ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ: ಬಟ್ಟೆಗೂ ಬಂದೀತೆ ಬುದ್ಧಿ! ಏನಿದು ಬಟ್ಟೆ?

Published 24 ಮೇ 2023, 0:20 IST
Last Updated 24 ಮೇ 2023, 0:20 IST
ಅಕ್ಷರ ಗಾತ್ರ

–ನೇಸರ ಕಾಡನಕು‍ಪ್ಪೆ

ಹೀಗೊಂದು ಸನ್ನಿವೇಶವನ್ನು ಕಲ್ಪಿಸಿಕೊಳ್ಳಿ: ನೀವು ನಿಮ್ಮ ಕಾರಿನಿಂದ ಕೆಳಗಿಳಿದ ಕೂಡಲೇ ತಣ್ಣನೆಯ ಗಾಳಿ ನಿಮಗೆ ಅಪ್ಪಳಿಸುತ್ತದೆ. ಆಗ ನೀವು ಧರಿಸಿರುವ ಬಟ್ಟೆ ತನಗೆ ತಾನೇ ಬೆಚ್ಚಗಾದರೆ ಎಷ್ಟು ಚೆನ್ನ ಅಲ್ಲವೇ? ಅಥವಾ ಸುಡು ಬೇಸಿಗೆಗೆ ನೀವು ಬೆವರುತ್ತಿರುತ್ತೀರ ಎಂದುಕೊಳ್ಳಿ. ಆಗ ಬಟ್ಟೆಯು ತನಗೆ ತಾನೇ ತಣ್ಣಗಾದರೆ ಎಷ್ಟು ಅನುಕೂಲಕರ ಅಲ್ಲವೇ? ಈ ರೀತಿಯ ಕಲ್ಪನೆಯು ಕೇವಲ ಕಲ್ಪನೆಯಾಗೇ ಇರದೇ, ನಿಜಜೀವನದಲ್ಲೂ ಇಂಥ ಬಟ್ಟೆಗಳು ಸಿಗುವ ದಿನಗಳು ದೂರವಿಲ್ಲ!

ಈ ಬಗೆಯ ಬಟ್ಟೆಯನ್ನು ಕೆನಡಾದ ವಾಟರ್ಲೂ ವಿಶ್ವವಿದ್ಯಾಲಯದ ಕೆಮಿಕಲ್‌ ಎಂಜಿನಿಯರ್‌ಗಳು ಸಂಶೋಧಿಸಿದ್ದಾರೆ. ಇಂಥ ಬಟ್ಟೆಯು ಮಾರುಕಟ್ಟೆಗೆ ಬಂದಿದ್ದೇ ಆದಲ್ಲಿ ಬಹುತೇಕ ನಾವು ಬಳಸುತ್ತಿರುವ ಹವಾನಿಯಂತ್ರಣ ವ್ಯವಸ್ಥೆಯ ಅಗತ್ಯವೇ ಇಲ್ಲದಂತೆ ಆಗಿಬಿಡುತ್ತದೆ ಎನ್ನುತ್ತಿದ್ದಾರೆ, ಈ ಸಂಶೋಧಕರು!

ಅದರಲ್ಲೂ ಬಳಸಿ ಬಿಸಾಡಿದ ಪ್ಲಾಸ್ಟಿಕ್ ಸಾಮಗ್ರಿಗಳಲ್ಲಿರುವ ನ್ಯಾನೋ ಪಾಲಿಮರ್‌ ನಾರುಗಳನ್ನು ಬೇರ್ಪಡಿಸಿ ಈ ಬಟ್ಟೆಯನ್ನು ತಯಾರಿಸಲಾಗಿದೆ. ಹಾಗಾಗಿ, ಇದು ಪರಿಸರ ಪ್ರಿಯವೂ ಹೌದು. ನೈಸರ್ಗಿಕ ಸಂಪನ್ಮೂಲಗಳು ಖಾಲಿಯಾಗುತ್ತಿರುವ ಈ ಸಂದರ್ಭದಲ್ಲಿ ಮರುಬಳಕೆಯ ಅಗತ್ಯ ಅತಿ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಈ ಬಟ್ಟೆಯು ಕಸವನ್ನು ರಸವನ್ನಾಗಿಸಿ ಪರಿಸರವನ್ನು ಸ್ವಚ್ಛಗೊಳಿಸುವ ಆಂದೋಲನವೂ ಆಗಲಿದೆ ಎಂದು ಸಂಶೋಧಕರು ವಿಶ್ಲೇಷಿಸಿದ್ದಾರೆ.

ಏನಿದು ಬಟ್ಟೆ?

ಇದು ಬುದ್ಧಿವಂತ ಬಟ್ಟೆ. ಈ ಬಟ್ಟೆಯು ಶಾಖಕ್ಕೆ ಸ್ಪಂದಿಸುವ ಗುಣವನ್ನು ಹೊಂದಿದೆ. ಅಂದರೆ, ಶಾಖ ಹೆಚ್ಚಿದ್ದಲ್ಲಿ ತಣ್ಣಗಾಗುವ, ಶಾಖ ಕಡಿಮೆಯಿದ್ದಲ್ಲಿ ಬೆಚ್ಚಗಾಗುವ ಗುಣ ಇದಕ್ಕೆ ಇರುತ್ತದೆ. ಶಾಖದ ಪ್ರಮಾಣವನ್ನು ನಿಯಂತ್ರಿಸಲು ಒಂದು ಸಣ್ಣ ಸಂವೇದನಾ ಸಾಧನವನ್ನು ಈ ಬಟ್ಟೆಯಲ್ಲಿ ಅಳವಡಿಸಬಹುದು. ‘ಇದು ಮಾನವದೇಹದ ಶಾಖವನ್ನು ಗಮನಿಸುತ್ತ, ಪರಿಸರದಲ್ಲಾಗುವ ಶಾಖದ ಏರುಪೇರುಗಳನ್ನು ಗಮನಿಸಿ, ದೇಹಕ್ಕೆ ಹಿತಕರವಾದ ಶಾಖವನ್ನು ಬಟ್ಟೆಯ ಮೂಲಕ ನೀಡುತ್ತದೆ. ಹಾಗಾಗಿ, ಇದು ಹವಾನಿಯಂತ್ರಣ ಸಾಧನದಂತೆ ಕಾರ್ಯನಿರ್ವಹಿಸುತ್ತದೆ’ ಎಂದು ಸಂಶೋಧಕ ಡಾ. ಮಿಲಾದ್‌ ಕಾಮ್ಕರ್‌ ವಿವರಿಸಿದ್ದಾರೆ.

ಈ ಬಟ್ಟೆಯ ರಚನೆ ಕೊಂಚ ಸಂಕೀರ್ಣವಾಗೇ ಇದೆ. ಪ್ಲಾಸ್ಟಿಕ್‌ ಶಾಖವಾಹಕವಲ್ಲ. ಹಾಗಾಗಿ, ಪಾಲಿಮರ್ ನಾರುಗಳಿಂದ ಶಾಖವನ್ನು ನಿಯಂತ್ರಿಸಲಾಗದು. ಶಾಖವನ್ನು ಏರಿಳಿತಗೊಳಿಸಲು ಲೋಹದ ಅಗತ್ಯ ಇದ್ದೇ ಇದೆ. ಅದಕ್ಕಾಗಿ ತುಕ್ಕುರಹಿತ ಉಕ್ಕನ್ನು ಈ ಬಟ್ಟೆಯಲ್ಲಿ ಬಳಸುವ ಎಳೆಗಳಲ್ಲಿ ಬೆರೆಸಲಾಗುತ್ತದೆ. ಹಾಗಾಗಿ, ಬಟ್ಟೆಯನ್ನು ಬೇಕಾದ ತಾಪಮಾನಕ್ಕೆ ಹೊಂದಿಸಬಹುದು ಎಂದಿದ್ದಾರೆ.

ಎಲ್ಲೆಲ್ಲಿ ಬಳಕೆ?

ಇದನ್ನು ನಾಗರಿಕ ಬಳಕೆಯೂ ಸೇರಿದಂತೆ ಸೈನ್ಯ ಹಾಗೂ ಅಂತರಿಕ್ಷದಲ್ಲಿ ಬಳಸಬಹುದು ಎಂದು ಡಾ. ಮಿಲಾದ್ ಅವರ ತಂಡ ಹೇಳಿದೆ. ಜನಸಾಮಾನ್ಯರು ಈ ಬಟ್ಟೆಯನ್ನು ಧರಿಸಿ ಚಳಿ ಅಥವಾ ಸೆಖೆಯಿಂದ ರಕ್ಷಿಸಿಕೊಳ್ಳಬಹುದು. ಸೈನಿಕರು ಅತಿ ಕ್ಲಿಷ್ಟಕರ ವಾತಾವರಣಗಳಲ್ಲಿ ಕಾರ್ಯನಿರ್ವಹಿಸುವುದರಿಂದ ಅವರಿಗೆ ಇದು ವರದಾನವಾಗಲಿದೆ. ಮುಖ್ಯವಾಗಿ ಗಗನಯಾತ್ರಿಗಳು ವಿಭಿನ್ನ ಹಾಗೂ ಕ್ಲಿಷ್ಟಕರ ವಾತಾವರಣಗಳಲ್ಲಿ ವಾಸಿಸಬೇಕಾದ ಕಾರಣ, ತಾಪಮಾನ ನಿಯಂತ್ರಣಕ್ಕೆ ಈ ಬಟ್ಟೆಯು ಸಹಾಯ ಮಾಡುತ್ತದೆ ಎಂದು ಸಂಶೋಧನಾ ತಂಡ ಹೇಳಿದೆ.

ಅಲ್ಲದೇ, ಇದು ಮರುಬಳಕೆಯಾಗಿರುವ ಸಾಮಗ್ರಿಗಳಿಂದ ತಯಾರಾಗುವ ಕಾರಣ ಉತ್ಪಾದನಾ ವೆಚ್ಚವೂ ಅತಿ ಕಡಿಮೆ. ಇತ್ತೀಚಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆಯ ಅಭಿವೃದ್ಧಿ ಹಾಗೂ ರೋಬಾಟ್‌ಗಳ ತಯಾರಿಗೆ ಆದ್ಯತೆ ನೀಡುತ್ತಿರುವ ಹಿನ್ನೆಲೆಯಲ್ಲಿ ಬಾಹ್ಯಾಕಾಶ ಯಾತ್ರೆಗಳಿಗೆ ರೋಬಾಟ್‌ಗಳನ್ನು ಕಳುಹಿಸಬೇಕಾದ ಸಂದರ್ಭಗಳು ಬಂದಾಗ ಈ ಬಟ್ಟೆಯು ಗುರಾಣಿಯಂತೆ ಕೆಲಸ ಮಾಡಬಲ್ಲದು ಎಂದು ಸಂಶೋಧಕರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT