ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೊ PSLV ರಾಕೆಟ್‌ನ 50ನೇ ಮಿಷನ್; ಡಿ.11ಕ್ಕೆ 'ಆರ್‌ಐಸ್ಯಾಟ್-2ಬಿಆರ್1' ಉಡಾವಣೆ

Last Updated 5 ಡಿಸೆಂಬರ್ 2019, 6:36 IST
ಅಕ್ಷರ ಗಾತ್ರ

ಬೆಂಗಳೂರು:ಸ್ವದೇಶಿ ನಿರ್ಮಿತ ದೂರಸಂವೇದಿ ಉಪಗ್ರಹ 'ಆರ್‌ಐಸ್ಯಾಟ್-2ಬಿಆರ್‌1' ಉಡಾವಣೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ) ಸಜ್ಜಾಗಿದೆ.

ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲೂ ದಿನದ 24 ಗಂಟೆಯೂ ಭೂಮಿಯ ಸ್ಪಷ್ಟ ಚಿತ್ರ ತೆಗೆಯುವ ಸಾಮರ್ಥ್ಯ ಹೊಂದಿರುವ 'ರಡಾರ್‌ ಇಮೇಜಿಂಗ್‌' ಉಪಗ್ರಹದೊಂದಿಗೆ ಗ್ರಾಹಕರ 9 ಪುಟ್ಟ ಉಪಗ್ರಹಗಳೂ ಉಡಾವಣೆಯಾಗಲಿವೆ.

ಡಿಸೆಂಬರ್‌ 11ರಂದು ಮಧ್ಯಾಹ್ನ 3:25ಕ್ಕೆ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಉಪಗ್ರಹ ಉಡಾವಣೆ ನಡೆಯಲಿದೆ.ಇದು ಪಿಎಸ್ಎಲ್‌ವಿ ರಾಕೆಟ್‌ನ 50ನೇ ಮಿಷನ್‌ ಆಗಿರುವುದಾಗಿ ಇಸ್ರೊ ಹೇಳಿದೆ. 1990ರಿಂದ ಪಿಎಸ್ಎಲ್‌ವಿ ರಾಕೆಟ್‌ಗಳನ್ನು ಇಸ್ರೊ ಬಳಸುತ್ತಿದೆ.ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ನಡೆಯುತ್ತಿರುವ 75ನೇ ಉಪಗ್ರಹ ಉಡಾವಣೆ ಇದಾಗಲಿದೆ.

ಕಾರ್ಟೊಸ್ಯಾಟ್‌–3 ಉಪಗ್ರಹ ಉಡಾವಣೆಯಾಗಿ ಎರಡು ವಾರಗಳ ಅಂತರದಲ್ಲೇ ಇಸ್ರೊ ಮತ್ತೊಂದು ಮಿಷನ್‌ಗೆ ಸಜ್ಜಾಗಿದೆ. ನವೆಂಬರ್‌ 27ರಂದು ಶ್ರೀಹರಿಕೋಟಾದಿಂದಲೇ ಕಾರ್ಟೊಸ್ಯಾಟ್‌ ಉಡಾವಣೆಯಶಸ್ವಿಯಾಗಿತ್ತು.

628 ಕೆ.ಜಿ. ತೂಕದ 'ಆರ್‌ಐಸ್ಯಾಟ್-2ಬಿಆರ್‌1' ಉಪಗ್ರಹವನ್ನು ಪಿಎಸ್ಎಲ್‌ವಿ–ಸಿ48 ರಾಕೆಟ್‌ ಹೊತ್ತೊಯ್ಯಲಿದೆ. ಭೂಮಿಯಿಂದ 576 ಕಿ.ಮೀ. ದೂರದಲ್ಲಿ 37 ಡಿಗ್ರಿ ಓರೆಯ ಕಕ್ಷೆಗೆ ಸೇರಲಿದೆ.ಆರ್‌ಐಸ್ಯಾಟ್ ಜತೆಗೆ ಅಮೆರಿಕದ ಆರು ಉಪಗ್ರಹಗಳು ಹಾಗೂ ಇಸ್ರೇಲ್‌, ಇಟಲಿ ಮತ್ತು ಜಪಾನ್‌ನ ತಲಾ ಒಂದು ಉಪಗ್ರಹ ಪ್ರತ್ಯೇಕ ಕಕ್ಷೆಗೆ ಸೇರಲಿವೆ. ಇಸ್ರೊದ ಹೊಸ ಕಂಪನಿ 'ನ್ಯೂಸ್ಪೇಸ್‌ ಇಂಡಿಯಾ ಲಿಮಿಟೆಡ್‌' ಮೂಲಕ ಗ್ರಾಹಕ ಉಪಗ್ರಹಗಳ ಉಡಾವಣೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ಆರ್‌ಐಸ್ಯಾಟ್‌ ಉಪಯೋಗ: ಭೂಮಿಯ ಮೇಲಿನ ವಸ್ತುಗಳನ್ನು ಗಮನಿಸುವುದು, ಕೃಷಿ, ಗಣಿಗಾರಿಕೆ, ಅರಣ್ಯ, ಮಣ್ಣಿನ ತೇವಾಂಶ, ಸಮುದ್ರ ಮತ್ತು ಕರಾವಳಿಯಲ್ಲಿ ಮಂಜುಗಡ್ಡೆಯ ಬಗ್ಗೆ ನಿಗಾ ವಹಿಸುವುದು ಹಾಗೂ ಪ್ರವಾಹ ಪರಿಸ್ಥಿತಿಯ ಗಮನಿಸಲು ಸಹಕಾರಿಯಾಗಿದೆ. ಮಿಲಿಟರಿ ಕಣ್ಗಾವಲು ಬಳಕೆಗಳಿಗೂ ಈ ಉಪಗ್ರಹವನ್ನು ಬಳಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT