ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಿತ್ಯ ಎಲ್‌1: ಸೂರ್ಯನ ದ್ಯುತಿಗೋಳದ ಮೊದಲ ಚಿತ್ರ ಸೆರೆ ಹಿಡಿದ ‘ಸೂಟ್’

Published 11 ಡಿಸೆಂಬರ್ 2023, 16:22 IST
Last Updated 11 ಡಿಸೆಂಬರ್ 2023, 16:22 IST
ಅಕ್ಷರ ಗಾತ್ರ

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ನಡೆಸಿರುವ ಆದಿತ್ಯ–ಎಲ್‌1 ಯೋಜನೆಯ ಪ್ರಮುಖ ಹಂತದಲ್ಲಿ ನೌಕೆಯಲ್ಲಿರುವ ಸೌರ ನೇರಳಾತೀತ ಚಿತ್ರ ಸೆರೆಹಿಡಿಯುವ ದೂರದರ್ಶಕ (SUIT) ಸಾಧನವು ತನ್ನಲ್ಲಿರುವ ಹಲವು ವೈಜ್ಞಾನಿಕ ಫಿಲ್ಟರ್‌ಗಳನ್ನು ಬಳಸಿ ಸೂರ್ಯನ ದ್ಯುತಿಗೋಳ ಹಾಗೂ ವರ್ಣಗೋಳದ ಚಿತ್ರಗಳನ್ನು ಸೆರೆಹಿಡಿದಿದೆ. 

200ರಿಂದ 400 ಎನ್‌ಎಂ ತರಂಗಾಂತರ ಶ್ರೇಣಿಯಲ್ಲಿ ಸೆರೆ ಹಿಡಿದ ಸೂರ್ಯ ಪೂರ್ಣ ಗೋಳದ ಚಿತ್ರ ಆದಿತ್ಯನ ಹಲವು ಕುತೂಹಲಕರ ಅಂಶಗಳ ಮಾಹಿತಿ ನೀಡಿದೆ. ಈ ವಿಷಯವನ್ನು ಇಸ್ರೊ ತನ್ನ ಅಧಿಕೃತ ಅಂತರ್ಜಾಲ ತಾಣ Aditya-L1's SUIT captures full-disk images of the Sun in near ultraviolet wavelengths (isro.gov.in) ದಲ್ಲಿ ಹಂಚಿಕೊಂಡಿದೆ. 

2023ರ ಸೆ. 2ರಂದು ಆದಿತ್ಯ ಎಲ್‌1 ನೌಕೆ ಹೊತ್ತ ರಾಕೇಟ್‌ ನಿಗದಿತ ಕಕ್ಷೆಯತ್ತ ಉಡ್ಡಯನಗೊಂಡಿತು. ಪೂರ್ವನಿರ್ಧಾರಿತ ಲ್ಯಾಗ್ರಾಂಜಸ್‌ ಎಲ್‌1ನಲ್ಲಿ ನೌಕೆಯನ್ನು ಯಶಸ್ವಿಯಾಗಿ ಸೇರಿಸಿದ ಇಸ್ರೊ, ನ. 20ರಂದು ಸೂಟ್‌ ಕಾರ್ಯಾಚರಣೆಯನ್ನು ಆರಂಭಿಸಿತು. ಇದಕ್ಕೆ ಜೋಡಿಸಿದ್ದ ಟೆಲಿಸ್ಕೋಪ್‌ ಡಿ. 6ರಂದು ಮೊದಲ ಚಿತ್ರ ಸೆರೆ ಹಿಡಿಯಿತು. ಇದಕ್ಕಾಗಿ 11 ವಿಭಿನ್ನ ಫಿಲ್ಟರ್ ಬಳಸಲಾಗಿತ್ತು. 

ಆದಿತ್ಯ ಎಲ್‌ 1 ಅನ್ನು ಸಂಪೂರ್ಣ ದೇಶೀಯವಾಗಿ ನಿರ್ಮಿಸಲಾಗಿದ್ದು, ಒಟ್ಟು ಏಳು ಉಪಕರಣಗಳು ಇದರಲ್ಲಿವೆ. ಭೂಮಿಯಿಂದ 15 ಲಕ್ಷ ಕಿ.ಮೀ ದೂರದಲ್ಲಿರುವ ಲಾಂಗ್ರೇಜ್‌ ಎಲ್‌ ಒನ್‌ ಬಿಂದುವಿನಲ್ಲಿ ಆದಿತ್ಯ ಎಲ್‌–1 ಅಂತರಿಕ್ಷ ವೀಕ್ಷಣಾಲಯವನ್ನು ಇರಿಸಲಾಗಿದೆ. ಇದು ಯಾವುದೇ ಅಡಚಣೆ ಇಲ್ಲದೆ ನಿರಂತರವಾಗಿ ಸೂರ್ಯನಲ್ಲಿ ನಡೆಯುವ ಸೌರ ಚಟುವಟಿಕೆಗಳನ್ನು ಗಮನಿಸುತ್ತದೆ.

ನಾಲ್ಕು ಪ್ರತ್ಯೇಕ ಉಪಕರಣಗಳಿಂದ ಸೂರ್ಯನ ಪ್ರಭಾಗೋಳ, ವರ್ಣಗೋಳ ಮತ್ತು ಕಿರೀಟದ ಅಧ್ಯಯನವನ್ನು ನಿರಂತರವಾಗಿ ನಡೆಸಲಿದೆ. ಉಳಿದ ಮೂರು ಉಪಕರಣಗಳು ಅಯಸ್ಕಾಂತ ಕ್ಷೇತ್ರ ಮತ್ತು ಕಣ ಪ್ರವಾಹದ ವೀಕ್ಷಣೆ ನಡೆಸುತ್ತವೆ.

ಸದ್ಯ ಸೆರೆ ಹಿಡಿದಿರುವ ಚಿತ್ರಗಳು ಸೂರ್ಯನ ಪ್ರಭಾವಗೋಳ ಹಾಗೂ ಸೂರ್ಯನ ಶಾಂತ ಪ್ರದೇಶಗಳನ್ನು ತೋರಿಸಿವೆ. ಇದು ಸೂರ್ಯನ ವಿಕಿರಣಗಳು ಭೂಮಿಯ ವಾತಾವರಣದ ಮೇಲೆ ಬೀರುತ್ತಿರುವ ಪ್ರಭಾವದ ಕುರಿತ ಮಹತ್ವದ ಮಾಹಿತಿಯನ್ನು ಅರಿಯಲು ಈ ಚಿತ್ರಗಳು ನೆರವಾಗಲಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಖಗೋಳವಿಜ್ಞಾನ ಹಾಗೂ ಖಗೋಳ ಭೌತವಿಜ್ಞಾನದ ಅಂತರ ವಿಶ್ವವಿದ್ಯಾಲಯಗಳ ಜಂಟಿ ಅಧ್ಯಯನದ ಫಲವಾಗಿ ಪುಣೆಯಲ್ಲಿರುವ ‘ಸೂಟ್’ ಸಾಧನ ಅಭಿವೃದ್ಧಿಗೊಂಡಿದೆ. ಇದರಲ್ಲಿ ಇಸ್ರೊ, ಮಣಿಪಾಲ್ ಉನ್ನತ ಶಿಕ್ಷಣ ಅಕಾಡೆಮಿ, ಕೋಲ್ಕತ್ತದ ಭಾರತೀಯ ಬಾಹ್ಯಾಕಾಶ ವಿಜ್ಞಾನ ಉನ್ನತ ಸಂಸ್ಥೆ, ಬೆಂಗಳೂರಿನಲ್ಲಿರುವ ಭಾರತೀಯ ಖಗೋಳ ಭೌತವಿಜ್ಞಾನ ಸಂಸ್ಥೆ, ಉದಯಪುರದ ಸೌರ ವೀಕ್ಷಣಾ ಕೇಂದ್ರ ಹಾಗೂ ಅಸ್ಸಾಂನ ತೇಜಪುರ ವಿಶ್ವವಿದ್ಯಾಲಯಗಳು ಜತೆಗೂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT