ್ತದೆ. ‘ಎಪ್ಯಾಟ್’ನಂತಹ ಅಪ್ಲಿಕೇಷನ್‍ಗಳು ಮುಖ ಚರ್ಯೆಯನ್ನು ಗಮನಿಸಿ ಅನುಭವಿಸುತ್ತಿರುವ ನೋವಿನ ಪ್ರಮಾಣವನ್ನು ಪತ್ತೆಮಾಡುತ್ತವೆ. ವೈದ್ಯರು ಚಿಕಿತ್ಸೆ ನೀಡಲು ಇದರಲ್ಲಿ ನಮೂದಾಗುವ ಪ್ರಮಾಣದ ಸಂಖ್ಯೆಯನ್ನು ಬಳಸಿಕೊಳ್ಳುತ್ತಾರೆ.

ಭಾವನೆಗಳನ್ನೂ ಗುರುತಿಸುವಷ್ಟು ಈ ತಂತ್ರಜ್ಞಾನ ಸಮರ್ಥಗೊಳ್ಳುತ್ತಿದೆ. ಇನ್ನು ಅಪರಾಧ ತಡೆಯಲ್ಲಿ ಅಥವಾ ಅಪರಾಧಿಗಳನ್ನು ಗುರುತಿಸಲು ಇದರ ಉಪಯೋಗ ಬಹಳ. ಪತ್ರಿಭಟನೆ ನಡೆಸುವವರ ಚಿತ್ರಗಳನ್ನು ಸಂಗ್ರಹಿಸಿ ವಿವರ ಪಡೆಯುವುದೂ ಸಾಧ್ಯವಿದೆ. ಇಂಗ್ಲೆಂಡ್‍ನ ಅನೇಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಗಮನಿಸುವಲ್ಲಿಯೂ ಇದು ಸಹಕಾರಿಯಾಗಿದೆ.

ಆದರೆ, ವಾಲ್‍ಮಾರ್ಟ್‌ನಂತಹ ಕೆಲವು ರಿಟೇಲ್ ಮಳಿಗೆಗಳು ಫೇಸ್ ರೆಕಗ್ನಿಷನ್ ತಂತ್ರಜ್ಞಾನ ಬಳಸುತ್ತಾ ಹಲವು ಸಮಸ್ಯೆಗಳನ್ನು ಎದುರಿಸಿವೆ. ಅವುಗಳನ್ನು ಬಗೆಹರಿಸಿಕೊಳ್ಳಲಾಗದೇ, ಆ ತಂತ್ರಜ್ಞಾನದ ಬಳಕೆಗೆ ವಿರಾಮ ಹಾಕಿದ ಉದಾಹರಣೆಗಳಿವೆ. ಮಾತ್ರವಲ್ಲ, ಇದು ಖಾಸಗಿತನಕ್ಕೆ ಸೆಡ್ಡು ಹೊಡೆಯುತ್ತದೆ, ವ್ಯಕ್ತಿಯ ಚಲನವಲನಗಳನ್ನು ಹಿಂಬಾಲಿಸುವ ಸಾಧ್ಯತೆಗಳಿವೆ ಎಂದು ಅನೇಕರು ಆರೋಪಿಸಿದ್ದರು. ಈ ಸಮಸ್ಯೆಗಳನ್ನು ನಿವಾರಿಸಿಕೊಂಡು ಪೂರ್ಣ ಅಭಿವೃದ್ಧಿ ಹೊಂದಿದ ತಂತ್ರಜ್ಞಾನವಾಗಿ ಫೇಸ್‌ ರೆಕಗ್ನೀಷನ್ ವ್ಯವಸ್ಥೆ ಬಳಕೆಗೆ ಬಂದ ಬಳಿಕವೇ ಉಪಯೋಗ ಮತ್ತು ಅಪಾಯಗಳ ಬಗ್ಗೆ ಅರಿವಾಗಲು ಸಾಧ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT