ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಮ್‌ಸಂಗ್ ಗ್ಯಾಲಕ್ಸಿ XCover 7: ಬದಲಾಯಿಸಬಹುದಾದ ಬ್ಯಾಟರಿಯುಳ್ಳ ಗಟ್ಟಿ ಫೋನ್

Published 5 ಏಪ್ರಿಲ್ 2024, 9:37 IST
Last Updated 5 ಏಪ್ರಿಲ್ 2024, 9:37 IST
ಅಕ್ಷರ ಗಾತ್ರ
ಪ್ರಮುಖ ವೈಶಿಷ್ಟ್ಯಗಳು
  • 6ಜಿಬಿ RAM ಹಾಗೂ 128ಜಿಬಿ ಸ್ಟೋರೇಜ್
  • ಬದಲಾಯಿಸಬಹುದಾದ ಬ್ಯಾಟರಿ
  • ಬ್ಯಾಟರಿ 4,050 ಎಂಎಹೆಚ್

ಎಷ್ಟಿದ್ದರೂ ಹಳೆಯ ಫೋನ್‌ಗಳೇ ಚೆನ್ನಾಗಿದ್ದವು ಎಂದುಕೊಳ್ಳುವವರಿಗೆ, ಹೆಚ್ಚು ಸುರಕ್ಷಿತ ಕವಚ ಬೇಕೆಂದುಕೊಳ್ಳುವವರಿಗೆ ಮತ್ತು ಆಧುನಿಕ ಶೈಲಿಗೆ ಅನುಗುಣವಾದ ಹೊಸ ಅನುಕೂಲಗಳಿರುವ ಫೋನ್ ಬೇಕೆಂದುಕೊಂಡವರಿಗಾಗಿ ಇದೋ ಬಂದಿದೆ ಗ್ಯಾಲಕ್ಸಿ ಎಕ್ಸ್-ಕವರ್7 ಫೋನ್. ಸ್ಯಾಮ್‌ಸಂಗ್ ಇತ್ತೀಚೆಗೆ ತನ್ನ ಸಾಂಪ್ರದಾಯಿಕ ಸಾಧನಗಳ ಸರದಿಯಿಂದ ಹೊರಬಂದು, ಶ್ರಮಿಕ ಉದ್ಯೋಗಿಗಳನ್ನೇ ಗಮನದಲ್ಲಿರಿಸಿಕೊಂಡು ಮತ್ತು ಫೋನನ್ನು ಸ್ವಲ್ಪ ಮಟ್ಟಿನ ನಿರ್ಲಕ್ಷ್ಯದಿಂದ ಬಳಸುವವರಿಗಾಗಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಕ್ಸ್-ಕವರ್ 7 (Samsung Galaxy Xcover 7) ಎಂಬ ಬಜೆಟ್ ಶ್ರೇಣಿಯ ಫೋನನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದು, ಇದನ್ನು ಎರಡು ವಾರಗಳ ಕಾಲ ಬಳಸಿ ನೋಡಿದಾಗ ಕಂಡುಬಂದ ಅಂಶಗಳು ಇಲ್ಲಿವೆ.

ವಿಶೇಷತೆ

ಸ್ಯಾಮ್‌ಸಂಗ್ ಹೇಳುವಂತೆ ಇದು ಶ್ರಮಿಕ ಉದ್ಯೋಗಿಗಳಿಗಾಗಿಯೇ ರೂಪಿಸಲಾದ ಸಾಧನ. ಸ್ಯಾಮ್‌ಸಂಗ್‌ನ ಮೊಟ್ಟಮೊದಲ ರಗ್ಗ್‌ಡ್ (Rugged) ಫೋನ್ ಇದು. ಹೆಚ್ಚಿನ ದೃಢತೆ, ನೀರು-ಧೂಳು ತಾಳಿಕೊಳ್ಳುವ ಶಕ್ತಿ, ಸಾಮಾನ್ಯ ಪರಿಸ್ಥಿತಿಗಳಲ್ಲಿ ಕೆಳಗೆ ಬಿದ್ದರೂ ಸುಲಭವಾಗಿ ಹಾನಿಗೀಡಾಗದ ವೈಶಿಷ್ಟ್ಯ ಇದರಲ್ಲಿದೆ. ಇದರ ಮತ್ತೊಂದು ವಿಶೇಷವೆಂದರೆ, ಹಿಂಭಾಗದ ಕವಚವನ್ನು ತೆಗೆಯಬಹುದು ಮತ್ತು ಬ್ಯಾಟರಿಯನ್ನು ಬದಲಿಸಬಹುದು. ಹಾಗಿದ್ದರೆ ಸ್ಯಾಮ್‌ಸಂಗ್ ಹಿಂದಿನ ದಿನಗಳಿಗೆ ಮರಳಿದೆಯೇ ಎಂಬ ಪ್ರಶ್ನೆಗೆ ಉತ್ತರ - ಹೌದು. ಆದರೆ ಇದರಿಂದ ಪ್ರಯೋಜನವೇ ಹೆಚ್ಚು. ಇದರಲ್ಲಿ ಕಚೇರಿ ಕಾರ್ಯಗಳಿಗಾಗಿ ಒಂದು ವರ್ಷದ ಸ್ಯಾಮ್‌ಸಂಗ್‌ನ ನೋ ಸ್ಯೂಟ್ (Know Suite) ಚಂದಾದಾರಿಕೆ ಉಚಿತವಾಗಿ ದೊರೆಯುತ್ತದೆ. ಅಲ್ಲದೆ, ಇದು ಸ್ಯಾಮ್‌ಸಂಗ್ ಜಾಲತಾಣದಲ್ಲಿ, ಒಂದೇ ಬಣ್ಣ ಮತ್ತು ಒಂದೇ ವಿಧದಲ್ಲಿ (6ಜಿಬಿ RAM ಹಾಗೂ 128ಜಿಬಿ ಸ್ಟೋರೇಜ್) ಲಭ್ಯವಿದೆ.

ಈಗಿನ ಕಾಲಕ್ಕೆ ಎಷ್ಟೇ ಬ್ಯಾಟರಿ ಚಾರ್ಜ್ ಇದ್ದರೂ ಸಾಕಾಗುವುದಿಲ್ಲ. 4050mAh ಸಾಮರ್ಥ್ಯದ ಬ್ಯಾಟರಿಯಲ್ಲಿ ಚಾರ್ಜ್ ಖಾಲಿಯಾದಲ್ಲಿ, ಅದನ್ನು ತೆಗೆದು ಮೊದಲೇ ಜಾರ್ಜ್ ಆಗಿರುವ ಮತ್ತೊಂದು ಬ್ಯಾಟರಿಯನ್ನು ಅಳವಡಿಸುವ ಅವಕಾಶ ಇಲ್ಲಿದೆ. ಇದು ಕೂಡ ಒಂದು ರೀತಿಯಲ್ಲಿ ಪೋರ್ಟಬಲ್ ಬ್ಯಾಟರಿ ಇದ್ದಂತೆಯೇ, ಆದರೆ ಜೇಬಿನಲ್ಲಿ ಕೂರುವಷ್ಟು ಪುಟ್ಟದು. ಇದು ಸ್ಯಾಮ್‌ಸಂಗ್ ಎಕ್ಸ್-ಕವರ್ ಫೋನ್‌ನ ಅನುಕೂಲತೆಗಳಲ್ಲೊಂದು. ಫೋನನ್ನು ಚಾರ್ಜಿಂಗ್‌ನಲ್ಲಿರಿಸುತ್ತಲೇ 10 ಸೆಕೆಂಡ್‌ಗಳ ಒಳಗೆ ಬ್ಯಾಟರಿ ಬದಲಾಯಿಸಿದರೆ ರೀಸ್ಟಾರ್ಟ್ ಆಗುವುದಿಲ್ಲ. ಫೋನ್ ಆನ್ ಆಗಿಯೇ ಇರುತ್ತದೆ ಎಂಬುದು ಮತ್ತೊಂದು ಅನುಕೂಲ. ಜೊತೆಗೆ, ಕೆಳಗೆ ಬಿದ್ದರೂ ಸುಲಭವಾಗಿ ಫೋನ್‌ಗೆ ಹಾನಿಯಾಗದಂತಹ ಪಾಲಿಕಾರ್ಬೊನೇಟ್ ರಕ್ಷಾ ಕವಚ ಇದಕ್ಕಿದೆ.

ವಿನ್ಯಾಸ/ಸ್ಕ್ರೀನ್

6.6 ಇಂಚಿನ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ಲಸ್ ರಕ್ಷಣೆಯಿರುವ ಫುಲ್ ಹೆಚ್‌ಡಿ ಪ್ಲಸ್ ಎಲ್‌ಸಿಡಿ ಸ್ಕ್ರೀನ್ ಇದರಲ್ಲಿದೆ. 60Hz ರಿಫ್ರೆಶ್ ರೇಟ್ ಇರುವುದು ಬ್ರೌಸಿಂಗನ್ನು ಸುಲಲಿತವಾಗಿಸಿದೆ. ಪ್ರಖರ ಬಿಸಿಲಿನಲ್ಲಿಯೂ ಸ್ಕ್ರೀನ್ ಸರಿಯಾಗಿ ಕಾಣಿಸುತ್ತದೆ. ಎಡಭಾಗದಲ್ಲೊಂದು ಎಕ್ಸ್-ಕವರ್ ಬಟನ್ ಇದೆ. ಇದಕ್ಕೆ ತ್ವರಿತ ಬಳಕೆಗಾಗಿ ಪದೇ ಪದೇ ಬಳಸುವ ಯಾವುದೇ ಆ್ಯಪ್ ಅನ್ನು ಹೊಂದಿಸಬಹುದಾಗಿದೆ. ಡೀಫಾಲ್ಟ್ ಆಗಿ ಫ್ಲ್ಯಾಶ್ ಲೈಟ್ ಅನ್ನು ಹೊಂದಿಸಲಾಗಿದೆ. ಬಲಭಾಗದಲ್ಲಿ ವಾಲ್ಯೂಮ್ ಹಾಗೂ ಪವರ್/ಲಾಕ್ ಬಟನ್‌ಗಳಿವೆ. ಮೇಲ್ಭಾಗದಲ್ಲಿ 3.5 ಮಿ.ಮೀ. ಆಡಿಯೋ ಜಾಕ್, ಮೈಕ್ ಇದ್ದು, ತಳಭಾಗದಲ್ಲಿ ಟೈಪ್ ಸಿ ಪೋರ್ಟ್, ಪ್ರಧಾನ ಮೈಕ್, ಲೌಡ್ ಸ್ಪೀಕರ್ ಹಾಗೂ ಪೋಗೊ ಚಾರ್ಜಿಂಗ್ ಪಿನ್‌ಗಳಿವೆ.

ಹಿಂಭಾಗದ ಪ್ಯಾನೆಲ್ ಅನ್ನು ಸುಲಭವಾಗಿ ತೆಗೆಯಬಹುದಾಗಿದ್ದು, ಒಳಗೆ ಬ್ಯಾಟರಿ ಜೊತೆಗೆ ಸಿಮ್ ಕಾರ್ಡ್/ ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್‌ಗಳಿವೆ. 240 ಗ್ರಾಂ ತೂಕವಿದ್ದು, ಐಪಿ68 ಮಾನಕದ ಜಲನಿರೋಧಕ ಶಕ್ತಿ ಇದೆ. ಹಿಂಭಾಗದ ಕವಚವನ್ನು ತೆಗೆಯಬಹುದಾಗಿದ್ದರೂ ಸಾಮಾನ್ಯ ಮಳೆಗೆ ಒದ್ದೆಯಾದರೆ ಅಥವಾ ನೀರಲ್ಲಿ ಮುಳುಗಿದರೆ ಏನೂ ಆಗದು ಮತ್ತು ಪ್ರಖರ ಶಾಖವಿರುವ ಬಿಸಿಲಿನ ವಾತಾವರಣದಲ್ಲಿಯೂ ಸಮಸ್ಯೆಯಾಗುವುದಿಲ್ಲ. ಪಾಲಿಕಾರ್ಬೊನೇಟ್ ಕವಚ ಇರುವುದರಿಂದ ಕೈಯಿಂದ ಜಾರುವ ಸಾಧ್ಯತೆಗಳಿಲ್ಲ. ಸ್ಕ್ರೀನ್‌ನ ಸ್ಪರ್ಶ ಸಂವೇದನೆಯೂ ಚೆನ್ನಾಗಿದೆ. ಗ್ಲೌಸ್ ಹಾಕಿಕೊಂಡರೂ, ಸ್ವಲ್ಪ ನೀರಿನ ಹನಿಯಿದ್ದರೂ ಸ್ಕ್ರೀನ್‌ನ ಟಚ್ ಸೆನ್ಸಿಟಿವಿಟಿಗೆ ಸಮಸ್ಯೆಯಾಗಿಲ್ಲ. ಸ್ಕ್ರೀನ್‌ನಲ್ಲಿ ವಿಡಿಯೊ ಹಾಗೂ ಫೋಟೊಗಳು ಚೆನ್ನಾಗಿ, ವಿವರಗಳೊಂದಿಗೆ ಮತ್ತು ಅತ್ಯುತ್ತಮ ಬಣ್ಣಗಳೊಂದಿಗೆ ಗೋಚರಿಸುತ್ತವೆ.

ಕ್ಯಾಮೆರಾ

50 ಮೆಗಾಪಿಕ್ಸೆಲ್ ಸಾಮರ್ಥ್ಯದ ಸೆನ್ಸರ್ ಇರುವ ಪ್ರಧಾನ ಕ್ಯಾಮೆರಾದಲ್ಲಿ ಡ್ಯುಯಲ್ ಫ್ಲ್ಯಾಶ್ ಇದೆ. ಬಾರ್ ಕೋಡ್ ಮತ್ತು ಕ್ಯುಆರ್ ಕೋಡ್‌ಗಳನ್ನು ಸುಲಭವಾಗಿ ಓದುವಂತೆ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ತೀರಾ ಅದ್ಭುತ ಅನಿಸದಿದ್ದರೂ, ಉತ್ತಮ ಫೋಟೊಗಳು, ವಿಡಿಯೊಗಳು ಸೆರೆಯಾಗಿವೆ. ಮುಂಭಾಗದಲ್ಲಿ 5 ಮೆಗಾಪಿಕ್ಸೆಲ್‌ನ ಸೆಲ್ಫಿ ಕ್ಯಾಮೆರಾ ಇದ್ದು, ವಿಡಿಯೊ ಕರೆಗೆ ಕೂಡ ಅನುಕೂಲಕರವಾಗಿದೆ.

ಕಾರ್ಯಾಚರಣೆ

ಮೀಡಿಯಾಟೆಕ್‌ನ ಡೈಮೆನ್ಸಿಟಿ 6100 ಪ್ಲಸ್ ಚಿಪ್‌ಸೆಟ್ ಇದರಲ್ಲಿದ್ದು, 2.2GHz ಸಾಮರ್ಥ್ಯದ ಒಕ್ಟಾ ಕೋರ್ ಪ್ರೊಸೆಸರ್, 6ಜಿಬಿ RAM ಹಾಗೂ 128 ಜಿಬಿ ಸ್ಟೋರೇಜ್ ಸಾಮರ್ಥ್ಯವಿದೆ. ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 1ಟಿಬಿವರೆಗೆ ಸ್ಟೋರೇಜ್ ಪಡೆಯಬಹುದು. ಆಂಡ್ರಾಯ್ಡ್ 14 ಕಾರ್ಯಾಚರಣಾ ವ್ಯವಸ್ಥೆಯೊಂದಿಗೆ ಈ ಮೇಲಿನ ಹಾರ್ಡ್‌ವೇರ್‌ಗಳು ಈ ಫೋನ್‌ನ ಉತ್ತಮ ಮತ್ತು ಸುಲಲಿತ ಕಾರ್ಯಾಚರಣೆಗೆ ಅನುಕೂಲಕರವಾಗಿವೆ. ಗೇಮಿಂಗ್ ಮತ್ತು ಹಾಡು ಕೇಳುವುದಕ್ಕೆ ಲೌಡ್ ಸ್ಪೀಕರ್‌ಗಳು ಪೂರಕವಾಗಿವೆ.

ಬ್ಯಾಟರಿ 4,050 ಎಂಎಹೆಚ್ ಸಾಮರ್ಥ್ಯ ಇದ್ದರೂ ಸಾಮಾನ್ಯ ಕೆಲಸ ಕಾರ್ಯಗಳಲ್ಲಿ ಪೂರ್ತಿ ಚಾರ್ಜ್ ಆದ ಬಳಿಕ ಒಂದುವರೆ ದಿನಕ್ಕೆ ಚಾರ್ಜಿಂಗ್ ಸಮಸ್ಯೆಯಾಗಲಿಲ್ಲ. ಕರೆ ಗುಣಮಟ್ಟ, ಜಿಪಿಎಸ್ ಸಂವೇದನೆಯಲ್ಲೂ ಯಾವುದೇ ಸಮಸ್ಯೆಯಿಲ್ಲ.

ಒಟ್ಟಿನಲ್ಲಿ ಹೇಳುವುದಾದರೆ, ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಕ್ಸ್-ಕವರ್ 7 ಫೋನ್ ಮಧ್ಯಮ ಬಜೆಟಿನಲ್ಲಿ ಶ್ರಮಿಕರಿಗೆ, ಉದ್ಯೋಗಿಗಳಿಗೆ ನೆರವಾಗುವ ಸ್ಮಾರ್ಟ್ ಸಾಧನವಾಗಿ ಗಮನ ಸೆಳೆಯುತ್ತದೆ. ದೃಢವಾದ ಕವಚವಿರುವುದರಿಂದ ತೀರಾ ಜಾಗರೂಕತೆಯಿಂದ ನಿಭಾಯಿಸಬೇಕಿಲ್ಲ. ಕರೆ, ಸಂದೇಶ, ಸೋಷಿಯಲ್ ಮೀಡಿಯಾ ಬಳಕೆಯೊಂದಿಗೆ, ಸಾಮಾನ್ಯ ಚಟುವಟಿಕೆಗಳಿಗೆ ಉತ್ತಮ ಕ್ಯಾಮೆರಾ, ಉತ್ತಮ ಬ್ಯಾಟರಿ ಇದರಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT