ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

203 ದಿನಗಳ ಪ್ರಯಾಣದ ಬಳಿಕ ಮಂಗಳ ಗ್ರಹವನ್ನು ಸ್ಪರ್ಶಿಸಿದ ನಾಸಾ ರೋವರ್

Last Updated 19 ಫೆಬ್ರುವರಿ 2021, 1:45 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಮೆರಿಕದ ಸ್ವತಂತ್ರ ಬಾಹ್ಯಾಕಾಶ ಸಂಸ್ಥೆ ನ್ಯಾಷನಲ್ ಏರೋನಾಟಿಕ್ಸ್ ಆ್ಯಂಡ್ ಸ್ಪೇಸ್ ಆಡ್ಮನಿಸ್ಟ್ರೇಷನ್‌ನ (ನಾಸಾ), ಅತಿದೊಡ್ಡ ಹಾಗೂ ಅತ್ಯಾಧುನಿಕ ಪರ್ಸೆವೆರೆನ್ಸ್ ರೋವರ್ ಯಶಸ್ವಿಯಾಗಿಮಂಗಳ ಗ್ರಹವನ್ನು ಸ್ಪರ್ಶಿಸಿದೆ.

203 ದಿನಗಳ ಸುದೀರ್ಘ ಪ್ರಯಾಣದ ಬಳಿಕ 293 ಮಿಲಿಯನ್ ಮೈಲು (472 ಮಿಲಿಯನ್ ಕಿ.ಮೀ.) ದೂರ ಕ್ರಮಿಸಿ ನಾಸಾದ ಪರ್ಸೆವೆರೆನ್ಸ್ ರೋವರ್ ಮಂಗಳನ ಅಂಗಳದಲ್ಲಿ ಯಶಸ್ವಿಯಾಗಿ ಕಾಲಿರಿಸಿದೆ. ಇದು ಮಂಗಳ ಗ್ರಹದಲ್ಲಿ ಜೀವಗಳ ಅಸ್ತಿತ್ವದ ಬಗ್ಗೆ ಅಧ್ಯಯನ ನಡೆಸಲಿದೆ.

ದಕ್ಷಿಣ ಕ್ಯಾಲಿಫೋರ್ನಿಯಾದ ನಾಸಾದ ಜೆಡ್ ಪ್ರೊಪಲ್ಷನ್ ಲ್ಯಾಬೋರೇಟರಿಯಲ್ಲಿ ಸ್ಥಳೀಯ ಸಮಯ ಮಧ್ಯಾಹ್ನ 3.55ಕ್ಕೆ ನಾಸಾ ರೋವರ್ ಮಂಗಳ ಗ್ರಹದ ಮೇಲೆ ಇಳಿದಿದೆ.

ಇದು ನಾಸಾದ ಅತ್ಯಂತ ಮಹಾತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿದ್ದು, ಮಂಗಳ ಗ್ರಹದಲ್ಲಿ ಜೀವಗಳ ಇರುವಿಕೆಯ ಕುರುಹು ಹುಡುಕಲಿದೆ. ಅಧಿಕೃತ ಮಾಹಿತಿಯ ಪ್ರಕಾರ ಮಂಗಳ ಗ್ರಹದಿಂದ ಮಾದರಿಗಳನ್ನು ಸಂಗ್ರಹಿಸಿ ಭೂಮಿಗೆ ಹಿಂದಿರುಗಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಹೊಂದಿದೆ.

ಜುಲೈ 30ರಂದು ಕೇಪ್ ಕ್ಯಾನವರೆಲ್ ಬಾಹ್ಯಾಕಾಶ ಕೇಂದ್ರದಿಂದ ಪರ್ಸೆವೆರೆನ್ಸ್ ರೋವರ್ ಹೊತ್ತ ರಾಕೆಟ್ ಉಡಾವಣೆಗೊಂಡಿತ್ತು. ಒಂದು ಕಾರಿನ ಗಾತ್ರದ ಆರು ಗಾಲಿಗಳಿರುವ ರೋವರ್ 1026 ಕೆ.ಜಿ ತೂಕವಿದೆ.

ಪ್ರಾಚೀನ ಸೂಕ್ಷ್ಮಜೀವಿಯ ಜೀವನದ ಕುರುಹು ಹುಡುಕಾಟ ಸೇರಿದಂತೆ ಮಂಗಳ ಗ್ರಹದ ಭೂವಿಜ್ಞಾನ ಹಾಗೂ ಹಿಂದಿನ ಹವಾಮಾನವನ್ನು ನಿರೂಪಿಸಲು ಜೆಜೆರೊ ಪ್ರಾಚೀನ ಸರೋವರ ಮತ್ತು ನದಿ ಡೆಲ್ಟಾದ ಬಂಡೆ ಹಾಗೂ ಕೆಸರನ್ನು ಸಂಶೋಧನೆ ಮಾಡಲಿದೆ.

ಅಂತಿಮವಾಗಿ ರೋವರ್ ಸಂಗ್ರಹಿಸಿದ ಸ್ಯಾಂಪಲ್‌ಗಳಿಂದ ನಾಸಾ ಹಾಗೂ ಯುರೋಪ್ ಸ್ಪೇಸ್ ಏಜೆನ್ಸಿ (ಇಎಸ್‌ಎ) ವಿಜ್ಞಾನಿಗಳಿಗೆ ಪ್ರಾಚೀನ ಜೀವದ ಕುರುಹುಗಳನ್ನು ಅಧ್ಯಯನ ನಡೆಸಲು ನೆರವಾಗಲಿದೆ.

ನಾಸಾದ ರೋವರ್‌ ಮಂಗಳ ಗ್ರಹದಲ್ಲಿ ಇಳಿಯುವುದರೊಂದಿಗೆ ಕಳೆದ ಒಂದು ವಾರದೊಳಗೆ ಮಂಗಳ ಗ್ರಹಕ್ಕೆ ಜಗತ್ತಿನ ಮೂರನೇ ಭೇಟಿಯನ್ನು ಸೂಚಿಸುತ್ತದೆ. ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಚೀನಾದ ಬಾಹ್ಯಾಕಾಶ ನೌಕೆಗಳು ಮಂಗಳ ಕಕ್ಷೆಯನ್ನು ತಲುಪಿದ್ದವು. ಈ ಎಲ್ಲ ಮೂರು ಯೋಜನೆಗಳು ಕಳೆದ ವರ್ಷ ಜುಲೈನಲ್ಲೇ ಪ್ರಾರಂಭವಾಗಿದ್ದವು.

ನಾಸಾ ರವಾನಿಸಿದ ಅತಿದೊಡ್ಡ ಹಾಗೂ ಅತ್ಯಾಧುನಿಕ ಪರ್ಸೆವೆರೆನ್ಸ್ ರೋವರ್, 1970ರ ದಶಕದಲ್ಲಿ ಬಾಹ್ಯಾಕಾಶ ಯೋಜನೆ ಆರಂಭವಾದ ಬಳಿಕ ಮಂಗಳಗ್ರಹದಲ್ಲಿಇಳಿದಿರುವ ಅಮೆರಿಕದ ಒಂಬತ್ತನೇ ಬಾಹ್ಯಾಕಾಶ ನೌಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT