ಅತ್ಯಂತ ಶಕ್ತಿಶಾಲಿಯಾದ, ಅಸಾಧಾರಣವಾಗಿ ಗೌಪ್ಯವಾದ (ಸ್ಟೆಲ್ತ್), ತಿಂಗಳುಗಳ ಕಾಲ ಸಮುದ್ರದ ಆಳದಲ್ಲೇ ನೆಲೆಸಬಲ್ಲ, ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಗುರಿಗಳ ಮೇಲೆ ದಾಳಿ ಮಾಡಬಲ್ಲ ಪರಮಾಣು ಕ್ಷಿಪಣಿಗಳನ್ನು ಹೊಂದಿರುವ ಜಲಾಂತರ್ಗಾಮಿ ನೌಕೆಯನ್ನು (ಸಬ್ಮರೀನ್) ಊಹಿಸಿಕೊಳ್ಳಿ. ಅದು ಯಾರ ಕಣ್ಣಿಗೂ ಬೀಳದಂತೆ ಇವೆಲ್ಲ ಕಾರ್ಯಗಳನ್ನು ನಡೆಸಬಲ್ಲದಾಗಿರುತ್ತದೆ.

ಮೇಲ್ನೋಟಕ್ಕೆ ಇದು ಯಾವುದೋ ವೈಜ್ಞಾನಿಕ ಫ್ಯಾಂಟಸಿ ಸಿನಿಮಾದ ಕಥೆಯಂತೆ ಕಂಡರೂ, ಇದು ರಕ್ಷಣಾ ತಂತ್ರಜ್ಞಾನದಲ್ಲಿ ಭಾರತದ ಹೊಸ ಸಾಧನೆಯ ಕಥೆಯಾಗಿದೆ. ಡಿಸೆಂಬರ್ 2ರಂದು ನೌಕಾಪಡೆಯ ಮುಖ್ಯಸ್ಥರಾದ ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿ ಭಾರತದ ಮೂರನೇ ದೇಶೀಯ ನಿರ್ಮಾಣದ ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆ ಈಗ ಅಂತಿಮ ಪರೀಕ್ಷಾ ಹಂತಗಳಲ್ಲಿದ್ದು, ಶೀಘ್ರವಾಗಿ ನೌಕಾಪಡೆಗೆ ನಿಯೋಜನೆಗೊಳ್ಳಲಿದೆ ಎಂದಿದ್ದಾರೆ.

ತಿರುವನಂತಪುರದಲ್ಲಿ ನೌಕಾಪಡೆ ದಿನದ ಆಚರಣೆಗೆ ಕೆಲ ದಿನಗಳ ಮುನ್ನ ಈ ಘೋಷಣೆ ಮಾಡಿರುವುದು ಪ್ರಬಲ ನೌಕಾ ಸೇನೆಯಾಗಿ ಹೊರಹೊಮ್ಮುವ ಭಾರತದ ಹಾದಿಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ನೂತನ ಐಎನ್ಎಸ್ ಅರಿದಮನ್ ತನ್ನ ಸೋದರಿ ಸಬ್ಮರೀನ್ಗಳಾದ ಐಎನ್ಎಸ್ ಅರಿಹಂತ್ ಮತ್ತು ಐಎನ್ಎಸ್ ಅರಿಘಾತ್ಗಳೊಡನೆ ಸೇರಲಿದ್ದು, ಆ ಮೂಲಕ ಮೂರೂ ಜಲಾಂತರ್ಗಾಮಿಗಳು ಭಾರತವನ್ನು ರಕ್ಷಿಸುವ ಮತ್ತು ಈ ಪ್ರದೇಶದಲ್ಲಿ ಶಾಂತಿಯನ್ನು ನಿರ್ವಹಿಸುವ ಕಾರ್ಯ ನಡೆಸಲಿವೆ.

ಜಲಾಂತರ್ಗಾಮಿ ವೈಶಿಷ್ಟ್ಯಗಳು

ಪರಮಾಣು ಜಲಾಂತರ್ಗಾಮಿಗಳ ಸೇರ್ಪಡೆ ಯಾಕೆ ಇಷ್ಟು ಮಹತ್ವದ್ದು ಎಂದು ಅರ್ಥ ಮಾಡಿಕೊಳ್ಳಬೇಕಾದರೆ, ನಾವು ಮೊದಲು ಅವುಗಳ ವೈಶಿಷ್ಟ್ಯಗಳನ್ನು ತಿಳಿಯಬೇಕು. ಐಎನ್ಎಸ್ ಅರಿದಮನ್ ಎಸ್ಎಸ್ಬಿಎನ್ ಎಂಬ ವರ್ಗಕ್ಕೆ ಸೇರಿದ ಜಲಾಂತರ್ಗಾಮಿಯಾಗಿದ್ದು, ಇದು ಶಿಪ್, ಸಬ್ಮರ್ಸಿಬಲ್, ಬ್ಯಾಲಿಸ್ಟಿಕ್, ನ್ಯೂಕ್ಲಿಯರ್ ಎಂಬ ಪದಗಳ ಹೃಸ್ವರೂಪವಾಗಿದೆ. ಇದನ್ನು ಸಮುದ್ರದ ನೀರಿನಾಳದಲ್ಲಿ, ಅಲೆಗಳ ಕೆಳಗೆ ಸುದೀರ್ಘ ಕಾಲದ ತನಕ ರಹಸ್ಯವಾಗಿ ಕಾದು ಕುಳಿತಿರಬಲ್ಲ ಒಂದು ಕೋಟೆ ಎಂದು ಕಲ್ಪಿಸಿಕೊಳ್ಳಿ. ಸಾಂಪ್ರದಾಯಿಕ ಜಲಾಂತರ್ಗಾಮಿಗಳು ಡಿಸೇಲ್ ಚಾಲಿತವಾಗಿದ್ದು, ಅವುಗಳು ಗಾಳಿಗಾಗಿ ಆಗಾಗ್ಗೆ ನೀರಿನಿಂದ ಮೇಲೆ ಬರಬೇಕಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿರುವ ಎಸ್ಎಸ್ಬಿಎನ್ಗಳು ತಮ್ಮ ಶಕ್ತಿಗಾಗಿ ಪರಮಾಣು ರಿಯಾಕ್ಟರ್ಗಳನ್ನು ಬಳಸುತ್ತವೆ. ಇದರಿಂದ ಈ ಜಲಾಂತರ್ಗಾಮಿಗಳು ಹಲವು ತಿಂಗಳುಗಳ ಕಾಲ ನೀರಿನಾಳದಲ್ಲೇ ಮುಳುಗಿರಬಲ್ಲವು. ಇದು ಶತ್ರುಗಳಿಗೆ ಇವುಗಳನ್ನು ಗುರುತಿಸುವುದಾಗಲಿ, ಹಿಂಬಾಲಿಸುವುದಾಗಲಿ ಬಹುತೇಕ ಅಸಾಧ್ಯವಾಗಿಸುತ್ತದೆ.

ಎಸ್ಎಸ್ಬಿಎನ್ ನಿಜಕ್ಕೂ ವಿಶೇಷವಾಗಿಸುವುದು ಅದು ಒಯ್ಯುವ ಆಯುಧಗಳು. ಈ ಜಲಾಂತರ್ಗಾಮಿಗಳು ಅಸಾಧಾರಣ ದೂರಕ್ಕೆ ಕ್ರಮಿಸಬಲ್ಲ, ಕೆಲವೊಮ್ಮೆ ಸಾವಿರಾರು ಕಿಲೋಮೀಟರ್ ಸಾಗಬಲ್ಲ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹೊಂದಿದ್ದು, ಅವಶ್ಯಕತೆ ಎದುರಾದರೆ ಪರಮಾಣು ಸಿಡಿತಲೆಗಳನ್ನೂ ಬಳಸಬಲ್ಲವು. ಸರಳವಾಗಿ ಹೇಳುವುದಾದರೆ, ಎಸ್ಎಸ್ಬಿಎನ್ ಒಂದು ಚಲಿಸುವ, ನೀರಿನಾಳದಲ್ಲಿ ಬಚ್ಚಿಟ್ಟುಕೊಂಡಿರುವ, ಅಣ್ವಸ್ತ್ರ ಉಡಾವಣಾ ವೇದಿಕೆಯಾಗಿದ್ದು, ಒಂದು ವೇಳೆ ಭಾರತ ಎಂದಾದರೂ ಪರಮಾಣು ಅಪಾಯ ಎದುರಿಸಿದರೆ, ತಕ್ಷಣವೇ ಪ್ರತಿಕ್ರಿಯಿಸಲು ಸಿದ್ಧವಾಗಿರುತ್ತದೆ. ಒಂದು ಬಾರಿ ಅಣ್ವಸ್ತ್ರ ದಾಳಿಗೆ ತುತ್ತಾದರೂ, ಪ್ರತಿದಾಳಿ ನಡೆಸುವ ಸಾಮರ್ಥ್ಯ ಹೊಂದಿರುವುದನ್ನು ರಕ್ಷಣಾ ಪರಿಭಾಷೆಯಲ್ಲಿ ನ್ಯೂಕ್ಲಿಯರ್ ಡಿಟರೆನ್ಸ್ ಎಂದು ಕರೆಯಲಾಗುತ್ತದೆ. ಇದು ಭಾರತ ತೀವ್ರ ಪ್ರತಿದಾಳಿ ನಡೆಸಬಲ್ಲದು ಎಂಬ ಅರಿವು ನೀಡಿ, ಶತ್ರುಗಳು ಭಾರತದ ಮೇಲೆ ಅಣ್ವಸ್ತ್ರ ಪ್ರಯೋಗಿಸದಂತೆ ತಡೆಯುತ್ತದೆ.

ಜಲಾಂತರ್ಗಾಮಿಯ ಕಾರ್ಯತಂತ್ರಗಳು..

ಐಎನ್ಎಸ್ ಅರಿದಮನ್ ತನ್ನ ಪೂರ್ವಿಕ ಜಲಾಂತರ್ಗಾಮಿ ನೌಕೆಗಳಿಗೆ ಹೋಲಿಸಿದರೆ ಹೆಚ್ಚು ದೊಡ್ಡದೂ, ಹೆಚ್ಚು ಸಮರ್ಥವೂ ಆಗಿದೆ. ಅಂದಾಜು ಏಳು ಸಾವಿರ ಟನ್ ತೂಕ ಹೊಂದಿರುವ ಈ ಜಲಾಂತರ್ಗಾಮಿ ಐಎಸ್ಎಸ್ ಅರಿಹಂತ್ ಮತ್ತು ಐಎನ್ಎಸ್ ಅರಿಘಾತ್ಗಳಿಂದ ಹೆಚ್ಚು ಕೆ-4 ಕ್ಷಿಪಣಿಗಳನ್ನು ಒಯ್ಯಬಲ್ಲದು. ಕೆ-4 ಕ್ಷಿಪಣಿಗಳು ಆಧುನಿಕ ಪರಮಾಣು ಸಾಮರ್ಥ್ಯ ಹೊಂದಿರುವ ಬ್ಯಾಲಿಸ್ಟಿಕ್ ಕ್ಷಿಪಣಿಗಳಾಗಿದ್ದು, ಬಹುತೇಕ 3,500 ಕಿಲೋಮೀಟರ್ ವ್ಯಾಪ್ತಿ ಹೊಂದಿವೆ. ಅಂದರೆ, ಇವು ಹಿಂದೂ ಮಹಾಸಾಗರದ ಸುರಕ್ಷಿತ ಆಳದಲ್ಲಿ ಬಚ್ಚಿಟ್ಟುಕೊಂಡು, ಸಾಕಷ್ಟು ದೂರದಲ್ಲಿರುವ ಗುರಿಗಳ ಮೇಲೆ ನಿಖರ ದಾಳಿ ನಡೆಸಬಲ್ಲವು. ಈ ಹೆಚ್ಚುವರಿ ವ್ಯಾಪ್ತಿ ಭಾರತದ ಕಾರ್ಯತಂತ್ರದ ರಕ್ಷಣಾ ಸಾಮರ್ಥ್ಯವನ್ನು ಸಾಕಷ್ಟು ಹೆಚ್ಚಿಸುತ್ತದೆ.

ಈ ಸಬ್ಮರೀನ್ ಎಟಿವಿ ಪ್ರೋಗ್ರಾಮ್ ಎಂದು ಕರೆಯಲಾಗಿದ್ದ, ಭಾರತದ ಅತ್ಯಂತ ರಹಸ್ಯವಾದ ಅಡ್ವಾನ್ಸ್ಡ್ ಟೆಕ್ನಾಲಜಿ ವೆಸೆಲ್ ಪ್ರಾಜೆಕ್ಟ್ನ ಭಾಗವಾಗಿದ್ದು, ,1990ರ ದಶಕದಲ್ಲಿ ₹ 90 ಸಾವಿರ ಕೋಟಿಗೂ ಹೆಚ್ಚಿನ ಮೊತ್ತದಲ್ಲಿ ಆರಂಭಗೊಂಡಿತ್ತು. ಪರಮಾಣು ಜಲಾಂತರ್ಗಾಮಿಯನ್ನು ನಿರ್ಮಿಸುವುದು ಅತ್ಯಂತ ಸಂಕೀರ್ಣ ಕಾರ್ಯ. ಇದಕ್ಕೆ ಅತ್ಯಾಧುನಿಕ ವಿನ್ಯಾಸ, ನೀರಿನಾಳದ ಒತ್ತಡವನ್ನು ತಾಳಬಲ್ಲ ವಿಶೇಷ ವಸ್ತುಗಳು, ಸುಸಜ್ಜಿತ ಪರಮಾಣು ರಿಯಾಕ್ಟರ್ ತಂತ್ರಜ್ಞಾನ ಮತ್ತು ಜಗತ್ತಿನ ಕೆಲವೇ ದೇಶಗಳು ಸಾಧಿಸಿರುವ ಅಸಾಧಾರಣ ಇಂಜಿನಿಯರಿಂಗ್ ಅಗತ್ಯವಿದೆ. ಭಾರತ ಸಂಪೂರ್ಣವಾಗಿ ತಾನೇ ಈ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಿರುವುದು ನಮ್ಮ ವಿಜ್ಞಾನಿಗಳು ಮತ್ತು ಎಂಜಿನಿಯರ್ಗಳ ಬುದ್ಧಿಮತ್ತೆ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ.

ಈ ವರ್ಗದ ಎರಡನೇ ಜಲಾಂತರ್ಗಾಮಿ ನೌಕೆಯಾದ ಐಎನ್ಎಸ್ ಅರಿಘಾತ್ ಹಲವಾರು ವರ್ಷಗಳ ನಿರಂತರ ನಿರ್ಮಾಣ ಕಾರ್ಯದ ಬಳಿಕ, 2024ರ ಆಗಸ್ಟ್ 29ರಂದು ವಿಶಾಖಪಟ್ಟಣಂನಲ್ಲಿ ನಿಯೋಜನೆಗೊಂಡಿತು. ಈಗ ಐಎನ್ಎಸ್ ಅರಿದಮನ್ ಆಧುನಿಕ ಸಮುದ್ರ ಪರೀಕ್ಷೆಗಳನ್ನು ನಡೆಸುತ್ತಿದ್ದು, ನಾಲ್ಕನೇ ಎಸ್ಎಸ್ಬಿಎನ್ ನಿರ್ಮಾಣಗೊಳ್ಳುತ್ತಿದೆ. ಈ ಮೂಲಕ ಭಾರತದ ನೀರಿನಾಳದ ಪರಮಾಣು ಸಾಮರ್ಥ್ಯ ನಿರಂತರವಾಗಿ ಶಕ್ತಿ ಪಡೆಯುತ್ತಿದೆ.

ರಕ್ಷಣಾ ಸ್ವಾವಲಂಬನೆಯಲ್ಲಿ ಅಸಾಧಾರಣ ಪ್ರಗತಿ

ಆದರೆ, ದೊಡ್ಡದಾದ ಚಿತ್ರಣವನ್ನು ಅರ್ಥ ಮಾಡಿಕೊಳ್ಳುವುದೂ ಸಹ ಭಾರತಕ್ಕೆ ಮುಖ್ಯವಾಗಿದೆ. ಐಎನ್ಎಸ್ ಅರಿದಮನ್ ಸೇರ್ಪಡೆಯ ಮೂಲಕ ಭಾರತದ ರಕ್ಷಣಾ ಸ್ವಾವಲಂಬನೆಯಲ್ಲಿ ಅಸಾಧಾರಣ ಪ್ರಗತಿ ಸಾಧಿಸಿದಂತಾದರೂ, ಇತರ ಪ್ರಮುಖ ಪರಮಾಣು ಶಕ್ತಿಗಳಿಗೆ ಹೋಲಿಸಿದರೆ ನಮ್ಮ ಎಸ್ಎಸ್ಬಿಎನ್ ಪಡೆ ಸಣ್ಣದಾಗಿದೆ. ಚೀನಾ ಈಗಾಗಲೇ ದೀರ್ಘ ವ್ಯಾಪ್ತಿಯ ಜೆಎಲ್-3 ಕ್ಷಿಪಣಿಗಳನ್ನು ಹೊಂದಿರುವ ಕನಿಷ್ಠ ಆರು ಜಿನ್ ವರ್ಗದ ಎಸ್ಎಸ್ಬಿಎನ್ ಗಳನ್ನು ಕಾರ್ಯಾಚರಿಸುತ್ತಿದೆ. ಈ ಕ್ಷಿಪಣಿಗಳು 10,000 ಕಿಲೋಮೀಟರ್ ವ್ಯಾಪ್ತಿ ಹೊಂದಿವೆ. ಇದರೊಡನೆ, ಚೀನಾ ಬಳಿ ಇನ್ನೂ ಆರು ಪರಮಾಣು ದಾಳಿ ಜಲಾಂತರ್ಗಾಮಿಗಳಿವೆ. ಅಮೆರಿಕ 14 ಓಹಿಯೋ ವರ್ಗದ ಎಸ್ಎಸ್ಬಿಎನ್ಗಳು ಮತ್ತು 53 ಪರಮಾಣು ದಾಳಿ ಸಬ್ಮರೀನ್ಗಳನ್ನು ಹೊಂದಿದೆ.

ಇಲ್ಲಿ ನಾವು ಇನ್ನೊಂದು ಮುಖ್ಯ ಪದವನ್ನು ಅರ್ಥ ಮಾಡಿಕೊಳ್ಳಬೇಕು. ಅದೆಂದರೆ: ಎಸ್ಎಸ್ಎನ್ ಅಥವಾ ಪರಮಾಣು ಚಾಲಿತ ದಾಳಿ ಸಬ್ಮರೀನ್. ದೀರ್ಘ ವ್ಯಾಪ್ತಿಯ ಪರಮಾಣು ಕ್ಷಿಪಣಿಗಳನ್ನು ಹೊಂದಿ, ರಕ್ಷಣೆಗೆ ಹೆಚ್ಚಿನ ಒತ್ತು ನೀಡುವ ಎಸ್ಎಸ್ಬಿಎನ್ ರೀತಿಯಲ್ಲದೆ, ಎಸ್ಎಸ್ಎನ್ಗಳನ್ನು ಯುದ್ಧ ಕಾರ್ಯಾಚರಣೆಗಾಗಿಯೇ ವಿನ್ಯಾಸಗೊಳಿಸಲಾಗಿದೆ. ಇವುಗಳು ಶತ್ರುಗಳ ಹಡಗುಗಳು ಮತ್ತು ಜಲಾಂತರ್ಗಾಮಿಗಳನ್ನು ಬೇಟೆಯಾಡುತ್ತವೆ, ಗುಪ್ತಚರ ಮಾಹಿತಿ ಕಲೆಹಾಕುತ್ತವೆ. ಇವು ಅತ್ಯಂತ ವೇಗ ಮತ್ತು ಚುರುಕಾದ ಸಬ್ಮರೀನ್ಗಳಾಗಿವೆ. ಇವುಗಳು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹೊಂದಿಲ್ಲದಿದ್ದರೂ, ಸಮುದ್ರದ ಮೇಲ್ಮೈಯಲ್ಲಿರುವ ಹಡಗುಗಳು ಮತ್ತು ಇತರ ಜಲಾಂತರ್ಗಾಮಿಗಳ ಮೇಲೆ ದಾಳಿ ನಡೆಸಲು ಟಾರ್ಪಿಡೋಗಳು ಮತ್ತು ಕ್ರೂಸ್ ಕ್ಷಿಪಣಿಗಳನ್ನು ಹೊಂದಿವೆ.

ಭಾರತ ನಿರಂತರ ಪ್ರಗತಿ ಸಾಧಿಸುತ್ತಾ, ಐಎನ್ಎಸ್ ಅರಿದಮನ್ ನಂತಹ ಆಧುನಿಕ ಜಲಾಂತರ್ಗಾಮಿಗಳನ್ನು ಸೇರ್ಪಡೆಗೊಳಿಸುವ ಮೂಲಕ ನಂಬಿಕಾರ್ಹ ಕನಿಷ್ಠ ಪರಮಾಣು ರಕ್ಷಣೆಗೆ ಬೇಕಾದ ಸಾಮರ್ಥ್ಯವನ್ನು ಗಳಿಸುವ ಬದ್ಧತೆಯನ್ನು ಪ್ರದರ್ಶಿಸಿದೆ. ಅಂದರೆ, ಯಾರಾದರೂ ಭಾರತದ ಮೇಲೆ ದಾಳಿ ನಡೆಸಿದರೆ, ಅವರ ಮೇಲೆ ಪರಿಣಾಮಕಾರಿಯಾಗಿ ಪ್ರತಿದಾಳಿ ನಡೆಸುವ ಸಾಮರ್ಥ್ಯವನ್ನು ಭಾರತ ಗಳಿಸಿದೆ. ಆದ್ದರಿಂದ ಆಕ್ರಮಣಕಾರಿ ಮನೋವೃತ್ತಿ ಪ್ರದರ್ಶಿಸುವ ಬದಲು ಶಕ್ತಿ ಪ್ರದರ್ಶಿಸುವ ಮೂಲಕ ಭಾರತ ಯುದ್ಧ ನಡೆಸುವುದನ್ನು ತಪ್ಪಿಸುತ್ತಿದೆ. ಭಾರತದ ಹಿತಾಸಕ್ತಿಗಳಿಗೆ ನಿರಂತರವಾಗಿ ಸ್ಪರ್ಧೆ ಎದುರಾಗುವ ಇಂಡೋ - ಪೆಸಿಫಿಕ್ ಪ್ರದೇಶದಲ್ಲಿ ಕಾರ್ಯತಂತ್ರದ ಸ್ಥಿರತೆ ಕಾಯ್ದುಕೊಳ್ಳಲು ಈ ವಿಧಾನ ಭಾರತಕ್ಕೆ ಮುಖ್ಯವಾಗಿದೆ.

ಸುತ್ತಲೂ ಸಂಕೀರ್ಣ ಭದ್ರತಾ ಸವಾಲುಗಳನ್ನು ಎದುರಿಸುತ್ತಿರುವ ಭಾರತಕ್ಕೆ ಐಎನ್ಎಸ್ ಅರಿದಮನ್ ನಂತಹ ಸಬ್ಮರೀನ್ ನಮ್ಮ ಸಮುದ್ರಗಳಲ್ಲಿ ಗಸ್ತು ತಿರುಗುವುದು ಒಂದು ಅದೃಶ್ಯ ರಕ್ಷಣಾ ಕವಚ ಇದ್ದಂತಾಗುತ್ತದೆ. ಇದು ಭಾರತಕ್ಕೆ ಆತ್ಮವಿಶ್ವಾಸದಿಂದ ಶಾಂತಿ ಮತ್ತು ಪ್ರಗತಿಯನ್ನು ಹೊಂದಲು ನೆರವಾಗುತ್ತದೆ. ಈ ಯೋಜನೆಯಲ್ಲಿನ ಪ್ರತಿಯೊಂದು ಪ್ರಗತಿಯೂ ಕೇವಲ ಮಿಲಿಟರಿ ಶಕ್ತಿಯನ್ನು ಪ್ರತಿನಿಧಿಸುವುದಿಲ್ಲ. ಬದಲಿಗೆ ನಮ್ಮ ಭವಿಷ್ಯವನ್ನು ರಕ್ಷಿಸುವ ಸಲುವಾಗಿ ತೆರೆಮರೆಯಲ್ಲಿ ನಿರಂತರವಾಗಿ ಕಾರ್ಯಾಚರಿಸುತ್ತಿರುವ ಅಸಂಖ್ಯಾತ ಭಾರತೀಯ ತಂತ್ರಜ್ಞರ ಕಠಿಣ ಪರಿಶ್ರಮ, ಬುದ್ಧಿವಂತಿಕೆ ಮತ್ತು ಬದ್ಧತೆಯನ್ನೂ ಪ್ರದರ್ಶಿಸುತ್ತದೆ.

(ಗಿರೀಶ್ ಲಿಂಗಣ್ಣ: ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.