ಶುಕ್ರವಾರ, ನವೆಂಬರ್ 27, 2020
22 °C

ಅಂತರಿಕ್ಷದ ‘ಗೃಹ ಪ್ರವೇಶ’ಕ್ಕೆ 20ರ ಸಂಭ್ರಮ

ಗುರುರಾಜ್ ಎಸ್. ದಾವಣಗೆರೆ Updated:

ಅಕ್ಷರ ಗಾತ್ರ : | |

Prajavani

ಬಾಹ್ಯಾಕಾಶದ ತೆರೆದ ಕಣ್ಣು ಎಂಬ ಖ್ಯಾತಿಯ, ಹಲವು ರಾಷ್ಟ್ರಗಳ ಪಾಲುದಾರಿಕೆ ಇರುವ ಅಂತರ ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಇಂಟರ್‌ನ್ಯಾಷನಲ್ ಸ್ಪೇಸ್ ಸ್ಟೇಶನ್-ಐಎಸ್‍ಎಸ್) ಮನುಷ್ಯನ ವಾಸ ಪ್ರಾರಂಭವಾಗಿ ಇದೇ ನವೆಂಬರ್ 2ಕ್ಕೆ ಇಪ್ಪತ್ತು ವರ್ಷಗಳು ತುಂಬಿವೆ. ವಿಶ್ವದ ಬಾಹ್ಯಾಕಾಶ ವಿಜ್ಞಾನಿಗಳು ಇದುವರೆಗೆ ನಿರ್ಮಿಸಿದ ಅತ್ಯಂತ ದೊಡ್ಡ ಹಾಗೂ ದುಬಾರಿ ವೆಚ್ಚದ ಬಾಹ್ಯಾಕಾಶ ಪ್ರಯೋಗಾಲಯವು ಎರಡು ದಶಕಗಳಿಂದ ಭೂಮಿಯನ್ನು ನಿರಂತರವಾಗಿ ಸುತ್ತುತ್ತಾ ಹಲವು ವಿಭಿನ್ನ ಪ್ರಯೋಗಗಳಿಗೆ ಸಾಕ್ಷಿಯಾಗುತ್ತಾ ಬಂದಿದೆ. ಜತೆಗೆ ವಿಶ್ವ ರಚನೆಯ ಅನೇಕ ರಹಸ್ಯಗಳ ಕುರಿತು ವೈಜ್ಞಾನಿಕ ಸುಳಿವುಗಳನ್ನೂ ನೀಡುತ್ತಿದೆ.

ಭೂಮಿಯ ಸುತ್ತಲಿನ ಕೆಳ ಕಕ್ಷೆಯಲ್ಲಿ ಸುತ್ತುತ್ತಿರುವ ಐಎಸ್‍ಎಸ್ ಮೊದಲ ಬಾರಿಗೆ ಬಿಡಿ ಬಿಡಿಯಾಗಿ  ಝರ್ಯ, ಯುನಿಟಿ ಮತ್ತು ಜ್ವೆಜ್ಡಾ  ಘಟಕಗಳಾಗಿ ನಭಕ್ಕೆ ಚಿಮ್ಮಿದ್ದು 1998 -2000ರ ಅವಧಿಯಲ್ಲಿ. ಆಗ ಅದರಲ್ಲಿದ್ದದ್ದು ಮೂರು ಇಕ್ಕಟ್ಟಾದ ಕೋಣೆಗಳು ಮಾತ್ರ. ಒಂದು ಚಿಕ್ಕಲ್ಯಾಬ್, ಮಲಗುವ ಕೋಣೆ ಮತ್ತು ಟಾಯ್ಲೆಟ್ಟು ಅಷ್ಟೆ.  2000ರ ನವೆಂಬರ್ 2ರಂದು ಸೂಯೆಜ್ ನೌಕೆಯ ಮುಲಕ ನಿಲ್ದಾಣಕ್ಕೆ ಕಾಲಿಟ್ಟ ಅಮೆರಿಕದ ಬಿಲ್ ಶೆಪರ್ಡ್, ರಷ್ಯಾದ ಸೆರ್ಗೈ ಕ್ರಿಕಲೇವ್ ಮತ್ತು ಯೂರಿ ಗಿಡ್‍ಜೆಂಕೊ ‘ಅಲ್ಲಿದ್ದಷ್ಟೂ ದಿನ ನಿಲ್ದಾಣದಲ್ಲಿ ಒಂದಿಲ್ಲೊಂದು ಸಮಸ್ಯೆ ತಲೆದೋರುತ್ತಲೇ ಇತ್ತು. ಭೂಮಿಯ ಮೇಲೆ ಅವುಗಳನ್ನು ಕೆಲವೇ ನಿಮಿಷಗಳಲ್ಲಿ ಸರಿಪಡಿಸುತ್ತಿದ್ದೆವು. ಆದರೆ, ಅಲ್ಲಿ ರಿಪೇರಿ ಮಾಡಲು ಹಲವು ಗಂಟೆಗಳೇ ಬೇಕಾಗುತ್ತಿದ್ದವು’ ಎಂದು ನಾಸಾ ನಡೆಸಿದ ಸಂದರ್ಶನದಲ್ಲಿ ಹೇಳಿದ್ದರು. ಭೂಮಿಯ ಮೇಲಿನ ಗ್ರೌಂಡ್ ಸ್ಟೇಷನ್‍ನ ಸಂಪರ್ಕ ವಾರಗಟ್ಟಲೆ ಸಿಗುತ್ತಿರಲಿಲ್ಲ ಎಂದು ಅನುಭವ ಹಂಚಿಕೊಂಡಿದ್ದರು. ಹಲವು ಸಲ ಗಡ್ಡ ಕೆರೆದುಕೊಳ್ಳುವ ರೇಜರ್ ಸಹ ತೇಲುತ್ತ ಕೈಗೆ ಸಿಗದೇ ಆಟವಾಡಿಸುತ್ತಿತ್ತು ಎಂದು ನೆನಪಿಸಿಕೊಂಡು, ಒಳಗೆ ಕಾಲಿಟ್ಟ ತಕ್ಷಣ ಲೈಟ್ ಆನ್ ಮಾಡಿ, ಬಿಸಿ ನೀರು ಕಾಯಿಸಿಕೊಂಡು ಹಾಟ್ ಡ್ರಿಂಕ್ಸ್ ಕುಡಿದದ್ದು ಎಂದಿಗೂ ಮರೆಯಲಾಗದ ಘಟನೆ ಎಂದಿದ್ದರು.

ನಂತರದ ಹತ್ತು ವರ್ಷಗಳ ಅವಧಿಯಲ್ಲಿ ವಿವಿಧ ಗಗನನೌಕೆಗಳನ್ನು ಉಡಾಯಿಸಿ, ತುಂಡು ತುಂಡಾಗಿ ಕಳಿಸಲಾದ ಭಾಗಗಳನ್ನು ಜೋಡಿಸಿ ಫುಟ್‍ಬಾಲ್ ಕ್ರೀಡಾಂಗಣದಷ್ಟು ವಿಶಾಲವಾಗಿರುವ ನಿಲ್ದಾಣವನ್ನು ನಿರ್ಮಿಸಲಾಗಿದೆ. ಅಮೆರಿಕ, ರಷ್ಯಾ, ಜಪಾನ್‌, ಕೆನಡಾ ಮತ್ತು ಯುರೋಪ್‌ ದೇಶಗಳ ಸಹಯೋಗದಲ್ಲಿ ನೂರು ಬಿಲಿಯನ್ ಡಾಲರ್ (₹ 10 ಸಾವಿರ ಕೋಟಿ) ವೆಚ್ಚದಲ್ಲಿ ಅತ್ಯಾಧುನಿಕ ಕಂಪ್ಯೂಟರ್, ರೇಡಿಯೊ ಸಲಕರಣೆ, ಆಂಟೆನಾಗಳನ್ನು ಅಳವಡಿಸಲಾಗಿರುವ ನಿಲ್ದಾಣ ತನ್ನ ಕ್ಷಮತೆಯನ್ನು ಹತ್ತುಪಟ್ಟು ಹೆಚ್ಚಿಸಿಕೊಂಡಿದೆ.  73 ಮೀಟರ್ ಉದ್ದ, 109 ಮೀಟರ್ ಅಗಲ, 66 ಅಡಿ ಎತ್ತರ ಹಾಗೂ 500 ಟನ್ ತೂಕದ ಈ ನಿಲ್ದಾಣವೀಗ, 12 ದೊಡ್ಡ ಕೋಣೆಗಳು, 360 ಡಿಗ್ರಿ ವೀಕ್ಷಣೆಯ ಗಾಜಿನ ಕಿಟಕಿ, ಆರು ಬೆಡ್ ರೂಮ್‌ಗಳು, ವ್ಯಾಯಾಮದ ಜಿಮ್, ಮೂರು ಶೌಚಾಲಯಗಳು ಮತ್ತು ಒಂದು ಕಾವಲು ಗೋಪುರ ಹೊಂದಿದ್ದು, ವಿಜ್ಞಾನಿಗಳ ಅಚ್ಚುಮೆಚ್ಚಿನ ತಾಣವೆನಿಸಿದೆ. ಇದುವರೆಗೆ 19 ದೇಶಗಳ 241 ಗಗನ ಯಾತ್ರಿಗಳು ಅಲ್ಲಿಗೆ ತೆರಳಿ, ತಿಂಗಳುಗಟ್ಟಲೇ ವಾಸ್ತವ್ಯ ಹೂಡಿ, ಭೂಮಿಯ ಗುರುತ್ವಾಕರ್ಷಣೆಯಲ್ಲಿ ಸರಿಯಾಗಿ ಮಾಡಲಾಗದ ಪ್ರಯೋಗಗಳನ್ನೆಲ್ಲಾ ನಿಲ್ದಾಣದ ಶೂನ್ಯ ಗುರುತ್ವ (Micro gravity) ವಾತಾವರಣದಲ್ಲಿ ಕೈಗೊಂಡು, ಹಲವು ಫಲಿತಾಂಶಗಳನ್ನು ಪಡೆದು, ಅವುಗಳ ಲಾಭವನ್ನು ಭೂಮಿಯ ಮೇಲಿನ ಸಮಸ್ಯೆಗಳನ್ನು ಬಗೆಹರಿಸಲು ಬಳಸುತ್ತಿದ್ದಾರೆ. ಸಾಮಾನ್ಯವಾಗಿ ಆರು ಜನರ ವಾಸ್ತವ್ಯಕ್ಕೆ ಬೇಕಾದ ವ್ಯವಸ್ಥೆ ಅಲ್ಲಿದ್ದು 2013ರಲ್ಲಿ 13 ಜನ ಗಗನಯಾತ್ರಿಗಳಿಗೆ ಅವಕಾಶ ನೀಡಿದ್ದು ಇಂದಿಗೂ ದಾಖಲೆ ಎನಿಸಿದೆ. ಆರಂಭದಲ್ಲಿ ಅಂತರಿಕ್ಷ ವೀಕ್ಷಣೆ, ಪ್ರಯೋಗ, ಸಂಪರ್ಕ ಮತ್ತು ಸಾರಿಗೆಗಷ್ಟೇ ಮೀಸಲಾಗಿದ್ದ ಐಎಸ್‍ಎಸ್ ಇತ್ತೀಚಿನ ದಿನಗಳಲ್ಲಿ ಶೈಕ್ಷಣಿಕ, ರಾಜತಾಂತ್ರಿಕ ಮತ್ತು ವಾಣಿಜ್ಯಿಕ ಚಟುವಟಿಕೆಗಳಿಗೂ ವೇದಿಕೆ ಆಗುತ್ತಿದೆ.


ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಮೊದಲು ಪದಾರ್ಪಣೆ ಮಾಡಿದ ಮಹಿಳೆ ಪೆಗ್ಗಿ ವಿಟ್ಸನ್‌ ಚಿತ್ರ: ನಾಸಾ/ ದಿ ನ್ಯೂಯಾರ್ಕ್‌ ಟೈಮ್ಸ್‌

ಒಂದು ಎಕರೆಯಷ್ಟು ಸೌರ ವಿದ್ಯುತ್ ಪ್ಯಾನೆಲ್‌ಗಳು, ಹದಿಮೂರು ಕಿಲೊ ಮೀಟರ್ ಉದ್ದದ ಎಲೆಕ್ಟ್ರಿಕಲ್ ವೈರಿಂಗ್, ಥರ್ಮಲ್ ರೇಡಿಯೇಟರ್, ರೊಬೋಟಿಕ್ ಆರ್ಮ್ ಮತ್ತು ಡಾಕಿಂಗ್ ಯಾರ್ಡ್ ಹೊಂದಿರುವ ಬಾಹ್ಯಾಕಾಶ ನಿಲ್ದಾಣದಲ್ಲೀಗ ಮೂರು ಉನ್ನತ ತಂತ್ರಜ್ಞಾನ ಪ್ರಯೋಗಾಲಯಗಳಿದ್ದು  ಖಗೋಳಜೀವ ವಿಜ್ಞಾನ (astrobiology), ವಸ್ತು ವಿಜ್ಞಾನ (Material Science),  ಹವಾಮಾನ ವಿಜ್ಞಾನ (metereology), ಬಾಹ್ಯಾಕಾಶ ಹವಾಮಾನ, ಸ್ಪೇಸ್ ಮೆಡಿಸಿನ್, ಭೌತ, ಜೀವ ಮತ್ತು ರಸಾಯನ ವಿಜ್ಞಾನಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಸಂಶೋಧನೆ ನಡೆಯುತ್ತಿದೆ. ಪ್ರತಿಯೊಂದು ರಾಷ್ಟ್ರವೂ ಖಗೋಳ ಅಧ್ಯಯನಕ್ಕಾಗಿ ಹಾರಿಸಿದ ಬಾಹ್ಯಾಕಾಶ ನೌಕೆಗಳು ಕೊಂಡೊಯ್ದ ಹಲವು ಸಲಕರಣೆಗಳನ್ನು ಅಂಟಿಸಿಕೊಂಡಿರುವ ಐಎಸ್‍ಎಸ್ ಈಗ 500 ಟನ್‍ನಷ್ಟು ತೂಕ ಹೊಂದಿದ್ದು ಇಂಟರ್‌ನೆಟ್ ಫೋನ್ ಸೌಲಭ್ಯವನ್ನೂ ಹೊಂದಿದೆ. ಜೀವ  ರಕ್ಷಕ ಆಮ್ಲಜನಕ ಉತ್ಪಾದನೆ ಮತ್ತು ನೀರಿನ ರೀಸೈಕ್ಲಿಂಗ್ ವ್ಯವಸ್ಥೆಯೂ ಅದರಲ್ಲಿದೆ. ವಿದ್ಯಾರ್ಥಿಗಳ ವೈಜ್ಞಾನಿಕ ಕ್ರಿಯಾಶೀಲತೆಯನ್ನು ಉದ್ದೀಪಿಸಲು ತನ್ನಲ್ಲಿರುವ ಅಮೆಚೂರ್ ರೇಡಿಯೊ ಮೂಲಕ ನಿಲ್ದಾಣದ ವಿಜ್ಞಾನಿಗಳೊಂದಿಗೆ ಸಂಪರ್ಕವನ್ನೂ ಕಲ್ಪಿಸುತ್ತದೆ. ಭೂಮಿಯಿಂದ ಮೇಲೆ 400 ಕಿಲೊ ಮೀಟರ್ ಎತ್ತರದಲ್ಲಿ ಗಂಟೆಗೆ 28,000 ಕಿ.ಮೀ. ವೇಗದಲ್ಲಿ ಸುತ್ತುತ್ತಾ ದಿನಕ್ಕೆ 16 ಬಾರಿ ಭೂಮಿಯ ಪ್ರದಕ್ಷಿಣೆ ಹಾಕುವ ಐಎಸ್‍ಎಸ್, ದಿನವೊಂದಕ್ಕೆ ಭೂಮಿಯಿಂದ ಚಂದ್ರನನ್ನು ತಲುಪಿ ಹಿಂತಿರುಗಿ ಭೂಮಿಯನ್ನು ತಲುಪುವಷ್ಟು ದೂರ ಕ್ರಮಿಸುತ್ತದೆ. ರಾತ್ರಿಯ ಶುಭ್ರ ಆಕಾಶದಲ್ಲಿ ಶುಕ್ರ ಗ್ರಹದ ಪ್ರಖರತೆಯನ್ನೇ ಮೀರಿ ಹೊಳೆಯುವ ಉದ್ದ ಕೋಲಿನಂತೆ ನಮ್ಮ ಬರಿಯ ಕಣ್ಣಿಗೇ ಕಾಣಿಸುತ್ತದೆ.

ಅಂತರಿಕ್ಷ ನಿಲ್ದಾಣ ನೆಲೆಗೊಂಡ ನಂತರ ವಿವಿಧ ದೇಶಗಳ ಗಗನಯಾನಿಗಳು ಅಲ್ಲಿಗೆ ತೆರಳಿ, ಅಲ್ಲಿಯೇ ಇದ್ದು, ಅನೇಕ ಪ್ರಯೋಗಗಳನ್ನು ಮಾಡಿ ಮನುಷ್ಯನಿಗೆ ನೆರವಾಗುವ ಅನೇಕ ಔಷಧಿ ರೂಪದ ಸಲಕರಣೆಗಳನ್ನು ತಯಾರಿಸಿದ್ದಾರೆ. ಪೈಪೋಟಿಗೆ ಬಿದ್ದವರಂತೆ ಅಂತರಿಕ್ಷ ನಡಿಗೆಯ (space walk) ದಾಖಲೆ ಮಾಡಿದ್ದಾರೆ. ಅಮೆರಿಕದ ಎಲೆಕ್ಟ್ರಿಕಲ್ ಎಂಜಿನಿಯರ್ ಕ್ರಿಸ್ಟಿನಾ ಕೋಚ್ ತೀರಾ ಇತ್ತೀಚೆಗೆ 328 ದಿನಗಳ ಸುದೀರ್ಘ ಅವಧಿಯವರೆಗೆ ವಾಸ್ತವ್ಯ ಹೂಡಿದ್ದರು. ಸಸ್ಯ ಹಾಗೂ ಪ್ರಾಣಿಜನ್ಯ ಅಂಗಾಂಶಗಳ ಬಯೊಫ್ಯಾಬ್ರಿಕೇಶನ್‍ನ ಮೇಲೆ ಶೂನ್ಯ ಗುರುತ್ವ ಯಾವ ರೀತಿಯ ಪರಿಣಾಮ ಉಂಟು ಮಾಡುತ್ತದೆ ಎಂಬ ಪ್ರಯೋಗವನ್ನು ನಡೆಸಿದ್ದ ಅವರು, ಅಂತರಿಕ್ಷದ ಗುರುತ್ವರಹಿತ ವಾತಾವರಣ ಭೂಮಿಯ ಸೆಳೆತದ ವಾತಾವರಣಕ್ಕಿಂತ ತುಂಬಾ ಅನುಕೂಲಕರ ಎಂದೂ ಪ್ರತಿಪಾದಿಸಿದ್ದರು. ಮಹತ್ವದ ಸಂಗತಿ ಎಂದರೆ ಐಎಸ್‍ಎಸ್‍ನಲ್ಲಿರುವ ಆಲ್ಫಾ ಮ್ಯಾಗ್ನೆಟಿಕ್ ಸ್ಪೆಕ್ಟ್ರೋಮೀಟರ್ (AMS),  ಭೂಮಿಯನ್ನು ಅಪ್ಪಳಿಸುತ್ತಿರುವ ಕಾಸ್ಮಿಕ್ ಕಿರಣಗಳಲ್ಲಿ ವಿವರಣೆಗೆ ನಿಲುಕದಷ್ಟು ಅಗಾಧ ಪ್ರಮಾಣದ ಹೈ ಎನರ್ಜಿಯ ಪಾಸಿಟ್ರಾನ್‍ಗಳಿರುವುದನ್ನು ಪತ್ತೆ ಹಚ್ಚಿದ್ದು. ವಿಶ್ವದಲ್ಲಿ ವ್ಯಾಪಿಸಿರುವ ಕಪ್ಪು ಪದಾರ್ಥದ (Dark Matter) ಇರುವಿಕೆಯ ಮಾಹಿತಿಯನ್ನೂ ಅದು ರವಾನಿಸಿದೆ.

 ಈಗ ಮನುಷ್ಯನ ಆಕರ ಕೋಶವನ್ನು (stem cell) ಐಎಸ್‍ಎಸ್‌ಗೆ ಕಳುಹಿಸಿ, ಯಾವ ಊನವೂ ಇಲ್ಲದ ಅಂಗಾಂಶವನ್ನು ಬೆಳೆಯುವ ಪ್ರಯೋಗ ನಡೆಯುತ್ತಿದೆ. ತ್ರೀ–ಡಿ ಮುದ್ರಣ ತಂತ್ರಜ್ಞಾನ, ಬಯೋ ಇಂಕ್ ಮತ್ತು ಬಯೋ ಪ್ರಿಂಟರ್ ಬಳಸಿ ಬೇಕಾದ ಅಂಗಾಂಶ, ಕಾಂಡಕೋಶ ಮತ್ತು ಅಂಗಾಂಗಗಳನ್ನು ಬೆಳೆಯುವ ಪ್ರಯತ್ನವೂ ನಡೆದಿದೆ. ಬಾಹ್ಯಾಕಾಶದಲ್ಲಿ ಬೆಂಕಿಯ ಗುಣಧರ್ಮ, ಗಗನಯಾನಿಗಳ ಆಹಾರ ಕ್ರಮ, ನೀರಿನ ಬಳಕೆಯಿಂದ ಮೂತ್ರ ಜನಕಾಂಗಗಳ ಮೇಲಾಗುವ ಪರಿಣಾಮ, ಬೆನ್ನುಮೂಳೆಯ ಗಟ್ಟಿತನ, ಸವಕಳಿ ಮತ್ತು ಅಣುಗಳ ಚಲನೆಯನ್ನು ನಿರ್ಬಂಧಿಸುವ ‘ಕೋಲ್ಡ್ ಆಟಂ ಲ್ಯಾಬೊರೇಟರಿ’ಯ ಬಗ್ಗೆಯೂ ಸಂಶೋಧನೆಗಳು ನಡೆದಿವೆ. ಗೋಧಿ, ಉದ್ದಿನ ಬೇಳೆ, ಬಟಾಣಿ, ಈರುಳ್ಳಿ, ಹುರುಳಿ, ಕೊತ್ತಂಬರಿ ಸೊಪ್ಪಿನಂತಹ ತರಕಾರಿಗಳನ್ನು ಬೆಳೆದು, ‘ಗ್ರೀನ್ ಸ್ಪೇಸ್’ ಎಂಬ ಹೊಸಲೋಕವೇ ಸೃಷ್ಟಿಯಾಗಿದೆ. ಬಿಡುವಿನಲ್ಲಿ ಪಿಜ್ಜಾ, ಚಾಕಲೇಟ್ ಕೂಡಾ ತಯಾರಿಸಲಾಗಿದೆ. ಈಗ ಅಲ್ಲಿರುವ ಮೂವರು ಗಗನಯಾತ್ರಿಗಳು ಇದುವರೆಗೆ ಐಎಸ್‍ಎಸ್‍ಗೆ ಕಾಲಿಟ್ಟ ಎಲ್ಲ ಗಗನಯಾತ್ರಿಗಳ ಗೌರವಾರ್ಥ ಹಾಗೂ 20ನೇ ವರ್ಷದ ಸಂಭ್ರಮಾಚರಣೆಗೆ ಭರ್ಜರಿ ಡಿನ್ನರ್ ಪಾರ್ಟಿ ಮಾಡಿದ್ದಾರೆ.


ಭೂಮಿಯ ಕಕ್ಷೆ ಸುತ್ತ ಸುತ್ತುವ ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ಅಪರೂಪದ ನೋಟ ಚಿತ್ರ: ಎಪಿ

ಐಎಸ್‍ಎಸ್‍ನ್ನು ಪ್ರವೇಶಿಸಿದ್ದ ಮೊದಲ ತಂಡ ಅದಕ್ಕೆ ಆಲ್ಫಾ ಎಂದು ನಾಮಕರಣ ಮಾಡಿತ್ತು. ಮುಂದಿನವರಾರೂ ಹಾಗೆ ಕರೆಯದ್ದರಿಂದ ಐಎಸ್‍ಎಸ್‍ಗೆ ಯಾವುದೇ ಹೆಸರಿಲ್ಲ. ಇನ್ನೂ ಕೆಲವು ವರ್ಷಗಳ ಕಾಲ ಕೆಲಸ ಮಾಡಬಲ್ಲ ಐಎಸ್‍ಎಸ್‍ಗೆ ಅಂತರಿಕ್ಷ ಕಸದ್ದೇ ಅಪಾಯ ಎಂದಿದೆ ನಾಸಾ. ಭೂಮಿಗೆ ಹಿಂತಿರುಗಲಾರದೆ ಕಕ್ಷೆಯಲ್ಲಿ ಅನಾಥವಾಗಿ ಸುತ್ತುತ್ತಿರುವ ಹಳೆಯ ಕೆಟ್ಟುಹೋದ ನೌಕೆಗಳು ಈ ವರ್ಷ ಮೂರು ಬಾರಿ ತೀರಾ ಸಮೀಪಕ್ಕೆ ಬಂದು ಡಿಕ್ಕಿ ಹೊಡೆಯಲಿದ್ದವು, ಅದನ್ನು ತಪ್ಪಿಸಿದ್ದಾಗಿದೆ. ಆದರೆ, ಇದನ್ನೇ ಯಾವಾಗಲೂ ಮಾಡುತ್ತಾ ಕೂರುವುದು ಪ್ರಯಾಸದ ಕೆಲಸ ಎಂದೂ ನಾಸಾ ಹೇಳಿದೆ. ಆಗಾಗ ಕೆಟ್ಟು ಹೋಗುವ ಐಎಸ್‍ಎಸ್‍ ಭಾಗಗಳನ್ನು ಸರಿಪಡಿಸುವ ಸರ್ವೀಸಿಂಗ್ ಹಾಗೂ ರಿಪೇರಿ ಮಾಡುವ ನೌಕೆಗಳು ಅಲ್ಲಿಗೆ ತೆರಳಿ ಸಮಸ್ಯೆ ನೀಗಿಸುವುದುಂಟು.  

ಸಂಶೋಧನೆಯಷ್ಟೇ ಅಲ್ಲದೆ ಮನರಂಜನೆಗೆ ಸಂಬಂಧಿಸಿದ ಚಟುವಟಿಕೆಗಳೂ ನಡೆದಿವೆ.  ಗಗನಯಾನಿ ಕ್ರಿಸ್‍ ಹ್ಯಾಡ್‍ಫೀಲ್ಡ್ 2013ರಲ್ಲಿ ‘ಸ್ಪೇಸ್‍ಆಡಿಟಿ’ ಎಂಬ ಆಲ್ಬಂಗೆ ಸಂಗೀತದ ವಿಡಿಯೊ ಒಂದನ್ನು ಐಎಸ್‍ಎಸ್‍ನಲ್ಲಿ ಚಿತ್ರೀಕರಿಸಿದ್ದು ಅದು ಯುಟ್ಯೂಬ್‍ನಲ್ಲಿ ವೀಕ್ಷಣೆಗೆ ಲಭ್ಯವಿದೆ. ಮುಂದಿನ ವರ್ಷ ವಾಣಿಜ್ಯ ಉದ್ದೇಶಗಳ ಸ್ಪೇಸ್ ಸ್ಟೇಷನ್‌ಅನ್ನು ಉಡಾಯಿಸುವ ಯೋಜನೆ ಹಾಕಿಕೊಂಡಿರುವ  ಆಕ್ಸಿಯಾಮ್ ಸ್ಪೇಸ್ ಕಂಪನಿ, ಹಾಲಿವುಡ್ ನಟ ಟಾಮ್ ಕ್ರೂಸ್ ಅಭಿನಯದ ಸಿನಿಮಾ ಶೂಟಿಂಗ್‍ಗೆ ಅವಕಾಶ ಕಲ್ಪಿಸಲಿದೆ. ಈಗ 15 ದೇಶಗಳು ಐಎಸ್‍ಎಸ್‍ನ ನಿರ್ವಹಣೆಯ ಖರ್ಚನ್ನು ಭರಿಸುತ್ತಿದ್ದು, 2028ರ ವರೆಗೆ ಅದನ್ನು ಪರಿಣಾಮಕಾರಿಯಾಗಿ ಬಳಸುವ ಯೋಜನೆ ರೂಪಿಸಲಾಗುತ್ತಿದೆ. ಚಂದ್ರ, ಮಂಗಳ ಮತ್ತು ಉಲ್ಕಾಯಾನಗಳಿಗೆ ಬೇಕಾದ ಹೆಚ್ಚಿನ ತಯಾರಿ ಅಲ್ಲಿಯೇ ನಡೆಯುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು